ಕೋಲ್ಕತ್ತಾ (ಆಗಸ್ಟ್ 08); ಪಶ್ಚಿಮ ಬಂಗಾಳದಲ್ಲಿ ವಿರೋಧ ಪಕ್ಷದ ನಾಯಕರು ಟಿಎಂಸಿ ಪಕ್ಷಕ್ಕೆ ಸೇರ್ಪಡೆಯಾಗುವ ಪ್ರಸಂಗ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಚುನಾವಣೆಗೂ ಮುನ್ನ ಟಿಎಂಸಿ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಅನೇಕ ನಾಯಕರು ಕಳೆದ ಎರಡು ತಿಂಗಳುಗಳಿಂದ ಒಬ್ಬರ ಹಿಂದೆ ಒಬ್ಬರಂತೆ ಮತ್ತೆ ಟಿಎಂಸಿ ಪಕ್ಷಕ್ಕೆ ಮರಳುತ್ತಿರುವುದು ರಾಷ್ಟ್ರಾದ್ಯಂತ ದೊಡ್ಡ ಸುದ್ದಿಯಾಗುತ್ತಿದೆ. ಅಲ್ಲದೆ, ಪಶ್ಚಿಮ ಬಂಗಾಳದಲ್ಲಿ ಪಕ್ಷವನ್ನು ಬೆಳೆಸಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿದ್ದ ಬಿಜೆಪಿ ಹೈಕಮಾಂಡ್ಗೆ ಇದು ಮರ್ಮಾಘಾತವಾಗಿದೆ. ಈ ನಡುವೆ ಇಂದು ಕಾಗ್ರೆಸ್ ಪಕ್ಷದ ಮಾಜಿ ಸಂಸದೆ ಸುಶ್ಮಿತಾ ದೇವ್ ಸಹ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾಗಿರುವುದು ಕಾಂಗ್ರೆಸ್ ಪಾಲಿಗೂ ನುಂಗಲಾರದ ತುತ್ತಾಗಿದೆ.
ಸೋಮವಾರ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ ಮಾಜಿ ಸಂಸದೆ ಸುಶ್ಮಿತಾ ದೇವ್, ತೃಣಮೂಲ ಪಕ್ಷದ ನಾಯಕರಾದ ಅಭಿಷೇಕ್ ಬ್ಯಾನರ್ಜಿ ಮತ್ತು ಡೆರೆಕ್ ಒಬ್ರಿಯೆನ್ ಅವರ ಸಮ್ಮುಖದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಮಾಜಿ ಸಂಸದೆ ಸುಶ್ಮಿತಾ ದೇವ್ ಅವರ ಟ್ವಿಟರ್ ಖಾತೆಯಲ್ಲಿ "ಮಾಜಿ ಕಾಂಗ್ರೆಸ್ ಸದಸ್ಯೆ ಮತ್ತು ಮಹಿಳಾ ಘಟಕದ ಮಾಜಿ ಅಧ್ಯಕ್ಷೆ" ಎಂದು ಬದಲಾಯಿಸಿಕೊಂಡಿದ್ದು ಸೋಮವಾರ ಬೆಳಿಗ್ಗೆ ಅವರು ಪಕ್ಷ ತೊರೆಯಲಿರುವ ಸೂಚನೆಯಾಗಿತ್ತು. ಅದರಂತೆ ಅವರು ಇಂದು ಟಿಎಂಸಿ ಸೇರುವ ಮೂಲಕ ಎಲ್ಲಾ ಸಂಶಯಗಳಿಗೆ ತೆರೆ ಎಳೆದಿದ್ದಾರೆ.
ಸುಶ್ಮಿತಾ ದೇವ್ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಕಳುಹಿಸಿದ್ದಾರೆ. ಆ ಪತ್ರದಲ್ಲಿ "ಸಾರ್ವಜನಿಕ ಸೇವೆಯ ಹೊಸ ಅಧ್ಯಾಯ" ಆರಂಭಿಸುವ ಮಾತನಾಡಿದ್ದಾರೆ ಎನ್ನಲಾಗಿದೆ. ಆದರೆ, ಕಾಂಗ್ರೆಸ್ ಪಕ್ಷವು ಸುಶ್ಮಿತಾ ದೇವ್ ಪಕ್ಷ ತೊರೆಯುವುದು ಮತ್ತು ರಾಜೀನಾಮೆ ಪತ್ರ ಕಳುಹಿಸಿರುವುದನ್ನು ಅಧಿಕೃತವಾಗಿ ನಿರಾಕರಿಸಿತ್ತು.
"ನಾನು ಸುಶ್ಮಿತಾ ದೇವ್ ಜೊತೆ ಮಾತನಾಡಲು ಪ್ರಯತ್ನಿಸಿದೆ, ಅವರ ಫೋನ್ ಆಫ್ ಆಗಿತ್ತು. ಇಂದಿಗೂ ಕೂಡ ಅವರು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಯಾವುದೇ ರಾಜೀನಾಮೆ ಪತ್ರ ಬಂದಿಲ್ಲ. ಸುಶ್ಮಿತಾ ದೇವ್ ಜೊತೆ ಮಾತನಾಡುವವರೆಗೂ ನಾನು ಏನನ್ನೂ ಪ್ರತಿಕ್ರಿಯಿಸಲು ಸಾಧ್ಯವಿಲ್ಲ" ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಸುದ್ದಿಗಾರರಿಗೆ ತಿಳಿಸಿದ್ದರು.
ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಆಕೆಯ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರನ್ನು ಭೇಟಿಯಾಗಲು ಕಾಂಗ್ರೆಸ್ನ ಮಾಜಿ ಸಂಸದೆ ಕೋಲ್ಕತ್ತಾಕ್ಕೆ ಬಂದಿದ್ದಾರೆ. "ಅವರು ಪಕ್ಷಕ್ಕೆ ಸೇರಿದರೆ ಅಸ್ಸಾಂನಲ್ಲಿ ತೃಣಮೂಲದ ಪ್ರಮುಖ ನಾಯಕಿಯಾಗುತ್ತಾರೆ" ಎಂದು ತೃಣಮೂಲ ಕಾಂಗ್ರೆಸ್ ಮೂಲಗಳು ಹೇಳಿದ್ದವು.
ಮೂಲಗಳು ಹೇಳುವಂತೆ ಸುಶ್ಮಿತಾ ದೇವ್ ಕೆಲವು ತಿಂಗಳುಗಳಿಂದ ಕಾಂಗ್ರೆಸ್ ನಾಯಕತ್ವದ ಬಗ್ಗೆ ಅತೃಪ್ತಿ ಹೊಂದಿದ್ದರು ಎನ್ನಲಾಗಿದೆ. ವಿಶೇಷವಾಗಿ ಏಪ್ರಿಲ್-ಮೇ ತಿಂಗಳ ಅಸ್ಸಾಂ ಚುನಾವಣೆಯಲ್ಲಿ ಎಐಯುಡಿಎಫ್ ಜೊತೆ ಕಾಂಗ್ರೆಸ್ ಕೈಜೋಡಿಸುವ ನಿರ್ಧಾರದ ಬಗ್ಗೆ ಅವರು ಪಕ್ಷದ ವೇದಿಕೆಯಲ್ಲಿ ಅಸಮಾಧಾನ ಹೊಂದಿದ್ದರು.
ಚುನಾವಣಾ ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ರಾಜ್ಯ ಕಾಂಗ್ರೆಸ್ ನಾಯಕತ್ವದೊಂದಿಗೆ ಅವರು ಭಿನ್ನಾಭಿಪ್ರಾಯ ಹೊಂದಿದ್ದರು. ಬಹುತೇಕ ಮಾರ್ಚ್ನಲ್ಲಿಯೇ ಅವರು ಪಕ್ಷವನ್ನು ತ್ಯಜಿಸಿದ್ದರು. ಆದರೆ ಸೋನಿಯಾ ಗಾಂಧಿ ಸುಶ್ಮಿತಾ ದೇವ್ ಮನವೊಲಿಸಿದ್ದರು. ಆದರೆ, ಇಂದು ಎಲ್ಲವೂ ಕೈಮೀರಿದೆ ಎಂದು ಮೂಲಗಳು ತಿಳಿಸಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ