Cancer Vanishes: ಔಷಧಿಯಲ್ಲಿ ಸಂಪೂರ್ಣ ವಾಸಿಯಾಯ್ತು ಕ್ಯಾನ್ಸರ್! ಚರಿತ್ರೆಯಲ್ಲೇ ಮೊದಲು

ಕ್ಯಾನ್ಸರ್ ಹೊಂದಿರುವ 18 ರೋಗಿಗಳಿಗೆ, ಸುಮಾರು ಆರು ತಿಂಗಳುಗಳ ಕಾಲ ಡೋಸ್ಟಾರ್ಲಿಮ್ಯಾಬ್ ಎಂಬ ಔಷಧಿಯನ್ನು (Medicine) ನೀಡಲಾಯಿತು. ಅದರ ಪರಿಣಾಮವಾಗಿ ಅವರೆಲ್ಲರ ಕ್ಯಾನ್ಸರ್ ಗೆಡ್ಡೆಗಳು ಕಣ್ಮರೆಯಾದವಂತೆ !

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕ್ಯಾನ್ಸರ್ (Cancer) ಜಗತ್ತಿನ ಅಪಾಯಕಾರಿ ಕಾಯಿಲೆಗಳಲ್ಲಿ ಒಂದು ಮಾತ್ರವಲ್ಲ, ಬಹುಪಾಲು ಜನರನ್ನು ಕಾಡುತ್ತಿರುವ ಕಾಯಿಲೆಯೂ ಹೌದು. ಯಾವುದೇ ಕಾಯಿಲೆ ಬರಲಿ, ಪ್ರತಿಯೊಬ್ಬ ಮನುಷ್ಯನೂ ತಾನು ಆದಷ್ಟು ಬೇಗ ಅದರಿಂದ ಮುಕ್ತಿ ಪಡೆಯಬೇಕು, ಆರೋಗ್ಯವಂತನಾಗಬೇಕು (Healthy) ಎಂದು ಬಯಸುವುದು ಅತ್ಯಂತ ಸಹಜ ಮತ್ತು ಸಾಮಾನ್ಯ. ಅದು ನಿಜವಾದಾಗ ಎಷ್ಟು ಸಂತೋಷವಾಗುತ್ತದೆ ಅಲ್ಲವೇ? ನ್ಯೂಯಾರ್ಕ್‍ನಲ್ಲಿ (New York), ಗುದನಾಳದ ಕ್ಯಾನ್ಸರ್ ಹೊಂದಿರುವ ಒಂದು ಸಣ್ಣ ಗುಂಪಿನ ಜನರಲ್ಲಿ ಅಂತದ್ದೇ ಒಂದು ಪವಾಡದ ಸಂಗತಿ ನಡೆದ ಕುರಿತು ವರದಿಯಾಗಿದೆ.

6 ತಿಂಗಳ ಕಾಲ ಔಷಧ

ಒಂದು ಸಣ್ಣ ಕ್ಲಿನಿಕಲ್ ಪ್ರಯೋಗದಲ್ಲಿ (Clinical Test), ಗುದನಾಳದ ಕ್ಯಾನ್ಸರ್ ಹೊಂದಿರುವ 18 ರೋಗಿಗಳಿಗೆ, ಸುಮಾರು ಆರು ತಿಂಗಳುಗಳ ಕಾಲ ಡೋಸ್ಟಾರ್ಲಿಮ್ಯಾಬ್ ಎಂಬ ಔಷಧಿಯನ್ನು (Medicine) ನೀಡಲಾಯಿತು. ಅದರ ಪರಿಣಾಮವಾಗಿ ಅವರೆಲ್ಲರ ಕ್ಯಾನ್ಸರ್ ಗೆಡ್ಡೆಗಳು ಕಣ್ಮರೆಯಾದವಂತೆ !

ಬದಲಿ ಪ್ರತಿಕಾಯವಾಗಿ ಕೆಲಸ ಮಾಡುವ ಔಷಧ

ಡೋಸ್ಟಾರ್ಲಿಮ್ಯಾಬ್, ಇದು ಲ್ಯಾಬೊರೇಟರಿ ಉತ್ಪಾದಿತ ಅಣುಗಳನ್ನು ಹೊಂದಿರುವ ಔಷಧವಾಗಿದ್ದು, ಅವು ದೇಹದಲ್ಲಿ ಬದಲಿ ಪ್ರತಿಕಾಯಗಳಾಗಿ ಕೆಲಸ ಮಾಡುತ್ತವೆ. ಈ ಔಷಧವನ್ನೇ ಪ್ರಯೋಗದಲ್ಲಿ ಪಾಲ್ಗೊಂಡಿದ್ದ ಎಲ್ಲಾ 18 ರೋಗಿಗಳಿಗೂ ನೀಡಲಾಯಿತು. ಈ ಚಿಕಿತ್ಸೆಯ ಫಲವಾಗಿ ಆ ರೋಗಿಗಳ ಗುದನಾಳದ ಕ್ಯಾನ್ಸರ್ ಸಂಪೂರ್ಣವಾಗಿ ಕಣ್ಮರೆಯಾಗಿದೆಯಂತೆ. ಇದೀಗ ಅವರಿಗೆ ದೈಹಿಕ ಪರೀಕ್ಷೆ, ಎಂಡೋಸ್ಕೋಪಿ, ಪಿಇಟಿ ಸ್ಕ್ಯಾನ್ ಅಥವಾ ಎಂಆರ್‍ಐ ಸ್ಕ್ಯಾನ್ ಮಾಡಿದರೂ, ಕ್ಯಾನ್ಸರ್ ಲಕ್ಷಣಗಳು ಕಾಣ ಸಿಗುತ್ತಿಲ್ಲ.

“ಈ ರೀತಿ ನಡೆದಿರುವುದು ಕ್ಯಾನ್ಸರ್‍ನ ಇತಿಹಾಸದಲ್ಲಿ ಇದೇ ಮೊದಲು” ಎಂದು ನ್ಯೂಯಾರ್ಕ್‍ನ ಮೆಮೋರಿಯಲ್ ಸ್ಲೋವಾನ್ ಕೆಟ್ಟೆರಿಂಗ್ ಕ್ಯಾನ್ಸರ್ ಸೆಂಟರ್ನ ಡಾ. ಲೂಯಿಸ್ ಎ . ಡಯಾಸ್ ಜೆ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಂಪೂರ್ಣ ಗುಣಮುಖರಾದ ರೋಗಿಗಳ ಮುಖದಲ್ಲಿ ನಗು

ಮಾಧ್ಯಮವೊಂದರ ವರದಿಯ ಪ್ರಕಾರ, ಕ್ಲಿನಿಕಲ್ ಪ್ರಯೋಗದಲ್ಲಿ ಭಾಗವಹಿಸಿದ್ದ ರೋಗಿಗಳು, ಈ ಹಿಂದೆ ತಮ್ಮ ಕ್ಯಾನ್ಸರನ್ನು ಗುಣ ಪಡಿಸಿಕೊಳ್ಳಲು ಕಿಮೋಥೆರಪಿ, ವಿಕಿರಣ ಚಿಕಿತ್ಸೆಯಂತಹ ಕಠಿಣ ಚಿಕಿತ್ಸೆಗಳನ್ನು ಎದುರಿಸಿದ್ದರು. ಈ ಪ್ರಯೋಗದಲ್ಲಿ ಭಾಗವಹಿಸಿದ್ದ 18 ರೋಗಿಗಳು ಕೂಡ, ಮುಂದಿನ ಹಂತದಲ್ಲಿ ತಾವು ಕೂಡ ಅಂತದ್ದೇ ಚಿಕಿತ್ಸೆಯನ್ನು ಎದುರಿಸಬೇಕಾಗುತ್ತದೆ ಎಂದು ಭಾವಿಸಿದ್ದರು. ಆದರೆ ತಮಗೆ ಇನ್ನು ಮುಂದಿನ ಚಿಕಿತ್ಸೆಯ ಅಗತ್ಯವಿಲ್ಲ ಎಂಬುವುದು ಅವರ ಪಾಲಿಗೆ ನಿಜಕ್ಕೂ ಒಂದು ಅಚ್ಚರಿಯ ಸಂಗತಿ.

ಇದನ್ನೂ ಓದಿ: Cancer Causing Foods: ಪ್ಯಾಕ್ ಮಾಡಿದ ಕೆಲವು ಆಹಾರಗಳನ್ನು ತಿಂದ್ರೆ ಬರುತ್ತೆ ಕ್ಯಾನ್ಸರ್!

ಈ ಸಂಶೋಧನೆಯ ಫಲಿತಾಂಶ ವೈದ್ಯಕೀಯ ಜಗತ್ತಿನಲ್ಲಿ ಎಲ್ಲರನ್ನು ದಂಗಾಗಿಸಿದೆ. ಕ್ಯಾಲಿಫೋರ್ನಿಯಾ ಯುನಿವರ್ಸಿಟಿಯಲ್ಲಿ ಕೊಲೊಕ್ಟೆರಾಲ್ ಕ್ಯಾನ್ಸರ್ ತಜ್ಞರಾಗಿರುವ ಡಾ. ಅಲನ್ ಪಿ ವೆನೂಕ್ ಅವರಂತೂ, ಪ್ರತಿಯೊಬ್ಬ ರೋಗಿಯೂ ಸಂಪೂರ್ಣವಾಗಿ ಗುಣವಾಗಿರುವುದು “ಹಿಂದೆಂದೂ ಕೇಳಿರದ” ಸಂಗತಿ ಎಂದು ಹೇಳಿದ್ದಾರೆ.

ವಿಶ್ವದಲ್ಲೇ ಮೊದಲು ಈ ರೀತಿಯ ಸಂಶೋಧನೆ

ಇಂತಹ ಸಂಶೋಧನೆ ವಿಶ್ವದಲ್ಲೇ ಮೊದಲನೆಯದ್ದು ಎಂದು ಅವರು ಹೊಗಳಿದ್ದಾರೆ. ಅದರಲ್ಲೂ ಈ ಔಷಧಿಯ ಕಾರಣದಿಂದ ರೋಗಿಗಳು ಯಾವುದೇ ರೀತಿಯ ಗಮನಾರ್ಹ ತೊಂದರೆಗಳನ್ನು ಅನುಭವಿಸಿಲ್ಲ ಎಂಬುವುದು ವಿಶೇಷ ಸಂಗತಿ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಣ್ಣಲ್ಲಿ ಆನಂದಭಾಷ್ಪ

ನ್ಯೂಯಾರ್ಕ್‍ನ ಮೆಮೋರಿಯಲ್ ಸ್ಲೋವಾನ್ ಕೆಟ್ಟೆರಿಂಗ್ ಕ್ಯಾನ್ಸರ್ ಸೆಂಟರ್ನ ಅಂಕೋಲಾಜಿಸ್ಟ್ ಡಾ. ಆಂಡ್ರಿಯಾ ಸೆರ್‍ಸೆಕ್ ಅವರು ಆ ರೋಗಿಗಳಿಗೆ ಕ್ಯಾನ್ಸರ್ ಗುಣವಾದ ಸಂಗತಿಯನ್ನು ತಿಳಿಸಿದ ಕ್ಷಣದ ಬಗ್ಗೆ ಮಾಧ್ಯಮಕ್ಕೆ ತಿಳಿಸುತ್ತಾ, ತಮ್ಮ ಕ್ಯಾನ್ಸರ್ ಗುಣವಾಯಿತು ಎಂದು ತಿಳಿಯುತ್ತಲೇ ಅವರೆಲ್ಲರ ಕಣ್ಣಲ್ಲಿ ಆನಂದಭಾಷ್ಪ ಹರಿಯಿತು ಎಂದು ಹೇಳಿದ್ದಾರೆ.

ಇದನ್ನೂ ಓದಿ: Cancer: ಬಾಯಿ ಕ್ಯಾನ್ಸರ್ ಬಗ್ಗೆ ಇರಲಿ ಸಾಕಷ್ಟು ಎಚ್ಚರ

ಈ ಪ್ರಯೋಗದಲ್ಲಿ, ಆ 18 ಮಂದಿ ರೋಗಿಗಳು ಆರು ತಿಂಗಳ ಕಾಲ ಪ್ರತೀ ಮೂರು ವಾರಕ್ಕೊಮ್ಮೆ ಡೋಸ್ಟಾರ್ಲಿಮ್ಯಾಬ್ ಔಷಧಿಯನ್ನು ಸೇವಿಸುತ್ತಿದ್ದರು. ಅವರೆಲ್ಲರೂ ಕ್ಯಾನ್ಸರ್‍ನ ಒಂದೇ ಸಮವಾದ ಹಂತದಲ್ಲಿ ಇದ್ದರು, ಅಂದರೆ – ಅವರ ಕ್ಯಾನ್ಸರ್ ಗುದನಾಳದ ಜಾಗದಲ್ಲಿ ಮುಂದುವರೆದಿತ್ತು, ಆದರೆ ದೇಹದ ಬೇರೆ ಅಂಗಗಳಿಗೆ ಹರಡಿರಲಿಲ್ಲ.

ಈ ಔಷಧವನ್ನು ಪರಿಶೀಲಿಸಿರುವ ಕ್ಯಾನ್ಸರ್ ಸಂಶೋಧಕರ ಪ್ರಕಾರ, ಚಿಕಿತ್ಸೆಯು ಭರವಸೆಯನ್ನು ಮೂಡಿಸುತ್ತಿದೆ. ಆದರೆ ಇದು ಹೆಚ್ಚು ರೋಗಿಗಳ ಮೇಲೆ ಪರಿಣಾಮ ಬೀರುತ್ತದೆಯೇ ಮತ್ತು ಕ್ಯಾನ್ಸರ್ ಅನ್ನು ನಿಜವಾಗಿಯೂ ಗುಣ ಮಾಡುತ್ತದೆಯೇ ಎಂಬುದನ್ನು ತಿಳಿಯಲು ದೊಡ್ಡ ಮಟ್ಟದ ಪ್ರಯೋಗದ ಅಗತ್ಯ ಇದೆ.
Published by:Divya D
First published: