ನವದೆಹಲಿ: ಕೇಂದ್ರ ಸರ್ಕಾರ ತಂದಿರುವ ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಪ್ರತಿನಿಧಿಗಳೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ತಡರಾತ್ರಿವರೆಗೂ ನಡೆಸಿದ ‘ಅನೌಪಚಾರಿಕ ಮಾತುಕತೆ’ ವಿಫಲವಾಗಿದ್ದು ಬಿಕ್ಕಟ್ಟು ಮುಂದುವರೆದಿದೆ.
ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ರೈತರು ನವೆಂಬರ್ 26ರಿಂದ ಪ್ರತಿಭಟನೆ ನಡೆಸುತ್ತಿದ್ದು ಇದು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಕಿಸಾನ್ ಸಂಯುಕ್ತ ಮೋರ್ಚಾ ಮಂಗಳವಾರ ಕರೆ ಕೊಟ್ಟಿದ್ದ 'ಭಾರತ್ ಬಂದ್'ಗೆ ಕೂಡ ಯಶಸ್ವಿಯಾಗಿದೆ. ಇದೇ ವಿಷಯವಾಗಿ ವಿಪಕ್ಷಗಳು ಒಗ್ಗಟ್ಟಾಗುತ್ತಿವೆ. ಹೀಗೆ ಸಮಸ್ಯೆಗೆ ಸರಮಾಲೆ ಉದ್ದವಾಗುತ್ತಿರುವುದರಿಂದ ಆತಂಕಕ್ಕೀಡಾದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ರೈತ ಸಂಘಟನೆಗಳ 13 ಪ್ರತಿನಿಧಿಗಳ ಜೊತೆ ನಡೆಸಿದ ‘ಅನೌಪಚಾರಿಕ ಮಾತುಕತೆ’ ನಡೆಸಿದರು. ಆದರೆ ಅಮಿತ್ ಶಾ 'ಮಧ್ಯಸ್ಥಿಕೆ' ಕೂಡ ವಿಫಲವಾಗಿದೆ.
ಅಮಿತ್ ಶಾ ಎದುರು ಪಟ್ಟುಬಿಡದ ರೈತರು ಕೇಂದ್ರ ಸರ್ಕಾರ ಕೃಷಿ ಕಾನೂನುಗಳಿಗೆ ತಂದಿರುವ ತಿದ್ದುಪಡಿಯನ್ನು ಹಿಂಪಡೆಯಲೇಬೇಕೆಂದು ಆಗ್ರಹಿಸಿದ್ದಾರೆ. ಆದರೆ ಕೃಷಿ ಕಾನೂನುಗಳನ್ನು ಹಿಂಪಡೆಯಲು ಅಮಿತ್ ಶಾ ಒಪ್ಪಿಲ್ಲ. ಪರಸ್ಪರ ಒಮ್ಮತ ಮೂಡದೆ ಮಾತುಕತೆ ಮುರಿದುಬಿದ್ದಿದೆ ಎಂದು ತಿಳಿದುಬಂದಿದೆ.
ಅಧಿಕೃತ ಸಭೆಗೆ ರೈತರ ಬಹಿಷ್ಕಾರ:
ಅಮಿತ್ ಶಾ ನಡೆಸಿದ ‘ಅನೌಪಚಾರಿಕ ಮಾತುಕತೆ’ ವಿಫಲವಾದ ಹಿನ್ನೆಲೆಯಲ್ಲಿ ರೈತರು ಬುಧವಾರ ಕೇಂದ್ರ ಸರ್ಕಾರ ಅಧಿಕೃತವಾಗಿ ಕರೆದಿದ್ದ 6ನೇ ಸಭೆಯನ್ನು ಬಹಿಷ್ಕರಿಸಿದ್ದಾರೆ. ಇಂದು ದೆಹಲಿಯ ವಿಜ್ಞಾನ ಭವನದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್ ನೇತೃತ್ವದಲ್ಲಿ 35 ರೈತ ಸಂಘಟನೆಗಳ ಪ್ರತಿನಿಧಿಗಳು ಮತ್ತು ಕೇಂದ್ರ ಸರ್ಕಾರದ ನಡುವೆ ಅಧಿಕೃತವಾದ ಸಭೆ ನಿಗಧಿಯಾಗಿತ್ತು.
ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್ ನೇತೃತ್ವದಲ್ಲಿ ಈಗಾಗಲೇ ರೈತ ಪ್ರತಿನಿಧಿಗಳು ಹಾಗೂ ಕೇಂದ್ರ ಸರ್ಕಾರದ ನಡುವೆ 5 ಸಭೆಗಳಾಗಿದ್ದವು. 5 ಸಭೆಗಳೂ ವಿಫಲವಾಗಿದ್ದ ಹಿನ್ನೆಲೆಯಲ್ಲಿ ಡಿಸೆಂಬರ್ 9ರಂದು (ಬುಧವಾರ) 6ನೇ ಸಭೆ ಕರೆಯಲಾಗಿತ್ತು. ಆದರೆ ಅಮಿತ್ ಶಾ ಅವರ ಮಾತುಗಳಲ್ಲಿ ಕೇಂದ್ರ ಸರ್ಕಾರ ಕೃಷಿ ಕಾನೂನುಗಳನ್ನು ವಾಪಸ್ ಪಡೆಯಲು ಸಿದ್ದವಿಲ್ಲ ಎಂಬ ಸುಳಿವು ಸಿಗುತ್ತಿದ್ದಂತೆ ರೈತರು ಕೇಂದ್ರ ಸರ್ಕಾರದ 6ನೇ ಅಧಿಕೃತ ಸಭೆಯನ್ನು ಬಹಿಷ್ಕರಿಸಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಈ ಕೃಷಿ ಕಾನೂನುಗಳನ್ನು ಕಾಂಗ್ರೆಸ್ ಸಹ ತರಲು ಬಯಸಿತ್ತು ಎಂದಿದ್ದ ಸಚಿವ ರವಿಶಂಕರ್ಗೆ ಶರದ್ ಪವಾರ್ ತಿರುಗೇಟು
ಸಿಂಘು ಗಡಿಯಲ್ಲಿ ರೈತರ ಸಭೆ:
ಒಂದೆಡೆ ಅಮಿತ್ ಶಾ ಜೊತೆ ನಡೆಸಿದ ‘ಅನೌಪಚಾರಿಕ ಮಾತುಕತೆ’ ವಿಫಲವಾಗಿರುವುದರಿಂದ ಜೊತೆಗೆ ತಾವೇ ಕೇಂದ್ರ ಸರ್ಕಾರದ ಅಧಿಕೃತ ಸಭೆಯನ್ನು ಬಹಿಷ್ಕರಿಸುವುದರಿಂದ ಮುಂದಿನ ಹೋರಾಟದ ಬಗ್ಗೆ ಚರ್ಚಿಸಲು ಇಂದು ಪ್ರತಿಭಟನೆ ನಡೆಯುತ್ತಿರುವ ದೆಹಲಿಯ ಸಿಂಘು ಗಡಿಯಲ್ಲಿ ಸಭೆ ಕರೆಯಲಾಗಿದೆ.
ಸಿಂಘು ಗಡಿಯಲ್ಲಿ ಮಧ್ಯಾಹ್ನ 12 ಗಂಟೆಗೆ ಸಭೆ ಕರೆಯಲಾಗಿದ್ದು ಅಲ್ಲಿ ಮಂಗಳವಾರ 'ಭಾರತ್ ಬಂದ್' ಗೆ ಕರೆ ಕೊಟ್ಟಿದ್ದ ಕಿಸಾನ್ ಸಂಯುಕ್ತ ಮೋರ್ಚಾ ಹಾಗೂ ಇನ್ನಿತರ ರೈತ ಸಂಘಟನೆಗಳು ಸಭೆ ಸೇರಿ ಮುಂದಿನ ಹೋರಾಟ ರೂಪು ರೇಷೆಗಳನ್ನು ನಿರ್ಧರಿಸಲಿವೆ. ಪ್ರತಿಭಟನೆಯನ್ನು ತೀವ್ರಗೊಳಿಸಲು, ದೆಹಲಿ ಗಡಿಯ ಎಲ್ಲಾ ರಸ್ತೆಗಳನ್ನು ತಡೆಯಲು ನಿರ್ಧರಿಸುವ ಸಾಧ್ಯತೆ ಇದೆ.
ವರದಿ: ಧರಣೀಶ್ ಬೂಕನಕೆರೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ