ಚೀನಾ ಗಡಿ ಸಮೀಪದ ಡೋಕ್ಲಾಮ್​ನಲ್ಲಿ ಸುಸಜ್ಜಿತ ರಸ್ತೆ: ಭಾರತದ ಮಿಲಿಟರಿ ಓಡಾಟ ಇನ್ನು ಸುಗಮ

ಬಹಳ ದುರ್ಗಮ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಈ ರಸ್ತೆಯು ದೊಡ್ಡ ದೊಡ್ಡ ವಾಹನಗಳ ಸಂಚಾರವನ್ನು ತಡೆದುಕೊಳ್ಳಬಲ್ಲಷ್ಟು ಶಕ್ತವಾಗಿದೆ. ಭಾರತೀಯ ಸೇನಾ ವಾಹನಗಳ ಓಡಾಟಕ್ಕೆ ಇನ್ಮುಂದೆ ಬಹಳ ಸುಲಭವಾಗುತ್ತದೆ. ಗಡಿಭಾಗದಲ್ಲಿ ಬಿಕ್ಕಟ್ಟು ಉದ್ಭವಿಸಿದರೆ ಭಾರತೀಯ ಸೈನಿಕರು ತ್ವರಿತವಾಗಿ ಇಲ್ಲಿಯ ನೆಲೆಗೆ ಬರಲು ಸಾಧ್ಯವಾಗುತ್ತದೆ.

Vijayasarthy SN | news18
Updated:October 3, 2019, 3:56 PM IST
ಚೀನಾ ಗಡಿ ಸಮೀಪದ ಡೋಕ್ಲಾಮ್​ನಲ್ಲಿ ಸುಸಜ್ಜಿತ ರಸ್ತೆ: ಭಾರತದ ಮಿಲಿಟರಿ ಓಡಾಟ ಇನ್ನು ಸುಗಮ
ಡೋಕ್ಲಾಮ್ ಜಂಕ್ಷನ್
  • News18
  • Last Updated: October 3, 2019, 3:56 PM IST
  • Share this:
ನವದೆಹಲಿ(ಅ. 03): ಭೂತಾನ್-ಚೀನಾ ಗಡಿಭಾಗದ ಸಮೀಪದಲ್ಲಿರುವ ಡೋಕ್ಲಾಮ್ ಕಣಿವೆಗೆ ಸಂಪರ್ಕ ಸಾಧಿಸುವ ಉತ್ತಮ ರಸ್ತೆಯೊಂದನ್ನು ಭಾರತ ನಿರ್ಮಿಸಿದೆ. ಗಡಿ ರಸ್ತೆ ಸಂಸ್ಥೆ (ಬಿಆರ್​ಓ) ನಿರ್ಮಿಸಿರುವ ಈ ರಸ್ತೆ ನಿರ್ಮಾಣದಿಂದ ಭಾರತೀಯ ಸೇನೆಗೆ ಭಾರೀ ಅನುಕೂಲವಾಗಲಿದೆ. ಈ ದುರ್ಗಮ ಕಣಿವೆ ಭಾಗದಲ್ಲಿರುವ ಭಾರತೀಯ ಸೇನಾ ನೆಲೆಗೆ ಬರಲು ಈ ಮುಂಚೆ 7 ಗಂಟೆ ಪ್ರಯಾಣ ಬೆಳಸಬೇಕಿತ್ತು. ಈಗ ಪರ್ಯಾಯ ರಸ್ತೆ ನಿರ್ಮಾಣದಿಂದಾಗಿ ಡೋಕಾಲದಿಂದ ಭೀಮ್ ಬೇಸ್​ವರೆಗೆ ಕೇವಲ 40 ನಿಮಿಷದಲ್ಲಿ ಪ್ರಯಾಣಿಸಬಹುದಾಗಿದೆ.

2017ರಲ್ಲಿ ಡೋಕ್ಲಾಮ್ ದೊಡ್ಡ ಸುದ್ದಿಯಾಗಿತ್ತು. ಚೀನಾ ಮತ್ತು ಭೂತಾನ್ ಮಧ್ಯೆ ವಿವಾದಿತ ಪ್ರದೇಶವಾಗಿರುವ ಡೋಕ್ಲಾಮ್​ ಪ್ರಸ್ಥಭೂಮಿಯನ್ನು ಚೀನಾ ಪರೋಕ್ಷವಾಗಿ ಅತಿಕ್ರಮಿಸಲು ಯತ್ನಿಸಿತ್ತು. ಇಲ್ಲಿಯ ಜಂಫೇರಿ ಪರ್ವತ ಶ್ರೇಣಿಯವರೆಗೆ ಚೀನೀಯರು ಆಗಮಿಸಿದ್ದರು. ಇಲ್ಲಿ ರಸ್ತೆ ನಿರ್ಮಾಣದಂಥ ಚಟುವಟಿಕೆ ನಡೆಸುತ್ತಿದ್ದರು. ಭೂತಾನ್ ಸರ್ಕಾರದ ಮನವಿ ಮೇರೆಗೆ ಭಾರತೀಯ ಸೈನಿಕರು ಡೋಕ್ಲಾಮ್​ನಲ್ಲಿ ಚೀನೀಯರನ್ನು ಅಡ್ಡಗಟ್ಟಿ ನಿಲ್ಲಿಸಿದ್ದರು. ಬರೋಬ್ಬರಿ 73 ದಿನಗಳ ಕಾಲ ಈ ತಿಕ್ಕಾಟ ನಡೆದಿತ್ತು. ದೊಡ್ಡ ಮಟ್ಟಕ್ಕೆ ಹೋಗುವ ಮುನ್ನವೇ ಚೀನಾ ತನ್ನ ಸೈನಿಕರನ್ನು ವಾಪಸ್ ಕರೆಸಿಕೊಂಡಿತು.

ಇದನ್ನೂ ಓದಿ: ದೆಹಲಿಯೊಳಗೆ ನುಸುಳಿದ ಜೈಷ್​ ಉಗ್ರರು; ಭಯೋತ್ಪಾದಕ ದಾಳಿ ಸಾಧ್ಯತೆ, ಎಚ್ಚರಿಕೆ ನೀಡಿದ ಗುಪ್ತಚರ ಇಲಾಖೆ

ಡೋಕ್ಲಾಮ್ ಬಹಳ ಆಯಕಟ್ಟಿನ ಜಾಗದಲ್ಲಿದೆ. ಚೀನಾದ ಚುಂಬಿ ಕಣಿವೆ ಮತ್ತು ಸಿಕ್ಕಿಮ್​ನ ಸಿಲಿಗುರಿಗೆ ಕೊಂಡಿಯಾಗಿ ಡೋಕ್ಲಾಮ್ ಇದೆ. ಇದು ಭೂತಾನ್ ದೇಶದ ಭಾಗ ಎಂಬುದು ಭಾರತದ ನಿಲುವು. ಆದರೆ, ಚೀನಾದವರು ಇದು ತನ್ನ ಪ್ರದೇಶ ಎಂದು ಹೇಳಿಕೊಳ್ಳುತ್ತಿದೆ. ಭಾರತಕ್ಕೂ ಕೂಡ ಈ ಡೋಕ್ಲಾಮ್ ಪ್ರಸ್ಥಭೂಮಿ ಬಹಳ ಆಯಕಟ್ಟಿನ ಜಾಗವಾಗಿದೆ. 89 ಚದರ ಕಿಮೀ ವಿಸ್ತೀರ್ಣವಿರುವ ಡೋಕ್ಲಾಮ್ ಕೇವಲ 10 ಕಿಮೀ ಅಗಲವಿದೆ. ಎರಡು ವರ್ಷದ ಹಿಂದೆ ಚೀನಾದವರು ಡೋಕ್ಲಾಮ್​ನ ಜಂಫೇರಿ ಪರ್ವತ ಶ್ರೇಣಿಯ ಭಾಗವನ್ನು ಅತಿಕ್ರಮಿಸಿಬಿಟ್ಟಿದ್ದರೆ ಭಾರತಕ್ಕೆ ದೊಡ್ಡ ಹಿನ್ನಡೆಯಾಗಿರುತ್ತಿತ್ತು. ಯಾಕೆಂದರೆ, ಜಂಫೇರಿ ಭಾಗದಿಂದ ಕಣ್ಣಳತೆಯ ದೂರದಲ್ಲೇ ಭಾರತದ ಸಿಲಿಗುರಿ ಕಾರಿಡಾರ್ ಭಾಗ ಇದೆ. ಸಿಲಿಗುರಿ ಕಾರಿಡಾರ್ ಕೇವಲ 18 ಕಿಮೀ ಉದ್ದವಿದೆ. ಜಂಫೇರಿ ಭಾಗದಿಂದ ನಿಂತು ಬಹಳ ಸುಲಭವಾಗಿ ಭಾರತೀಯ ಗಡಿ ಭಾಗದೊಳಗೆ ನಡೆಯುವ ಚಟುವಟಿಕೆಗಳನ್ನು ವೀಕ್ಷಿಸಬಹುದಾಗಿದೆ.

ಭಾರತದ ಪ್ರತಿರೋಧದ ಬಳಿಕ ಚೀನಾ ದೇಶ ತನ್ನ ಸೈನಿಕರೆಲ್ಲರನ್ನೂ ಡೋಕ್ಲಾಮ್​ನಿಂದ ವಾಪಸ್ ಕರೆಸಿಕೊಂಡಿತು. ಭಾರತೀಯ ಸೈನಿಕರೂ ಕೂಡ ಅಲ್ಲಿಂದ ವಾಪಸ್ಸಾದರು. ಅದಾದ ಬಳಿಕ, ಭಾರತ ಮತ್ತು ಚೀನಾ ಸೇನೆಯನ್ನು ಪ್ರತಿನಿಧಿಸುವ ಅಧಿಕಾರಿಗಳಿಬ್ಬರು ಪ್ರತೀ ದಿನ ಬೆಳಗ್ಗೆ 8:30ಕ್ಕೆ ತಪ್ಪದೇ ಭೇಟಿಯಾಗಿ ಸುಮಾರು 15 ನಿಮಿಷ ಕುಶಲೋಪರಿ ಮಾತನಾಡುವುದು ವಾಡಿಕೆಯಾಗಿದೆ ಎಂದು ಎನ್​ಡಿಟಿವಿ ವಾಹಿನಿಯ ವರದಿಯಲ್ಲಿ ಬರೆಯಲಾಗಿದೆ. ಈ ಬೆಳವಣಿಗೆಯು ಡೋಕ್ಲಾಮ್​ನಲ್ಲಿ ಶಾಂತಿ ನೆಲಸಲು ಸಹಕಾರಿಯಾಗಿರುವುದಂತೂ ಹೌದು.

ಇದನ್ನೂ ಓದಿ: ಅಜಿತ್ ಧೋವಲ್​ ಸೌದಿ ಭೇಟಿ; ಕಾಶ್ಮೀರ, ಇಂಧನ ಪೂರೈಕೆ, ಭಯೋತ್ಪಾದನೆ ನಿಗ್ರಹ ಕುರಿತು ಮಹತ್ವದ ಚರ್ಚೆ

ಇನ್ನು, ಡೋಕ್ಲಾಮ್​ನಲ್ಲಿ ಈಗ ಉದ್ಘಾಟನೆಯಾಗಿರುವ ಸುಸಜ್ಜಿತ ರಸ್ತೆಯ ನಿರ್ಮಾಣಕ್ಕೂ 2017ರ ಡೋಕ್ಲಾಮ್ ಗಡಿತಿಕ್ಕಾಟಕ್ಕೂ ಸಂಬಂಧವಿಲ್ಲ. 2015ರಲ್ಲೇ ಈ ರಸ್ತೆ ನಿರ್ಮಾಣಕ್ಕೆ ಚಾಲನೆ ಕೊಡಲಾಗಿತ್ತು. 2017ರ ಡೋಕ್ಲಾಮ್ ತಿಕ್ಕಾಟ ನಡೆದ ಬಳಿಕ ಕಾಮಗಾರಿಗೆ ವೇಗದ ಸ್ಪರ್ಶ ಕೊಡಲಾಯಿತಷ್ಟೇ. ಬಹಳ ದುರ್ಗಮ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಈ ರಸ್ತೆಯು ದೊಡ್ಡ ದೊಡ್ಡ ವಾಹನಗಳ ಸಂಚಾರವನ್ನು ತಡೆದುಕೊಳ್ಳಬಲ್ಲಷ್ಟು ಶಕ್ತವಾಗಿದೆ. ಭಾರತೀಯ ಸೇನಾ ವಾಹನಗಳ ಓಡಾಟಕ್ಕೆ ಇನ್ಮುಂದೆ ಬಹಳ ಸುಲಭವಾಗುತ್ತದೆ. ಗಡಿಭಾಗದಲ್ಲಿ ಬಿಕ್ಕಟ್ಟು ಉದ್ಭವಿಸಿದರೆ ಭಾರತೀಯ ಸೈನಿಕರು ತ್ವರಿತವಾಗಿ ಇಲ್ಲಿಯ ನೆಲೆಗೆ ಬರಲು ಸಾಧ್ಯವಾಗುತ್ತದೆ. ಇದೇ ವೇಳೆ, ಇನ್ನೊಂದು ವರ್ಷದಲ್ಲಿ ಫ್ಲ್ಯಾಗ್ ಹಿಲ್​ನಿಂದ ಡೋಕಾಲಾದವರೆಗೆ ಮತ್ತೊಂದು ರಸ್ತೆ ನಿರ್ಮಾಣ ಕಾರ್ಯ ಮುಕ್ತಾಯವಾಗಲಿದೆ.ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:October 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ