HR RameshHR Ramesh
|
news18-kannada Updated:February 10, 2020, 7:20 PM IST
ಕೆಂಪು ಬಟ್ಟೆಯೊಳಗೆ ಸುತ್ತಿದ ಬಜೆಟ್ ಕಡತಗಳೊಂದಿಗೆ ಸಚಿವೆ ನಿರ್ಮಲಾ ಸೀತಾರಾಮನ್
ನವದೆಹಲಿ: 2020-21 ನೇ ಸಾಲಿನ ಬಹುನಿರೀಕ್ಷೆಯ ಕೇಂದ್ರ ಬಜೆಟ್ ಇಂದು ಮಂಡನೆಯಾಗಲಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಎರಡನೇ ಅವಧಿಯ ಮೊದಲ ಪೂರ್ಣಪ್ರಮಾಣದ ಮುಂಗಡ ಪತ್ರವನ್ನುಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಬೆಳಗ್ಗೆ 11 ಗಂಟೆಗೆ ಮುಂಗಡ ಪತ್ರ ಓದಲು ಆರಂಭಿಸಲಿದ್ಧಾರೆ. ನಿರ್ಮಲಾ ಸೀತಾರಾಮನ್ ಅವರಿಗೆ ಇದು ಎರಡನೇ ಬಜೆಟ್ ಮಂಡನೆಯಾಗಿದೆ.
ಕೇಂದ್ರ ಬಜೆಟ್ ಎಂದರೆ ಆಯವ್ಯಯ ಪತ್ರ ಅಥವಾ ಮುಂಗಡ ಪತ್ರ. 2020 ಏಪ್ರಿಲ್ 1ರಿಂದ 2021 ಮಾರ್ಚ್ 31ರ ಅವಧಿಯವರೆಗಿನ ಸರ್ಕಾರದ ಆಯ ಮತ್ತು ವ್ಯಯ (ಆದಾಯ ಮತ್ತು ಖರ್ಚು) ಅಂದಾಜು ಮಾಡುವುದೇ ಈ ಬಜೆಟ್ನ ಉದ್ದೇಶ. ಸರ್ಕಾರದ ಎಲ್ಲಾ ಆದಾಯಮೂಲಗಳಿಂದ ಬರುವ ಆದಾಯಗಳ ವಿವರವನ್ನ ಈ ಬಜೆಟ್ನಲ್ಲಿ ನೀಡಲಾಗುತ್ತದೆ. ಹಾಗೆಯೇ, ವಿವಿಧ ಕಾರ್ಯಗಳಿಗೆ, ವಿವಿಧ ಇಲಾಖೆಗಳಿಗೆ ನಿರ್ದಿಷ್ಟ ಹಣ ನೀಡುವುದು ಸೇರಿದಂತೆ ಸರ್ಕಾರ ಮಾಡುವ ಎಲ್ಲಾ ಖರ್ಚುಗಳನ್ನೂ ಇಲ್ಲಿ ವಿವರಿಸಲಾಗುತ್ತದೆ. ಮುಂದಿನ ಹಣಕಾಸು ವರ್ಷಕ್ಕೆ ಅಂದಾಜುಪಟ್ಟಿಯನ್ನೂ ಮಾಡಲಾಗುತ್ತದೆ.
ಬಜೆಟ್ ಅಧಿವೇಶನದ ಮೊದಲ ದಿನವಾದ ಶುಕ್ರವಾರ ಸಂಪ್ರದಾಯದಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಿದರು. ಜಗತ್ತಿನ ಆರ್ಥಿಕ ಪರಿಸ್ಥಿತಿಯನ್ನು ಭಾರತಕ್ಕೆ ಪೂರಕವಾಗಿ ಹೇಗೆ ಬಳಸಿಕೊಳ್ಳಬೇಕು ಎನ್ನುವ ಬಗ್ಗೆ ನಾವು ಯೋಚಿಸಬೇಕಿದೆ ಎಂದು ರಾಷ್ಟ್ರಪತಿ ತಮ್ಮ ಭಾಷಣದಲ್ಲಿ ಹೇಳಿದ್ದು, ಬಜೆಟ್ ಮೇಲೆ ಹೊಸ ಆಶಕಿರಣ ಹುಟ್ಟುಹಾಕಿದೆ.
ಇಂದು ಮಂಡನೆಯಾಗಲಿರುವ ಬಜೆಟ್ನಲ್ಲಿ ತೆರಿಗೆ ಕಡಿತಗೊಳಿಸಬಹುದು ಎಂದು ನಿರೀಕ್ಷಿಸಲಾಗಿದೆ. ವಾರ್ಷಿಕ ಆದಾಯ 7 ಲಕ್ಷ ರೂಪಾಯಿ ಆದಾಯ ಇರುವವರಿಗೆ ಶೇ.5ರಷ್ಟು ತೆರಿಗೆ, 7 ಲಕ್ಷದಿಂದ 10 ಲಕ್ಷದವರೆಗೆ ಆದಾಯ ಇರುವವರು ಶೇ.10ರಷ್ಟು, 10 ಲಕ್ಷದಿಂದ 20 ಲಕ್ಷ ಆದಾಯ ಪಡೆಯುವವರಿಗೆ ಶೇ.20ರಷ್ಟು ಹಾಗೂ 20 ಲಕ್ಷಕ್ಕಿಂತ ಅಧಿಕ ಆದಾಯ ಹೊಂದಿರುವವರಿಗೆ ಶೇ.30ರಷ್ಟು ತೆರಿಗೆ ವಿಧಿಸುವ ಸಾಧ್ಯತೆ ಇದೆ. 5ಲಕ್ಷದವರೆಗೆ ಆದಾಯ ಹೊಂದಿರುವವರನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿರಿಸುವ ಪ್ರಸ್ತಾವನೆ ಈ ಬಾರಿಯ ಬಜೆಟ್ನಲ್ಲಿ ಇದೆ ಎನ್ನಲಾಗಿದೆ. ಕಳೆದ ವರ್ಷದ ಬಜೆಟ್ನಲ್ಲಿ 2.5 ಲಕ್ಷದವರೆಗಿನ ವ್ಯಕ್ತಿ ಆದಾಯಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡಲಾಗಿತ್ತು.
ಇದನ್ನು ಓದಿ: Budget 2020: ಬಜೆಟ್ನಿಂದ ದೇಶದ ಕೃಷಿ ಕ್ಷೇತ್ರದ ನಿರೀಕ್ಷೆಗಳೇನು?
ಕೃಷಿ ಆದಾಯವನ್ನು ದ್ವಿಗುಣಗೊಳಿಸುವ ಗುರಿ ಇಟ್ಟುಕೊಂಡಿರುವ ಕೇಂದ್ರ ಸರ್ಕಾರಕ್ಕೆ ಈ ಕ್ಷೇತ್ರ ಎಲ್ಲಕ್ಕಿಂತ ಹೆಚ್ಚು ಸವಾಲಿನದ್ದಾಗಿದೆ. ಈ ಬಜೆಟ್ನಲ್ಲಿ ಕೃಷಿ ವಲಯದಲ್ಲಿ ಹೆಚ್ಚಿನ ಸುಧಾರಣೆ ಮತ್ತು ಮಾರುಕಟ್ಟೆ ವ್ಯವಸ್ಥೆ ಸುದೃಢಗೊಳಿಸುವುದಕ್ಕೆ ಒತ್ತು ಕೊಡಲಿದೆ ಎಂದು ನಿರೀಕ್ಷಿಸಲಾಗಿದೆ. ಜೊತೆಗೆ ಉದ್ಯಮ ಕ್ಷೇತ್ರ, ಆಟೋಮೊಬೈಲ್ ಕ್ಷೇತ್ರಗಳ ಚೇತರಿಕೆಗೆ ಹಲವು ಕ್ರಮಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯೂ ಇದೆ.
First published:
February 1, 2020, 7:03 AM IST