ನವದೆಹಲಿ(ಅ. 13): ಕಳೆದ ಒಂದು ವರ್ಷದಿಂದ ಭದ್ರತೆಯ ಕಾರಣಕ್ಕೆ ಬಂಧಿಯಾಗಿದ್ದ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರನ್ನು ಬಿಡುಗಡೆ ಮಾಡಲಾಗಿದೆ. ಕಣಿವೆ ರಾಜ್ಯದ ಆಡಳಿತದ ವಕ್ತಾರ ರೋಹಿತ್ ಕನ್ಸಾಲ್ ಅವರು ಈ ಮಾಹಿತಿ ನೀಡಿದ್ದಾರೆ. ಸಂವಿಧಾನದಲ್ಲಿ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಆರ್ಟಿಕಲ್ 370 ಅನ್ನು ಕೇಂದ್ರ ಸರ್ಕಾರ ಆಗಸ್ಟ್ ಮೊದಲ ವಾರದಂದು ಹಿಂತೆಗೆದುಕೊಂಡ ಸಂದರ್ಭದಲ್ಲಿ ಆ ರಾಜ್ಯದ ಸಾವಿರಾರು ಮಂದಿ ರಾಜಕೀಯ ಮುಖಂಡರು ಮತ್ತಿತರರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ನ್ಯಾಷನಲ್ ಕಾನ್ಫೆರೆನ್ಸ್ ಪಕ್ಷದ ಫಾರೂಕ್ ಅಬ್ದುಲ್ಲಾ ಮತ್ತು ಒಮರ್ ಅಬ್ದುಲ್ಲಾ, ಪಿಡಿಪಿ ಪಕ್ಷದ ಮೆಹಬೂಬ ಮುಫ್ತಿ ಅವರೂ ಇದರಲ್ಲಿ ಒಳಗೊಂಡಿದ್ದರು. ಈಗ 14 ತಿಂಗಳ ನಂತರ ಮುಫ್ತಿ ಬಿಡುಗಡೆಯ ಭಾಗ್ಯ ಪಡೆದಿದ್ದಾರೆ.
ಮುಫ್ತಿ ಅವರ ಬಿಡುಗಡೆಯಾಗಿದಕ್ಕೆ ಅವರ ಮಗಳು ಇಲ್ತಿಜಾ ಮುಫ್ತಿ ಹರ್ಷ ವ್ಯಕ್ತಪಡಿಸಿದ್ದಾರೆ. ತಮ್ಮ ತಾಯಿಯ ಟ್ವಿಟ್ಟರ್ ಅಕೌಂಟ್ನಿಂದಲೇ ಟ್ವೀಟ್ ಮಾಡಿರುವ ಇಲ್ತಿಜಾ, “ಮುಕ್ತಿ ಅವರ ಅಕ್ರಮ ಬಂಧನ ಕೊನೆಗೂ ಅಂತ್ಯಗೊಂಡಿದೆ. ಈ ಕಷ್ಟದ ಸಂದರ್ಭದಲ್ಲಿ ನನಗೆ ಬೆಂಬಲವಾಗಿ ನಿಂತ ಎಲ್ಲರಿಗೂ ಧನ್ಯವಾದ. ನಿಮಗೆ ನಾನು ಕೃತಜ್ಞನಾಗಿದ್ದೇನೆ. ನಾನು ಇಲ್ತಿಜಾ. ಅಲ್ಲಾಹು ನಿಮ್ಮನ್ನ ಕಾಪಾಡಲಿ” ಎಂದು ಬರೆದಿದ್ದಾರೆ.
As Ms Mufti’s illegal detention finally comes to an end, Id like to thank everybody who supported me in these tough times. I owe a debt of gratitude to you all. This is Iltija signing off. فی امان اﷲ May allah protect you
— Mehbooba Mufti (@MehboobaMufti) October 13, 2020
ಇದನ್ನೂ ಓದಿ: ಕಾಂಗ್ರೆಸ್ಗೆ ಬುದ್ಧಿವಂತ ಮಹಿಳೆಯರು ಬೇಕಾಗಿಲ್ಲ; ಅವರ ಬುದ್ಧಿ ಕುಂಠಿತ: ತಮಿಳುನಾಡು ಕೈ ನಾಯಕರ ವಿರುದ್ಧ ಖುಷ್ಭೂ ವಾಗ್ದಾಳಿ
ಫಾರೂಕ್ ಅಬ್ದುಲ್ಲಾ, ಒಮರ್ ಅಬ್ದುಲ್ಲಾ ಮೊದಲಾದ ಹಲವರನ್ನೂ ಕೂಡ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಕೇಂದ್ರ ಸರ್ಕಾರ ಹಂತ ಹಂತವಾಗಿ ಕಾಶ್ಮೀರದಲ್ಲಿ ಸಹಜ ವಾತಾವರಣ ನೆಲಸುವಂತೆ ಕ್ರಮಗಳನ್ನ ಕೈಗೊಳ್ಳುವ ಪ್ರಯತ್ನದಲ್ಲಿದೆ. ನ್ಯಾಯಾಲಯ ಕೂಡ ಕೇಂದ್ರ ಸರ್ಕಾರವನ್ನ ಈ ವಿಚಾರದಲ್ಲಿ ತರಾಟೆಗೆ ತೆಗೆದುಕೊಂಡಿದೆ.
ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಕೇಂದ್ರ ಸರ್ಕಾರ ಸಂವಿಧಾನದ 370 ಪರಿಚ್ಛೇದವನ್ನು ತೆಗೆದುಹಾಕಿದ್ದಷ್ಟೇ ಅಲ್ಲದೆ, ಜಮ್ಮು-ಕಾಶ್ಮೀರ ರಾಜ್ಯವನ್ನು ಜಮ್ಮು-ಕಾಶ್ಮೀರ ಮತ್ತು ಲಡಾಖ್ ಎಂದು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಿತು. ಕೇಂದ್ರದ ಈ ಕ್ರಮವನ್ನು ವಿಪಕ್ಷಗಳು ಬಲವಾಗಿ ಆಕ್ಷೇಪಿಸಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ