ನವದೆಹಲಿ(ಫೆ.24): ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ದಿನದ ಪ್ರವಾಸ ಮುಕ್ತಾಯಗೊಂಡಿದೆ. ಮೊದಲ ದಿನ ಟ್ರಂಪ್ ಕುಟುಂಬ ಸಮೇತ ಅಹಮದಾಬಾದ್ನಲ್ಲಿ ನಡೆದ ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. "ನಮಸ್ತೆ ಟ್ರಂಪ್ ಕಾರ್ಯಕ್ರಮದ ಬಳಿಕ ಕುಟುಂಬ ಸಮೇತರಾಗಿ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾದ ಐತಿಹಾಸಿಕ ಸ್ಮಾರಕ ತಾಜ್ ಮಹಲ್ಗೆ ಭೇಟಿ ನೀಡಿದ್ದರು. ಆಗ್ರಾದ ವಿಶ್ವದ ಖ್ಯಾತ ತಾಜ್ ಮಹಲ್ಗೆ ಭೇಟಿ ನೀಡಿದ ಟ್ರಂಪ್ ಮತ್ತವರ ಕುಟುಂಬ ಅಲ್ಲಿನ ವಾಸ್ತುಶಿಲ್ಪ ಕಣ್ತುಂಬಿಕೊಂಡರು. ನಂತರ ಇಡೀ ತಾಜ್ ಮಹಲ್ ಸುತ್ತಾಡಿದ ಬಳಿಕ ಸಂತಸಗೊಂಡರು. ಈ ಪ್ರವಾಸದಲ್ಲಿ ಭಾರತದ ಸಂಪ್ರದಾಯ, ಸಂಸ್ಕೃತಿಯನ್ನು ಕಣ್ತುಂಬಿಕೊಂಡರು. ಟ್ರಂಪ್ ಕುಟುಂಬ ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿತ್ತು. ಇಂದು ಕೂಡ ಟ್ರಂಪ್ರ ಎರಡನೇ ದಿನದ ಪ್ರವಾಸ ಮುಂದುವರಿಯಲಿದೆ. ಈ ವೇಳಾಪಟ್ಟಿ ಹೇಗಿದೆ..? ಯಾವೆಲ್ಲಾ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ ಎಂಬುದನ್ನು ನೀವೇ ಮುಂದೆ ನೋಡಿ.
ರಾಷ್ಟ್ರಪತಿ ಭವನ: ಇಂದು 25ರಂದು ಬೆಳಗ್ಗೆ 10 ಗಂಟೆಗೆ ರಾಷ್ಟ್ರಪತಿ ಭವನದ ಆವರಣದಲ್ಲಿ ಏರ್ಪಡಿಸಿರುವ ಅದ್ಧೂರಿ ಸ್ವಾಗತ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಮಿಲಾನಿಯಾ ಟ್ರಂಪ್ ಭಾಗಿಯಾಗಲಿದ್ದಾರೆ.
ರಾಜ್ಘಾಟ್ಗೆ ಭೇಟಿ: ನಂತರ, ಬೆಳಗ್ಗೆ 10.30ಕ್ಕೆ ರಾಜ್ಘಾಟ್ಗೆ ಭೇಟಿ ನೀಡಲಿರುವ ಟ್ರಂಪ್ ಹಾಗೂ ಮೋದಿ, ಮಹಾತ್ಮ ಗಾಂಧೀಜಿ ಸಮಾಧಿಗೆ ನಮನ ಸಲ್ಲಿಸಲಿದ್ದಾರೆ.
ಹಲವು ಯೋಜನೆಗಳ ಒಪ್ಪಂದ: ಬೆಳಗ್ಗೆ 11ರಿಂದ ಮೋದಿ ಮತ್ತು ಟ್ರಂಪ್ ನಡುವೆ ಹಲವು ಯೋಜನೆಗಳ ಬಗ್ಗೆ ಹೈದರಾಬಾದ್ ಹೌಸ್ನಲ್ಲಿ ಮಾತುಕತೆ ನಡೆಯಲಿದೆ. ಈ ವೇಳೆ ಹಲವು ನಿಯೋಗಗಳು ಭಾಗಿಯಾಗಲಿವೆ. ಇಲ್ಲಿ ಟ್ರಂಪ್ಗೆ ಮಧ್ಯಾಹ್ನದ ಭೋಜನ ಆಯೋಜಿಸಲಾಗಿದೆ.
ಅಮೆರಿಕ ರಾಯಭಾರಿ ಕಚೇರಿ: ದೆಹಲಿಯಲ್ಲಿನ ಅಮೆರಿಕ ರಾಯಭಾರಿ ಕಚೇರಿಗೆ ಭೇಟಿ ನೀಡಲಿರುವ ಡೊನಾಲ್ಡ್ ಟ್ರಂಪ್, ತಮ್ಮ ದೇಶದ ಸಿಇಒಗಳ ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸುತ್ತಾರೆ.
ಅದ್ಧೂರಿ ಔತಣ: ಸಂಜೆ 7.30ಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಟ್ರಂಪ್ ರಾಷ್ಟ್ರಪತಿ ಭವನದಲ್ಲಿ ಭೇಟಿಯಾಗಲಿದ್ದಾರೆ. ರಾಷ್ಟ್ರಪತಿಗಳು ಟ್ರಂಪ್ಗೆ ಅದ್ಧೂರಿ ಔತಣ ಕೂಟ ಏರ್ಪಡಿಸಿದ್ದಾರೆ. ನಂತರ ರಾತ್ರಿ 10 ಗಂಟೆಗೆ ದೆಹಲಿಯಿಂದ ಅಮೆರಿಕಾಗೆ ವಿಮಾನದಲ್ಲಿ ತೆರಳಲಿದ್ದಾರೆ.
ಇದನ್ನೂ ಓದಿ: Trump visits Taj Mahal: ಸಂದರ್ಶಕರ ಪುಸ್ತಕದಲ್ಲಿ ತಾಜ್ ಮಹಲ್ ಬಗ್ಗೆ ಟ್ರಂಪ್ ಬರೆದಿದ್ದೇನು?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ