Crime News: ಮಗಳಿಗೆ ಆಸ್ಪತ್ರೆಯಲ್ಲೇ ವಿಷದ ಇಂಜೆಕ್ಷನ್ ಕೊಡಲು ತಂದೆಯಿಂದಲೇ ಸುಪಾರಿ! ಏಕೆ?

 ಮಗಳು ತನ್ನ ಪ್ರಿಯಕರನೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಲಿಲ್ಲ ಎಂಬ ದ್ವೇಷದಿಂದ ಉತ್ತರ ಪ್ರದೇಶದ ಮೀರತ್​ ಜಿಲ್ಲೆಯಲ್ಲಿ ತಂದೆಯೇ ಮಗಳನ್ನು ಕೊಲೆ ಮಾಡಲು ಸುಪಾರಿ ಕೊಟ್ಟಿದ್ದಾನೆ.

 ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮೀರತ್, ಯುಪಿ: ಮಕ್ಕಳ ಅಂತರ್ಜಾತಿ (Inter Caste Marriage) , ಅಂತರ್​ ಮತೀಯ ಮದುವೆಗಳನ್ನು (Inter Religion Marriage) ವಿರೋಧಿಸುವ ಪೋಷಕರು ಹೆತ್ತ ಮಕ್ಕಳನ್ನೇ ಅದಕ್ಕಾಗಿ ಕೊಲ್ಲುವ ಮರ್ಯಾದಾ ಹತ್ಯೆ (Maryada Hatya) ಪ್ರಕರಣ ದಿನೇ ದಿನೇ ಹೆಚ್ಚುತ್ತಲೇ ಇವೆ. ಇದೇ ರೀತಿಯ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.  17 ವರ್ಷ ಮಗಳು ಪ್ರೀತಿಸಿದವನನ್ನು ಬಿಡುತ್ತಿಲ್ಲ, ತನ್ನ ಮಾತು ಕೇಳುತ್ತಿಲ್ಲ ಎಂದು ತಂದೆಯೇ ಮಗಳನ್ನು ಕೊಲ್ಲಲು ಮುಂದಾಗಿದ್ದಾನೆ.  ಮಗಳು ತನ್ನ ಪ್ರಿಯಕರನೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಲಿಲ್ಲ ಎಂಬ ದ್ವೇಷದಿಂದ ಉತ್ತರ ಪ್ರದೇಶದ ಮೀರತ್​ ಜಿಲ್ಲೆಯಲ್ಲಿ ತಂದೆಯೇ ಮಗಳನ್ನು ಕೊಲೆ ಮಾಡಲು ಸುಪಾರಿ ಕೊಟ್ಟಿದ್ದಾನೆ. ಆಸ್ಪತ್ರೆಯ ವಾರ್ಡ್ ಬಾಯ್‌ಗೆ ಮಗಳನ್ನು ಕೊಲ್ಲುವ ಸುಪಾರಿ ನೀಡಿದ್ದಾನೆ. ಆತ 17 ವರ್ಷದ ಮಗಳಿಗೆ ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್ ಕ್ಲೋರೈಡ್ ಅನ್ನು ಚುಚ್ಚು ಮದ್ದಿನ ಮೂಲಕ ನೀಡಿದ್ದಾನೆ ಎಂದು  ಪೊಲೀಸರು ತಿಳಿಸಿದ್ದಾರೆ.

ಬಾಲಕಿಯ ಆರೋಗ್ಯದಲ್ಲಿ ಏಕಾಏಕಿ ಏರುಪೇರು

ಆಕೆಯ ಆರೋಗ್ಯ ಸ್ಥಿತಿ ಹಠಾತ್ ಹದಗೆಟ್ಟ ನಂತರ, ಆಸ್ಪತ್ರೆಯ ವೈದ್ಯರು ಆಕೆಗೆ ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್ ಕ್ಲೋರೈಡ್ ಅನ್ನು ಚುಚ್ಚುಮದ್ದು ನೀಡಿರುವುದನ್ನು ಕಂಡುಹಿಡಿದರು ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯ ತಂದೆ ನವೀನ್ ಕುಮಾರ್, ವಾರ್ಡ್ ಬಾಯ್ ನರೇಶ್ ಕುಮಾರ್ ಮತ್ತು ಮಹಿಳಾ ಉದ್ಯೋಗಿ ಕೊಲೆ ಯತ್ನದಲ್ಲಿ ಭಾಗಿಯಾ್ಗಿದ್ದಾರೆ. ಶನಿವಾರ ನಡೆದ ಘಟನೆಗೆ ಸಂಬಂಧಿಸಿದಂತೆ ಈ ಮೂವರನ್ನು ಬಂಧಿಸಲಾಗಿದೆ.

ಸಿಸಿಟಿವಿಯಲ್ಲಿ ಇಂಜೆಕ್ಷನ್​ ನೀಡುತ್ತಿರುವುದು ಸೆರೆ

ಶುಕ್ರವಾರ ರಾತ್ರಿ ನವೀನ್ ಕುಮಾರ್ ತಮ್ಮ ಮಗಳನ್ನು ಕಂಕರಖೇಡದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೆಲವು ಗಂಟೆಗಳ ನಂತರ, ಅವರು ಅವಳನ್ನು ಮೋದಿಪುರಂನ ಫ್ಯೂಚರ್ ಪ್ಲಸ್ ಆಸ್ಪತ್ರೆಗೆ ಸ್ಥಳಾಂತರಿಸಿದರು. ಅಲ್ಲಿ ಆಕೆಯ ಆರೋಗ್ಯವು ಇದ್ದಕ್ಕಿದ್ದಂತೆ ಹದಗೆಟ್ಟಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಆಕೆಗೆ ಚುಚ್ಚುಮದ್ದು ನೀಡಿದ ವ್ಯಕ್ತಿಯ ಗುರುತು ಪತ್ತೆ ಮಾಡಲಾಗಿದ್ದು, ವಾರ್ಡ್ ಬಾಯ್ ನರೇಶ್ ಕುಮಾರ್ ನನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: Tattoo ಹಾಕಿಸಿಕೊಳ್ಳೋರೇ ಎಚ್ಚರ, ಟ್ಯಾಟೂ ಹಾಕಿಸಿಕೊಂಡ ಇಬ್ಬರಿಗೆ ಎಚ್​ಐವಿ ಸೋಂಕು!

ವೈದ್ಯರ ಸೋಗಿನಲ್ಲಿ ಐಸಿಯುಗೆ ಎಂಟ್ರಿ

ಬಾಲಕಿಯನ್ನು ಕೊಲ್ಲಲು ಬಾಲಕಿಯ ತಂದೆ ₹ 1 ಲಕ್ಷ ನೀಡಿದ್ದರು ಎಂದು ವಾರ್ಡ್ ಬಾಯ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ವೈದ್ಯನಂತೆ ನಟಿಸಿ ಆಸ್ಪತ್ರೆಯ ಮಹಿಳಾ ಉದ್ಯೋಗಿಯ ಸಹಾಯದಿಂದ ಐಸಿಯುಗೆ ಪ್ರವೇಶಿಸಿ ಚುಚ್ಚುಮದ್ದನ್ನು ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆಸ್ಪತ್ರೆಯ ಮಹಿಳಾ ಉದ್ಯೋಗಿ ಮತ್ತು ತಂದೆಯನ್ನು ಸಹ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಕೊನೆಗೆ ಸತ್ಯ ಒಪ್ಪಿಕೊಂಡ ಪಾಪಿ ತಂದೆ

ತನ್ನ ಮಗಳು ಒಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಾಳೆ. ಅವಳ ಕುಟುಂಬ ಸದಸ್ಯರಿಂದ ಪದೇ ಪದೇ ವಿನಂತಿಸಿದ ನಂತರವೂ ಅವನೊಂದಿಗೆ ಸಂಬಂಧವನ್ನು ಕಡಿದುಕೊಳ್ಳಲು ಸಿದ್ಧರಿರಲಿಲ್ಲ. ಹೀಗಾಗಿ ಕೊಲ್ಲಲು ಮುಂದಾಗಿದ್ದೆ ಎಂದು ನವೀನ್ ಕುಮಾರ್ ಪೊಲೀಸರಿಗೆ ತಿಳಿಸಿದ್ದಾರೆ. ತನ್ನ ಮಗಳು ತಮ್ಮ ಮನೆಯ ಟೆರೇಸ್‌ನಿಂದ ಆಕಸ್ಮಿಕವಾಗಿ ಬಿದ್ದಿದ್ದಾಳೆ ಎಂದು ಆಸ್ಪತ್ರೆಯ ವೈದ್ಯರಿಗೆ ತಿಳಿಸಿದ್ದನು. ಆದರೆ ವಾಸ್ತವದಲ್ಲಿ ಅವಳು ಟೆರೇಸ್‌ನಿಂದ ಜಿಗಿದಿದ್ದಾಳೆ ಎಂದು ನಂತರ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ಪೊಲೀಸರು ವಾರ್ಡ್ ಬಾಯ್‌ನಿಂದ ಪೊಟ್ಯಾಸಿಯಮ್ ಕ್ಲೋರೈಡ್ ಹೊಂದಿರುವ ಒಡೆದ ಸಿರಿಂಜ್ ಮತ್ತು ₹ 90,000 ನಗದನ್ನು ವಶಪಡಿಸಿಕೊಂಡಿದ್ದಾರೆ.
Published by:Kavya V
First published: