Farmers Protest: ದೆಹಲಿಯ ಕೆಲವೆಡೆ ಹಿಂಸಾಚಾರಕ್ಕೆ ತಿರುಗಿದ ರೈತ ಹೋರಾಟ; ಶಾಂತಿ ಕಾಪಾಡುವಂತೆ ರಾಹುಲ್ ಗಾಂಧಿ ಮನವಿ

ಹಿಂಸೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ಯಾರಿಗಾದರೂ ತೊಂದರೆಯಾದರೆ, ನಮ್ಮ ದೇಶಕ್ಕೆ ಹಾನಿ ಸಂಭವಿಸುತ್ತದೆ. ದೇಶದ ಹಿತಕ್ಕಾಗಿ ಕೃಷಿ ವಿರೋಧಿ ಕಾನೂನನ್ನು ಕೇಂದ್ರ ಸರ್ಕಾರ ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.

ಕೆಂಪುಕೋಟೆಗೆ ರೈತರ ಮುತ್ತಿಗೆ.

ಕೆಂಪುಕೋಟೆಗೆ ರೈತರ ಮುತ್ತಿಗೆ.

 • Share this:
  ನವ ದೆಹಲಿ (ಜನವರಿ 26); ಗಣರಾಜ್ಯೋತ್ಸವ ದಿನದ ಪರೇಡ್ ಮುಗಿಯುವ ಮುನ್ನವೇ ದೆಹಲಿಯೊಳಗೆ ಟ್ರಾಕ್ಟರ್ ಮೆರವಣಿಗೆ ನಡೆಸಲು ಪ್ರಯತ್ನಿಸಿದ ರೈತ ಪ್ರತಿಭಟನಾಕಾರರನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ವಾಗ್ವಾದ, ತಳ್ಳಾಟ ನಡೆದಿದೆ. ಪೊಲೀಸರು ಹಾಕಿದ ಬ್ಯಾರಿಕೇಡ್​ಗಳನ್ನ ಬೀಳಿಸಿ ಪ್ರತಿಭಟನಾಕಾರರು ನಗರದೊಳಗೆ ಪ್ರವೇಶ ಮಾಡಲು ಯತ್ನಿಸಿದರು. ಇವರನ್ನು ನಿಯಂತ್ರಿಸಲು ಪೊಲೀಸರು ಆಶ್ರುವಾಯು (Tear Gas) ಮತ್ತು ಲಾಠಿ ಚಾರ್ಜ್ ಪ್ರಯೋಗವನ್ನೂ ಮಾಡಬೇಕಾಯಿತು. ಆದರೂ ಪ್ರತಿಭಟನಾಕಾರರ ಸಹನೆಯ ಕಟ್ಟೆ ಒಡೆದಂತಿತ್ತು. ಸಿಂಘು, ಘಾಜಿಪುರ ಮತ್ತು ಟಿಕ್ರಿ ಗಡಿಭಾಗ ಅಕ್ಷರಶಃ ಪ್ರಕ್ಷುಬ್ದ ವಾತಾವರಣದಲ್ಲಿದ್ದಂತಿತ್ತು.

  ದೆಹಲಿಯೊಳಗೆ ಟ್ರಾಕ್ಟರ್ ಮೆರವಣಿಗೆಗೆ ಪೊಲೀಸರು ಈ ಮುಂಚೆಯೇ ಅನುಮತಿ ಕೊಟ್ಟಿದ್ದರು. ಆದರೆ, ರಿಪಬ್ಲಿಕ್ ಡೇ ಪರೇಡ್ ಮುಗಿದ ಬಳಿಕ ಮಾತ್ರ ಟ್ರಾಕ್ಟರ್ ಮೆರವಣಿಗೆ ಮಾಡಬೇಕೆಂದು ಷರತ್ತು ಹಾಕಲಾಗಿತ್ತು. ಆದರೆ, ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸೇರಿದ್ದ ರೈತರ ಗುಂಪಲ್ಲಿ ಕೆಲವರು ತಾಳ್ಮೆಗೆಟ್ಟು ಬ್ಯಾರಿಕೇಡ್ ಮುರಿದು ನುಗ್ಗಲು ಯತ್ನಿಸಿದ್ಧಾರೆ. ಹಾಗೆಯೇ, ಟ್ರಾಕ್ಟರ್ ಮೆರವಣಿಗೆಗೆ ದೆಹಲಿಯಲ್ಲಿ ನಿರ್ದಿಷ್ಟ ಮಾರ್ಗಗಳನ್ನ ಪೊಲೀಸರು ನಿಗದಿ ಮಾಡಿ ಅನುಮತಿ ಕೊಟ್ಟಿದ್ದರು. ಆದರೆ, ಪ್ರತಿಭಟನಾಕಾರರು ಬೇರೆ ಬೇರೆ ಮಾರ್ಗಗಳ ಮೂಲಕ ನಗರ ಪ್ರವೇಶ ಮಾಡಲು ಯತ್ನಿಸುತ್ತಿದ್ಧಾರೆ. ಇದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

  ಆದರೆ, ನಿಗದಿತ ಸಮಯಕ್ಕಿಂತ ಮುಂಚೆ ಬ್ಯಾರಿಕೇಟ್ ಮುರಿದು ದೆಹಲಿಗೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರು ತಮ್ಮ ಸಂಘಟನೆಗೆ ಸೇರಿದವರಲ್ಲ ಎಂದು ಸಂಯುಕ್ತ್ ಕಿಸಾನ್ ಮೋರ್ಚಾ ಹೇಳಿಕೊಂಡಿದೆ. 41 ರೈತ ಸಂಘಟನೆಗಳ ಒಕ್ಕೂಟವಾಗಿರುವ ಸಂಯುಕ್ತ ಕಿಸಾನ್ ಮೋರ್ಚಾ ತಾನು ಮಧ್ಯಾಹ್ನ 12 ಗಂಟೆಗೆ ನಿಗದಿಯಂತೆ ಟ್ರಾಕ್ಟರ್ ರ್ಯಾಲಿ ಆಯೋಜಿಸುವುದಾಗಿ ಹೇಳಿದೆ. ಆದರೆ, ಇವತ್ತು ಬೆಳಗ್ಗೆ ಹಿಂಸಾಚಾರಕ್ಕಿಳಿದ ಪ್ರತಿಭಟನಾಕಾರರು ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿಗೆ ಸೇರಿದವರು ಎಂದು ಹೇಳಿದೆ.

  ದೆಹಲಿಯೊಳಗೆ ಟ್ರಾಕ್ಟರ್ ಮೆರವಣಿಗೆ ಬಂದ ರೈತರಿಗೆ ಸ್ವರೂಪ್ ನಗರ್ ಬಳಿಕ ಜನರು ಪುಷ್ಪಾರ್ಚಣೆ ಮಾಡಿ ಹುರಿದುಂಬಿಸಿದ ಘಟನೆಯೂ ನಡೆದಿದೆ. ಇದೇ ವೇಳೆ, ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ದೆಹಲಿಯಾದ್ಯಂತ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಪೊಲೀಸರು ವಿವಿಧೆಡೆ ನಿರ್ಮಿಸಿದ ತಡೆಗೋಡೆಗಳು ಪ್ರತಿಭಟನಾಕಾರರ ಕಿಚ್ಚಿಗೆ ಕೆಳಗುರುಳಿವೆ. ಒಂದು ಕಡೆಯಂತೂ ಇಡೀ ರಸ್ತೆಗೆ ತಡೆಗೋಡೆಯಾಗಿ ನಿಲ್ಲಿಸಲಾಗಿದ್ದ ಬಸ್ಸನ್ನೂ ಉಜ್ಜಿಕೊಂಡೇ ಟ್ರಾಕ್ಟರ್​ಗಳು ಸಾಗಿವೆ. ಎಂಥದ್ದೇ ಪರಿಸ್ಥಿತಿ ಬಂದರೂ ದೆಹಲಿಗೆ ನುಗ್ಗಿ ತಮ್ಮ ಆಕ್ರೋಶ ಹೊರಹಾಕಲು ರೈತರು ನಿರ್ಧರಿಸಿದಂತಿದೆ.  ಈ ಘಟನೆ ಇದೀಗ ಇಡೀ ವಿಶ್ವದ ಗಮನ ಸೆಳೆಯುತ್ತಿದೆ. ಅಲ್ಲದೆ, ಪೊಲೀಸ್​ ಲಾಠಿ ಚಾರ್ಚ್​ ವೇಳೆ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, 20 ಜನರ ಸ್ಥಿತಿ ಗಂಭೀರವಾಗಿದ ಎನ್ನಲಾಗುತ್ತಿದೆ. ಹೀಗಾಗಿ ರೈತ ಹೋರಾಟದಲ್ಲಿನ ಹಿಂಸಾಚಾರದ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್​ ಪಕ್ಷದ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ, "ಹಿಂಸೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ಯಾರಿಗಾದರೂ ತೊಂದರೆಯಾದರೆ, ನಮ್ಮ ದೇಶಕ್ಕೆ ಹಾನಿ ಸಂಭವಿಸುತ್ತದೆ. ದೇಶದ ಹಿತಕ್ಕಾಗಿ ಕೃಷಿ ವಿರೋಧಿ ಕಾನೂನನ್ನು ಕೇಂದ್ರ ಸರ್ಕಾರ ಹಿಂದಕ್ಕೆ ತೆಗೆದುಕೊಳ್ಳಬೇಕು!" ಎಂದು ಒತ್ತಾಯಿಸಿದ್ದಾರೆ.

  ಇದನ್ನೂ ಓದಿ: Farmers Protest | ದೆಹಲಿಯಲ್ಲಿ ತಾಳ್ಮೆಗೆಟ್ಟ ರೈತ ಪ್ರತಿಭಟನಾಕಾರರು; ಹಿಂಸೆಗೆ ತಿರುಗಿದ ಅನ್ನದಾತರ ಕಿಚ್ಚು

  ಮಾಹಿತಿಗಳ ಪ್ರಕಾರ ರೈತ ಹೋರಾಟಗಾರರು ಈಗಾಗಲೇ ಕೆಂಪು ಕೋಟೆಯನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಕೆಂಪು ಕೋಟೆಯ ಮೇಲೆ ಭಾರತ ಮತ್ತು ಸಿಖ್ ಧ್ವಜವನ್ನೂ ಹಾರಿಸಿದ್ದಾರೆ. ಭಾರತ ಸ್ವಾತಂತ್ರ್ಯಗೊಂಡ ನಂತರ ಕೆಂಪುಕೋಟೆಯ ಮೇಲೆ ಇದೇ ಮೊದಲ ಬಾರಿಗೆ ಭಾರತದ ಹೊರತಾದ ಧ್ವಜವೊಂದು ಹಾರಿದ ಇತಿಹಾಸವನ್ನೂ ಈ ಘಟನೆ ದಾಖಲಿಸಿದೆ. ದೆಹಲಿಯ ರೈತ ಹೋರಾಟ ಇದೀಗ ಉಗ್ರರೂಪ ತಳೆದಿದ್ದು, ಮುಂದಿನ ದಿನಗಳಲ್ಲಿ ಈ ಹೋರಾಟ ಯಾವ ಸ್ವರೂಪ ಪಡೆಯಲಿದೆ? ಕೇಂದ್ರ ಸರ್ಕಾರ ಯಾವ ತೀರ್ಮಾನ ತೆಗೆದುಕೊಳ್ಳಲಿದೆ? ಎಂಬುದನ್ನು ಕಾದು ನೋಡಬೇಕಿದೆ.
  Published by:MAshok Kumar
  First published: