Yashika anand: ಅಪಘಾತದಲ್ಲಿ ನಾನು ಬದುಕುಳಿದು ಸ್ನೇಹಿತೆ ಸಾವನ್ನಪ್ಪಿದ್ದು ಕಾಡುತ್ತಿದೆ: ನಟಿ ಯಶಿಕಾ ಕಣ್ಣೀರು

ಅಪಘಾತದಲ್ಲಿ ಸಾವನ್ನಪ್ಪಿದ ಪ್ರಾಣ ಸ್ನೇಹಿತೆಯನ್ನು ನೆನೆದು ಯಶಿಕಾ ಆನಂದ್ ಕಣ್ಣೀರಾಕುತ್ತಿದ್ದಾರೆ. ನಾನು ಜೀವಂತವಾಗಿರುವವರೆಗೆ ಈ ಘಟನೆ ನನ್ನನ್ನು ಕಾಡಲಿದೆ ಎಂದು ಮರುಗಿದ್ದಾರೆ.

ನಟಿ ಯಶಿಕಾ, ಅಪಘಾತಕ್ಕೊಳಗಾದ ಕಾರು

ನಟಿ ಯಶಿಕಾ, ಅಪಘಾತಕ್ಕೊಳಗಾದ ಕಾರು

 • Share this:

  ರಸ್ತೆ ಅಪಘಾತಕ್ಕೀಡಾಗಿ ಹಲವು ಶಸ್ತ್ರಚಿಕಿತ್ಸೆ ನಂತರ ಪ್ರಾಣಾಪಾಯದಿಂದ ಪಾರಾಗಿರುವ ನಟಿ ಯಶಿಕಾ ಆನಂದ್ ಅವರು ತನ್ನ ಪ್ರಾಣ ಸ್ನೇಹಿತೆ ಕಾರು ಅಪಘಾತದಲ್ಲಿ ಸಾವನ್ನಪ್ಪಿರುವುದಕ್ಕೆ ಮರುಗುತ್ತಿದ್ದಾರೆ.  ತಮಿಳು ನಟಿ ಯಶಿಕಾ ಆನಂದ್ ಅವರು ಜು.24ರ ರಾತ್ರಿ ತನ್ನ ಮೂವರು ಸ್ನೇಹಿತೆಯರೊಂದಿಗೆ ಚೆನ್ನೈಗೆ ಕಾರಿನಲ್ಲಿ ತೆರಳುತ್ತಿದ್ದರು. ಆಗ ಅವರು ಚಲಿಸುತ್ತಿದ್ದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ  ಅಪಘಾತ ಸಂಭವಿಸಿತು. ಆಗ ಮೂವರಲ್ಲಿ ವಾಲ್ಲಿಚಟ್ಟಿ ಪಾವನಿ ಎಂಬ ಸ್ನೇಹಿತೆ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಕೂಡಲೇ ಯಶಿಕಾರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೆ ಅವರು ಇನ್ನೂ ಕೆಲವು ತಿಂಗಳ ಕಾಲ ಹಾಸಿಗೆಯ ಮೇಲೆಯೇ ಜೀವನ ಕಳೆಯಬೇಕಿದೆ.


  ಯಶಿಕಾ ಅವರ ಬಲಗಾಲು ಮತ್ತು ಸೊಂಟದ ಮೂಳೆ ಮುರಿದಿದೆ. ಶಸ್ತ್ರಚಿಕಿತ್ಸೆಯಾದ ಮೇಲೆ ನಾನು ವಿಶ್ರಾಂತಿ ಪಡೆದುಕೊಳ್ಳುತ್ತಿದ್ದೇನೆ. ಮುಂದಿನ 5 ತಿಂಗಳು ನನಗೆ ನಿಲ್ಲುವುದಕ್ಕೆ ಹಾಗೂ ಕುಳಿತುಕೊಳ್ಳುವುದಕ್ಕೆ ಆಗುವುದಿಲ್ಲ. ಬಲಗಡೆ ಹಾಗೂ ಎಡಗಡೆ ಹೊರಳಲು ಆಗುವುದಿಲ್ಲ. ಮಲ-ಮೂತ್ರ ಹಾಸಿಗೆಯಲ್ಲೇ  ಮಾಡಬೇಕಾದ ಪರಿಸ್ಥಿತಿ ಇದೆ. ನನ್ನ ಬೆನ್ನಿಗೆ ಗಾಯವಾಗಿದೆ. ಅದೃಷ್ಟಾವಶಾತ್ ನನ್ನ ಮುಖಕ್ಕೆ ಏನು ಆಗಿಲ್ಲ. ಆದರೆ ಇದು ನಿಜಕ್ಕೂ ನನಗೆ ಮರುಜನ್ಮವಿದ್ದಂತೆ. ದೇವರು ನನ್ನನ್ನು ಶಿಕ್ಷಿಸಿದ್ದಾನೆ. ಆದರೆ ನಾನು ಕಳೆದುಕೊಂಡಿರುವುದನ್ನು ಯಾರಿಗೂ ಹೇಳಲು ಸಾಧ್ಯವಿಲ್ಲ ಎಂದು ತಮ್ಮ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ.


  ಅಪಘಾತದಲ್ಲಿ ಸಾವನ್ನಪ್ಪಿದ ಪ್ರಾಣ ಸ್ನೇಹಿತೆಯನ್ನು ನೆನೆದು ಕಣ್ಣೀರಾಕುತ್ತಿದ್ದಾರೆ. ನಾನು ಈಗ ಏನು ಅನುಭವಿಸುತ್ತಿದ್ದೇನೆ ಎಂದು ವಿವರಿಸಲು ಸಾಧ್ಯವಾಗುತ್ತಿಲ್ಲ. ಜೀವನದುದ್ದಕ್ಕೂ ನನಗೆ ಪಶ್ಚಾತಾಪ ಕಾಡುವುದು. ಈ ಭೀಕರ ಅಪಘಾತದಿಂದ ಬದುಕಿಸಿದ ದೇವರಿಗೆ ಧನ್ಯವಾದ ಹೇಳಲೇ ಅಥವಾ ನನ್ನ ಸ್ನೇಹಿತೆ ನನ್ನಿಂದ ದೂರವಾದಳು ಎಂದು ದೇವರನ್ನು ನಿಂದಿಸಲೇ ತಿಳಿಯುತ್ತಿಲ್ಲ. ನಾನು ಪಾವನಿಯನ್ನು ಪ್ರತಿಕ್ಷಣ ಮಿಸ್ ಮಾಡಿಕೊಳ್ಳುತ್ತೇನೆ. ನಿನ್ನ ಕುಟುಂಬವನ್ನು ದುಃಖ ಸಾಗರದಲ್ಲಿ ಇರಿಸುವಂತೆ ಮಾಡಿರುವುದಕ್ಕೆ ದಯವಿಟ್ಟು ಕ್ಷಮೆ ಇರಲಿ. ನಾನು ನಿನ್ನ ಪ್ರತಿಕ್ಷಣ ಮಿಸ್ ಮಾಡಿಕೊಳ್ಳುತ್ತೇನೆ. ನಾನು ಜೀವಂತವಾಗಿರುವವರೆಗೆ ಈ ಘಟನೆ ನನ್ನನ್ನು ಕಾಡಲಿದೆ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ, ನೀನು ಮರಳಿ ಬರಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ.


  ಮುಂದಿನ ದಿನಗಳಲ್ಲಿ ನಿನ್ನ ಕುಟುಂಬ ನನ್ನನ್ನು ಕ್ಷಮಿಸುತ್ತದೆ ಎಂದು ಭಾವಿಸುತ್ತೇನೆ. ನೆನಪುಗಳನ್ನು ಎಂದಿಗೂ ಮರೆಯುವುದಿಲ್ಲ ಪಾವ್ ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ತನ್ನ ಸ್ನೇಹಿತೆ ಹಾಗೂ ಕುಟುಂಬಕ್ಕೆ ಯಶಿಕಾ ಕ್ಷಮೆ ಕೇಳಿದ್ದಾರೆ. ಇವರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.


  ಕೆಲವರು ಕಾರು ಅಪಘಾತದ ಬಗ್ಗೆ  ಮದ್ಯಪಾನ ಮಾಡಿ ಕಾರು ಓಡಿಸಿದ ಪರಿಣಾಮ ಕಾರು ಅಪಘಾತವಾಗಿದೆ ಎಂದು ಹೇಳಿದ್ದರು. ಇದಕ್ಕೆ ಬೇಸರಿಸಿಕೊಂಡ ಯಶಿಕಾ, ಕಾನೂನು ಎಲ್ಲರಿಗೂ ಒಂದೇ. ನಾವು ಮದ್ಯಪಾನ ಮಾಡಿರಲಿಲ್ಲ. ಈ ಬಗ್ಗೆ ಪೊಲೀಸರೇ ವರದಿ ನೀಡಿದ್ದಾರೆ. ಇದು ತುಂಬಾ ಸೂಕ್ಷ್ಮ ವಿಚಾರ. ಮಾನವೀಯತೆ ಪ್ರದರ್ಶಿಸಿ ಉತ್ತಮ ಮಾತುಗಳನ್ನಾಡಿ, ತಮ್ಮ ವೀಕ್ಷಕರನ್ನು ಹಾಗೂ ಚಂದದಾರರನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಸುಳ್ಳು ಸುದ್ದಿ ಹರಡುವ ಮಾಧ್ಯಮಗಳಿಗೆ ನಾಚಿಕೆಯಾಗಬೇಕು ಎಂದು ಕೊಂಚ ಖಾರವಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ.

  Published by:Kavya V
  First published: