ಪಾಟ್ನಾ (ನವೆಂಬರ್ 19); ನಿತೀಶ್ ಕುಮಾರ್ ಐದನೇ ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಿಗೆ ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಜಿ ಇಂದು ಬಿಹಾರ ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜಿತನ್ ರಾಮ್ ಮಾಂಜಿ ಹಾಗೂ ನಿತೀಶ್ ಕುಮಾರ್ ಬದ್ಧ ರಾಜಕೀಯ ವೈರಿಗಳು ಎಂಬುದು ಇಡೀ ದೇಶದ ರಾಜಕಾರಣ ತಿಳಿದಿರುವ ವಿಚಾರ. ಆದರೂ, ಮೈತ್ರಿಗೆ ಕಟ್ಟುಬಿದ್ದು ಜಿತನ್ ರಾಮ್ಮಾಂಜಿ ಚುನಾವಣೆ ಎದುರಿಸಿದ್ದರು. ಆದರೆ, ತಾವು ನಿತೀಶ್ ಅವರ ಸಂಪುಟದಲ್ಲಿ ಸಚಿವನಾಗಿ ಕೆಲಸ ಮಾಡಲಾರೆ ಎಂದು ಅವರು ಖಡಾತುಂಡವಾಗಿ ತಮ್ಮ ನಿಲುವನ್ನು ತಿಳಿಸಿದ್ದ ಪರಿಣಾಮ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹಿಂದೂಸ್ತಾನಿ ಅವಮ್ ಮೋರ್ಚಾದ ಸ್ಥಾಪಕ ಅಧ್ಯಕ್ಷರಾಗಿರುವ ಜಿತಾನ್ ರಾಮ್ ಮಾಂಜಿ ಅವರಿಗೆ ರಾಜ್ಯಪಾಲ ಫಗು ಚೌಹಾನ್ ಅವರು ಪ್ರಮಾಣವಚನ ಭೋಧಿಸಿದ್ದಾರೆ.
"ಬಿಹಾರದಲ್ಲಿ ಪ್ರಸ್ತುತ ನೂತನವಾಗಿ ಅಧಿಕಾರಕ್ಕೆ ಬಂದಿರುವ ಎನ್‌ಡಿಎ ಮೈತ್ರಿಕೂಟದ ಸರ್ಕಾರ ಐದು ದಿನಗಳ ಉದ್ಘಾಟನಾ ವಿಧಾನಸಭಾ ಅಧಿವೇಶನ ನವೆಂಬರ್ 23 ರಂದು ಪ್ರಾರಂಭಿಸಲಿದೆ. ಹೀಗಾಗಿ ಅಧಿಕೃತ ಸ್ಪೀಕರ್ ನೇಮಕವಾಗುವವರೆಗೆ ಜೀತನ್ ರಾಮ್ ಮಾಂಜಿ ಅವರನ್ನು ಹಂಗಾಮಿಯಾಗಿ ನೇಮಕ ಮಾಡಲಾಗಿದೆ" ಎಂದು ರಾಜಭವನ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ಬಿಹಾರ ವಿಧಾನಸಭಾ ಚುನವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಮಿತ್ರಪಕ್ಷವಾಗಿದ್ದ ಹಿಂದೂಸ್ಥಾನಿ ಅವಾಮ್ ಮೋರ್ಚಾ ಪಕ್ಷವು ಒಟ್ಟು 07 ಸ್ಥಾನಗಳಲ್ಲಿ ಸ್ಪರ್ಧಿಸಿ 04 ಸ್ಥಾನಗಳಲ್ಲಿ ಜಯಗಳಿಸಿದ್ದು ಎನ್‌ಡಿಎಗೆ ಸರಳ ಬಹುಮತ ಪಡೆಯಲು ಸಹಕರಿಸಿತ್ತು.
ಹೀಗಾಗಿ ಎನ್‌ಡಿಎ ಸರ್ಕಾರದಲ್ಲಿ ಜಿತನ್ ರಾಮ್ ಮಾಂಜಿ ಕ್ಯಾಬಿನೆಟ್ ಸಚಿವ ಸ್ಥಾನ ಪಡೆಯುವುದು ಬಹುತೇಕ ಖಚಿತ ಎನ್ನಲಾಗಿತ್ತು. ಆದರೆ, ನವೆಂಬರ್ 13 ರಂದು ಹೇಳಿಕೆ ನೀಡಿದ್ದ ಜಿತನ್ ರಾಮ್ ಮಾಂಜಿ, "ನಾನು ಈಗಾಗಲೇ ಒಮ್ಮೆ ಮುಖ್ಯಮಂತ್ರಿಯಾಗಿದ್ದವನು. ಹಾಗಾಗಿ ಸಚಿವನಾಗಲು ಬಯಸುವುದಿಲ್ಲ. ಆದ್ದರಿಂದ ನಾನು ನಿತೀಶ್ ಸಂಪುಟ ಸೇರುವುದಿಲ್ಲ. ಆದರೆ, ಈ ಸರ್ಕಾರದಿಂದ ಬಿಹಾರದ ಅಭಿವೃದ್ದಿಯಾಗುತ್ತದೆ ಎಂದು ನಾನು ನಂಬಿದ್ದೇನೆ. ಹಾಗಾಗಿ ಕಾಂಗ್ರೆಸ್‌ನಿಂದ ಆಯ್ಕೆಯಾದ ಶಾಸಕರು ಸಹ ಎನ್‌ಡಿಎ ಸೇರಿ ಎಂದು ಮನವಿ ಮಾಡುತ್ತೇನೆ" ಎಂದಿದ್ದರು.
ಜಿತನ್ ರಾಮ್ ಮಾಂಜಿ ಯಾರು?
ಜಿತನ್ ರಾಮ್ ಮಾಂಜಿ ದಲಿತ ನಾಯಕರಾಗಿದ್ದು, 1980 ರಲ್ಲಿ ಕಾಂಗ್ರೆಸ್ ಸೇರುವುದರೊಂದಿಗೆ ತಮ್ಮ ರಾಜಕೀಯ ಜೀವನ ಆರಂಭಿಸಿದ್ದರು. ಆದರೆ, ನಂತರ ದಿನಗಳಲ್ಲಿ ಆರ್ಜೆಡಿ ಸೇರ್ಪಡೆಯಾಗಿದ್ದ ಅವರು ಅಲ್ಲಿಂದಲೂ ಹೊರಬಂದು ಜೆಡಿಯು ಸೇರ್ಪಡೆಯಾಗಿದ್ದರು. ಈ ಸಂದರ್ಭದಲ್ಲಿ ಅವರಿಗೆ ಅನಿರೀಕ್ಷಿತ ಬೆಳವಣಿಗೆಯಲ್ಲಿ ಸಿಎಂ ಪಟ್ಟವೂ ಒಲಿದುಬಂದಿತ್ತು. ಆದರೆ, ಇದೀಗ ಜೆಡಿಯು ಪಕ್ಷದಿಂದಲೂ ಹೊರಬಂದು ಹಿಂದೂಸ್ಥಾನಿ ಅವಾಮ್ ಮೋರ್ಚಾ ಎಂಬ ಹೊಸ ಪಕ್ಷವನ್ನು ಸ್ಥಾಪಿಸಿದ್ದಾರೆ.
ಇದನ್ನೂ ಓದಿ : ಜಮ್ಮುವಿನ ನಗ್ರೋತಾದಲ್ಲಿ ಎನ್ಕೌಂಟರ್; ಬಸ್ನೊಳಗಿದ್ದ 4 ಉಗ್ರರ ಹತ್ಯೆ
2014 ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿಯಾಗುವುದನ್ನು ವಿರೋಧಿಸಿದ್ದ ನಿತೀಶ್ ಕುಮಾರ್ ಎನ್‌ಡಿಎ ಮೈತ್ರಿಯಿಂದ ಹೊರಬಂದು ಸ್ವತಂತ್ರ್ಯವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆ ಚುನಾವಣೆಯನ್ನು ನಿತೀಶ್ ಕುಮಾರ್ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದರು. ಆದರೆ, ಜೆಡಿಯು ಕೇವಲ 2 ಸ್ಥಾನಗಳನ್ನು ಮಾತ್ರ ಗೆಲ್ಲುವಲ್ಲಿ ಸಫಲವಾಗಿತ್ತು. ಸೋಲಿನ ನೈತಿಕ ಹೊಣೆ ಹೊತ್ತ ನಿತೀಶ್ ಕುಮಾರ್ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಜೀತನ್ ರಾಮ್ ಮಾಂಜಿ ಮುಖ್ಯಮಂತ್ರಿ ಹುದ್ದೆಗೆ ಏರಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ