Bird Flu: ಹಕ್ಕಿಜ್ವರಕ್ಕೆ ಮೊದಲ ಬಲಿ, ದೆಹಲಿಯಲ್ಲಿ 11 ವರ್ಷದ ಬಾಲಕ H5N1ನಿಂದ ಸಾವು

Bird Flu: ದೆಹಲಿಯ ಏಮ್ಸ್​ನಲ್ಲಿ ಹಕ್ಕಿ ಜ್ವರಕ್ಕೆ ಚಿಕಿತ್ಸೆ ಪಡೆಯುತ್ತಿದ್ದ 11 ವರ್ಷದ ಬಾಲಕನೊಬ್ಬ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಇದು ಈ ವರ್ಷ ಹಕ್ಕಿ ಜ್ವರದಿಂದ ಸಾವನ್ನಪ್ಪಿದ ಮೊದಲ ಪ್ರಕರಣವಾಗಿದೆ. 

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ದೆಹಲಿ: ಕೊರೊನಾ ಸೋಂಕಿನಿಂದ ಇನ್ನೂ ಈಗೀಗ ಜಜನ ಸುಧಾರಿಸಿಕೊಳ್ಳುತ್ತಿದ್ದಾರೆ. ಆಗಲೇ ಒಂದರ ಹಿಂದೆ ಒಂದರಂತೆ ಬೇರೆ ಬೇರೆ ಖಾಯಿಲೆಗಳು ಹರಡುತ್ತಿವೆ. ಸದ್ಯ ಕೆಲ ದಿನಗಳಿಂದ ಆತಂಕ ಹುಟ್ಟಿಸಿರುವ ಹಕ್ಕಿ ಜ್ವರಕ್ಕೆ ದೇಶದಲ್ಲಿ ಮೊದಲ ಬಲಿಯಾಗಿದೆ. ದೆಹಲಿಯ ಏಮ್ಸ್​ನಲ್ಲಿ ಹಕ್ಕಿ ಜ್ವರಕ್ಕೆ ಚಿಕಿತ್ಸೆ ಪಡೆಯುತ್ತಿದ್ದ 11 ವರ್ಷದ ಬಾಲಕನೊಬ್ಬ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಇದು ಈ ವರ್ಷ ಹಕ್ಕಿ ಜ್ವರದಿಂದ ಸಾವನ್ನಪ್ಪಿದ ಮೊದಲ ಪ್ರಕರಣವಾಗಿದೆ. ದೆಹಲಿಯ ಆಲ್​ ಇಂಡಿಯಾ ಇನ್​ಸ್ಟಿಟ್ಯೂಟ್ ಆಫ್​ ಮೆಡಿಕಲ್ ಸೈನ್ಸ್​ (AIIMS)ನಲ್ಲಿ ಹಕ್ಕಿಜ್ವರ (Bird Flu)ದಿಂದ ಸಾವನ್ನಪ್ಪಿದ್ದು ಆತಂಕ ಮೂಡಿಸಿದೆ. ಏಮ್ಸ್​ನ ಮಕ್ಕಳ ವಿಭಾಗದಲ್ಲಿ ಅಡ್ಮಿಟ್ ಆಗಿದ್ದ ಬಾಲಕನಿಗೆ ಕಳೆದ ಕೆಲವು ದಿನಗಳಿಂದಲೂ H5N1 (ಹಕ್ಕಿಜ್ವರ)ಕ್ಕೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಫಲಕಾರಿಯಾಗದೆ ನಿನ್ನೆ ಸಾವನ್ನಪ್ಪಿದ್ದಾನೆ.

ಇನ್ನು ಹಕ್ಕಿ ಜ್ವರ ಸಾಂಕ್ರಾಮಿಕ ಆಗಿರುವ ಕಾರಣಕ್ಕೆ ಬಾಲಕನ ಸಂಪರ್ಕಕ್ಕೆ ಬಂದ ದೆಹಲಿ ಏಮ್ಸ್​​ನ ಎಲ್ಲ ಸಿಬ್ಬಂದಿಯೂ ಐಸೋಲೇಶನ್​ನಲ್ಲಿ ಇದ್ದಾರೆ. ಈ ಬಗ್ಗೆ ಎಎನ್​ಐ ಜತೆ ಮಾತನಾಡಿದ ಏಮ್ಸ್​ ವೈದ್ಯರು, ಈ ಬಾಲಕನಿಗೆ ಲ್ಯುಕೋಮಿಯಾ ಮತ್ತು ನ್ಯುಮೋನಿಯಾ ಕೂಡ ಇತ್ತು. ಆತನಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ಬಳಿಕ ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು ಎಂದಿದ್ದಾರೆ. ಸೋಂಕಿತನ ಸಂಪರ್ಕಕ್ಕೆ ಬಂದ ವೈದ್ಯರು, ದಾದಿಯರು ಸೇರಿ ಎಲ್ಲರೂ ಪ್ರತ್ಯೇಕವಾಗಿದ್ದಾರೆ. ಇನ್ನೇನಾದರೂ ಅವರಲ್ಲಿ ಹಕ್ಕಿಜ್ವರದ ಯಾವುದಾದರೂ ಲಕ್ಷಣ ಕಾಣಿಸಿಕೊಂಡರೆ ಕೂಡಲೇ ಅವರಿಗೂ ಚಿಕಿತ್ಸೆ ನೀಡಲಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ: Covid Contact: ಕಾಣೆಯಾಗಿದ್ದ ಬೆಂಗಳೂರಿನ 1 ಲಕ್ಷ ಕೋವಿಡ್ ಸೋಂಕಿತರನ್ನು ಪತ್ತೆ ಹಚ್ಚಿದ ಪೋಲೀಸ್, ಬಿಬಿಎಂಪಿ ಈಗ ನಿರಾಳ !

ಈ ವರ್ಷದ ಪ್ರಾರಂಭದಲ್ಲಿ ದೇಶಾದ್ಯಂತ ಹಲವು ಕಡೆಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿತ್ತು. ದೆಹಲಿ, ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಗುಜರಾತ್​, ಮಹಾರಾಷ್ಟ್ರ, ಹರ್ಯಾಣಗಳಲ್ಲಿ ಹಕ್ಕಿ ಜ್ವರದಿಂದ ಅನೇಕ ಪಕ್ಷಿಗಳು ಸಾವನ್ನಪ್ಪಿದ್ದವು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎಚ್ಚರಿಕೆಯನ್ನೂ ನೀಡಿತ್ತು. ಆದರೆ ಇದು ಮನುಷ್ಯನಲ್ಲಿ ಕಾಣಿಸಿಕೊಂಡ ಮೊದಲ ಪ್ರಕರಣವಾಗಿದೆ.

ಹಕ್ಕಿ ಜ್ವರಕ್ಕೆ ಏವಿಯನ್​ ಇನ್​ಫ್ಲ್ಯೂಯೆಂಜಾ, H5N1 ಎಂದೂ ಕರೆಯುತ್ತಾರೆ. ಈ ವೈರಸ್​ ಹಕ್ಕಿಗಳಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ಮನುಷ್ಯರಿಗೂ ತಗುಲುತ್ತದೆ. ಹಾಗೇ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಇನ್ನು ಹಕ್ಕಿ ಜ್ವರ ಮನುಷ್ಯನಿಗೆ ತಗುಲುವುದು ತೀರ ಅಪರೂಪ. ಆದರೆ ಹಾಗೊಮ್ಮೆ ಕಾಣಿಸಿಕೊಂಡರೆ ಸಾವಿನ ಸಾಧ್ಯತೆ ಶೇ. 60ರಷ್ಟು ಇರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ತಿಳಿಸಿದೆ. ಹಕ್ಕಿಗಳ ಸಂಪರ್ಕಕ್ಕೆ ಬರುವ ಇತರ ಪ್ರಾಣಿಗಳು ಮತ್ತು ಮನುಷ್ಯರಿಗೆ ಈ ಸೋಂಕು ಹರಡುತ್ತದೆ. ಇದು ಸಾಂಕ್ರಾಮಿಕವಾಗಿರುವುದರಿಂದ ಜನ ಸಹಜವಾಗಿಯೇ ಹೆಚ್ಚು ಆತಂಕಕ್ಕೆ ಒಳಗಾಗುತ್ತಾರೆ. ಆದರೆ ಸೂಕ್ತ ಮುತುವರ್ಜಿ ವಹಿಸಿದರೆ ಪ್ರಾಣಾಪಾಯ ಉಂಟಾಗದಂತೆ ತಡೆಯಬಹುದಾಗಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: