ನವದೆಹಲಿ(ಜೂನ್ 28): ಕೊರೋನಾ ಮೊದಲ ಅಲೆಯಿಂದ ತತ್ತರಿಸಿದ ಬೆನ್ನಲ್ಲೇ ಎರಡನೇ ಅಲೆಯಿಂದ ಜರ್ಝರಿತಗೊಂಡಿರುವ ವಿವಿಧ ವಲಯಗಳಿಗೆ ಹಣಕಾಸು ಸಚಿವರು ಇಂದು ವಿವಿಧ ಆರ್ಥಿಕ ಪ್ಯಾಕೇಜ್ಗಳನ್ನ ಘೋಷಿಸಿದ್ಧಾರೆ. ಈ ಪ್ಯಾಕೇಜ್ಗಳ ಮೊತ್ತ 1.1 ಲಕ್ಷ ಕೋಟಿ ಇದೆ. ಆರೋಗ್ಯ ಕ್ಷೇತ್ರಕ್ಕೆ 50 ಸಾವಿರ ಕೋಟಿ ರೂ ನೀಡಲಾಗುತ್ತಿದೆ. ಇತರ ವಲಯಗಳಿಗೆ ಒಟ್ಟಾರೆ 60 ಸಾವಿರ ಕೋಟಿ ರೂ ಮೊತ್ತದ ಪ್ಯಾಕೇಜ್ಗಳನ್ನ ವಿತರಿಸಲಾಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸುದ್ದಿಗೋಷ್ಠಿ ವೇಳೆ ತಿಳಿಸಿದ್ದಾರೆ.
ಇದರ ಜೊತೆಗೆ ಬಡವರಿಗೆ ಉಚಿತ ಆಹಾರ ಧಾನ್ಯ ವಿತರಣೆಗೆ 94 ಸಾವಿರ ಕೋಟಿ, ಆತ್ಮನಿರ್ಭರ್ ರೋಜಗಾರ್ ಯೋಜನೆಯ ಅವಧಿ ವಿಸ್ತರಣೆ, ಪ್ರವಾಸೋದ್ಯಮ ಕ್ಷೇತ್ರಕ್ಕೆ ಭರ್ಜರಿ ಸಾಲ ಸೌಲಭ್ಯ ಇತ್ಯಾದಿ ಅನೇಕ ಪರಿಹಾರ ಪ್ಯಾಕೇಜ್ಗಳನ್ನ ಸರ್ಕಾರ ಪ್ರಕಟಿಸಿದೆ.
1) ಆರೋಗ್ಯ ಕ್ಷೇತ್ರ: ತುರ್ತು ಆರೋಗ್ಯ ವ್ಯವಸ್ಥೆಗೆ 15,000 ಕೋಟಿ ರೂ ಘೋಷಣೆ ಮಾಡಲಾಗಿದೆ. ಇದರಿಂದ ಈಗಿರುವ ಕೋವಿಡ್ ಆರೋಗ್ಯ ಘಟಕಗಳ ಸಂಖ್ಯೆ 25 ಪಟ್ಟು ಹೆಚ್ಚಾಗಲಿದೆ. ಆಕ್ಸಿಜನ್ ಬೆಡ್, ಐಸೋಲೇಶನ್ ಬೆಡ್ ಹಾಗೂ ಐಸಿಯು ಬೆಡ್ಗಳ ಸಂಖ್ಯೆ ಹಲವು ಪಟ್ಟು ಹೆಚ್ಚಾಗಿದೆ. ಮಕ್ಕಳ ಚಿಕಿತ್ಸಾ ವ್ಯವಸ್ಥೆಗೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗಲಿದೆ..
2) ಉಚಿತ ಆಹಾರ ಧಾನ್ಯ: ಕಳೆದ ವರ್ಷದ ರೀತಿಯಲ್ಲೇ ಈ ವರ್ಷ ಕೂಡ ಬಡವರಿಗೆ ಉಚಿತ ಆಹಾರ ಧಾನ್ಯ ಕೊಡಲಾಗುತ್ತದೆ ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿ 2021 ಮೇನಿಂದ ನವೆಂಬರ್ವರೆಗೆ ಧಾನ್ಯ ವಿತರಣೆ ನಡೆಯಲಿದೆ. ಇದರ 94,000 ಕೋಟಿ ರೂ ವೆಚ್ಚವನ್ನು ಕೇಂದ್ರವೇ ಭರಿಸುತ್ತದೆ. ಈ ಯೋಜನೆಯ ಒಟ್ಟು ಮೊತ್ತ ಇದೀಗ 2.28 ಲಕ್ಷ ಕೋಟಿಗೆ ಏರಿಕೆಯಾದಂತಾಗುತ್ತದೆ.
3) ಆತ್ಮನಿರ್ಭರ್ ಭಾರತ್ ರೋಜಗಾರ್ ಯೋಜನೆ:
ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಆತ್ಮ ನಿರ್ಭರ್ ಭಾರತ್ ರೋಜಗಾರ್ ಯೋಜನೆ (ಸ್ವಾವಲಂಬಿ ಭಾರತ ಉದ್ಯೋಗ ಯೋಜನೆ) ಅನ್ನು 2022, ಮಾರ್ಚ್ 31ರವರೆಗೆ ವಿಸ್ತರಿಸಾಗಿದೆ. 2020, ಅಕ್ಟೋಬರ್ನಿಂದೀಚೆ ಈ ಯೋಜನೆಯಿಂದ 21.42 ಲಕ್ಷ ಫಲಾನುಭವಿಗಳಿಗೆ ಲಾಭವಾಗಿದೆ.
ಇದನ್ನೂ ಓದಿ: Drone Blast| ಜಮ್ಮು ಸೇನಾ ನೆಲೆಯಲ್ಲಿ ಮತ್ತೆರಡು ಡ್ರೋನ್ ಪತ್ತೆ; ಹೊಡೆದುರುಳಿಸಿದ ಸೈನಿಕರು, ಗಡಿಯುದ್ದ ಕಟ್ಟೆಚ್ಚರ!
4) ಪ್ರವಾಸ ಕ್ಷೇತ್ರ: ಕೊರೋನಾದಿಂದ ಅತಿ ಹೆಚ್ಚು ಬಾಧಿತವಾಗಿರುವ ಕ್ಷೇತ್ರಗಳ ಪೈಕಿ ಒಂದಾಗಿರುವ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಾಲ ಸೌಲಭ್ಯಗಳನ್ನ ಕೇಂದ್ರ ಒದಗಿಸಲಿದೆ. ಒಂದು ಪ್ರವಾಸೀ ಏಜೆನ್ಸಿಗೆ 10 ಲಕ್ಷ ರೂವೆಗೆ ಸಾಲ ನೀಡಲಾಗುತ್ತದೆ. ಒಬ್ಬ ಟೂರಿಸ್ಟ್ ಗೈಡ್ಗೆ 1 ಲಕ್ಷ ರೂವರೆಗೆ ಸಾಲವನ್ನು ಕೇಂದ್ರ ಒದಗಿಸಲಿದೆ.
5) ನೂತನ ಸಾಲ ಖಾತ್ರಿ ಯೋಜನೆ:
ಕಿರು ಹಣಕಾಸು ಸಂಸ್ಥೆಗಳ ಮೂಲಕ ಸಾಲ ಒದಗಿಸುವ ಯೋಜನೆಯನ್ನು ಹಣಕಾಸು ಸಚಿವರು ಇಂದು ಪ್ರಕಟಿಸಿದರು. ಅದರಂತೆ ಒಬ್ಬ ವ್ಯಕ್ತಿಗೆ 1.25 ಲಕ್ಷ ರೂವರೆಗೆ ಸಾಲದ ಅವಕಾಶ ಇರುತ್ತದೆ. ಅದರ ವಾರ್ಷಿಕ ಬಡ್ಡಿದರ ಕೇವಲ ಶೇ. 2 ಮಾತ್ರ.
6) ಇಸಿಎಲ್ಜಿಎಸ್ ಯೋಜನೆ ಮಿತಿ ಹೆಚ್ಚಳ:
ಕಿರು, ಸಣ್ಣ ಮತ್ತು ಮಧ್ಯಮ ಗಾತ್ರದ ಸಂಸ್ಥೆಗಳಿಗೆ ಹಣಕಾಸು ನೆರವು ಒದಗಿಸುವ ಇಸಿಎಲ್ಜಿಎಸ್ ಯೋಜನೆಯ ಮಿತಿಯನ್ನು 3 ಲಕ್ಷ ಕೋಟಿಯಿಂದ 4.5 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ.
7) 1.1 ಲಕ್ಷ ಕೋಟಿ ಖಾತ್ರಿ ಯೋಜನೆ:
ಕೊರೋನಾ ಬಾಧಿತ ವಲಯಗಳಿಗೆ ಕೇಂದ್ರ ಸರ್ಕಾರ 1.1 ಲಕ್ಷ ಕೋಟಿ ಖಾತ್ರಿ ಯೋಜನೆ ಘೋಷಿಸಿದೆ. ಇದರಲ್ಲಿ 50 ಸಾವಿರ ಕೋಟಿ ರೂ ಹಣವು ಆರೋಗ್ಯ ಕ್ಷೇತ್ರಕ್ಕೆ ಸಂದಾಯವಾಗಲಿದೆ. ಮಿಕ್ಕ 60 ಸಾವಿರ ಕೋಟಿ ರೂ ಹಣವು ಬೇರೆ ವಲಯಗಳಿಗೆ ಹೋಗಲಿದೆ.
8) ಕೃಷಿ ಕ್ಷೇತ್ರ: ಈಶಾನ್ಯ ಕೃಷಿ ಮಾರುಕಟ್ಟೆ ನಿಗಮಕ್ಕೆ 77.45 ಕೋಟಿ ರೂ ಪುನಶ್ಚೇತನ ಪ್ಯಾಕೇಜ್ ಘೋಷಣೆ ಮಾಡಲಾಗಿದೆ.
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ