ಭಾರತ ಸೇರಿ ಹಲವು ದೇಶಗಳ ಸರ್ಕಾರಗಳು ಶ್ರಿಮಂತರಿಗೆ ಸಾಕಷ್ಟು ಲಾಭ ಮಾಡಿಕೊಡುತ್ತೆ. ಶ್ರೀಮಂತರ ಮೇಲೆ ಹೆಚ್ಚು ತೆರಿಗೆ ಹೇರುವುದಿಲ್ಲ. ಆದರೆ, ಬಡವರು, ಮಧ್ಯಮ ವರ್ಗದವರ ಮೇಲೆ ತೆರಿಗೆಯ ಹೊರೆ ವಿಪರೀತವಾಗಿರುತ್ತೆ ಅನ್ನೋ ಮಾತುಗಳು, ಆರೋಪಗಳು ಆಗಾಗ ಕೇಳುತ್ತಿರುತ್ತೇವೆ. ಇದೇ ರೀತಿ ಅಮೆರಿಕದಲ್ಲೂ ಇಂತಹದ್ದೊಂದು ಆರೋಪ ಕೇಳಿಬಂದಿದೆ. ವಿಶ್ವದ 25 ಶ್ರೀಮಂತ ಅಮೆರಿಕನ್ನರು ಸರ್ಕಾರಕ್ಕೆ ಪಾವತಿಸಿರುವ ತೆರಿಗೆಯ ಪ್ರಮಾಣ ಎಷ್ಟು ಅನ್ನೋ ಬಗ್ಗೆ ವರದಿಯೊಂದು ಬಿಡುಗಡೆಯಾಗಿದ್ದು, ಅವರು ಬಹಳ ಕಡಿಮೆ ಅಥವಾ ತೆರಿಗೆಯನ್ನೇ ಪಾವತಿಸಿಲ್ಲ ಅಂತ ವರದಿಯಲ್ಲಿ ಹೇಳಲಾಗಿದೆ.
ಅಮೆಜಾನ್ ಕಂಪನಿಯ ಜೆಫ್ ಬೆಜೋಸ್, ಮೈಕೆಲ್ ಬ್ಲೂಮ್‌ಬರ್ಗ್ ಮತ್ತು ಎಲಾನ್ ಮಸ್ಕ್ ಸೇರಿದಂತೆ ವಿಶ್ವದ 25 ಶ್ರೀಮಂತ ಅಮೆರಿಕನ್ನರು 2014 ಮತ್ತು 2018 ರ ನಡುವೆ ಅಂದರೆ ಸುಮಾರು 4 ವರ್ಷಗಳ ಕಾಲ ಆದಾಯ ತೆರಿಗೆಯಲ್ಲಿ ಬಹಳ ಕಡಿಮೆ ತೆರಿಗೆ ಕಟ್ಟಿದ್ದಾರೆ ಮತ್ತು ಕೆಲವೊಮ್ಮೆ ಏನನ್ನೂ ಪಾವತಿಸಲಿಲ್ಲ ಎಂದು ಆಂತರಿಕ ಕಂದಾಯ ಸೇವಾ ತೆರಿಗೆ ಡೇಟಾವನ್ನು ಆಧರಿಸಿ ಪ್ರೋ ಪಬ್ಲಿಕಾ ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಲಾಗಿದೆ.
15 ವರ್ಷಗಳಿಗಿಂತ ಹೆಚ್ಚು ಕಾಲ ದೇಶದ ಸಾವಿರಾರು ಶ್ರೀಮಂತ ಜನರ ಟ್ಯಾಕ್ಸ್ ರಿಟರ್ನ್‌ಗಳ ಕುರಿತು ಆಂತರಿಕ ಕಂದಾಯ ಸೇವೆಯ ದತ್ತಾಂಶವನ್ನು ಪಡೆದುಕೊಂಡಿರುವುದಾಗಿ ಪ್ರೋ ಪಬ್ಲಿಕಾ ತನ್ನ ವರದಿಯಲ್ಲಿ ಹೇಳಿದೆ. ವಾರೆನ್ ಬಫೆಟ್, ಬಿಲ್ ಗೇಟ್ಸ್, ರುಪರ್ಟ್ ಮುರ್ಡೋಕ್ ಮತ್ತು ಮಾರ್ಕ್ ಜುಕರ್‌ಬರ್ಗ್ ಸೇರಿದಂತೆ ಅಮೆರಿಕದ ಟಾಪ್ ಶ್ರೀಮಂತರ ಆರ್ಥಿಕ ಜೀವನದ ಬಗ್ಗೆಯೂ ಈ ಡೇಟಾ ಹೆಚ್ಚು ವಿವರಗಳನ್ನು ಒಳಗೊಂಡಿದೆ. ಇದು ಕೇವಲ ಆ ಶ್ರೀಮಂತರ ಆದಾಯ ಮತ್ತು ತೆರಿಗೆಗಳನ್ನು ಮಾತ್ರವಲ್ಲ, ಅವರ ಹೂಡಿಕೆಗಳು, ಸ್ಟಾಕ್ ವಹಿವಾಟುಗಳು, ಗ್ಯಾಂಬ್ಲಿಂಗ್ ಅಥವಾ ಜೂಜು ಆಡಿ ಗೆದ್ದ ಹಣ ಮತ್ತು ಲೆಕ್ಕಪರಿಶೋಧನೆಯ ಫಲಿತಾಂಶಗಳನ್ನು ಸಹ ತೋರಿಸುತ್ತದೆ. ಈ ವಿಶ್ಲೇಷಣೆಯ ಮೂಲಕವೇ ಅಮೆರಿಕದ ಶ್ರೀಮಂತ ಅಧಿಕಾರಿಗಳು ತಮ್ಮ ನಿವ್ವಳ ಆಸ್ತಿಯ ಮೌಲ್ಯವನ್ನು ಅಪಾರ ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳುತ್ತಲೇ ಇದ್ದರೂ, ತಮ್ಮ ಸಂಪತ್ತಿನ ಒಂದು ಭಾಗವನ್ನು ಮಾತ್ರ ತೆರಿಗೆಯಾಗಿ ನೀಡಿದ್ದಾರೆ ಎಂಬುದನ್ನು ತೋರಿಸುತ್ತದೆ.
“2007 ರಲ್ಲಿ, ಆಗ ಬಹುಕೋಟಿ ಒಡೆಯನಾಗಿದ್ದ ಮತ್ತು ಈಗ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಜೆಫ್ ಬೆಜೋಸ್ ಫೆಡರಲ್ ಆದಾಯ ತೆರಿಗೆಯಲ್ಲಿ ಒಂದು ಪೈಸೆಯನ್ನೂ ಪಾವತಿಸಿಲ್ಲ. 2011 ರಲ್ಲಿ ಮತ್ತೆ ತೆರಿಗೆ ಪಾವತಿಸಿಲ್ಲ. ಇದೇ ರೀತಿ, 2018 ರಲ್ಲಿ, ಈಗಿನ ವಿಶ್ವದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಟೆಸ್ಲಾ ಸಂಸ್ಥಾಪಕ ಎಲಾನ್ ಮಸ್ಕ್ ಕೂಡ ಯಾವುದೇ ಫೆಡರಲ್ ಆದಾಯ ತೆರಿಗೆಯನ್ನು ಪಾವತಿಸಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಮೈಕೆಲ್ ಬ್ಲೂಮ್‌ಬರ್ಗ್ ಸಹ ಇದೇ ರೀತಿ ಮಾಡಿದ್ದಾರೆ. ಬಿಲಿಯನೇರ್ ಹೂಡಿಕೆದಾರ ಕಾರ್ಲ್ ಇಕಾನ್ ಸಹ 2 ಬಾರಿ ಫೆಡರಲ್ ತೆರಿಗೆ ಕಟ್ಟಿಲ್ಲ. ಅಲ್ಲದೆ, ಜಾರ್ಜ್ ಸೊರೊಸ್ ಸತತ 3 ವರ್ಷಗಳ ಕಾಲ ಯಾವುದೇ ಫೆಡರಲ್ ಆದಾಯ ತೆರಿಗೆಯನ್ನು ಪಾವತಿಸಲಿಲ್ಲ'' ಎಂದೂ ಪ್ರೋ ಪಬ್ಲಿಕಾ ತನ್ನ ವರದಿಯಲ್ಲಿ ಹೇಳುತ್ತದೆ.
ಅವರು ಏಕೆ ತೆರಿಗೆ ಪಾವತಿಸಲಿಲ್ಲ ಎಂಬುದಕ್ಕೆ ಸರಳವಾದ ಉತ್ತರವೆಂದರೆ ವ್ಯವಸ್ಥೆಯಲ್ಲಿನ ಲೋಪದೋಷಗಳು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಶ್ರೀಮಂತರು ಹೊಂದಿರುವ ಹೆಚ್ಚಿನ ಸಂಪತ್ತು, ಅವರು ನಡೆಸುವ ಕಂಪನಿಗಳಲ್ಲಿನ ಷೇರುಗಳು, ರಜೆ ಕಳೆಯಲು ಐಷಾರಾಮಿ ಬಂಗಲೆಗಳು, ವಿಹಾರ ನೌಕೆಗಳು ಹಾಗೂ ಇತರ ಹೂಟಿಕೆಗಳಲ್ಲಿ ಹೊಂದಿದ್ದರೂ, ಇವುಗಳಿಗೆ ತೆರಿಗೆ ವಿಧಿಸಬಹುದಾದ ಆದಾಯ ಎಂದು ಪರಿಗಣಿಸಲಾಗುವುದಿಲ್ಲ. ಈ ಸ್ವತ್ತುಗಳನ್ನು ಮಾರಾಟ ಮಾಡಿ ಲಾಭ ಮಾಡಿಕೊಂಡರೆ ಮಾತ್ರ ತೆರಿಗೆ ಅನ್ವಯವಾಗುತ್ತದೆ. ಅಲ್ಲದೆ, ತೆರಿಗೆ ಸಂಹಿತೆಯಲ್ಲಿ ಸಾಕಷ್ಟು ಲೋಪದೋಷಗಳಿದ್ದು, ಅದರಿಂದ ಎಲ್ಲಾ ತೆರಿಗೆ ಹೊಣೆಗಾರಿಕೆಯನ್ನು ಮಿತಿಗೊಳಿಸಬಹುದು ಅಥವಾ ಅಳಿಸಬಹುದು ಎಂದೂ ನ್ಯೂಯಾರ್ಕ್ ಟೈಮ್ಸ್ ವಿಶ್ಲೇಷಿಸಿದೆ.
ಇನ್ನೊಂದೆಡೆ, "ಪ್ರವೇಶ ಹೊಂದಿರದ ವ್ಯಕ್ತಿಯಿಂದ ಯಾವುದೇ ಗೌಪ್ಯ ಮಾಹಿತಿಯನ್ನು ಅನಧಿಕೃತವಾಗಿ ಬಹಿರಂಗಪಡಿಸುವುದು ಕಾನೂನುಬಾಹಿರ" ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಈ ಸಂಬಂಧ ಹೇಳಿದ್ದು, "ನಾವು ಇದನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತೇವೆ." ಇದು ಕ್ರಿಮಿನಲ್ ಅಪರಾಧವಾಗಿದೆ ಎಂಬ ಹೇಳಿಕೆ ನೀಡಿದ್ದಾರೆ ಎಂದು ನ್ಯುಯಾರ್ಕ್ ಟೈಮ್ಸ್ ಉಲ್ಲೇಖಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ