ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಅಧ್ಯಕ್ಷ (Former Prime Minister of Pakistan) ಪರ್ವೇಜ್ ಮುಷರಫ್ (Pervez Musharraf) ಅವರು ತೀವ್ರ ಅನಾರೋಗ್ಯದ ಹಿನ್ನೆಲೆ ಭಾನುವಾರ ಬೆಳಗ್ಗೆ ನಿಧನ (Pervez Musharraf Passes Away) ಹೊಂದಿದರು. ಕಳೆದ ಕೆಲ ಸಮಯದಿಂದ ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ದುಬೈನ ಪ್ರಸಿದ್ಧ ಅಮೆರಿಕನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಬೆಳಗ್ಗೆ ಆರೋಗ್ಯದಲ್ಲಿ ದಿಢೀರನೇ ಏರುಪೇರು ಉಂಟಾದ ಕಾರಣ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
79 ವರ್ಷ ವಯಸ್ಸಾಗಿದ್ದ ಪರ್ವೇಜ್ ಮುಷರಫ್ ಅವರು ಅವರು 1999ರಿಂದ 2008ರ ತನಕ ಸುದೀರ್ಘ ಅವಧಿಗೆ ಪಾಕಿಸ್ತಾನದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಸೇನಾ ಮುಖ್ಯಸ್ಥರಾಗಿದ್ದ ಮುಷರಫ್ ಅವರು, 1999 ರಲ್ಲಿ ಸೇನಾ ಬಲ ಬಳಸಿಕೊಂಡು ಆಗಿನ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರ ವಿರುದ್ಧ ರಕ್ತಪಾತ ರಹಿತ ದಂಗೆ ನಡೆಸಿ ಅಧಿಕಾರವನ್ನು ಬಲವಂತವಾಗಿ ಕಿತ್ತುಕೊಂಡಿದ್ದರು. ಬಳಿಕ ನಿರಂತರವಾಗಿ 2008 ರ ತನಕ ಪಾಕಿಸ್ತಾನದ ಅಧ್ಯಕ್ಷರಾಗಿ ಆಡಳಿತ ನಡೆಸಿದ್ದರು.
ದೇಹದ ಅಂಗಾಂಗಳ ಮೇಲೆ ದಾಳಿ ಮಾಡಿದ್ದ ‘ಅಮಿಲೋಯ್ಡೋಸಿಸ್’
‘ಅಮಿಲೋಯ್ಡೋಸಿಸ್’ ಎಂಬ ಅಪರೂಪದ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ಪರ್ವೇಜ್ ಮುಷರಫ್ ಅವರು ಕಳೆದ ಕೆಲ ಸಮಯದಿಂದ ವೆಂಟಿಲೇನರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಮಿಲಾಯ್ಡ್ ಎಂಬ ಅಸಹಜ ಪ್ರೋಟೀನ್ ದೇಹದ ಒಳಗಿನ ಅಂಗಾಂಗಗಳಲ್ಲಿ ಬೆಳೆಯುತ್ತದೆ. ಬಳಿಕ ಅದು ದೇಹದ ಇತರ ಭಾಗಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸದಂತೆ ಅಡ್ಡಿ ಉಂಟುಮಾಡುತ್ತದೆ. ಮುಷರಫ್ ಅವರಿಗೂ ಕೂಡ ಈ ಕಾಯಿಲೆಯಿಂದ ಅವರ ದೇಹದ ಬಹು ಅಂಗಾಂಗಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. 2018 ರಲ್ಲಿ ಈ ಮಾರಕ ಕಾಯಿಲೆ ಅವರ ದೇಹದಲ್ಲಿ ಪತ್ತೆಯಾಗಿತ್ತು.
ಈ ಹಿಂದೆ ಹೇಳಿಕೆ ಬಿಡುಗಡೆ ಮಾಡಿದ್ದ ಮುಷರಫ್ ಕುಟುಂಬ
ಕಳೆದ ವರ್ಷ ಜೂನ್ 10 ರಂದು ಪರ್ವೇಜ್ ಮುಷರಫ್ ಅವರ ಆರೋಗ್ಯದ ಕುರಿತು ಅವರದೇ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಪೋಸ್ಟ್ ಮಾಡಿದ್ದ ಕುಟುಂಬ ಸದಸ್ಯರು, ಮುಷರಫ್ ಅವರ ದೇಹದಲ್ಲಿ ಅಂಗಾಂಗಗಳು ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಹೇಳಿತ್ತು. ನಂತರ, ಮುಷರಫ್ ಅವರು ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿಲ್ಲ. ಅಮಿಲಾಯ್ಡೊಸಿಸ್ ಕಾಯಿಲೆ ಉಲ್ಬಣಗೊಂಡ ಕಾರಣ ಅವರನ್ನು ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಎಂದು ಕುಟುಂಬ ಹೇಳಿತ್ತು.
2007ರಲ್ಲಿ ಪಾಕಿಸ್ತಾನದಲ್ಲಿ ಹೆಚ್ಚುವರಿ ಸಾಂವಿಧಾನಿಕ ತುರ್ತು ಪರಿಸ್ಥಿತಿಯನ್ನು ಹೇರುವ ಮೂಲಕ ಸಂವಿಧಾನವನ್ನು ಅಮಾನತುಗೊಳಿಸಿದ ಆರೋಪದ ಮೇಲೆ 2014 ರಲ್ಲಿ ಪರ್ವೇಜ್ ಮುಷರಫ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿತ್ತು. ಬೇನಜೀರ್ ಭುಟ್ಟೋ ಕೊಲೆ ಪ್ರಕರಣ ಹಾಗೂ ಮಸೀದಿ ಮೌಲ್ವಿ ಕೊಲೆ ಪ್ರಕರಣಗಳಲ್ಲೂ ಅವರ ವಿರುದ್ಧ ಗಂಭೀರ ಪ್ರಕರಣ ದಾಖಲಾಗಿತ್ತು. 2019 ರಲ್ಲಿ ಅವರಿಗೆ ಮರಣದಂಡನೆ ವಿಧಿಸಲಾಗಿತ್ತಾದರೂ ಬಳಿಕ ಆ ಶಿಕ್ಷೆಯನ್ನು ರದ್ದುಗೊಳಿಸಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ