ತಮಿಳುನಾಡು(ಏ.11): ದಿನೇ ದಿನೇ ಕೊರೋನಾ ಸೋಂಕು ಹೆಚ್ಚಾಗುತ್ತಿದ್ದು, ಜನರಲ್ಲಿ ಭೀತಿಯೂ ಜಾಸ್ತಿಯಾಗುತ್ತಿದೆ. ಈ ನಡುವೆಯೇ ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಸಿಂಗಂ ಅಣ್ಣಾಮಲೈ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಹೌದು, ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ಅವರಿಗೆ ಕೊರೋನಾ ಸೋಂಕು ತಗುಲಿದೆ. ಈ ವಿಷಯವನ್ನು ಸ್ವತಃ ಅಣ್ಣಾಮಲೈ ಅವರೇ ಟ್ವೀಟ್ನಲ್ಲಿ ತಿಳಿಸಿದ್ದಾರೆ. ತನಗೆ ಕೋವಿಡ್ ಪಾಸಿಟಿವ್ ಬಂದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ.
ಕೊರೋನಾ ಸೋಂಕು ತಗುಲಿರುವ ಅಣ್ಣಾಮಲೈ ಅವರನ್ನು ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ತನ್ನ ಸಂಪರ್ಕಕ್ಕೆ ಬಂದವರು ಕೂಡ ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಅಣ್ಣಾಮಲೈ ಅವರು ಮನವಿ ಮಾಡಿಕೊಂಡಿದ್ದಾರೆ.
ಇನ್ನು, ಅಣ್ಣಾಮಲೈ ಅವರು ತಮಿಳುನಾಡಿನ ರಾಜಕೀಯಕ್ಕೆ ಧುಮುಕಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಣ್ಣಾಮಲೈ ಅವರು ಕೆಲ ದಿನಗಳ ಹಿಂದೆ, ಸ್ಥಳೀಯ ಎಐಎಡಿಎಂಕೆ ನಾಯಕರೊಂದಿಗೆ ತಮ್ಮ ಚುನಾವಣಾ ಕ್ಷೇತ್ರದ ಪ್ರತಿಯೊಂದು ಮನೆಗೂ ಭೇಟಿ ನೀಡಿ ಪ್ರಚಾರ ನಡೆಸಿದ್ದರು.
ಜೊತೆಗೆ ಅನೇಕ ಸಭೆಗಳಲ್ಲಿ ಭಾಗಿಯಾಗಿ, ಸಾವಿರಾರು ಜನರನ್ನು ಭೇಟಿಯಾಗಿದ್ದರು. ಈಗ ಅಣ್ಣಾಮಲೈ ಅವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಇದರ ಜೊತೆಗೆ ಅವರ ಸಂಪರ್ಕಕ್ಕೆ ಬಂದಿದ್ದವರಲ್ಲಿ ಆತಂಕ ಮನೆಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ