ನವದೆಹಲಿ: ದೇಶದ ಮಾಜಿ ಪ್ರಧಾನಿ (Former PM) ಮೊರಾರ್ಜಿ ದೇಸಾಯಿ (Morarji Desai) ಅವರ ನೇತೃತ್ವದ ಸರ್ಕಾರದಲ್ಲಿ ಕಾನೂನು ಸಚಿವರಾಗಿ (Law Minister) ಕಾರ್ಯನಿರ್ವಹಿಸಿದ್ದ ಶಾಂತಿ ಭೂಷಣ್ (97) (Shanti Bhushan) ಅವರು ಮಂಗಳವಾರ ಕೊನೆಯುಸಿರೆಳೆದರು.
ಖ್ಯಾತ ವಕೀಲರೂ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕಳೆದ ಕೆಲ ವರ್ಷಗಳಿಂದ ಮನೆಯಿಂದ ಹೊರ ಹೋಗುತ್ತಿರಲಿಲ್ಲ. ಅವರನ್ನು ಕುಟುಂಬದ ಸದಸ್ಯರು ಕಾಳಜಿ ಮಾಡುತ್ತಿದ್ದರು. ಆದರೆ ಮಂಗಳವಾರ ತೀವ್ರ ಅನಾರೋಗ್ಯ ಉಂಟಾದ ಹಿನ್ನೆಲೆ ಸಂಜೆ ವೇಳೆ ದೆಹಲಿಯಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ವಕೀಲರಾಗಿ ಪ್ರಸಿದ್ಧಿ ಪಡೆದಿದ್ದ ಶಾಂತಿ ಭೂಷಣ್
ಖ್ಯಾತ ವಕೀಲರು ಆಗಿ ಪ್ರಸಿದ್ಧಿಯನ್ನು ಹೊಂದಿದ್ದ ಶಾಂತಿ ಭೂಷಣ್ ಅವರು ಮೊರಾರ್ಜಿ ದೇಸಾಯಿ ಅವರ ಸರ್ಕಾರದಲ್ಲಿ 1977ರಿಂದ 1979ರ ತನಕ ಕಾನೂನು ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. 1974ರಲ್ಲಿ ಆಗಿನ ಪ್ರಧಾನ ಮಂತ್ರಿ ಆಗಿದ್ದ ಇಂದಿರಾ ಗಾಂಧಿ ಅವರನ್ನು ಪ್ರಧಾನಿ ಹುದ್ದೆಯಿಂದ ಕೆಳಗೆ ಇಳಿಯುವಂತೆ ಮಾಡಿದ ಚುನಾವಣಾ ಅಕ್ರಮ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಕೇಂದ್ರದ ಮಾಜಿ ಸಚಿವ ರಾಜ್ ನಾರಾಯಣ್ ಪರವಾಗಿ ವಾದ ಮಂಡಿಸಿದ್ದರು.
ಸಾಮಾಜಿಕ ಹೋರಾಟವೂ ಜೀವನದ ಭಾಗ
ತಾವು ಸಚಿವ ಸ್ಥಾನದಿಂದ ಕೆಳಗಿಳಿದ ನಂತರ 1980 ರಲ್ಲಿ ‘ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್’ ಹೆಸರಿನಲ್ಲಿ ಎನ್‌ಜಿಓ ಸ್ಥಾಪನೆ ಮಾಡಿದ್ದರು. ಆ ಎನ್‌ಜಿಓ ಮೂಲಕ ಸುಪ್ರೀಂ ಕೋರ್ಟ್‌ನಲ್ಲಿ ಹಲವು ಪ್ರಮುಖ ಪಿಐಎಲ್‌ಗಳು ಸಲ್ಲಿಕೆಯಾಗಿದ್ದವು. ಶಾಂತಿ ಭೂಷಣ್ ಅವರು ಮಾನವ ಹಕ್ಕುಗಳ ಪರವಾಗಿ ಮತ್ತು ಭ್ರಷ್ಟಾಚಾರದ ವಿರುದ್ಧ ಅನೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಹಾಕುವ ಮೂಲಕ ಸಾಮಾಜಿಕ ಹೋರಾಟ ನಡೆಸಿದ್ದರು.
ಇದನ್ನೂ ಓದಿ: Amazon: ಇನ್ಮುಂದೆ ಇದನ್ನೆಲ್ಲಾ ಅಮೇಜಾನ್ನಲ್ಲಿ ಮಾರಂಗಿಲ್ಲ, ಕೇಂದ್ರ ಸರ್ಕಾರದಿಂದಲೇ ಖಡಕ್ ವಾರ್ನಿಂಗ್!
ರಾಜಕೀಯ ಜೀವನದ ಆಗು-ಹೋಗು
ತಮ್ಮ ರಾಜಕೀಯ ಜೀವನವನ್ನು ಕಾಂಗ್ರೆಸ್ ಪಕ್ಷದ ಮೂಲಕ ಆರಂಭಿಸಿದ ಶಾಂತಿ ಭೂಷಣ್ ಅವರು ಆ ಬಳಿಕ ಜನತಾ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ರಾಜ್ಯಸಭಾ ಸದಸ್ಯರಾಗಿಯೂ ಜನಸೇವೆ ಮಾಡಿದ್ದ ಅವರು ರಾಜಕೀಯ, ಕಾನೂನು ಮತ್ತು ಸಾಮಾಜಿಕ ಹೋರಾಟಗಳ ಅನುಭವಗಳನ್ನು ಕೋರ್ಟಿಂಗ್ ಡೆಸ್ಟಿನಿ ಮತ್ತು ಮೈ ಸೆಕೆಂಡ್ ಇನ್ನಿಂಗ್ಸ್ ಪುಸ್ತಕಗಳಲ್ಲಿ ದಾಖಲಿಸಿದ್ದಾರೆ.
ಖ್ಯಾತ ಸಾಮಾಜಿಕ ಹೋರಾಟಗಾರನಿಗೆ ಜನ್ಮ
ಶಾಂತಿ ಭೂಷಣ್ ಅವರ ಮಗ ಪ್ರಶಾಂತ್ ಭೂಷಣ್ ಅವರು ಸಹ ಖ್ಯಾತ ವಕೀಲರಾಗಿದ್ದು, ಹತ್ತಾರು ಸಾಮಾಜಿಕ ಹೋರಾಟಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇನ್ನು 2012 ರಲ್ಲಿ ಸ್ಥಾಪನೆಯಾದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಸದಸ್ಯರಲ್ಲಿ ಶಾಂತಿ ಭೂಷಣ್ ಮತ್ತು ಪ್ರಶಾಂತ್ ಭೂಷಣ್ ಪ್ರಮುಖರು.
ಶಾಂತಿ ಭೂಷಣ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ
ಕೇಂದ್ರ ಸರ್ಕಾರದಲ್ಲಿ ಕಾನೂನು ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಶಾಂತಿ ಭೂಷಣ್ ಅವರ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಕಾನೂನು ಕ್ಷೇತ್ರಕ್ಕೆ ಅವರ ಕೊಡುಗೆ ಹಾಗೂ ಸಮಾಜದಲ್ಲಿ ಹಿಂದುಳಿದ ವರ್ಗದ ಪರವಾಗಿ ಅವರು ನಿರಂತರ ಧ್ವನಿ ಎತ್ತುತ್ತಿದ್ದದ್ದು ಅವಿಸ್ಮರಣೀಯ ಕ್ಷಣಗಳು. ಅವರ ನಿಧನವು ನನಗೆ ತೀವ್ರ ನೀವು ತಂದಿದೆ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ