ಪಂಜಾಬ್ (ಮಾರ್ಚ್ 01); ದೆಹಲಿ ಸರ್ಕಾರದ ಬೆನ್ನಿಗೆ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ನೇತೃತ್ವದ ಪಂಜಾಬ್ ಸರ್ಕಾರ ಇಂದಿನಿಂದ (ಏಪ್ರಿಲ್ 01) ಪಂಜಾಬ್ ರಾಜ್ಯದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೇವೆಯನ್ನು ಘೋಷಿಸಿದೆ. ಪಂಜಾಬ್ ಸಂಪುಟ ಸಭೆ ಈ ಯೋಜನೆಗೆ ಅನುಮತಿ ನೀಡಿದ್ದು, ಇಂದಿನಿಂದಲೇ ಇದು ಚಾಲ್ತಿಯಾಗಲಿದೆ ಎಂದು ಅಮರೀಂದರ್ ಸಿಂಗ್ ತಿಳಿಸಿದ್ದಾರೆ. ಈ ಹಿಂದೆ ದೆಹಲಿಯ ಅರವಿಂದ ಕೇಜ್ರಿವಾಲ್ ಸರ್ಕಾರ ಸರ್ಕಾರಿ ಬಸ್ ಮತ್ತು ಮೆಟ್ರೋಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಿಸಿತ್ತು. ಈ ಯೋಜನೆ ಸಾರಿಗೆ ಇಲಾಖೆಗೆ ನಷ್ಟ ತರಲಿದೆ ಎಂದು ವಿರೋಧ ಪಕ್ಷಗಳು ಟೀಕಿಸಿದ್ದವು. ಆದರೆ, ಉಚಿತ ಪ್ರಯಾಣದ ಹೊರತಾಗಿಯೂ ದೆಹಲಿ ಸಾರಿಗೆ ಲಾಭದಲ್ಲೇ ಇದೆ. ಹೀಗಾಗಿ ನೆರೆಯ ಪಂಜಾಬ್ ಸರ್ಕಾರ ಸಹ ಈ ಯೋಜನೆಯನ್ನು ಜಾರಿಗೆ ತಂದಿದೆ ಎನ್ನಲಾಗುತ್ತಿದೆ.
ಪಂಜಾಬ್ ರಾಜ್ಯದ ಮಹಿಳೆಯರು ಮತ್ತು ಯುವತಿಯರನ್ನು ಸಬಲೀಕರಣಗೊಳಿಸುವ ಸರ್ಕಾರದ ಪ್ರಯತ್ನಗಳ ಭಾಗವಾಗಿ ಮುಖ್ಯಮಂತ್ರಿ ಮಾರ್ಚ್ 5 ರಂದು ವಿಧಾನಸಭೆಯಲ್ಲಿ ಉಚಿತ ಪ್ರಯಾಣ ಯೋಜನೆಯನ್ನು ಘೋಷಿಸಿದ್ದರು ಎಂದು ಸರ್ಕಾರದ ಅಧಿಕೃತ ಹೇಳಿಕೆ ತಿಳಿಸಿದೆ.
ಪಂಜಾಬ್ ರಾಜ್ಯದ 1.31 ಕೋಟಿ ಮಹಿಳೆಯರು ಮತ್ತು ಯುವತಿಯರು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. 2011 ರ ಜನಗಣತಿಯ ಪ್ರಕಾರ, ಪಂಜಾಬ್‌ನಲ್ಲಿ 2.77 ಕೋಟಿ ಜನಸಂಖ್ಯೆ ಇದೆ (ಪುರುಷರು 1,46,39,465 ಮತ್ತು ಮಹಿಳೆಯರು 1,31,03,873).
ಕಳೆದ ಬಾರಿಯ ದೆಹಲಿ ಚುನಾವಣೆಗೆ ಮುನ್ನ ಆಮ್ ಆದ್ಮಿ ಪಾರ್ಟಿಯ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಇದೇ ರೀತಿ ಮಹಿಳೆಯರಿಗೆ ಉಚಿತ ಪ್ರಯಣ ಸೇವೆ ನಿಡುವ ಕ್ರಮ ಕೈಗೊಂಡಿದ್ದರು. ಬಸ್ ಮತ್ತು ಮೆಟ್ರೋ ಎರಡರಲ್ಲಿಯೂ ಉಚಿತ ಪ್ರಯಾನ ಎಂದು ಘೋಷಿಸಿದ್ದರು. ಮುಂದಿನ ವರ್ಷದ ಆರಂಭದಲ್ಲಿ ಪಂಜಾಬ್ ರಾಜ್ಯದಲ್ಲಿಯೂ ಚುನಾವಣೆ ನಡೆಯಲಿದೆ.
ಈ ಯೋಜನೆಯಡಿ, ಪಂಜಾಬ್‌ನ ಮಹಿಳೆಯರು ಪಂಜಾಬ್ ರಸ್ತೆ ಸಾರಿಗೆ ನಿಗಮ (PRTC), ಪಂಜಾಬ್ ರಸ್ತೆ ಮಾರ್ಗ ಬಸ್‌ಗಳು (PUNBUS) ಮತ್ತು ಸ್ಥಳೀಯ ಸಂಸ್ಥೆಗಳಿಂದ ನಿರ್ವಹಿಸಲ್ಪಡುವ ನಗರ ಬಸ್ ಸೇವೆಗಳನ್ನು ಒಳಗೊಂಡಂತೆ ಸರ್ಕಾರಿ ಸ್ವಾಮ್ಯದ ಬಸ್‌ಗಳಲ್ಲಿ ಉಚಿತ ಬಸ್ ಪ್ರಯಾಣವನ್ನು ಪಡೆಯಬಹುದು.
ಆದರೆ, ಈ ಯೋಜನೆಯು ಸರ್ಕಾರಿ ಸ್ವಾಮ್ಯದ ಎಸಿ ಬಸ್‌ಗಳು, ವೋಲ್ವೋ ಬಸ್‌ಗಳು ಮತ್ತು ಎಚ್‌ವಿಎಸಿ (HVAC) ಬಸ್‌ಗಳಿಗೆ ಅನ್ವಯಿಸುವುದಿಲ್ಲ. ಸೌಲಭ್ಯವನ್ನು ಪಡೆಯಲು ಆಧಾರ್ ಕಾರ್ಡ್, ಮತದಾರರ ಕಾರ್ಡ್ ಅಥವಾ ಪಂಜಾಬ್ ನಿವಾಸಿಗಳೆಂದು ಹೇಳುವ ಯಾವುದಾದರೂ ದಾಖಲೆಗಳನ್ನು ನೀಡಬೇಕಾಗುತ್ತದೆ.
ಈ ಯೋಜನೆಯು ಸಾರಿಗೆಯ ದರದಿಂದಾಗಿ ಶಾಲೆ ಬಿಡುವ ಹೆಣ್ಣು ಮಕ್ಕಳನ್ನು ಕಡಿಮೆ ಮಾಡುವುದಲ್ಲದೆ, ಕೆಲಸ ಮಾಡುವ ಮಹಿಳೆಯರಿಗೆ ಅನುಕೂಲವಾಗಲಿದೆ ಎಂದು ಹೇಳಲಾಗಿದೆ. ಕೆಲಸದ ಸ್ಥಳಕ್ಕೆ ಸಾಕಷ್ಟು ದೂರ ಪ್ರಯಾಣಿಸುವ ಮಹಿಳೆಯರಿಗೆ ಯಾವುದೇ ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸಹಾಯಕವಾಗಲಿದೆ ಎಂದು ಸರ್ಕಾರ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ