HOME » NEWS » National-international » FARMERS PROTEST HEARING IN SUPREME COURT OF DELHI BORDER PROTEST CLEARANCE PETITION TODAY DBDEL LG

ಸುಪ್ರೀಂ ಕೋರ್ಟ್​ನಲ್ಲಿ ಇಂದು ದೆಹಲಿ ಗಡಿ ಪ್ರತಿಭಟನೆ ತೆರವುಗೊಳಿಸುವ ಅರ್ಜಿ ವಿಚಾರಣೆ

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ, ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಹಾಗೂ ವಿ. ರಾಮಸುಬ್ರಮಣಿಯನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ವಿಚಾರಣೆ ನಡೆಸಲಿದೆ.

news18-kannada
Updated:December 16, 2020, 8:10 AM IST
ಸುಪ್ರೀಂ ಕೋರ್ಟ್​ನಲ್ಲಿ ಇಂದು ದೆಹಲಿ ಗಡಿ ಪ್ರತಿಭಟನೆ ತೆರವುಗೊಳಿಸುವ ಅರ್ಜಿ ವಿಚಾರಣೆ
ಸುಪ್ರೀಂಕೋರ್ಟ್​.
  • Share this:
ನವದೆಹಲಿ(ಡಿ. 16): ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಇದುವರೆಗೆ ನಡೆದ 5 ಸುತ್ತಿನ ಸಭೆಗಳು ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ನಡೆಸಿದ ಅನೌಪಚಾರಿಕ ಮಾತುಕತೆಗಳೆಲ್ಲವೂ ವಿಫಲವಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿ ಗಡಿಯಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿರುವ ರೈತರು ತಮ್ಮ ಪ್ರತಿಭಟನೆ ಮುಂದುವರೆಸಿದ್ದಾರೆ. ಒಂದೆಡೆ ರೈತರ ಪ್ರತಿಭಟನೆ 21ನೇ ದಿನಕ್ಕೆ ಕಾಲಿಟ್ಟಿದೆ. ಇನ್ನೊಂದೆಡೆ ಕಾನೂನು ಹೋರಾಟವೂ ಆರಂಭವಾಗಿದೆ. ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ಸಿಂಧುತ್ವ ಪ್ರಶ್ನಿಸಿ ಡಿಎಂಕೆ ಸಂಸದ ತಿರುಚಿ ಶಿವ ಮತ್ತು ಆರ್‌ಜೆಡಿ ಸಂಸದ ಮನೋಜ್ ಝಾ ಸುಪ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ದಾಖಲಿಸಿದ್ದಾರೆ. ಭಾರತೀಯ ಕಿಸಾನ್ ಯೂನಿಯನ್ ಪರವಾಗಿ ಭಾನು ಪ್ರತಾಪ್ ಸಿಂಗ್ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕೆಂದು ಅರ್ಜಿ ಸಲ್ಲಿಸಿದ್ದರು‌. ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶ ಮಾಡಬೇಕೆಂದು ವಿನಂತಿಸಿಕೊಂಡಿದ್ದರು. ಈ ಮೂಲಕ ರೈತರ ಹೋರಾಟದ ಪರವಾಗಿ ಕಾನೂನು ಹೋರಾಟ ಶುರುವಾಗಿತ್ತು. ಈಗ ರೈತರ ಹೋರಾಟವನ್ನು ಕೊನೆಗಾಣಿಸಬೇಕೆಂಬ ಕಾನೂನು‌ ಸಮರವೂ ಆರಂಭವಾಗಿದೆ.

ಸುಪ್ರೀಂ ಕೋರ್ಟ್ ವೆಬ್ ಸೈಟ್ ಪ್ರಕಾರ ಕಾನೂನು ವಿದ್ಯಾರ್ಥಿ ರಿಷಬ್ ಶರ್ಮಾ 'ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವುದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಕೂಡಲೇ ರಸ್ತೆ ತೆರವುಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿ' ಎಂದು ಅರ್ಜಿ ಸಲ್ಲಿಸಿದ್ದಾರೆ‌.‌ ರೈತರ ವಿಷಯದ ಅರ್ಜಿಗಳ ವಿಚಾರಣೆ ಇಂದು ನಡೆಯಲಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ, ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಹಾಗೂ ವಿ. ರಾಮಸುಬ್ರಮಣಿಯನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ವಿಚಾರಣೆ ನಡೆಸಲಿದೆ.

Farmers Protest; 21ನೇ ದಿನಕ್ಕೆ ಕಾಲಿಟ್ಟ ರೈತ ಹೋರಾಟ; ಬೇಡಿಕೆ ಈಡೇರಿಕೆಗಾಗಿ ರೈಲು ತಡೆಗೆ ನಿರ್ಧಾರ, ಇಕ್ಕಟ್ಟಿನಲ್ಲಿ ಸರ್ಕಾರ

ಕೇಂದ್ರ ಸಚಿವರು ಕೃಷಿ ಕಾನೂನುಗಳಲ್ಲಿನ ಭಿನ್ನಾಭಿಪ್ರಾಯಗಳನ್ನು ವಿಂಗಡಿಸಿ ಚರ್ಚಿಸಲು ಸಮಿತಿಯೊಂದನ್ನು ರಚಿಸುವ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ. ಜೊತೆಗೆ ಕನಿಷ್ಠ ಬೆಂಬಲ ಬೆಲೆ ಪದ್ದತಿ ಮುಂದುವರೆಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಆದರೆ ಈ ಪ್ರಸ್ತಾಪಗಳಿಗೆ ಒಪ್ಪದ ರೈತ ಮುಖಂಡರು ಕೇಂದ್ರ ಸರ್ಕಾರ ಇತ್ತೀಚೆಗೆ ತಂದಿರುವ ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂಪಡೆಯಲೇಬೇಕು. ರೈತರ ಎಲ್ಲಾ ಉತ್ಪನ್ನಗಳಿಗೂ ಕನಿಷ್ಠ ಬೆಂಬಲ ಬೆಲೆ ಕೊಡಬೇಕು. ಜೊತೆಗೆ ರೈತರಿಗೆ ಮಾರಕವಾಗಿರುವ ವಿದ್ಯುತ್ ಕಾನೂನನ್ನು ವಾಪಸ್ ಪಡೆಯಲೇಬೇಕು ಎಂದು ಒತ್ತಾಯಿಸಿದ್ದಾರೆ.

ದೇಶದ ವಿವಿಧ ಮೂಲೆಗಳಿಂದ ದೆಹಲಿಯತ್ತ ಧಾವಿಸಿದ್ದ ರೈತರು ನವೆಂಬರ್ 26ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ಪ್ರತಿಭಟನೆಗೆ ಮೊದಲು ಒಪ್ಪಿಗೆ ನೀಡಿದ್ದ ಪೊಲೀಸರು ನಂತರ ಪ್ರತಿಭಟನೆ ಹತ್ತಿಕ್ಕಲೆಂದೇ ಕೊರೋನಾ ಕಾರಣವೊಡ್ಡಿ ಒಪ್ಪಿಗೆಯನ್ನು ಹಿಂಪಡೆದರು. ಇದಲ್ಲದೆ ರೈತರು ದೆಹಲಿಯನ್ನು ಪ್ರವೇಶಿಸದಂತೆ ಗಡಿಯಲ್ಲೇ ತಡೆದರು. ಸದ್ಯ ದೆಹಲಿಯ ಗಡಿಯಲ್ಲಿರುವ ರೈತರು ತಾವಿದ್ದ ಸ್ಥಳದಲ್ಲೇ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ದೇಶದ ಬೇರೆಡೆಯಲ್ಲೂ ಪ್ರತಿಭಟನೆ ನಡೆಸುವಂತೆ ಕರೆಕೊಟ್ಟಿದ್ದಾರೆ.

ಡಿಸೆಂಬರ್ 12ರಂದು ರೈತರು ಪಂಜಾಬ್, ಹರಿಯಾಣ ಮತ್ತಿತರ ಕಡೆ ಟೋಲ್ ಪ್ಲಾಜಾಗಳನ್ನು ಬಂದ್ ಮಾಡಿ ಮುಷ್ಕರ ನಡೆಸಿದ್ದಾರೆ. ಮೊದಲಿಗೆ ಪಂಜಾಬ್, ಹರಿಯಾಣಗಳಿಂದ ದೆಹಲಿಗೆ ಬರುವ ರಸ್ತೆಗಳನ್ನು ತಡೆದಿದ್ದ ರೈತರು ಈಗ ಉತ್ತರ ಪ್ರದೇಶ ಹಾಗೂ ರಾಜಸ್ಥಾನಗಳಿಂದ ದೆಹಲಿಗೆ ಬರುವ ದೆಹಲಿ-ಜೈಪುರ್ ರಸ್ತೆಯನ್ನೂ ಬಂದ್ ಮಾಡಿದ್ದಾರೆ. ಡಿಸೆಂಬರ್ 12ರಂದು ರೈತರು ಉಪವಾಸ ಸತ್ಯಾಗ್ರಹವನ್ನೂ ನಡೆಸಿದ್ದರು.
Youtube Video
ರೈಲು ತಡೆಗೂ ನಿರ್ಧಾರ

ರೈತರಿಗೆ ಮಾರಕವಾಗಿರುವ ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು ಕೇಂದ್ರ ಸರ್ಕಾರವು ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ  ದೇಶದಾದ್ಯಂತ ರೈಲು ಸಂಚಾರಕ್ಕೆ ಅಡ್ಡಿ ಮಾಡುವುದಾಗಿ ಹೇಳಿವೆ. ಆದರೆ ರೈಲು ಹಳಿಗಳನ್ನು ಬಂದ್ ಮಾಡುವ ಬಗ್ಗೆ ದಿನಾಂಕವನ್ನು ಪ್ರಕಟಿಸಿಲ್ಲ.
Published by: Latha CG
First published: December 16, 2020, 8:10 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories