ನವದೆಹಲಿ: ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಹಿಂದಿ ಬಿಗ್ಬಾಸ್ (Bigg Boss) ಸೀಸನ್ 16ರ 3ನೇ ರನ್ನರ್ ಅಪ್ ಆಗಿರುವ ಅರ್ಚನಾ ಗೌತಮ್, ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ (Priyanka Gandhi) ಪಿಎ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಿಯಾಂಕ ಗಾಂಧಿ ಪಿಎ ಸಂದೀಪ್ ಸಿಂಗ್ (Sandeep Singh) ತಮ್ಮ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ, ಜೊತೆಗೆ ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದು, ಈ ಬಗ್ಗೆ ಮೀರತ್ (Meerat) ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಫೆಬ್ರವರಿ 26 ರಂದು ಈ ಘಟನೆ ನಡೆದಿದ್ದು, ಅರ್ಚನಾ ಅವರ ತಂದೆ ಗೌತಮ್ ಬುದ್ಧ ನೀಡಿರುವ ದೂರಿನ ಮೇಲೆ ಎಫ್‌ಐಆರ್ ದಾಖಲಾಗಿದೆ.
ಜಾತಿ ನಿಂದನೆ ಆರೋಪ
ಅರ್ಚನಾ ತಂದೆ ಗೌತಮ್ ಬುದ್ಧ ಈ ಬಗ್ಗೆ ದೂರು ನೀಡಿದ್ದು, " ಪಶ್ಚಿಮ ಯುಪಿಯ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿಯಾಗಲು ಬಂದಿರುವುದಾಗಿ ನನ್ನ ಮಗಳು ಪ್ರಿಯಾಂಕ ಅವರ ಪಿಎ ಸಂದೀಪ್ ಸಿಂಗ್ಗೆ ಮನವಿ ಮಾಡಿದ್ದಾಳೆ. ಆದರೆ ಸಿಂಗ್ ಅರ್ಚನಾಳ ಮೇಲೆ ಜಾತಿನಿಂದನೆ ಪದಗಳನ್ನು ಬಳಿಸಿ, ಸ್ಥಳದಿಂದ ಹೊರಹೋಗುವಂತೆ ತಾಕೀತು ಮಾಡಿದ್ದಾನೆ. ಈ ಕುರಿತಾಗಿ ಮೀರತ್ ನಲ್ಲಿ ದೂರು ದಾಖಲಿಸಿದ್ದೇವೆ " ಎಂದು ತಿಳಿಸಿದ್ದಾರೆ.
ಜೀವ ಬೆದರಿಕೆ
ಕಾಂಗ್ರೆಸ್ ಸಮಾವೇಶಕ್ಕೆ ಸಂಬಂಧಿಸಿದಂತೆ ತನ್ನನ್ನು ಭೇಟಿಯಾಗುವಂತೆ ಅರ್ಚನಾಗೆ ಸ್ವತಃ ಪ್ರಿಯಾಂಕಾ ಗಾಂಧಿ ಆಹ್ವಾನ ನೀಡಿದ್ದರಂತೆ. ಈ ಆಹ್ವಾನದ ಹಿನ್ನೆಲೆಯಲ್ಲಿ ಅರ್ಚನಾ ರಾಯಪುರಕ್ಕೆ ತೆರಳಿದ್ದರು. ಆಗ ಪ್ರಿಯಾಂಕಾ ಅವರನ್ನು ಭೇಟಿ ಮಾಡಿಸಲು ಪಿಎ ಬಳಿ ಅರ್ಚನಾ ಕೇಳಿಕೊಂಡಿದ್ದಾರೆ, ಆದರೆ ಆತ ಅವಕಾಶ ನೀಡಲಿಲ್ಲ, ಇದರಿಂದ ಅರ್ಚನಾ ಅಸಮಾಧಾನಗೊಂಡಿದ್ದಾರೆ, ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಆಗ ಪ್ರಿಯಾಂಕ ಪಿಎ ಸಂದೀಪ್ ಸಿಂಗ್ ಕೆಟ್ಟ ಶಬ್ದಗಳಲ್ಲಿ ನಿಂದಿಸಿದ್ದಲ್ಲದೆ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹಿರಿಯ ಅಧಿಕಾರಿಗಳ ಮಧ್ಯಪ್ರವೇಶದ ನಂತರ ದೂರು
ಕಳೆದ ಒಂದು ವಾರದಿಂದ ಅರ್ಚನಾ ಅವರ ಕುಟುಂಬ ಸಂದೀಪ್ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸಲು ಪ್ರಯತ್ನಿಸಿದೆ, ಆದರೆ ಲೋಕಲ್ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಗೌತಮ್ ಬುದ್ಧ ದೂರಿದ್ದಾರೆ. " ನಾನು ನನ್ನ ಟ್ವಿಟ್ಟರ್ ಖಾತೆಯಲ್ಲಿ ಮೀರತ್‌ನಲ್ಲಿರುವ ಉನ್ನತ ಅಧಿಕಾರಿಗಳಿಗೆ ಮನವಿ ಮಾಡಿದೆ ಮತ್ತು ಈ ವಿಷಯದ ಬಗ್ಗೆ ಯುಪಿ ಮುಖ್ಯಮಂತ್ರಿಯ ಪೋರ್ಟಲ್ ಅನ್ನು ಟ್ಯಾಗ್ ಮಾಡಿದ್ದೇನೆ. ಹಿರಿಯ ಅಧಿಕಾರಿಗಳ ಮಧ್ಯಪ್ರವೇಶದ ನಂತರ ಪರ್ತಾಪುರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ " ಎಂದು ಹೇಳಿದ್ದಾರೆ.
ಛತ್ತಿಸ್ಗಢಕ್ಕೆ ಪ್ರಕರಣ ವರ್ಗಾವಣೆ
" ಅರ್ಚನಾ ಅವರ ತಂದೆ ನೀಡಿರುವ ದೂರಿನ ಆಧಾರದ ಮೇಲೆ ನಾವು ಎಫ್‌ಐಆರ್ ದಾಖಲಿಸಿದ್ದೇವೆ ಪರತಾಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಆದರೆ ಛತ್ತೀಸ್‌ಗಢದಲ್ಲಿ ಘಟನೆ ನಡೆದಿರುವುದರಿಂದ ಮುಂದಿನ ಕ್ರಮಕ್ಕಾಗಿ ಪ್ರಕರಣವನ್ನು ಆ ರಾಜ್ಯಕ್ಕೆ ವರ್ಗಾಯಿಸಲಾಗುವುದು. ಅವರ ಮಗಳಿಗೆ ನ್ಯಾಯ ಒದಗಿಸುವ ಜವಾಬ್ದಾರಿ ಛತ್ತೀಸ್‌ಗಢ ಪೊಲೀಸರ ಮೇಲಿದೆ " ಎಂದು ಮೀರತ್ ಎಸ್‌ಎಸ್‌ಪಿ ರೋಹಿತ್ ಸಿಂಗ್ ಸಜ್ವಾನ್ ತಿಳಿಸಿದ್ದಾರೆ.
ಪೊಲೀಸರು ಸಂದೀಪ್ ಸಿಂಗ್ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಇತರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅರ್ಚನಾ
ಅರ್ಚನಾ ಗೌತಮ್ ಮಾಜಿ ಬಿಗ್ ಬಾಸ್ ಸ್ಪರ್ಧಿ, ಜೊತೆಗೆ ಪ್ರತಿಷ್ಠಿತ ಮಾಡೆಲ್ ಆಗಿದ್ದಾರೆ. ಈಗಾಗಲೇ ಮಿಸ್ ಬಿಕಿನಿ ಇಂಡಿಯಾ, ಮಿಸ್ ಉತ್ತರ ಪ್ರದೇಶ ಕಿರೀಟ ಧರಿಸಿದ್ದಾರೆ. ಹಲವು ಚಿತ್ರಗಳಲ್ಲೂ ನಟಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಅವರು ಕಳೆದ ಬಾರಿ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲೂ ಸ್ಪರ್ಧೆ ಮಾಡಿದ್ದರು. ಪ್ರಿಯಾಂಕ ಗಾಂಧಿ ಬಯಸಿದರೆ ಮುಂದಿನ ಚುನಾವಣೆಯಲ್ಲೂ ಸ್ಪರ್ಧಿಸುತ್ತೇನೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಯಾರಿಗೂ ಹೆದರಲ್ಲ ಎಂದ ಅರ್ಚನಾ
ಕಾಂಗ್ರೆಸ್ ಸಮಾವೇಶದಲ್ಲಿ ನನ್ನ ಜೊತೆ ಕೆಟ್ಟದಾಗಿ ನಡೆದುಕೊಂಡ ಸಂದೀಪ್ ಸಿಂಗ್ಗೆ ಶಿಕ್ಷೆಯಾಗುತ್ತದೆ ಎಂದು ನಾನು ಭಾವಿಸಿದ್ದೇನೆ. ಈ ವಿಚಾರದಲ್ಲಿ ಹಿಂದೆ ಸರಿಯಲ್ಲ, ನಾನು ಯಾರಿಗೂ ಹೆದರುವುದಿಲ್ಲ ಎಂದು ಮೀರತ್‌ನಲ್ಲಿ ಅರ್ಚನಾ ಸುದ್ದಿಗಾರರಿಗೆ ತಿಳಿಸಿದ್ದಾರೆ. ಪ್ರಿಯಾಂಕ ಗಾಂಧಿಯವರೇ ಅರ್ಚನಾರನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅರ್ಚನಾಗೆ ಟಿಕೆಟ್ ದೊರೆಯುವಂತೆ ಮಾಡಿದ್ದರು. ಅರ್ಚನಾ 2 ಬಾರಿಯ ಬಿಜೆಪಿ ಶಾಸಕ ದಿನೇಶ್ ಕಾಟಿಕ್ ವಿರುದ್ಧ ಸ್ಪರ್ಧಿಸಿ ಕೇವಲ 1519 ಮತ ಪಡೆದು ಠೇವಣಿ ಕಳೆದುಕೊಂಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ