Flood Update: ಭಾರತದಲ್ಲಿ ಮುಂದುವರೆದ ಪ್ರವಾಹ; 500ಕ್ಕೂ ಹೆಚ್ಚು ಸಾವು, 1.26 ಕೋಟಿ ಜನ ನಿರಾಶ್ರಿತರು

ಮಳೆಗಾಲದ ಪ್ರವಾಹ ಎದುರಾದರೆ, ದಕ್ಷಿಣ ಏಷ್ಯಾದ ಹೆಚ್ಚಿನ ದೇಶದ ಜನಸಂಖ್ಯೆಯು ಡೆಂಗ್ಯೂ, ಮಲೇರಿಯಾ, ಲೆಪ್ಟೊಸ್ಪಿರೋಸಿಸ್ ಮತ್ತು ಕಾಲರಾ ಮುಂತಾದ ಕಾಯಿಲೆಗಳಿಗೆ ಗುರಿಯಾಗುತ್ತದೆ. 2019 ರಲ್ಲಿ ಭಾರತದಲ್ಲಿ 1,36,000 ಜನ ಡೆಂಗ್ಯೂ ಸೋಂಕಿಗೆ ತುತ್ತಾಗಿದ್ದರು ಮತ್ತು ಅನೇಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ಈ ವರ್ಷದ ಮಾನ್ಸೂನ್ ಪ್ರಾರಂಭವಾದಾಗಿನಿಂದ ಉಂಟಾಗುತ್ತಿರುವ ಭಾರೀ ಪ್ರವಾಹ ದೇಶದ ಹಲವು ಭಾಗಗಳನ್ನು ಸಂಕಷ್ಟಕ್ಕೆ ದೂಡಿದೆ. ಬಿಹಾರ, ಅಸ್ಸಾಂ ಮತ್ತು ಉತ್ತರಪ್ರದೇಶ ರಾಜ್ಯಗಳನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಪರಿಣಾಮ ಪ್ರವಾಹಕ್ಕೆ ದೇಶದಾದ್ಯಂತ 500 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರೆ, ಕನಿಷ್ಠ 1.26 ಕೋಟಿ ಜನರು ಬಾಧಿತರಾಗಿದ್ದಾರೆ. ಅಂದಾಜು 5,22,908 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.

ನೇಪಾಳ ದೇಶದಲ್ಲಿ ವಿಪರೀತ ಮಳೆಯಾಗುತ್ತಿದ್ದು ಅಲ್ಲಿನ ನದಿಗಳು ಉಕ್ಕಿ ಹರಿಯುತ್ತಿವೆ. ನೇಪಾಳದ ಜೊತೆಗೆ ನದಿ ಗಡಿಗಳನ್ನು ಹಂಚಿಕೊಂಡಿರುವ ಕಾರಣದಿಂದಲೇ ಉತ್ತರಪ್ರದೇಶ ಮತ್ತು ಬಿಹಾರದ ಹಲವು ಪ್ರದೇಶಗಳಲ್ಲಿ, ನದಿ ಪಾತ್ರದ ಜಾಗಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನಲಾಗುತ್ತಿದೆ.

ಆಗಸ್ಟ್ 4 ರಂದು ಗೃಹ ಸಚಿವಾಲಯದ ವಿಪತ್ತು ನಿರ್ವಹಣಾ ವಿಭಾಗವು ಪ್ರಕಟಿಸಿರುವ ವರದಿಯ ಪ್ರಕಾರ ದೇಶದಾದ್ಯಂತ ಪ್ರಸ್ತುತ 1.26 ಕೋಟಿಗೂ ಹೆಚ್ಚು ಜನರು ಪ್ರವಾಹಕ್ಕೆ ಸಿಲುಕಿದ್ದಾರೆ. 550ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. 5000ಕ್ಕೂ ಹೆಚ್ಚು ಗ್ರಾಮಗಳನ್ನು ಪ್ರವಾಹ ಪೀಡಿತ ಪ್ರದೇಶಗಳು ಎಂದು ಗುರುತಿಸಲಾಗಿದೆ. ಒಟ್ಟು 4,40,507 ಜನರನ್ನು ಸ್ಥಳಾಂತರಿಸಲಾಗಿದ್ದು, 38 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಪರಿಹಾರ ಶಿಬಿರಗಳಲ್ಲಿ ಪ್ರಸ್ತುತ 28,664 ಜನರು ಆಶ್ರಯ ಪಡೆದಿದ್ದಾರೆ ಎಂದು ವರದಿ ತಿಳಿಸಿದೆ.

ಅಸ್ಸಾಂನಲ್ಲಿ 30 ಜಿಲ್ಲೆಗಳ 56,89,584 ಜನರು ಪ್ರವಾಹದಿಂದ ಬಳಲುತ್ತಿದ್ದಾರೆ. ಪ್ರವಾಹ ಸಂಬಂಧಿತ ಘಟನೆಗಳಲ್ಲಿ 107, ಭೂಕುಸಿತದಿಂದಾಗಿ 26 ಜೀವಗಳು ಬಲಿಯಾಗಿವೆ. ರಾಜ್ಯದಲ್ಲಿ 5,000 ಕ್ಕೂ ಹೆಚ್ಚು ಗ್ರಾಮಗಳು ಬಾಧಿತವಾಗಿದ್ದು, 81,696 ಜನರನ್ನು ಸ್ಥಳಾಂತರಿಸಲಾಗಿದೆ.

ಮಾನ್ಸೂನ್ ಪ್ರಾರಂಭವಾದಾಗಿನಿಂದ ಉತ್ತರ ಪ್ರದೇಶದಲ್ಲಿಯೂ ಭಾರಿ ಮಳೆಯಾಗಿದೆ. 16 ಜಿಲ್ಲೆಗಳು ಮತ್ತು 960 ಗ್ರಾಮಗಳಿಂದ 5 ಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ. ಜುಲೈ 1 ರಿಂದ 6 ಜನರು ಸಾವನ್ನಪ್ಪಿದ್ದಾರೆ. 552 ಮನೆಗಳಿಗೆ ಹಾನಿಯಾಗಿದೆ. 956 ಪರಿಹಾರ ಶಿಬಿರಗಳನ್ನು ತೆರೆಯಲಾಗಿದ್ದು, 4,340 ಜನರು ಈ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಸುಮಾರು 38,000 ಹೆಕ್ಟೇರ್ ಬೆಳೆ ಪ್ರದೇಶ ಹಾನಿಯಾಗಿದೆ.

ಬಿಹಾರದಲ್ಲಿ ಮಾತ್ರ 59.68 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದಿಂದ ಬಳಲುತ್ತಿದ್ದಾರೆ ಮತ್ತು 19 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಪಶ್ಚಿಮ ಬಂಗಾಳದಲ್ಲಿ, ಪ್ರಸಕ್ತ ಮಳೆಗಾಲದಲ್ಲಿ 233 ಜನ ಸಾವನ್ನಪ್ಪಿದ್ದು, ಇನ್ನೂ 6 ಜನರು ಕಾಣೆಯಾಗಿದ್ದಾರೆ. ಮೇ 2020 ರಲ್ಲಿ ದಕ್ಷಿಣ ಬಂಗಾಳದ ಮೂಲಕ ಅಮ್ಫಾನ್ ಎಂಬ ಚಂಡಮಾರುತ ಅಪ್ಪಳಿಸಿದಾಗ ಹೆಚ್ಚಿನ ಜನ ಕಳೆದು ಹೋಗಿದ್ದರು. ಇದೀಗ 23 ಜಿಲ್ಲೆಗಳು ಮತ್ತು 1,868 ಗ್ರಾಮಗಳಿಂದ 2,18,000 ಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ.

ಒಂದು ಸಾವಿರಕ್ಕೂ ಹೆಚ್ಚು ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ ಮತ್ತು 10,000 ಕ್ಕೂ ಹೆಚ್ಚು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ನೂರ ಮೂವತ್ತೆಂಟು ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, ಪ್ರಸ್ತುತ 13,771 ಜನರಿಗೆ ವಸತಿ ಕಲ್ಪಿಸಲಾಗಿದೆ.

ಈ ಐದು ರಾಜ್ಯಗಳಲ್ಲದೆ, ಕೇರಳ, ತಮಿಳುನಾಡು ಮತ್ತು ಮಧ್ಯಪ್ರದೇಶದಲ್ಲಿ ಸಾವಿನ ಸಂಖ್ಯೆ ಕ್ರಮವಾಗಿ 28, 18, ಮತ್ತು 68 ದಾಖಲಾಗಿದೆ. 10 ರಾಷ್ಟ್ರೀಯ ವಿಪತ್ತು ಪಡೆಗಳು ತಂಡ ದೇಶಾದ್ಯಂತ ನೆರವು ಕಾರ್ಯಾಚರಣೆಯಲ್ಲಿ ತೊಡಗಿವೆ.

ಇಂಟರ್‌ನ್ಯಾಷನಲ್‌ ಫೆಡರೇಶನ್ ಆಫ್ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸೊಸೈಟಿಗಳ ಪ್ರಕಾರ, ದಕ್ಷಿಣ ಏಷ್ಯಾದಲ್ಲಿ 1.75 ಕೋಟಿಗೂ ಹೆಚ್ಚು ಜನರು ಪ್ರವಾಹದಿಂದ ಪ್ರಭಾವಿತರಾಗಿದ್ದಾರೆ ಮತ್ತು ಸಾಂಕ್ರಾಮಿಕ ರೋಗದಿಂದ ಭಯಕ್ಕೆ ಒಳಗಾಗಿದ್ದಾರೆ. 630 ಕ್ಕೂ ಹೆಚ್ಚು ಜನರು ಭಾರತ, ಬಾಂಗ್ಲಾದೇಶ ಮತ್ತು ನೇಪಾಳದ ಪ್ರಮುಖ ಪ್ರವಾಹದಿಂದ ಸಾವನ್ನಪ್ಪಿದ್ದಾರೆ ಎಂದಿವೆ.

ಇದಲ್ಲದೆ, ನೆರೆಯ ಬಾಂಗ್ಲಾದೇಶದ ಅರ್ಧದಷ್ಟು ಜಿಲ್ಲೆಗಳು ನೀರಿನೊಳಗಿವೆ. ಪ್ರವಾಹದಿಂದಾಗಿ ಸುಮಾರು 1 ಮಿಲಿಯನ್ ಕುಟುಂಬಗಳು ತಮ್ಮ ಹಳ್ಳಿಗಳಲ್ಲಿ ಸಿಕ್ಕಿಹಾಕಿಕೊಂಡಿವೆ. ನೇಪಾಳದಲ್ಲಿ ಪ್ರವಾಹ ಮತ್ತು ಭೂಕುಸಿತದಿಂದಾಗಿ ಸುಮಾರು 200 ಜನರು ಸತ್ತಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ : ಸುಶಾಂತ್‌ ಸಿಂಗ್ ಪ್ರಕರಣ; ವಿಚಾರಣೆ ಮುಂದೂಡುವ ನಟಿ ರಿಯಾ ಮನವಿಯನ್ನು ತಿರಸ್ಕರಿಸಿದ ಜಾರಿ ನಿರ್ದೇಶನಾಲಯ

ಮಳೆಗಾಲದ ಪ್ರವಾಹ ಎದುರಾದರೆ, ದಕ್ಷಿಣ ಏಷ್ಯಾದ ಹೆಚ್ಚಿನ ದೇಶದ ಜನಸಂಖ್ಯೆಯು ಡೆಂಗ್ಯೂ, ಮಲೇರಿಯಾ, ಲೆಪ್ಟೊಸ್ಪಿರೋಸಿಸ್ ಮತ್ತು ಕಾಲರಾ ಮುಂತಾದ ಕಾಯಿಲೆಗಳಿಗೆ ಗುರಿಯಾಗುತ್ತದೆ. 2019 ರಲ್ಲಿ ಭಾರತದಲ್ಲಿ 1,36,000 ಜನ ಡೆಂಗ್ಯೂ ಸೋಂಕಿಗೆ ತುತ್ತಾಗಿದ್ದರು ಮತ್ತು ಅನೇಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು. ಒಂದು ಅಂಕಿಅಂಶದ ಪ್ರಕಾರ ಒಂದು ವರ್ಷಕ್ಕೆ ದಕ್ಷಿಣ ಏಷ್ಯಾದಲ್ಲಿ ದಾಖಲಾಗುವ ಡೆಂಗ್ಯೂ ಪ್ರಮಾಣ 2 ಕೋಟಿಗೂ ಅಧಿಕ.

ಈ ವರ್ಷದ ಮಾನ್ಸೂನ್ ಗೆ ಮುಂಚಿತವಾಗಿ ಡೆಂಗ್ಯೂ ಮತ್ತು ಮಲೇರಿಯಾ ಮುಂತಾದ ರೋಗಗಳ ಹರಡುವಿಕೆಯನ್ನು ಹೇಗೆ ತಡೆಗಟ್ಟಬಹುದು ಎಂಬ ಬಗ್ಗೆ ಸಮುದಾಯಗಳಲ್ಲಿ ಜಾಗೃತಿ ಮೂಡಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
Published by:MAshok Kumar
First published: