ಮಮತಾ ಬ್ಯಾನರ್ಜಿ ಆಪ್ತ, ಕೊಲ್ಕತ್ತಾ ಮಾಜಿ ಮೇಯರ್​ ಸೋವನ್​ ಚಟರ್ಜಿ ಬಿಜೆಪಿ ಸೇರ್ಪಡೆ

ಈ ಸಂದರ್ಭದಲ್ಲಿ ಚಟರ್ಜಿಯವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಮುಕುಲ್​ ರಾಯ್​, ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಸ್ಥಾನಕ್ಕೇರಲು ನಾನು ಶ್ರಮ ಪಟ್ಟಿದ್ದೇನೆ. ಈಗ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಕಷ್ಟಪಡುತ್ತೇನೆ. ಟಿಎಂಸಿ ಮುಂದಿನ ಬಾರಿ ಅಧಿಕೃತ ವಿರೋಧ ಪಕ್ಷವಾಗಿಯೂ ಉಳಿಯಲು ಸಾಧ್ಯವಿಲ್ಲ, ಎಂದರು.

Sharath Sharma Kalagaru | news18-kannada
Updated:August 14, 2019, 6:26 PM IST
ಮಮತಾ ಬ್ಯಾನರ್ಜಿ ಆಪ್ತ, ಕೊಲ್ಕತ್ತಾ ಮಾಜಿ ಮೇಯರ್​ ಸೋವನ್​ ಚಟರ್ಜಿ ಬಿಜೆಪಿ ಸೇರ್ಪಡೆ
ಬಿಜೆಪಿ ಸೇರಿದ ಪಶ್ಚಿಮ ಬಂಗಾಳ ಟಿಎಂಸಿ ನಾಯಕಿ ಸೋವನ್​ ಚಟರ್ಜಿ
  • Share this:
ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್​ (ಟಿಎಂಸಿ) ಹಿರಿಯ ಸದಸ್ಯ, ಕೊಲ್ಕತ್ತಾ ಮಾಜಿ ಮೇಯರ್​ ಮತ್ತು ಮಮತಾ ಬ್ಯಾನರ್ಜಿಯವರ ಆಪ್ತ ಸೋವನ್​ ಚಟರ್ಜಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮಮತಾ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಚಟರ್ಜಿ ಪಕ್ಷ ತೊರೆದಿರುವುದು ಮಮತಾಗೆ ತೀವ್ರ ಮುಖಭಂಗ ಉಂಟುಮಾಡಿದೆ. 

ಚಟರ್ಜಿ ಬುಧವಾರ ಬಿಜೆಪಿಯ ಪಶ್ಚಿಮ ಬಂಗಾಳದ ನಾಯಕ ಮುಕುಲ್​ ರಾಯ್​ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್​ ಸಿಂಗ್​ ಅವರ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಚಟರ್ಜಿಯವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಮುಕುಲ್​ ರಾಯ್​, "ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಸ್ಥಾನಕ್ಕೇರಲು ನಾನು ಶ್ರಮ ಪಟ್ಟಿದ್ದೇನೆ. ಈಗ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಕಷ್ಟಪಡುತ್ತೇನೆ. ಟಿಎಂಸಿ ಮುಂದಿನ ಬಾರಿ ಅಧಿಕೃತ ವಿರೋಧ ಪಕ್ಷವಾಗಿಯೂ ಉಳಿಯಲು ಸಾಧ್ಯವಿಲ್ಲ," ಎಂದರು.

ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ದಿನದಿಂದ ಒಟ್ಟೂ ಆರು ಟಿಎಂಸಿ ಶಾಸಕರು, ಕಾಂಗ್ರೆಸ್​ - ಸಿಪಿಐಎಂನಿಂದ ತಲಾ ಒಬ್ಬ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. 2021ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅಧಿಕಾರ ಗದ್ದುಗೆಗೇರಲು ಬಿಜೆಪಿ ಶತಪ್ರಯತ್ನ ಮಾಡುತ್ತಿದೆ. ಅದಕ್ಕಾಗಿಯೇ ಬೇರೆ ಪಕ್ಷಗಳಿಂದ ನಾಯಕರನ್ನು ತನ್ನತ್ತ ಸೆಳೆಯುತ್ತಿದೆ.

ಇದನ್ನೂ ಓದಿ: ಕಾಶ್ಮೀರಿ ರಾಜಕಾರಣಿ ಶಾ ಫೈಸಲ್ ವಿದೇಶಕ್ಕೆ ಹೋಗದಂತೆ ತಡೆ; ದೆಹಲಿಯಲ್ಲಿ ಬಂಧನ

ಆಶ್ಚರ್ಯವೆಂಬಂತೆ ಬಿಜೆಪಿ ಮೊದಲ ಬಾರಿಗೆ ಪಶ್ಚಿಮ ಬಂಗಾಳದಲ್ಲಿ 42 ಲೋಕಸಭಾ ಕ್ಷೇತ್ರಗಳ ಪೈಕಿ 18 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಮಮತಾ ಬ್ಯಾನರ್ಜಿಯವರಿಗೆ ಹಿನ್ನಡೆ ಉಂಟು ಮಾಡಿದ್ದರು. ಮುಂಬರುವ ದಿನಗಳಲ್ಲಿ ಬಿಜೆಪಿ ಪಕ್ಷ ಬಲವರ್ದನೆಗೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಿದೆ.

ಸೋವನ್​ ಚಟರ್ಜಿ ಎರಡು ಬಾರಿ ಕೋಲ್ಕತ್ತ ಮೇಯರ್​ ಆಗಿದ್ದವರು. ಮತ್ತು ಮಮತಾ ಬ್ಯಾನರ್ಜಿ ಅವರಿಗೆ ತೀರಾ ಅತ್ಯಾಪ್ತರಾಗಿದ್ದವರು. ಅಷ್ಟೇ ಅಲ್ಲದೇ, ತೃಣಮೂಲ ಕಾಂಗ್ರೆಸ್​ ಆರಂಭದಿಂದ ಜೊತೆಗೆ ಇದ್ದವರು.ಸೋವನ್ ಚಟರ್ಜಿ ಬೆಹಲಾ ಪುರ್ಬಾ ವಿಧಾನಸಭಾ ಕ್ಷೇತ್ರದ ಶಾಸಕರು ಆಗಿದ್ದಾರೆ. ಇವರೊಂದಿಗೆ ಇವರ ಸ್ನೇಹಿತ ಹಾಗೂ ಆಪ್ತ ಸಹಾಯಕ ಬೈಸಾಕಿ ಬ್ಯಾನರ್ಜಿ ಅವರು ಕೂಡ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ವೈಯಕ್ತಿಕ ಜೀವನದ ಹಲವು ಸಮಸ್ಯೆಗಳ ಕಾರಣದಿಂದ ಚಟರ್ಜಿ ಕಳೆದ ವರ್ಷ ನವೆಂಬರ್​ನಲ್ಲಿ ಮೇಯರ್​ ಸ್ಥಾನ ಮತ್ತು ಬಂಗಾಳ ರಾಜ್ಯ ಸಚಿವ ಖಾತೆಯನ್ನು ತ್ಯಜಿಸಿದ್ದರು.

ತೃಣಮೂಲ ಕಾಂಗ್ರೆಸ್​ನ ಪ್ರಮುಖ ನಾಯಕ ಪ್ರತಾಪ್​ ಚಟರ್ಜಿ ಅವರು ಸೋವನ್​ ಚಟರ್ಜಿ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಇತ್ತೀಚೆಗೆ ಸಾಕಷ್ಟು ಪ್ರಯತ್ನಿಸಿದರೂ ಅದು ಯಶಸ್ವಿಯಾಗಲಿಲ್ಲ.

2017ರಲ್ಲಿ ಪತ್ರಕರ್ತರು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಸೋವನ್​ ಚಟರ್ಜಿ ಹಣ ಪಡೆದ ನಾರಾದ ಸ್ಟಿಂಗ್​ ಆಪರೇಷನ್​ನಲ್ಲಿ ಸಿಕ್ಕಿಬಿದ್ದಿದ್ದರಿಂದ ಇ.ಡಿ. ಮತ್ತು ಸಿಬಿಐ ಸಮನ್ಸ್​ ನೀಡಿತ್ತು.

ಸೋವನ್​ ಚಟರ್ಜಿ ಅವರು 1985ರಿಂದ ಕಾಂಗ್ರೆಸ್​ನಿಂದ ಕೋಲ್ಕತ್ತ ಮಹಾನಗರ ಪಾಲಿಕೆ ಸದಸ್ಯರಾಗಿದ್ದರು. ಆನಂತರ 1998ರಲ್ಲಿ ಮಮತಾ ಬ್ಯಾನರ್ಜಿ ತೃಣಮೂಲ ಕಾಂಗ್ರೆಸ್​ ಸ್ಥಾಪಿಸಿದಾಗ ಕಾಂಗ್ರೆಸ್​ ತ್ಯಜಿಸಿದ ಚಟರ್ಜಿ ಮಮತಾ ಅವರೊಂದಿಗೆ ಸೇರಿ ಪಕ್ಷ ಸಂಘಟನೆ ಮಾಡಿದರು. 2011ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು.

First published:August 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ