news18-kannada Updated:November 12, 2020, 2:57 PM IST
ನಿರ್ಮಲಾ ಸೀತಾರಾಮನ್
ನವದೆಹಲಿ (ನ. 12): ಭಾರತದ ಆರ್ಥಿಕಾಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಕೈಗೊಂಡಿದ್ದ ಹಲವು ಯೋಜನೆಗಳು ಫಲ ನೀಡಿವೆ. ಇದರಿಂದ ಆರ್ಥಿಕ ಸುಧಾರಣೆಯಾಗುತ್ತಿದೆ ಎಂದಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಹೊಸ ಉದ್ಯೋಗ ಸೃಷ್ಟಿಗೆ ಆತ್ಮನಿರ್ಭರ್ ಭಾರತ್ ರೋಜಗಾರ್ ಯೋಜನೆಯನ್ನು ಘೋಷಿಸಿರುವ ಸಚಿವೆ ನಿರ್ಮಲಾ ಸೀತಾರಾಮನ್ ನೌಕರರಿಗೆ ಇಪಿಎಫ್ ಸೌಲಭ್ಯ ಒದಗಿಸುವುದಾಗಿ ತಿಳಿಸಿದ್ದಾರೆ. ಕಳೆದ ಮಾರ್ಚ್ ತಿಂಗಳಿನಿಂದ ಸೆಪ್ಟೆಂಬರ್ವರೆಗೆ ಉದ್ಯೋಗ ಕಳೆದುಕೊಂಡ, ತಿಂಗಳಿಗೆ 15 ಸಾವಿರ ರೂ.ಗೂ ಕಡಿಮೆ ವೇತನ ಪಡೆಯುವ ಉದ್ಯೋಗಿಗಳಿಗೂ ಇಪಿಎಫ್ ಸೌಲಭ್ಯ ಸಿಗಲಿದೆ ಎಂದು ಅವರು ಘೋಷಿಸಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಇಪಿಎಫ್ಓನಲ್ಲಿ ರಿಜಿಸ್ಟರ್ ಆಗಿರುವ ಕಂಪನಿಯ ಹೊಸ ಉದ್ಯೋಗಿಗಳಿಗೆ ಪಿಎಫ್ ಸಬ್ಸಿಡಿಯನ್ನು ಘೋಷಿಸಿದ್ದಾರೆ. 1,000 ಅಥವಾ ಅದಕ್ಕಿಂತ ಕಡಿಮೆ ನೌಕರರಿರುವ ಕಂಪನಿಗಳಿಗೆ ಮುಂದಿನ 2 ವರ್ಷಗಳ ಕಾಲ ಪಿಎಫ್ ಸಬ್ಸಿಡಿ ಸಿಗಲಿದೆ. ಶೇ. 12ರಷ್ಟು ಕಂಪನಿ ಮತ್ತು ಶೇ. 12ರಷ್ಟು ಉದ್ಯೋಗಿಯ ಪಿಎಫ್ ಮೊತ್ತವನ್ನು ಸರ್ಕಾರವೇ ಭರಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: Nirmala Sitharaman Press Conference: ದೇಶದ ಆರ್ಥಿಕತೆ ಚೇತರಿಕೆ ಕಾಣುತ್ತಿದೆ; ನಿರ್ಮಲಾ ಸೀತಾರಾಮನ್ಹಾಗೇ, 2021ರ ಮಾರ್ಚ್ ವೇಳೆಗೆ ಎಂಎಸ್ಎಂಐ ಕ್ಷೇತ್ರಗಳ ಪುನಶ್ಚೇತನಕ್ಕಾಗಿ ಸಾಲ ಗ್ಯಾರಂಟಿ ವಿಸ್ತರಣೆ ಮಾಡಲಾಗುವುದು. ಇದರಿಂದ ಉದ್ಯೋಗ ಸೃಷ್ಟಿ ಹೆಚ್ಚಲಿದ್ದು, ನಿರುದ್ಯೋಗಿಗಳಿಗೆ ಕೆಲಸ ಸಿಗಲಿದೆ ಎಂದಿರುವ ಸಚಿವೆ ನಿರ್ಮಲಾ ಸೀತಾರಾಮನ್ ಮೊಬೈಲ್ ಉತ್ಪಾದನೆ, ಔಷಧ ಉತ್ಪಾದನೆ ಮತ್ತಿತರ 10 ಕ್ಷೇತ್ರಗಳಿಗೆ ಪಿಎಲ್ಐಎಸ್ ಯೋಜನೆಯನ್ನು ಕೂಡ ಘೋಷಿಸಿದ್ದಾರೆ.
ಇದೇ ವೇಳೆ ಕೇಂದ್ರ ಸರ್ಕಾರದಿಂದ ರೈತರಿಗೆ ನೀಡಿದ ಸಹಾಯದ ಬಗ್ಗೆ ಮಾತನಾಡಿದ ಅವರು, "NABARD ಮೂಲಕ ಹೆಚ್ಚುವರಿ ತುರ್ತು ಕೆಲಸಕ್ಕೆ ಬಂಡವಾಳ ನಿಧಿಯಿಂದ ರೈತರಿಗೆ 25,000 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ. ಕೆಳ ಹಂತದಲ್ಲಿ ರೈತರಿಗೆ ಹಣ ಸಿಗುವಂತೆ ಮಾಡಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ಗಳ ಮೂಲಕ 2.5 ಕೋಟಿ ರೈತರಿಗೆ ರೈತರಿಗೆ 1.4 ಲಕ್ಷ ಕೋಟಿ ರೂ. ವಿತರಿಸಲಾಗಿದೆ ಎಂದಿದ್ದಾರೆ.
Published by:
Sushma Chakre
First published:
November 12, 2020, 2:28 PM IST