ಸುಪ್ರೀಂ ‘ಬಂಡಾಯ’ಕ್ಕೆ ನಿವೃತ್ತ ನ್ಯಾಯಾಧೀಶರ ಬೆಂಬಲ; ಸಿಜೆಐಗೆ ಬಹಿರಂಗ ಪತ್ರ

ದೇಶದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಬಹಿರಂಗವಾಗಿ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್​ನ ನಾಲ್ವರು ಅತ್ಯುಚ್ಚ ನ್ಯಾಯಾಧೀಶರಿಗೆ ಕೆಲ ನಿವೃತ್ತ ನ್ಯಾಯಾಧೀಶರು ಬೆಂಬಲ ನೀಡಿದ್ದಾರೆ. ಮುಖ್ಯನ್ಯಾಯಮೂರ್ತಿಗಳ ಬಗ್ಗೆ ಬಹಿರಂಗವಾಗಿ ಅಸಮಾಧಾನವನ್ನು ವ್ಯಕ್ತಪಡಿಸಿದ ನ್ಯಾ| ಚಲಮೇಶ್ವರ್, ನ್ಯಾ| ಕುರಿಯನ್ ಜೋಸೆಫ್, ನ್ಯಾ| ಮದನ್ ಬಿ.ಲೋಕೂರ್, ನ್ಯಾ| ರಂಜನ್ ಗೊಗೋಯ್ ಅವರ ನಡೆಯನ್ನು ನಿವೃತ್ತ ನ್ಯಾ| ಪಿ.ಬಿ.ಸಾವಂತ್, ನಿವೃತ್ತ ನ್ಯಾ| ಎ.ಪಿ.ಷಾ, ನಿವೃತ್ತ ನ್ಯಾ| ಕೆ.ಚಂದ್ರು ಮತ್ತು ನಿವೃತ್ತ ನ್ಯಾ| ಹೆಚ್.ಸುರೇಶ್ ಅವರು ಸಮರ್ಥಿಸಿದ್ದಾರೆ.

news18
Updated:January 14, 2018, 7:23 PM IST
ಸುಪ್ರೀಂ ‘ಬಂಡಾಯ’ಕ್ಕೆ ನಿವೃತ್ತ ನ್ಯಾಯಾಧೀಶರ ಬೆಂಬಲ; ಸಿಜೆಐಗೆ ಬಹಿರಂಗ ಪತ್ರ
ಸುಪ್ರೀಂಕೋರ್ಟ್
news18
Updated: January 14, 2018, 7:23 PM IST
ನವದೆಹಲಿ(ಜ. 14): ದೇಶದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಬಹಿರಂಗವಾಗಿ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್​ನ ನಾಲ್ವರು ಅತ್ಯುಚ್ಚ ನ್ಯಾಯಾಧೀಶರಿಗೆ ಕೆಲ ನಿವೃತ್ತ ನ್ಯಾಯಾಧೀಶರು ಬೆಂಬಲ ನೀಡಿದ್ದಾರೆ. ಮುಖ್ಯನ್ಯಾಯಮೂರ್ತಿಗಳ ಬಗ್ಗೆ ಬಹಿರಂಗವಾಗಿ ಅಸಮಾಧಾನವನ್ನು ವ್ಯಕ್ತಪಡಿಸಿದ ನ್ಯಾ| ಚಲಮೇಶ್ವರ್, ನ್ಯಾ| ಕುರಿಯನ್ ಜೋಸೆಫ್, ನ್ಯಾ| ಮದನ್ ಬಿ.ಲೋಕೂರ್, ನ್ಯಾ| ರಂಜನ್ ಗೊಗೋಯ್ ಅವರ ನಡೆಯನ್ನು ನಿವೃತ್ತ ನ್ಯಾ| ಪಿ.ಬಿ.ಸಾವಂತ್, ನಿವೃತ್ತ ನ್ಯಾ| ಎ.ಪಿ.ಷಾ, ನಿವೃತ್ತ ನ್ಯಾ| ಕೆ.ಚಂದ್ರು ಮತ್ತು ನಿವೃತ್ತ ನ್ಯಾ| ಹೆಚ್.ಸುರೇಶ್ ಅವರು ಸಮರ್ಥಿಸಿದ್ದಾರೆ. ನಾಲ್ವರು ಹಿರಿಯ ನ್ಯಾಯಾಧೀಶರು ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿದ್ದು ಸರಿಯಾಗಿಯೇ ಇದೆ. ಮುಖ್ಯನ್ಯಾಯಮೂರ್ತಿಗಳು ತಮ್ಮ ಮನಸೋಯಿಚ್ಛೆ ಪ್ರಕರಣಗಳನ್ನು ಹಂಚಿಕೆ ಮಾಡುವುದು ತಪ್ಪಾಗುತ್ತದೆ. ಪ್ರಕರಣಗಳಿಗೆ ನ್ಯಾಯಪೀಠಗಳನ್ನು ನಿಯೋಜಿಸುವಾಗ ಸರಿಯಾದ ಕ್ರಮ ಪಾಲಿಸುವ ವ್ಯವಸ್ಥೆ ಇರಬೇಕು ಎಂದು ಈ ನಾಲ್ವರು ನಿವೃತ್ತ ನ್ಯಾಯಾಧೀಶರು ಸಲಹೆ ನೀಡಿದ್ದಾರೆ. ಅಲ್ಲದೇ, ಸ್ಪಷ್ಟ ನಿಯಮಗಳು ರೂಪುಗೊಳ್ಳುವವರೆಗೂ ಸೂಕ್ಷ್ಮ ಪ್ರಕರಣಗಳನ್ನು ಸರ್ವೋಚ್ಚ ನ್ಯಾಯಾಲಯದ ಟಾಪ್ 5 ನ್ಯಾಯಾಧೀಶರು ಮಾತ್ರ ನಿರ್ವಹಿಸಬೇಕು ಎಂದೂ ಈ ಹಿರಿಯರು ತಿಳಿಹೇಳಿದ್ದಾರೆ.

ನಾಲ್ವರು ನಿವೃತ್ತ ನ್ಯಾಯಾಧೀಶರು ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿಗೆ ಬರೆದಿರುವ ಬಹಿರಂಗ ಪತ್ರದ ಪೂರ್ಣ ಪಾಠ ಇಲ್ಲಿದೆ:

ಸನ್ಮಾನ್ಯ ಮುಖ್ಯನ್ಯಾಯಮೂರ್ತಿಗಳೇ,

ಸರ್ವೋಚ್ಚ ನ್ಯಾಯಾಲಯದ ವಿವಿಧ ನ್ಯಾಯಪೀಠಗಳಿಗೆ ಪ್ರಕರಣಗಳ ಹಂಚಿಕೆ ಮಾಡುವ, ಅದರಲ್ಲೂ ಬಹಳ ಸೂಕ್ಷ್ಮ ಪ್ರಕರಣಗಳ ಹಂಚಿಕೆ ಮಾಡುವ ಗಂಭೀರ ವಿಷಯವನ್ನು ನಾಲ್ವರು ಹಿರಿಯ ನ್ಯಾಯಾಧೀಶರು ಮುನ್ನೆಲೆಗೆ ತಂದಿದ್ದಾರೆ. ಪ್ರಕರಣಗಳನ್ನು ಸರಿಯಾಗಿ ಹಂಚಿಕೆ ಮಾಡಲಾಗುತ್ತಿಲ್ಲವೆಂದು ಅವರು ಅತೀವ ಆತಂಕ ತೋರ್ಪಡಿಸಿದ್ದಾರೆ. ವೈಯಕ್ತಿಕ ವಿವೇಚನೆ ಉಪಯೋಗಿಸಿ ಪ್ರಕರಣಗಳ ಹಂಚಿಕೆಯಾಗುತ್ತಿದೆ. ಸಾಕಷ್ಟು ಬಾರಿ ಕಿರಿಯ ನ್ಯಾಯಾಧೀಶರಿಗೆ ಸೂಕ್ಷ್ಮ ಪ್ರಕರಣಗಳನ್ನು ಹಂಚಿಕೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಇದು ನ್ಯಾಯವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.

ಪ್ರಕರಣಗಳ ಹಂಚಿಕೆ ಮಾಡುವ ರೋಸ್ಟರ್ ಪದ್ಧತಿಗೆ ಭಾರತೀಯ ಮುಖ್ಯನ್ಯಾಯಮೂರ್ತಿಗಳೇ ಮಾಸ್ಟರ್ ಎಂಬುದು ಹೌದು. ನ್ಯಾಯಪೀಠಗಳಿಗೆ ಕೆಲಸವನ್ನು ನಿಯೋಜಿಸುವ ಅಧಿಕಾರವೂ ಅವರಿಗೆ ಇರುವುದು ಹೌದು. ಹಾಗಂತ ಬಹಳ ಸೂಕ್ಷ್ಮವಾದ ಮತ್ತು ಮುಖ್ಯವಾದ ಪ್ರಕರಣಗಳನ್ನು ಕಿರಿಯ ನ್ಯಾಯಾಧೀಶರ ನೇತೃತ್ವದ ನ್ಯಾಯಪೀಠಗಳಿಗೆ ಹಂಚಿಕೆ ಮಾಡಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ನಾವು ನಾಲ್ವರು ನ್ಯಾಯಾಧೀಶರ ವಾದವನ್ನು ಒಪ್ಪುತ್ತೇವೆ. ಈ ಸಮಸ್ಯೆಯು ಬಗೆಹರಿಯಬೇಕು. ನ್ಯಾಯಪೀಠಗಳ ನಿಯೋಜನೆ ಮತ್ತು ಪ್ರಕರಣಗಳ ಹಂಚಿಕೆ ವಿಚಾರದಲ್ಲಿ ಪಾರರ್ಶಕವಾಗಿರುವ ಮತ್ತು ನ್ಯಾಯಯುತವಾಗಿರುವ ಸ್ಪಷ್ಟ ನಿಯಮ ಮತ್ತು ನಿಬಂಧನೆಗಳನ್ನು ಮಾಡಬೇಕಿದೆ. ನ್ಯಾಯಾಂಗದ ಬಗ್ಗೆ ಮತ್ತು ಸುಪ್ರೀಂಕೋರ್ಟ್ ಬಗ್ಗೆ ಸಾರ್ವಜನಿಕರಿಗೆ ವಿಶ್ವಾಸ ಮರಳಬೇಕಾದಲ್ಲಿ ಈ ಕೆಲಸ ತುರ್ತಾಗಿ ಆಗಬೇಕಿದೆ. ಇದು ಕೈಗೂಡುವವರೆಗಾದರೂ ಎಲ್ಲಾ ಮುಖ್ಯ ಮತ್ತು ಸೂಕ್ಷ್ಮ ಪ್ರಕರಣಗಳನ್ನು ಸುಪ್ರೀಂಕೋರ್ಟ್​ನ ಸಾಂವಿಧಾನಿಕ ಪೀಠದ ಐವರು ಅತ್ಯಂತ ಹಿರಿಯ ನ್ಯಾಯಾಧೀಶರೇ ನಿರ್ವಹಿಸುವಂತೆ ಮಾಡಿರಿ. ಸುಪ್ರೀಂಕೋರ್ಟ್ ನ್ಯಾಯಯುತವಾಗಿ, ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಭಾವನೆ ನೆಲಸಲು; ಹಾಗೂ ಸೂಕ್ಷ್ಮ ಪ್ರಕರಣಗಳಲ್ಲಿ ನಿರ್ದಿಷ್ಟ ತೀರ್ಪು ಬರುವಂತೆ ಮುಖ್ಯನ್ಯಾಯಮೂರ್ತಿಗಳು ತಮ್ಮ ಅಧಿಕಾರ ದುರುಪಯೋಗಿಸಿಕೊಳ್ಳುತ್ತಿದ್ದಾರೆಂಬ ಭಾವನೆ ನಿವಾರಣೆಯಾಗಲು ಇಂತಹ ಕ್ರಮಗಳಿಂದ ಮಾತ್ರ ಸಾಧ್ಯವಾಗುತ್ತದೆ. ಹೀಗಾಗಿ ಈ ವಿಚಾರದಲ್ಲಿ ತಾವು ತತ್​ಕ್ಷಣವೇ ಕ್ರಮ ಜರುಗಿಸಬೇಕೆಂದು ಒತ್ತಾಯಿಸುತ್ತೇವೆ.

ಇಂತಿ,

ನಿವೃತ್ತ ನ್ಯಾ| ಪಿ.ಬಿ.ಸಾವಂತ್, ಸುಪ್ರೀಂಕೋರ್ಟ್ ಮಾಜಿ ನ್ಯಾಯಾಧೀಶರು
Loading...

ನಿವೃತ್ತ ನ್ಯಾ| ಎ.ಪಿ.ಷಾ, ದೆಹಲಿ ಹೈಕೋರ್ಟ್ ಮಾಜಿ ಮುಖ್ಯನ್ಯಾಯಾಧೀಶರು

ನಿವೃತ್ತ ನ್ಯಾ| ಕೆ.ಚಂದ್ರು, ಮದ್ರಾಸ್ ಹೈಕೋರ್ಟ್ ಮಾಜಿ ನ್ಯಾಯಾಧೀಶರು

ನಿವೃತ್ತ ನ್ಯಾ| ಹೆಚ್.ಸುರೇಶ್, ಬಾಂಬೆ ಹೈಕೋರ್ಟ್ ಮಾಜಿ ನ್ಯಾಯಾಧೀಶರು
First published:January 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ