ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ 17ನೇ ದಿನಕ್ಕೆ ಕಾಲಿಟ್ಟಿದೆ. ಕೇಂದ್ರ ಸರ್ಕಾರ ಹೊಸ ಕೃಷಿ ಕಾಯ್ದೆಗೆ ಅಲ್ಪ ಪ್ರಮಾಣದ ರೈತರು ಮಾತ್ರ ವಿರೋಧಿಸುತ್ತಿದ್ದಾರೆ ಎಂದು ಅರ್ಥಶಾಸ್ತ್ರಜ್ಞ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಭಾರತದ ಕಾರ್ಯನಿರ್ವಾಹಕ ನಿರ್ದೇಶಕ ಸುರ್ಜಿತ್ ಭಲ್ಲಾ ಅಭಿಪ್ರಾಯಪಟ್ಟಿದ್ದಾರೆ. ಸುರ್ಜಿತ್ ಭಲ್ಲಾ ಅವರನ್ನು 2019 ರ ಅಕ್ಟೋಬರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕ್ಯಾಬಿನೆಟ್ನ ನೇಮಕಾತಿ ಸಮಿತಿ (ಎಸಿಸಿ) ಐಎಂಎಫ್ಗೆ ನೇಮಕ ಮಾಡಿತ್ತು. ಸುರ್ಜಿತ್ ಭಲ್ಲಾ ಅವರು ಐಎಂಎಫ್ನಲ್ಲಿ ಭಾರತವಲ್ಲದೆ ಬಾಂಗ್ಲಾದೇಶ, ಭೂತಾನ್ ಮತ್ತು ಶ್ರೀಲಂಕಾ ದೇಶಗಳನ್ನೂ ಸಹ ಪ್ರತಿನಿಧಿಸುತ್ತಿದ್ದಾರೆ.
ಸಿಎನ್ಎನ್ ಮತ್ತು ನ್ಯೂಸ್ 18 ಗೆ ಪ್ರತಿಕ್ರಿಯಿಸಿರುವ ಸುರ್ಜಿತ್ ಭಲ್ಲಾ, ರೈತರು ನಡೆಸುತ್ತಿರುವ ಚಳುವಳಿ ರಾಜಕೀಯ ಪ್ರೇರಿತವಾಗಿದೆಯೇ ಹೊರತು, ಆರ್ಥಿಕತೆಯ ಬಗ್ಗೆಯಲ್ಲ ಎಂದು ತಿಳಿಸಿದ್ದಾರೆ. ರೈತರ ಹೋರಾಟ ರಾಜಕೀಯ ಕುಮ್ಮಕ್ಕಿನಿಂದ ಕೂಡಿದೆ. ಅದೂ ಸಹ ಕೇವಲ ಪಂಜಾಬ್ ಹಾಗೂ ಹರಿಯಾಣ ಪ್ರದೇಶಕ್ಕೆ ಸೀಮಿತವಾಗಿದೆ ಎಂದಿದ್ದಾರೆ.
ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಸಾವಿರಾರು ರೈತರು ಹೋರಾಟ ಮುಂದುವರೆಸಿದ್ದಾರೆ. ಕೋವಿಡ್-19 ಸೋಂಕಿನ ಭೀತಿ ಮತ್ತು ತೀವ್ರ ಚಳಿಯ ನಡುವೆಯೂ ದೆಹಲಿಯ ಗುಡಿಗಳ ವಿವಿಧೆಡೆ ನಿರಂತರ ಪ್ರತಿಭಟನೆ ನಡೆಸಿದ್ದಾರೆ. ಹೊಸ ಕಾನೂನುಗಳು ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ (ಎಂಎಸ್ಪಿ) ಮತ್ತು ಎಪಿಎಂಸಿ ವ್ಯವಸ್ಥೆಯನ್ನು ಒದಗಿಸುವುದನ್ನು ದುರ್ಬಲಗೊಳಿಸುತ್ತವೆ ಎಂದು ರೈತರು ಕಳವಳ ವ್ಯಕ್ತಪಡಿಸಿದ್ದಾರೆ.
ಆದರೆ, ಸಿಎನ್ಎನ್-ನ್ಯೂಸ್ 18ನ ಜಕ್ಕಾ ಜಾಕೋಬ್ ಅವರಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಪ್ರತಿಕ್ರಿಯಿರುವ ಸುರ್ಜಿತ್ ಭಲ್ಲಾ ಅವರು, ಮೇಲ್ನೋಟಕ್ಕೆ ಪ್ರತಿಭಟನೆಯು ಇತರೆ ಗುಂಪುಗಳ ಜನರಿಂದ ವ್ಯಾಪಕವಾದ ಬೆಂಬಲವನ್ನು ಗಳಿಸಿದಂತೆ ತೋರುತ್ತದೆಯಾದರೂ, ಹೋರಾಟ ನಿರತ ಜನ ರಾಜಕೀಯ ಸಂಪರ್ಕವನ್ನು ಹೊಂದಿರಬಹುದೆಂದು ಶಂಕೆ ವ್ಯಕ್ತಪಡಿಸಿದರು.
ಇದನ್ನೂ ಓದಿ : ಬೆಂಗಳೂರಿಗೆ ತೆರಳಲು ಮೂರು ದಿನಗಳಿಂದ ಬಾಣಂತಿ ಪರದಾಟ ; ಮಾನವೀಯತೆ ಮೆರೆದ ಆಟೋ ಚಾಲಕರು
ರೈತರ ಚಳುವಳಿಯ ಹಿಂದೆ ರಾಜಕೀಯ ಬೆರೆತಿದೆ ಎಂಬುದು ಸ್ಪಷ್ಟವಾಗಿದೆ. ಭಾರತದಲ್ಲಿ ಸುಮಾರು ನೂರು ಮಿಲಿಯನ್ ರೈತರು ಇದ್ದಾರೆ ಎಂದು ನಮಗೆ ತಿಳಿದಿದೆ. ಅವುಗಳಲ್ಲಿ ಎಂಎಸ್ಪಿ ಮತ್ತು ಎಪಿಎಂಸಿ ಇತ್ಯಾದಿಗಳಿಂದ ಎಷ್ಟು ಜನರಿಗೆ ಲಾಭ? ಭಾರತದಲ್ಲಿ ಗೋಧಿ ಬೆಲೆಗಳು ವಿಶ್ವ ಬೆಲೆಗಳಿಗಿಂತ 40-50 ಶೇಕಡಾ ಹೆಚ್ಚಾಗಿದೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ