ರಾಯಪುರ್(ಮೇ 09): ಛತ್ತೀಸ್ಗಡ ರಾಜ್ಯದ ಚೊಚ್ಚಲ ಮುಖ್ಯಮಂತ್ರಿ ಎನಿಸಿದ್ದ ಅಜಿತ್ ಜೋಗಿ ಅವರಿಗೆ ಶನಿವಾರ ಬೆಳಗ್ಗೆ ಹೃದಯಾಘಾತವಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ ಆಸ್ಪತ್ರೆಯಿಂದ ಹೇಳಿಕೆ ಬಂದಿದ್ದು, 74 ವರ್ಷದ ಅಜಿತ್ ಜೋಗಿ ಅವರ ಉಸಿರಾಟ ತಹಬದಿಗೆ ಬಂದಿದೆ. ಅವರ ಇಸಿಜಿ ಕೂಡ ಸಹಜವಾಗಿದೆ ಎಂದು ಹೇಳಲಾಗಿದೆ. ಅಜಿತ್ ಜೋಗಿ ಅವರ ಪತ್ನಿ ರೇಣು ಜೋಗಿ ಮತ್ತು ಮಗ ಅಮಿತ್ ಜೋಗಿ ಅವರು ಆಸ್ಪತ್ರೆಯಲ್ಲಿದ್ದಾರೆ.
ತಮ್ಮ ತಂದೆಯನ್ನು 48 ಗಂಟೆ ಕಾಲ ನಿಗಾದಲ್ಲಿ ಇರಿಸಲಾಗಿದೆ. ಅದಾದ ಬಳಿಕವಷ್ಟೇ ವೈದ್ಯರ ಸಲಹೆ ಮೇರೆಗೆ ಮನೆಗೆ ಕರೆದುಕೊಂಡು ಹೋಗವುದೋ ಇಲ್ಲವೋ ಎಂದು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಅಮಿತ್ ಜೋಗಿ ತಿಳಿಸಿದ್ದಾರೆ.
ಛತ್ತೀಸ್ಗಡ ಮುಖ್ಯಮಂತ್ರಿ ಭೂಪೇಶ್ ಬಾಘೆಲ್ ಹಾಗೂ ಇತರ ಹಲವು ಹಿರಿಯ ರಾಜಕಾರಣಿಗಳು ಜೋಗಿ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ.
ಇದನ್ನೂ ಓದಿ: ‘ವಲಸೆ ಕಾರ್ಮಿಕರ ಬಗ್ಗೆ ಮಾತಾಡುವ ಹಕ್ಕು ನಿಮಗಿಲ್ಲ‘ - ಅಮಿತ್ ಷಾ ಆರೋಪಕ್ಕೆ ಮಮತಾ ಬ್ಯಾನರ್ಜಿ ತಿರುಗೇಟು
ಜನತಾ ಕಾಂಗ್ರೆಸ್ ಪಕ್ಷದ ರಾಜಕಾರಣಿಯಾಗಿರುವ ಅಜಿತ್ ಜೋಗಿ ಅವರು ಮೂಲತಃ ಕಾಂಗ್ರೆಸ್ ಪಕ್ಷದಲ್ಲಿದ್ದವರು. 2000ನೇ ವರ್ಷದಲ್ಲಿ ಛತ್ತೀಸ್ಗಡ ರಾಜ್ಯದ ರಚನೆಯಾದಾಗ ಅದರ ಮೊದಲ ಮುಖ್ಯಮಂತ್ರಿಯಾದವರು ಇದೇ ಅಜಿತ್ ಜೋಗಿ. ಪಕ್ಷ ವಿರೋಧಿ ಚಟವಟಿಕೆಯ ಆರೋಪದ ಮೇಲೆ ಕಾಂಗ್ರೆಸ್ನಿಂದ ಅಜಿತ್ ಜೋಗಿ ಮತ್ತವರ ಮಗ ಅಮಿತ್ ಜೋಗಿ ಇಬ್ಬರನ್ನೂ ಉಚ್ಛಾಟಿಸಲಾಗಿತ್ತು. ಅದಾದ ಬಳಿಕ 2016 ಇವರು ಜನತಾ ಕಾಂಗ್ರೆಸ್ ಪಕ್ಷ ಸ್ಥಾಪನೆ ಮಾಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ