Flood in Pakistan: ಪ್ರವಾಹ ಪೀಡಿತ ಜನರಿಗೆ ಆಶ್ರಯ ನೀಡಿದ ಪಾಕಿಸ್ತಾನದ ಹಿಂದೂ ದೇವಾಲಯಗಳು

ಪಾಕಿಸ್ತಾನದ ಜನ ಪ್ರವಾಹದಿಂದಾಗಿ ನಿರಾಶ್ರಿತರಾಗಿರುವಾಗ ಬಲೂಚಿಸ್ತಾನದ ಪುಟ್ಟ ಹಳ್ಳಿಯಲ್ಲಿರುವ ಹಿಂದೂ ದೇವಾಲಯವೊಂದು ಪ್ರವಾಹ ಪೀಡಿತ ಸುಮಾರು 200 ರಿಂದ 300 ಜನರಿಗೆ ಆಹಾರ ಮತ್ತು ಆಶ್ರಯವನ್ನು ನೀಡಿದೆ. ಕಚ್ಚಿ ಜಿಲ್ಲೆಯ ಜಲಾಲ್ ಖಾನ್ ಗ್ರಾಮದಲ್ಲಿರುವ ಬಾಬಾ ಮಧೋದಾಸ್ ಮಂದಿರವು ಎತ್ತರದ ಪ್ರದೇಶದಲ್ಲಿದ್ದು, ಪ್ರವಾಹಕ್ಕೆ ಸಿಲುಕದೇ ಸುರಕ್ಷಿತವಾಗಿ ಉಳಿದಿದೆ ಮತ್ತು ಪ್ರವಾಹ ಪೀಡಿತ ಜನರಿಗೆ ಆಶ್ರಯ ನೀಡುವತ್ತ ಕೆಲಸ ಮಾಡುತ್ತಿದೆ.

ಪಾಕಿಸ್ತಾನ ಪ್ರವಾಹ

ಪಾಕಿಸ್ತಾನ ಪ್ರವಾಹ

  • Share this:
ಪಾಕಿಸ್ತಾನ (Pakistan) ಎಂದೂ ಕಂಡುಕೇಳರಿಯದ ವಿನಾಶಕಾರಿ ಪ್ರವಾಹಕ್ಕೆ (Flood) ಸಾಕ್ಷಿಯಾಗಿದೆ. ಭೀಕರ ಪ್ರವಾಹದಿಂದ ಅಪಾರ ಆಸ್ತಿ ಹಾನಿ, ಸಾವಿರಾರು ಜನರ ಸಾವು, ನಿರಾಶ್ರಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಜನರನ್ನು ರಕ್ಷಿಸುವ ಕಾರ್ಯಾಚರಣೆಗಳು, ನಿರಾಶ್ರಿತರಿಗೆ ಆಶ್ರಯ ನೀಡುವ ಕೆಲಸಗಳು ನಡೆಯುತ್ತಲೇ ಇವೆ. ಸಂಪೂರ್ಣ ಪಾಕ್‌ ಪ್ರವಾಹದಿಂದಾಗಿ ನಿರಾಶ್ರಿತರಾಗಿರುವಾಗ ಬಲೂಚಿಸ್ತಾನದ ಪುಟ್ಟ ಹಳ್ಳಿಯಲ್ಲಿರುವ  ಹಿಂದೂ ದೇವಾಲಯವೊಂದು (Hindu Temple) ಪ್ರವಾಹ ಪೀಡಿತ ಸುಮಾರು 200 ರಿಂದ 300 ಜನರಿಗೆ ಆಹಾರ ಮತ್ತು ಆಶ್ರಯವನ್ನು ನೀಡಿದೆ. ಕಚ್ಚಿ ಜಿಲ್ಲೆಯ ಜಲಾಲ್ ಖಾನ್ ಗ್ರಾಮದಲ್ಲಿರುವ ಬಾಬಾ ಮಧೋದಾಸ್ ಮಂದಿರವು ಎತ್ತರದ ಪ್ರದೇಶದಲ್ಲಿದ್ದು, ಪ್ರವಾಹಕ್ಕೆ ಸಿಲುಕದೇ ಸುರಕ್ಷಿತವಾಗಿ ಉಳಿದಿದೆ ಮತ್ತು ಪ್ರವಾಹ ಪೀಡಿತ ಜನರಿಗೆ (People) ಆಶ್ರಯ ನೀಡುವತ್ತ ಕೆಲಸ ಮಾಡುತ್ತಿದೆ.

ಪ್ರವಾಹ ಪೀಡಿತರಿಗೆ ಆಶ್ರಯ ನೀಡಿದ ಹಿಂದೂ ದೇವಾಲಯ
ನಾರಿ, ಬೋಲನ್ ಮತ್ತು ಲೆಹ್ರಿ ನದಿಗಳ ಪ್ರವಾಹದಿಂದಾಗಿ ಈ ಗ್ರಾಮವು ಪ್ರಾಂತ್ಯದ ಉಳಿದ ಭಾಗಗಳಿಂದ ಸಂಪರ್ಕ ಕಡಿತಗೊಂಡಿದೆ. ಸ್ಥಳೀಯ ಹಿಂದೂ ಸಮುದಾಯವು ಪ್ರವಾಹ ಪೀಡಿತ ಜನರಿಗೆ ಮತ್ತು ಅವರ ಜಾನುವಾರುಗಳಿಗೆ ಬಾಬಾ ಮಧೋದಾಸ್ ಮಂದಿರದಲ್ಲಿ ಆಶ್ರಯ ಒದಗಿಸಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಜಾತಿಭೇಧವಿಲ್ಲದೇ ಬಾಬಾ ಮಧೋದಾಸ್ ಮಂದಿರದಲ್ಲಿ ಆಶ್ರಯ
ಸ್ಥಳೀಯರು ಹೇಳುವ ಪ್ರಕಾರ, ಬಾಬಾ ಮಧೋದಾಸ್ ಅವರು ವಿಭಜನಾಪೂರ್ವ ಹಿಂದೂ ಸಂತರಾಗಿದ್ದು, ಈ ಪ್ರದೇಶದ ಮುಸ್ಲಿಮರು ಮತ್ತು ಹಿಂದೂಗಳು ಯಾವುದೇ ಜಾತಿ ಭೇದವಿಲ್ಲದೇ ಇವರನ್ನು ಆರಾಧಿಸುತ್ತಾರೆ. ಹೀಗಾಗಿ ದೇವಾಲಯ ಕೂಡ ಯಾವುದೇ ಭೇದವಿಲ್ಲದೇ ಎಲ್ಲರಿಗೂ ಆಶ್ರಯ ನೀಡಿದೆ.

ಇದನ್ನೂ ಓದಿ: IT Raid: ವಾಚ್​ ಶಾಪ್​ ಮಾಲೀಕನ ಬಡತನದ ಬದುಕು, ಆದ್ರೆ ಬ್ಯಾಂಕ್ ಬ್ಯಾಲೆನ್ಸ್​ ನೋಡಿದ ಐಟಿ ಅಧಿಕಾರಿಗಳಿಗೆ ಶಾಕ್!

ಬಾಬಾ ಮಧೋದಾಸ್ ಮಂದಿರದ ಪರಿಚಯ
ಬಲೂಚಿಸ್ತಾನದಾದ್ಯಂತ ಹಿಂದೂಗಳು ಭೇಟಿ ನೀಡುವ ಈ ದೇವಾಲಯ ಕಾಂಕ್ರೀಟಿನಿಂದ ಮಾಡಲ್ಪಟ್ಟಿದೆ ಮತ್ತು ದೊಡ್ಡ ಪ್ರದೇಶದಲ್ಲಿ ನೆಲೆಗೊಂಡಿದೆ. ದೇವಾಲಯ ಎತ್ತರದ ಪ್ರದೇಶದಲ್ಲಿರುವುದರಿಂದ ಪ್ರವಾಹದಿಂದ ಸುರಕ್ಷಿತವಾಗಿದೆ. ಜಲಾಲ್ ಖಾನ್‌ನಲ್ಲಿರುವ ಹಿಂದೂ ಸಮುದಾಯದ ಹೆಚ್ಚಿನ ಸದಸ್ಯರು ಉದ್ಯೋಗ ಮತ್ತು ಇತರ ಅವಕಾಶಗಳಿಗಾಗಿ ಕಚ್ಚಿಯ ಇತರ ನಗರಗಳಿಗೆ ವಲಸೆ ಹೋಗಿದ್ದಾರೆ, ಆದರೆ ದೇಗುಲವನ್ನು ನೋಡಿಕೊಳ್ಳಲೆಂದೇ ಒಂದೆರಡು ಕುಟುಂಬಗಳು ಮಾತ್ರ ದೇವಾಲಯದ ಆವರಣದಲ್ಲಿಯೇ ಉಳಿದಿವೆ ಎಂದು ವರದಿ ತಿಳಿಸಿದೆ.

ಭಾಗ್ ನಾರಿ ತಹಸಿಲ್‌ನ ಅಂಗಡಿಯ ಮಾಲೀಕ ರತ್ತನ್ ಕುಮಾರ್ ಎಂಬುವವರು ಪ್ರಸ್ತುತ ದೇವಾಲಯದ ಉಸ್ತುವಾರಿ ವಹಿಸಿಕೊಂಡಿದ್ದಾರೆ. "ದೇವಾಲಯದಲ್ಲಿ ನೂರಕ್ಕೂ ಹೆಚ್ಚು ಕೊಠಡಿಗಳಿವೆ, ಬಲೂಚಿಸ್ತಾನ್ ಮತ್ತು ಸಿಂಧ್‌ನಿಂದ ಹೆಚ್ಚಿನ ಸಂಖ್ಯೆಯ ಜನರು ಪ್ರತಿವರ್ಷ ತೀರ್ಥಯಾತ್ರೆಗೆ ಇಲ್ಲಿಗೆ ಬರುತ್ತಾರೆ. ಅವರಿಗೆ ಸೌಲಭ್ಯ ಕಲ್ಪಿಸಲು ವಿಶಾಲವಾಗಿ ಕೊಠಡಿಗಳನ್ನು ನಿರ್ಮಿಸಲಾಗಿದೆ" ಎಂದು ಅವರು ತಿಳಿಸಿದರು.

ರತ್ತನ್ ಅವರ ಪುತ್ರ ಸಾವನ್ ಕುಮಾರ್, ಪ್ರವಾಹದಿಂದ ಕೆಲವು ಕೊಠಡಿಗಳು ಹಾನಿಗೊಳಗಾಗಿವೆ, ಆದರೆ, ಒಟ್ಟಾರೆ ದೇವಾಲಯ ಸುರಕ್ಷಿತವಾಗಿ ಉಳಿದಿದೆ ಎಂದು ತಿಳಿಸಿದ್ದಾರೆ. ಕನಿಷ್ಠ 200-300 ಜನರು, ಹೆಚ್ಚಾಗಿ ಮುಸ್ಲಿಮರು ಮತ್ತು ಅವರ ಜಾನುವಾರುಗಳಿಗೆ ಆವರಣದಲ್ಲಿ ಆಶ್ರಯ ನೀಡಲಾಗಿದೆ ಮತ್ತು ಇವರನ್ನು ಹಿಂದೂ ಕುಟುಂಬಗಳು ನೋಡಿಕೊಳ್ಳುತ್ತವೆ. ಆರಂಭದಲ್ಲಿ, ಈ ಪ್ರದೇಶವು ಜಿಲ್ಲೆಯ ಉಳಿದ ಭಾಗಗಳಿಂದ ಸಂಪೂರ್ಣವಾಗಿ ಸಂಪರ್ಕ ಕಡಿತಗೊಂಡಿತ್ತು. ಈ ಸಂದರ್ಭದಲ್ಲಿ ಇಲ್ಲಿಗೆ ಹೆಲಿಕಾಪ್ಟರ್ ಮೂಲಕ ಪಡಿತರವನ್ನು ಒದಗಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಪ್ರಾಣಿಗಳಿಗೂ ಸೂರು
'ಸ್ಥಳೀಯರಲ್ಲದೆ, ಈ ದೇಗುಲದಲ್ಲಿ ಆಡುಗಳು ಮತ್ತು ಕುರಿಗಳಿಗೂ ಆಶ್ರಯ ನೀಡಲಾಗಿದೆ. 'ಸ್ಥಳೀಯ ಹಿಂದೂಗಳು ಧ್ವನಿವರ್ಧಕದಲ್ಲಿ ಘೋಷಣೆ ಕೂಗಿದರು, ಮುಸ್ಲಿಮರು ಆಶ್ರಯ ಪಡೆಯಲು ದೇವಸ್ಥಾನಕ್ಕೆ ಧಾವಿಸುವಂತೆ ಕರೆ ನೀಡಿದರು ಎಂದು ದೇವಾಲಯದ ಒಳಗೆ ವೈದ್ಯಕೀಯ ಶಿಬಿರವನ್ನು ಸ್ಥಾಪಿಸಿರುವ ಜಲಾಲ್ ಖಾನ್‌ನ ವೈದ್ಯ ಇಸ್ರಾರ್ ಮುಗೇರಿ ಹೇಳಿದರು.

ಇದನ್ನೂ ಓದಿ:  Tiger Cub: ಬೆಕ್ಕಿಗೆ ಬಣ್ಣ ಹಚ್ಚಿ ಹುಲಿಮರಿ ಎಂದು ಮಾರಾಟ!

ಈ ಕಷ್ಟದ ಸಮಯದಲ್ಲಿ ಅವರ ಸಹಾಯಕ್ಕೆ ಬಂದ ಮತ್ತು ಅವರಿಗೆ ಆಹಾರ ಮತ್ತು ವಸತಿ ಒದಗಿಸಿದ್ದಕ್ಕಾಗಿ ಸ್ಥಳೀಯ ಹಿಂದೂ ಸಮುದಾಯಕ್ಕೆ ಋಣಿಯಾಗಿದ್ದೇವೆ ಎಂದು ಅಲ್ಲಿ ಆಶ್ರಯ ಪಡೆದವರು ಹೇಳುತ್ತಾರೆ.

1,400 ಜನರ ಸಾವು
ಪಾಕ್‌ ಪ್ರವಾಹದಲ್ಲಿ ಸುಮಾರು 1,400 ಜನರು ಮೃತಪಟ್ಟಿದ್ದಾರೆ. ಪ್ರವಾಹದಿಂದಾಗಿ ದೇಶದ ಮೂರನೇ ಒಂದು ಭಾಗ ಜಲಾವೃತವಾಗಿದೆ. ಅಪಾರ ಪ್ರಮಾಣದ ಬೆಳೆ ನಾಶವಾಗಿದೆ ಮತ್ತು 33 ಮಿಲಿಯನ್‌ಗಿಂತಲೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.
Published by:Ashwini Prabhu
First published: