‘ನಕಲಿ ಸುದ್ದಿಗಳ ಮೂಲ ಪತ್ತೆ ಹಚ್ಚಿ’: ವಾಟ್ಸಪ್​ ಸಂಸ್ಥೆಗೆ ಕೇಂದ್ರ ಸರ್ಕಾರ ಖಡಕ್​ ಸೂಚನೆ

Ganesh Nachikethu
Updated:August 22, 2018, 10:54 AM IST
‘ನಕಲಿ ಸುದ್ದಿಗಳ ಮೂಲ ಪತ್ತೆ ಹಚ್ಚಿ’: ವಾಟ್ಸಪ್​ ಸಂಸ್ಥೆಗೆ ಕೇಂದ್ರ ಸರ್ಕಾರ ಖಡಕ್​ ಸೂಚನೆ
Ganesh Nachikethu
Updated: August 22, 2018, 10:54 AM IST
ನ್ಯೂಸ್​-18 ಕನ್ನಡ

ನವದೆಹಲಿ(ಆಗಸ್ಟ್​.22): ವಾಟ್ಸಪ್​ನಲ್ಲಿ ಹರಿದಾಡುತ್ತಿರುವ ನಕಲಿ ಸುದ್ದಿಗಳಿಂದ ದೇಶದಲ್ಲಿ ಕೋಮು ಗಲಭೆ, ಗುಂಪು ಹಲ್ಲೆಗಳು ಹೆಚ್ಚಾಗುತ್ತಿವೆ. ಹೀಗಾಗಿ ಪ್ರಚೋದನಕಾರಿ ಸುದ್ದಿಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರ, ನಕಲಿ ಸಂದೇಶಗಳ ಜಾಲದ ಮೂಲ ಪತ್ತೆ ಹಚ್ಚಲು ತಾಂತ್ರಿಕ ಪರಿಹಾರ ಕಂಡುಕೊಳ್ಳುವಂತೆ ವಾಟ್ಸಪ್​ ಸಂಸ್ಥೆಗೆ ಸೂಚಿಸಿದೆ.

ವಾಟ್ಸಪ್​ ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಕ್ರಿಸ್‌ ಡೇನಿಯಲ್‌ ಅವರೊಂದಿಗೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಎಸ್‌.ರವಿಶಂಕರ್‌ ಪ್ರಸಾದ್‌ ಅವರು ಸಭೆ ನಡೆಸಿದ್ಧಾರೆ. ಬಳಿಕ ಮಾತನಾಡಿದ ಅವರು, ಡೇನಿಯಲ್‌ ಜತೆಗಿನ ಸಭೆ ಫಲಪ್ರದವಾಗಿದೆ. ನಾವು ನೀಡಿರುವ ಸೂಚನೆಗಳ ಅನುಸಾರ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ಧಾರೆ.

ವಾಟ್ಸಪ್​ನಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಬೇಕು. ನಕಲಿ ಸಂದೇಶಗಳ ಮೂಲ ಪತ್ತೆ ಹಚ್ಚಲು ಪ್ರತ್ಯೇಕ ವಿಭಾಗವೊಂದನ್ನು ತೆರೆಯಬೇಕು. ಬಳಕೆದಾರರ ಸಮಸ್ಯೆಗಳನ್ನು ಆಲಿಸಲು ಅಧಿಕಾರಿಗಳನ್ನು ನೇಮಿಸಬೇಕು. ಸಂದೇಶ ರವಾನಿಸುವ ವ್ಯಕ್ತಿಯ ಸುಳಿವು ಕಂಡು ಹಿಡಿಯಬೇಕು ಎಂದು ನಿರ್ದೇಶನ ನೀಡಿದೆ.

ನಕಲಿ ಸುದ್ದಿಗಳಿಂದ ವದಂತಿಗಳು ಹೆಚ್ಚುತ್ತಿದ್ದು, ಅಹಿತಕರ ಘಟನೆಗಳಿಗೂ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ವದಂತಿಗಳನ್ನು ಗುರ್ತಿಸುವಂಥ ಹೊಸ ಆ್ಯಪ್‌ ಅಭಿವೃದ್ಧಿ ಪಡಿಸಲು ದಿಲ್ಲಿಯ ಸ್ಥಳೀಯ ತಾಂತ್ರಿಕ ಸಂಸ್ಥೆಯ ತಜ್ಞರು ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ''ದೇಶದಲ್ಲಿ ವಾಟ್ಸಾಪ್‌ನ ವದಂತಿಯಿಂದ ವ್ಯಕ್ತಿಗಳ ಮೇಲೆ ಗುಂಪು ಹಲ್ಲೆ ನಡೆಯುತ್ತಿವೆ. ಇಂಥದ್ದನ್ನು ತಪ್ಪಿಸಲು ನಮ್ಮ ಆ್ಯಪ್‌ ಸಹಾಯಕವಾಗಲಿದೆ. ಸುಳ್ಳು ಸಂದೇಶ, ಸುದ್ದಿಗಳನ್ನು ಡೇಟಾ ಬೇಸ್‌ನಿಂದ ವಿಶ್ಲೇಷಿಸಿ ಗುರ್ತಿಸುವ ಸಾಮರ್ಥ್ಯ‌ವನ್ನು ಆ್ಯಪ್‌ಗೆ ನೀಡಲಿದ್ದೇವೆ,'' ಎಂದು ಹೇಳಲಾಗಿತ್ತು.
Loading...

ಫೇಸ್​ಬುಕ್ ಒಡೆತನದ ವಾಟ್ಸಪ್​​ ಸಂಸ್ಥೆ ದೇಶದ ಡಿಜಿಟಲ್ ವ್ಯವಸ್ಥೆಗೆ ಅಪಾರ ಕೊಡುಗೆ ನೀಡಿದೆ. ಆದರೆ, ಅಶ್ಲೀಲ ಚಿತ್ರ ಮತ್ತು ವಿಡಿಯೊ ಪ್ರಸಾರಕ್ಕೆ ವಾಟ್ಸಪ್​ ವೇದಿಯಾಗಿ ಗುಂಪು ಹತ್ಯೆಗೆ ಪ್ರಚೋದನೆ ನೀಡುತ್ತಿದೆ. ಈ ರೀತಿ ಪ್ರತೀಕಾರ ತೀರಿಸಿಕೊಳ್ಳುವುದು ದೇಶದ ಕಾನೂನಿಗೆ ವಿರುದ್ಧ. ಹೀಗಾಗಿ ಕೆಟ್ಟ ಬೆಳವಣಿಗೆಗೆ ವೇದಿಕೆ ಒದಗಿಸದಂತೆ ಸಂಸ್ಥೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

'ಸುಳ್ಳು ಸಂದೇಶಗಳ ಕಡಿವಾಣಕ್ಕೆ ಕ್ರಮ ತೆಗೆದುಕೊಳ್ಳದಿದ್ದರೆ, ಕೇಂದ್ರ ಸರ್ಕಾರ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ ಎಂದು ಕೇಂದ್ರ ಸಚಿವರು ಎಚ್ಚರಿಕೆ ನೀಡಿದ್ಧಾರೆ ಎನ್ನಲಾಗಿದೆ. ಈಗಾಗಲೇ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದು, ಕೇಂದ್ರ ಸರ್ಕಾರ ನಿರ್ದೇಶನಕ್ಕೆ ವಾಟ್ಸಪ್​ ಸಂಸ್ಥೆಯ ಪರವಾಗಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಕ್ರಿಸ್‌ ಡೇನಿಯಲ್‌ ಸಮ್ಮತಿ ಸೂಚಿಸಿದ್ಧಾರೆ.
First published:August 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...