news18-kannada Updated:March 8, 2021, 8:37 PM IST
ಕೃಷಿ ಕಾಯ್ದೆ ವಿರೋಧಿಸಿ ಬೀದಿಗಿಳಿದಿರುವ ಮಹಿಳೆಯರು.
ನವ ದೆಹಲಿ (ಮಾರ್ಚ್ 08); ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಮೂರು ಕೃಷಿ ಮಸೂದೆಗಳ ವಿರುದ್ಧ ದೇಶದ ರೈತರು ಕಳೆದ 102 ದಿನಗಳಿಂದ ವ್ಯಾಪಕ ಹೋರಾಟ ನಡೆಸುತ್ತಿದ್ದಾರೆ. ಈ ಕಾಯ್ದೆಗಳನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಆದರೆ, ರೈತರ ಹೋರಾಟಕ್ಕೆ ಅವರ ಬೇಡಿಕೆಗೆ ಸರ್ಕಾರ ಈ ವರೆಗೆ ಮಣಿದಿಲ್ಲ. ಈ ನಡುವೆ ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಲಕ್ಷಾಂತರ ಮಹಿಳೆಯರು ದೆಹಲಿಯ ಗಡಿಗಳಲ್ಲಿ ಒಟ್ಟುಗೂಡಿ ಪ್ರತಿಭಟನೆ ನಡೆಸುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದಾರೆ.
ದೆಹಲಿಯ ಟಿಕ್ರಿ ಗಡಿಯಲ್ಲಿ ಜಮಾಯಿಸಿದ ಸಾವಿರಾರು ಮಹಿಳೆಯರು ಹೋರಾಟದ ವೇದಿಕೆಯನ್ನು ಆಕ್ರಮಿಸಿಕೊಂಡರು. ಇಂದು ಮಹಿಳಾ ದಿನಾಚರಣೆಯ ಅಂಗವಾಗಿ ರೈತ ಹೋರಾಟದ ವೇದಿಕೆಯನ್ನು ಸಂಪೂರ್ಣವಾಗಿ ಮಹಿಳೆಯರಿಗೆ ಮೀಸಲಿಡಲಾಗಿತ್ತು. ಕೆಲ ಪುರುಷರು ನಾವು ವೇದಿಕೆಯಲ್ಲಿ ಮಾತನಾಡುತ್ತೇವೆ ಎಂದು ಕೇಳಿದಾಗ ಅಲ್ಲಿದ್ದ ಪುರುಷರೇ ‘ಇಂದು ಮಹಿಳಾ ದಿನ.. ವೇದಿಕೆ ಪೂರ್ತಿ ಮಹಿಳೆಯರಿಗೆ ಮೀಸಲಾಗಿದೆ ಎಂದು ಹೇಳುತ್ತಿದ್ದುದ್ದು ಸಾಮಾನ್ಯವಾಗಿತ್ತು’ ಎಂದು ಪತ್ರಕರ್ತ ಸಂದೀಪ್ ಸಿಂಗ್ ತಮ್ಮ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ಇನ್ನು ಹರಿಯಾಣದ ಟಿಕ್ರಿ ಗಡಿ ಬಳಿಯ ಬಹದ್ದೂರ್ಗರ್ನ ಪಕೋರಾ ಚೌಕ್ನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಲಕ್ಷಾಂತರ ಮಹಿಳೆಯರು ಒಟ್ಟುಗೂಡಿದ್ದಾರೆ. ಭಾರತೀಯ ಕಿಸಾನ್ ಯೂನಿಯನ್ ಉಗ್ರಾಣ್ ಆಯೋಜಿಸಿದ್ದ ಈ ರ್ಯಾಲಿಯಲ್ಲಿ ಪಂಜಾಬ್ ಮತ್ತು ಹರಿಯಾಣದ ಮಹಿಳೆಯರು ಸೇರಿ ಇಡೀ ಕಾರ್ಯಕ್ರಮವನ್ನು ಮುನ್ನಡೆಸುತ್ತಿದ್ದಾರೆ. ಎಲ್ಲಾ ಭಾಷಣಕಾರರು ಮಹಿಳೆಯರೇ ಆಗಿದ್ದು, ಸಾವಿರಾರು ಪುರುಷರು ಸಹ ಹೋರಾಟದಲ್ಲಿ ಭಾಗಿಯಾಗಿದ್ದಾರೆ.
"ಇಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ‘ಬಹುದೊಡ್ಡ ಆದರೆ ಇದುವರೆಗೂ ಗುರುತಿಸಲಾಗದ’ ಕೃಷಿ ಸಮುದಾಯದ ಭಾಗವಾಗಿರುವ ಎಲ್ಲ ಧೈರ್ಯಶಾಲಿ ಮಹಿಳೆಯರಿಗೆ ಸಮರ್ಪಿಸಲಾಗುವುದು. ಇಂದು ವೇದಿಕೆಯನ್ನು ಮಹಿಳೆಯರಿಂದ ನಿರ್ವಹಿಸಲಾಗುವುದು ಮತ್ತು ಅವರ ಗೌರವಾರ್ಥವಾಗಿ ಸಿಂಘು ಗಡಿಯಲ್ಲಿ ಸಣ್ಣ ಮೆರವಣಿಗೆಯನ್ನು ಆಯೋಜಿಸಲಾಗುವುದು. #WeSaluteWomenFarmers" ಎಂದು ಸಂಯುಕ್ತಾ ಕಿಸಾನ್ ಮೋರ್ಚಾ ಟ್ವೀಟ್ ಮಾಡಿದೆ.
ಟಿಕ್ರಿ ಗಡಿಯಲ್ಲಿ ನೂರಾರು ಮಹಿಳೆಯರು ಮೆರವಣಿಗೆ ನಡೆಸುವ ಮೂಲಕ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಮತ್ತು ಎಂಎಸ್ಪಿ ಖಾತ್ರಿಗೆ ಕಾನೂನು ಜಾರಿಗೊಳಿಸಬೇಕೆಂದು ಒತ್ತಾಯಿಸಿ ಹೋರಾಟ ನಡೆಸಿದರು.
Published by:
MAshok Kumar
First published:
March 8, 2021, 8:36 PM IST