ಹೈದ್ರಾಬಾದ್ (ಡಿ. 6): ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ಅವರ ಆಪ್ತ ಸಂಬಂಧಿಯನ್ನು ಅಪಹರಿಸಿದ ಆರೋಪದ ಮೇಲೆ ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ, ಮಾಜಿ ಸಚಿವರಾದ ಭೂಮಾ ಅಖಿಲ ಪ್ರಿಯಾ ಅವರನ್ನು ಹೈದ್ರಾಬಾದ್ ಪೊಲೀಸರು ಬಂಧಿಸಿದ್ದಾರೆ. ಮಾಜಿ ಹಾಕಿ ಕ್ರೀಡಾಪಟುವಾಗಿರುವ ಪ್ರವೀಣ್ ರಾವ್ ಮತ್ತು ಅವರ ಸಹೋದರ ಸುನೀಲ್ ಮತ್ತು ನವೀನ್ ಅವರು ಅಪಹರಣಕ್ಕೆ ಒಳಗಾದವರು. ಮಂಗಳವಾರ ಸಂಜೆ 7 ಗಂಟೆ ಸುಮಾರಿಗೆ ಈ ಮೂವರನ್ನು ಹೈದ್ರಾಬಾದ್ನ ಬೋವೆನ್ಪಲ್ಲಿಯ ಪ್ರದೇಶದ ಮನೆಯಿಂದ ಕಿಡ್ನಾಪ್ ಮಾಡಲಾಗಿತ್ತು. ಈ ಪ್ರಕರಣವನ್ನು ಪೊಲೀಸರು ಬೆನ್ನತ್ತಿದ್ದಂತೆ ಬುಧವಾರ ಮುಂಜಾನೆ 3.30ಕ್ಕೆ ಅಪಹರಣಕ್ಕೆ ಒಳಗಾದವರನ್ನು ಕೋಕಾಪೇಟೆಯಲ್ಲಿ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು.
ಈ ಪ್ರಕರಣದಲ್ಲಿ ಭೂಮಾ ಅಖಿಲ ಪ್ರಿಯಾ ಅವರ ಚಿಕ್ಕಪ್ಪ ಎ.ವಿ ಸುಬ್ಬಾ ರೆಡ್ಡಿಯವರನ್ನು ಪ್ರಮುಖ ಆರೋಪಿಯಾಗಿ ಪ್ರಕರಣ ದಾಖಲಿಸಲಾಗಿದೆ. ಇದರ ಜೊತೆಗೆ ಆಂಧ್ರ ಪ್ರದೇಶ ಮಾಜಿ ಸಚಿವರು ಮತ್ತು ಅವರ ಗಂಡ ಭಾಗವ್ ರಾಮ್ ಅವರ ಹೆಸರನ್ನು ದಾಖಲಿಸಲಾಗಿದೆ. ಜೊತೆಗೆ ಪ್ರಕರಣದಲ್ಲಿ ಪ್ರಿಯಾ ಮತ್ತು ಅವರ ಸಹೋದರ ಮತ್ತು ಮಾಜಿ ಶಾಸಕ ಜಗದ್ವಿಖ್ಯಾತ್ ರೆಡ್ಡಿ ಮತ್ತು ಅವರ ಸೋದರ ಮಾವ ಚಂದ್ರಹಾಸ್ ಅವರನ್ನು ಶಂಕಿತರನ್ನಾಗಿ ಪರಿಗಣಿಸಲಾಗಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ ಹೈದ್ರಾಬಾದ್ ಪೊಲೀಸ್ ಆಯುಕ್ತ ಅಂಜನಿ ಕುಮಾರ್, ಭಾಗವ್ ರಾಮ್ ಮತ್ತು ಎವಿ ಸುಬ್ಬಾರೆಡ್ಡಿ ಪರಾರಿಯಾಗಿದ್ದು, ಅವರಿಗಾಗಿ ಶೋಧ ಮುಂದುವರೆದಿದೆ. ಇದಕ್ಕಾಗಿ ಆಂಧ್ರಪ್ರದೇಶ ಪೊಲೀಸರ ಸಹಾಯ ಪಡೆಯಲಾಗುವುದು ಎಂದರು.
ಇದನ್ನು ಓದಿ: ಹಸುವಿನ ಬಗ್ಗೆ ಅರಿವು ಮೂಡಿಸಲು ಗೋ ವಿಜ್ಞಾನ ಪರೀಕ್ಷೆ ನಡೆಸಲು ಮುಂದಾದ ಸರ್ಕಾರ
ಹೈದ್ರಾಬಾದ್ನ ಹಫೀಜ್ಪೇಟ್ನಲ್ಲಿರುವ 100 ಕೋಟಿ ರೂ ಮೌಲ್ಯದ ಭೂಮಿ ಕುರಿತು ಈ ಘಟನೆ ನಡೆದಿದೆ. ಆರೋಪಿಗಳು ಆದಾಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ಅವರ ಮನೆಗೆ ನುಗ್ಗಿ ಈ ಅಪಹರಣ ನಡೆಸಿದ್ದಾರೆ.
ಟಿಡಿಪಿ, ಪ್ರಜಾರಾಜ್ಯಂ, ವೈಎಸ್ ಆರ್ ಕಾಂಗ್ರೆಸ್ನ ರಾಜಕಾರಣಿಗಳೊಂದಿಗೆ ಗುರುತಿಸಿಕೊಂಡಿದ್ದ ಭೂಮಾನಾಗಿ ರೆಡ್ಡಿ ಮತ್ತು ಶೋಭಾ ನಾಗಿ ರೆಡ್ಡಿ ಅವರ ಮಗಳು ಈ ಅಖಿಲಾ ಪ್ರಿಯಾ. ತಾಯಿ ಮರಣದ ನಂತರ 2014ರಲ್ಲಿ ಕರ್ನೂಲ್ನ ಅಲ್ಲಗಡ್ಡ ಕ್ಷೇತ್ರದಿಂದ ವೈಎಸ್ಆರ್ಸಿಪಿ ಶಾಸಕಿಯಾಗಿ ಆಯ್ಕೆಯಾಗಿದ್ದರು. ಇದಾದ ಬಳಿಕ ಪ್ರಿಯಾ ಮತ್ತು ಆಕೆಯ ತಂದೆ ಟಿಡಿಪಿ ಸೇರಿದ್ದರು. 2017ರಲ್ಲಿ ತಂದೆಯ ಅಚಾನಕ್ ಸಾವಿನಿಂದಾಗಿ ಚಂದ್ರಬಾಬು ನಾಯ್ಡು ಸಂಪುಟ ಸೇರಿದ್ದರು. 2019ರ ಚುನಾವಣೆಯಲ್ಲಿ ಪ್ರಿಯಾ ಸೋಲುಂಡಿದ್ದರು.
(ವರದಿ: ಪಿವಿ ರಮಣ್ ಕುಮಾರ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ