ಹಿಂದಿ (Hindi Language) ರಾಷ್ಟ್ರೀಯ ಭಾಷೆ ವಿಚಾರ ಒಂದಲ್ಲ ಒಂದು ರೀತಿಯಿಂದ ಸುದ್ದಿಯಲ್ಲಿರುವಂತದ್ದು, ಹಿಂದಿ ಮಾತನಾಡದ ರಾಜ್ಯಗಳ ಮೇಲೆ ಒತ್ತಾಯಪೂರ್ವಕವಾಗಿ ಹಿಂದಿ ಹೇರಿಕೆ ಮಾಡುತ್ತಿರುವ ಬಗ್ಗೆ ಯಾವಾಗಲೂ ವಿರೋಧ ವ್ಯಕ್ತ ಆಗುತ್ತಲೇ ಇದೆ. ಬೆಂಗಳೂರಿನ ಮೆಟ್ರೋದಲ್ಲಿ ಹಿಂದಿಯ ಉಲ್ಲೇಖಗಳಿರಬಹುದು, ಅಜಯ್ ದೇವಗನ್ ಅಂತಹ ನಟರ ಹೇಳಿಕೆ ಇರಬಹುದು, ನಂದಿನಿ ಉತ್ಪನ್ನಗಳಲ್ಲಿ ಹಿಂದಿ ಬಳಕೆ ಹೀಗೆ ಇಂತಹ ಅನೇಕ ವಿಚಾರಗಳು ಕರ್ನಾಟಕ ಮಾತ್ರವಲ್ಲದೇ ಹಿಂದಿ ಮಾತನಾಡದ ಎಲ್ಲಾ ರಾಜ್ಯಗಳಿಂದ ಹಿಂದಿ ಹೇರಿಕೆಗೆ ವಿರೋಧವಂತೂ ಇದ್ದೇ ಇದೆ. ಪ್ರಸ್ತುತ ಹಿಂದಿ ಹೇರಿಕೆ (Hindi Imposition) ಎನ್ನುವಂತದ್ದು, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI)ದ ವತಿಯಿಂದ ನಡೆಯುತ್ತಿದೆ ಎನ್ನಬಹುದು.
ಏಕೆಂದರೆ ಎಫ್‌ಎಸ್‌ಎಸ್‌ಎಐನ ಹೊಸ ನಿಯಮಕ್ಕೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿದ್ದು, ಕೂಡಲೇ ಈ ರೀತಿಯಾದ ಹಿಂದಿ ಹೇರಿಕೆಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದೆ. ತಮಿಳುನಾಡಿನಲ್ಲಿ ವ್ಯಾಪಕವಾದ ವಿರೋಧ ವ್ಯಕ್ತವಾದ ಹಿನ್ನೆಲೆ ಎಫ್‌ಎಸ್‌ಎಸ್‌ಎಐ ತನ್ನ ಸೂಚನೆಯನ್ನು ಹಿಂದೆ ತೆಗೆದುಕೊಂಡಿದೆ.
ಎಫ್‌ಎಸ್‌ಎಸ್‌ಎಐ ಮಾಡಿದ್ದೇನು?
ಹಿಂದಿಯೇತರ ದಕ್ಷಿಣ ರಾಜ್ಯಗಳು ಮೊಸರಿನ ಪ್ಯಾಕೆಟ್‌ಗಳ ಮೇಲೆ ದಹಿ (ಮೊಸರು) ಎಂಬ ಹಿಂದಿ ಪದವನ್ನು ಬಳಸಬೇಕು ಮತ್ತು ಸಮಾನವಾದ ತಮಿಳು ಭಾಷೆಯನ್ನು ಬ್ರಾಕೆಟ್‌ನಲ್ಲಿ ಬಳಸಲು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ) ಸೂಚನೆ ನೀಡಿತ್ತು.
ಇದನ್ನೂ ಓದಿ: ಕಲ್ಲು ತೂರುವ ಮುನ್ನ ಎಚ್ಚರ! ವಂದೇ ಭಾರತ್ ರೈಲಿಗೆ ಹಾನಿ ಮಾಡಿದವರಿಗೆ 5 ವರ್ಷ ಜೈಲು ಶಿಕ್ಷೆ ಗ್ಯಾರಂಟಿ
ಈ ಹಿಂದಿ ಹೇರಿಕೆ ವಿಚಾರ ತಮಿಳುನಾಡಿನಾದ್ಯಂತ ಗದ್ದಲ ಸೃಷ್ಟಿಗೂ ಕಾರಣವಾಗಿತ್ತು. ಸಿಎಂ ಸೇರಿ ಹಲವರು ಎಫ್ಎಸ್ಎಸ್ಎಐ ಸೂಚನೆಯನ್ನು ವಿರೋಧಿಸಿದ್ದರು.
ಸಿಎಂ ಎಂಕೆ ಸ್ಟಾಲಿನ್ ವಿರೋಧ
ಹೌದು, ಈ ವಿಚಾರವಾಗಿ ತಮಿಳುನಾಡಿನಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿ ಪದವಾದ 'ದಹಿ'ಯನ್ನು ಹೇರುವ ಪ್ರಯತ್ನವನ್ನು ಖುದ್ದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಕೂಡ ವಿರೋಧಿಸಿದ್ದಾರೆ. ಜನರ ಭಾವನೆಗಳನ್ನು ಗೌರವಿಸುವಂತೆ ಸ್ಟಾಲಿನ್ ಎಫ್‌ಎಸ್‌ಎಸ್‌ಎಐಗೆ ಟ್ವೀಟ್‌ನಲ್ಲಿ ಮನವಿ ಮಾಡಿದ್ದಾರೆ.
"ಹಿಂದಿ ಹೇರುವವರನ್ನು ಗಡಿಪಾರು ಮಾಡುತ್ತೇವೆ"
"ಹಿಂದಿ ಹೇರಿಕೆಯ ಮುಜುಗರವಿಲ್ಲದ ಆಗ್ರಹವು ನಮ್ಮದೇ ರಾಜ್ಯಗಳಲ್ಲಿ ತಮಿಳು ಮತ್ತು ಕನ್ನಡವನ್ನು ಹಿಮ್ಮೆಟ್ಟಿಸುವ ಮೂಲಕ ಮೊಸರು ಪ್ಯಾಕೆಟ್ ಮೇಲೂ ಹಿಂದಿಯಲ್ಲಿ ಲೇಬಲ್ ಮಾಡಲು ನಿರ್ದೇಶಿಸುವ ಮಟ್ಟಕ್ಕೆ ಬಂದಿದೆ. ನಮ್ಮ ಮಾತೃ ಭಾಷೆಯನ್ನು ನಿರ್ಲಕ್ಷಿಸುತ್ತಿರುವುದರಿಂದ ಅದಕ್ಕೆ ಕಾರಣರಾದವರನ್ನು ದಕ್ಷಿಣದಿಂದಲೇ ಶಾಶ್ವತವಾಗಿ ಗಡಿಪಾರು ಮಾಡಲಾಗುವುದು ಎಂದು ಸ್ಟಾಲಿನ್ ಆಕ್ರೋಶ ಹೊರ ಹಾಕಿದ್ದಾರೆ.
ತಮಿಳುನಾಡು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ, ಆವಿನ್, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ (ಎಫ್‌ಎಸ್‌ಎಸ್‌ಎಐ) ಮಾಹಿತಿ ನೀಡಿದ್ದು, ಪ್ಯಾಕೇಟ್‌ಗಳಲ್ಲು 'ದಹಿ' ಪದ ಪ್ರಸ್ತಾಪವನ್ನು ಕೈಬಿಡುವಂತೆ ತಿಳಿಸಿದೆ.
ಸೂಚನೆ ಹಿಂಪಡೆದ ಎಫ್‌ಎಸ್‌ಎಸ್‌ಎಐ
ಹೀಗೆ ರಾಜ್ಯದಲ್ಲಿ ಆಕ್ರೋಶ ಹೆಚ್ಚಾದ ಕಾರಣ ಎಫ್‌ಎಸ್‌ಎಸ್‌ಎಐ ತನ್ನ ಸೂಚನೆಗಳನ್ನು ಹಿಂದಕ್ಕೆ ತೆಗೆದುಕೊಂಡಿದೆ. ಹಾಲು ಮತ್ತು ಡೈರಿ ಅಭಿವೃದ್ಧಿ ಸಚಿವ ಎಸ್‌ಎಂ ನಾಸರ್ ಸ್ಥಳೀಯ ಮಾಧ್ಯಮಗಳ ಜೊತೆ ಮಾತನಾಡಿ, ಎಫ್‌ಎಸ್‌ಎಸ್‌ಎಐನ ಸೂಚನೆಗಳನ್ನು ರಾಜ್ಯದಲ್ಲಿ ಜಾರಿಗೆ ತರಲಾಗುವುದಿಲ್ಲ ಮತ್ತು ಮೊಸರು ಪ್ಯಾಕೆಟ್‌ಗಳನ್ನು ಮೊಸರು ಪದದ ತಮಿಳು ಸಮಾನವಾದ ಥೈರ್ ಎಂದೇ ಲೇಬಲ್ ಮಾಡುವುದನ್ನು ಮುಂದುವರಿಸಲಾಗುವುದು ಎಂದು ಹೇಳಿದರು.
ಕರ್ನಾಟಕದ ಕೆಎಂಎಫ್ ಮೇಲೂ ಹಿಂದಿ ಹೇರಿಕೆ ಹುನ್ನಾರ
ಇತ್ತ ಕರ್ನಾಟಕ ರಾಜ್ಯದ ಕೆಎಂಎಫ್‌ನಲ್ಲೂ ಒತ್ತಾತಯಪೂರ್ವಕ ಹಿಂದಿ ಹೇರಿಕೆಯ ಆರೋಪ ಕೇಳಿಬಂದಿದ್ದು, ಒಕ್ಕೂಟದ ಸಿಬ್ಬಂದಿಗೆ ಹಾಲು ಉತ್ಪನ್ನಗಳಿಗೆ ಕನ್ನಡದ ಬದಲು ಹಿಂದಿ ಪದಗಳನ್ನು ಬಳಸುವಂತೆ ಒತ್ತಡ ಹೇರಲಾಗುತ್ತಿದೆ ಎನ್ನಲಾಗಿದೆ. ತಮಿಳುನಾಡು, ಕೇರಳ ಮತ್ತು ಕರ್ನಾಟಕ ಇತ್ತೀಚೆಗೆ ಮೊಸರು ಪ್ಯಾಕ್‌ಗಳಲ್ಲಿ ಸ್ಥಳೀಯ ಹೆಸರುಗಳನ್ನು ಬಳಸಬೇಕೆಂದು ಕೋರಿದ್ದವು. ಕರ್ನಾಟಕದಲ್ಲಿ ಮೊಸರಿನ ಪ್ಯಾಕ್‌ಗಳಲ್ಲಿ ಮೊಸರು ಎಂಬ ಪದವನ್ನೇ ಲೇಬಲ್ ಮಾಡಲಾಗುತ್ತಿದೆ.
ಮೊಸರು ಪದದ ಬದಲಿಗೆ ದಹಿ, ಹಾಲು ಪದದ ಬದಲಿಗೆ ದೂದ್, ನೀರು ಪದದ ಬದಲಿಗೆ ಪಾನಿ, ಹೀಗೆ ಹಿಂದಿ ಪದಗಳ ಬಳಕೆಯನ್ನು ಕಡ್ಡಾಯಗೊಳಿಸಲಾಗಿದ್ದು, ಕೆಎಂಎಫ್‌ನಿಂದ ಕನ್ನಡವನ್ನು ಮಾಯವಾಗಿಸುವ ಹುನ್ನಾರ ನಡೆದಿದೆ ಎಂಬ ಗಂಭೀರ ಆರೋಪ ಮಾಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ