news18-kannada Updated:February 28, 2020, 9:36 AM IST
ತಾಹೀರ್ ಹುಸೇನ್
ನವದೆಹಲಿ(ಫೆ.28): ಎಎಪಿ ಕಾರ್ಪೋರೇಟರ್ ತಾಹಿರ್ ಹುಸೇನ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಗುಪ್ತಚರ ಬ್ಯೂರೋ (ಐಬಿ) ಉದ್ಯೋಗಿ ಅಂಕಿತ್ ಶರ್ಮಾ ಕೊಲೆ ಹಿಂದೆ ತಾಹೀರ್ ಹುಸೇನ್ ಕೈವಾಡವಿದೆ ಎಂದು ಆರೋಪಿಸಿ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಹೀಗಾಗಿ ಆಪ್ ಪಕ್ಷದಿಂದಲೇ ತಾಹೀರ್ನನ್ನು ಉಚ್ಚಾಟನೆ ಮಾಡಿ ಸಿಎಂ ಅರವಿಂದ್ ಕೇಜ್ರಿವಾಲ್ ಸುತ್ತೋಲೆ ಹೊರಡಿಸಿದ್ದಾರೆ.
ಇಂಟಲಿಜೆನ್ಸ್ ಬ್ಯೂರೋ ನೌಕರ ಅಂಕಿತ್ ಶರ್ಮಾ ಹತ್ಯೆಯಲ್ಲಿ ಎಎಪಿ ಕಾರ್ಪೊರೇಟರ್ ತಹೀರ್ ಹುಸೇನ್ ಸಹಚರರ ಕೈವಾಡ ಇದೆ ಎಂಬ ಆರೋಪ ಕೇಳಿ ಬದಿತ್ತು. ತಾಹೀರ್ ಹುಸೇನ್ ನಿವಾಸದ ಮೇಲೆ ಪೆಟ್ರೋಲ್ ಬಾಂಬ್ ಮತ್ತು ಕಲ್ಲುಗಳ ರಾಶಿ ಪತ್ತೆಯಾಗಿತ್ತು. ಗಲಭೆಕೋರರು ಹುಸೇನ್ ಮನೆಯ ಮೇಲಿಂದಲೇ ದಾಳಿ ಮಾಡುತ್ತಿದ್ದರು. ಕಳೆದ ಎರಡು ಮೂರು ದಿನಗಳಿಂದ ನಡೆಯುತ್ತಿರುವ ಗಲಭೆಯಲ್ಲಿ ದುಷ್ಕರ್ಮಿಗಳು ಇದೇ ಮನೆಯಿಂದ ಪೆಟ್ರೋಲ್ ಬಾಂಬ್, ಕಲ್ಲು, ಬಾಟಲ್ ತೂರಾಟ ಮಾಡುತ್ತಿದ್ದರು ಎಂದು ಪೊಲೀಸರು ಎಫ್ಐಆರ್ನಲ್ಲಿ ಉಲ್ಲೇಖಿಸಿದ್ದಾರೆ.
ದೆಹಲಿ ಹಿಂಸಾಚಾರದಲ್ಲಿ ಭಾಗಿ ಹಾಗೂ ಐಬಿ ಅಧಿಕಾರಿ ಅಂಕಿತ್ ಶರ್ಮಾ ಕೊಲೆಗೆ ಕುಮ್ಮಕ್ಕು ನೀಡಿದ ಆರೋಪ ಎದುರಿಸುತ್ತಿರುವ ಎಎಪಿ ಮುಖಂಡ ತಾಹೀರ್ ಹುಸೇನ್ಗಾಗಿ ಪೊಲೀಸರು ಶೋಧಕಾರ್ಯ ಆರಂಭಿಸಿದ್ದಾರೆ. ಈ ಮಧ್ಯೆಯೇ ತಮ್ಮ ವಿರುದ್ಧ ಮಾಡುತ್ತಿರುವ ಆರೋಪಗಳನ್ನು ನಿರಾಕರಿಸಿರುವ ಅವರು ನಾನು ಯಾವುದೇ ಹಿಂಸಾಚಾರಕ್ಕೆ ಉತ್ತೇಜನ ನೀಡಿರಲಿಲ್ಲ. ವಿನಾಃಕಾರಣ ನನ್ನನ್ನು ಸಿಕ್ಕಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರಚೋದನಕಾರಿ ಭಾಷಣ ಮಾಡಿದವರ ವಿರುದ್ಧ ಕ್ರಮದ ಬಗ್ಗೆ ಮಾಹಿತಿ; ಕೇಂದ್ರಕ್ಕೆ 1 ತಿಂಗಳ ಕಾಲಾವಕಾಶ; ಹೈಕೋರ್ಟ್
ಸಿಎಎ ಮತ್ತು ಎನ್ಆರ್ಸಿ ವಿರೋಧಿ ಗುಂಪುಗಳಿಂದ ಸಂಭವಿಸಿದ ಹಿಂಸಾಚಾರದಿಂದ ದೆಹಲಿಯಲ್ಲಿ ಇಲ್ಲಿಯವರೆಗೂ 38 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಸಾಯುವವರ ಸಂಖ್ಯೆ ಏರುತ್ತಲೇ ಇದೆ. 200ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಈ ನಡುವೆ ಹೈಕೋರ್ಟ್ ಆದೇಶದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 106 ಮಂದಿಯನ್ನು ಬಂಧಿಸಲಾಗಿದ್ದು, 18 ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂಸಾಚಾರದಲ್ಲಿ ಮೃತಪಟ್ಟ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ, ಗಾಯಗೊಂಡವರಿಗೆ ಚಿಕಿತ್ಸಾ ವೆಚ್ಚ ಭರಿಸಲಾಗುವುದು. ಮೃತಪಟ್ಟ ಪೊಲೀಸ್ ಕಾನ್ಸ್ಟೇಬಲ್ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಮತ್ತು ಕುಟುಂಬದ ಒಬ್ಬರಿಗೆ ಸರಕಾರಿ ನೌಕರಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.
First published:
February 28, 2020, 7:09 AM IST