ನವದೆಹಲಿ (ಡಿ. 11): ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಇದುವರೆಗೆ ನಡೆದ 5 ಸುತ್ತಿನ ಸಭೆಗಳು ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ನಡೆಸಿದ ಅನೌಪಚಾರಿಕ ಮಾತುಕತೆಗಳೆಲ್ಲವೂ ವಿಫಲವಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿ ಗಡಿಯಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿರುವ ರೈತರು ತಮ್ಮ ಪ್ರತಿಭಟನೆ ಮುಂದುವರೆಸಲು ನಿರ್ಧರಿಸಿದ್ದಾರೆ. ಇದರಿಂದ ರೈತರ ಪ್ರತಿಭಟನೆ 17ನೇ ದಿನಕ್ಕೆ ಕಾಲಿಟ್ಟಿದ್ದು ಇಂದಿನಿಂದ ಪ್ರತಿಭಟನೆ ಇನ್ನಷ್ಟು ಬಿರುಸಾಗುವ ಸಾಧ್ಯತೆ ಇದೆ.
ಕೇಂದ್ರ ಕೃಷಿ ಸಚಿವ ನರೇಂದ್ರ ತೋಮರ್, ಪಿಯೂಷ್ ಗೋಯಲ್, ಕಿರಿಯ ಕೈಗಾರಿಕಾ ಸಚಿವ ಸೋಮ್ ಪ್ರಕಾಶ್ ಹಾಗೂ ರೈತ ಸಂಘಟನೆಗಳ 35 ಪ್ರತಿನಿಧಿಗಳ ನಡುವೆ ಈವರೆಗೆ 5 ಸಭೆಗಳು ನಡೆದಿವೆ. ಅಮಿತ್ ಶಾ ರೈತ ಸಂಘಟನೆಗಳ 13 ಪ್ರತಿನಿಧಿಗಳೊಂದಿಗೆ ಅನೌಪಚಾರಿಕ ಮಾತುಕತೆ ನಡೆಸಿದ್ದಾರೆ. ಆದರೆ ಪ್ರಭಾವಿ ಅಮಿತ್ ಶಾ ಆಗಲಿ, ಇತರೆ ಕೇಂದ್ರ ಸಚಿವರಾಗಲಿ ರೈತರನ್ನು ಮನವೊಲಿಸಲು ಸಫಲರಾಗಿಲ್ಲ. ಇದರಿಂದ ಮಾತುಕತೆಯಿಂದ ಸಮಸ್ಯೆ ಬಗೆಹರಿಯುವ ಸಾಧ್ಯತೆ ಕ್ಷೀಣಿಸಿದ್ದು ರೈತರು ಪ್ರತಿಭಟನೆ ಮುಂದುವರೆಸುತ್ತಿದ್ದಾರೆ.
ಕೇಂದ್ರ ಸಚಿವರು ಕೃಷಿ ಕಾನೂನುಗಳಲ್ಲಿನ ಭಿನ್ನಾಭಿಪ್ರಾಯಗಳನ್ನು ವಿಂಗಡಿಸಿ ಚರ್ಚಿಸಲು ಸಮಿತಿಯೊಂದನ್ನು ರಚಿಸುವ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ. ಜೊತೆಗೆ ಕನಿಷ್ಠ ಬೆಂಬಲ ಬೆಲೆ ಪದ್ದತಿ ಮುಂದುವರೆಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಆದರೆ ಈ ಪ್ರಸ್ತಾಪಗಳಿಗೆ ಒಪ್ಪದ ರೈತ ಮುಖಂಡರು ಕೇಂದ್ರ ಸರ್ಕಾರ ಇತ್ತೀಚೆಗೆ ತಂದಿರುವ ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂಪಡೆಯಲೇಬೇಕು. ರೈತರ ಎಲ್ಲಾ ಉತ್ಪನ್ನಗಳಿಗೂ ಕನಿಷ್ಠ ಬೆಂಬಲ ಬೆಲೆ ಕೊಡಬೇಕು. ಜೊತೆಗೆ ರೈತರಿಗೆ ಮಾರಕವಾಗಿರುವ ವಿದ್ಯುತ್ ಕಾನೂನನ್ನು ವಾಪಸ್ ಪಡೆಯಲೇಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Namma Metro: ಇಂದು ಕೂಡ KSRTC, BMTC ನೌಕರರ ಮುಷ್ಕರ; ಬೆಂಗಳೂರು ಮೆಟ್ರೋದಿಂದ ಹೆಚ್ಚುವರಿ ರೈಲು ಸಂಚಾರ
ದೇಶದ ವಿವಿಧ ಮೂಲೆಗಳಿಂದ ದೆಹಲಿಯತ್ತ ಧಾವಿಸಿದ್ದ ರೈತರು ನವೆಂಬರ್ 26ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ಪ್ರತಿಭಟನೆಗೆ ಮೊದಲು ಒಪ್ಪಿಗೆ ನೀಡಿದ್ದ ಪೊಲೀಸರು ನಂತರ ಪ್ರತಿಭಟನೆ ಹತ್ತಿಕ್ಕಲೆಂದೇ ಕೊರೋನಾ ಕಾರಣವೊಡ್ಡಿ ಒಪ್ಪಿಗೆಯನ್ನು ಹಿಂಪಡೆದರು. ಇದಲ್ಲದೆ ರೈತರು ದೆಹಲಿಯನ್ನು ಪ್ರವೇಶಿಸದಂತೆ ಗಡಿಯಲ್ಲೇ ತಡೆದರು. ಸದ್ಯ ದೆಹಲಿಯ ಗಡಿಯಲ್ಲಿರುವ ರೈತರು ತಾವಿದ್ದ ಸ್ಥಳಗಳಲ್ಲೇ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ದೇಶದ ಬೇರೆಡೆಯಲ್ಲೂ ಪ್ರತಿಭಟನೆ ನಡೆಸುವಂತೆ ಕರೆಕೊಟ್ಟಿದ್ದಾರೆ.
ಟೋಲ್ ಬಂದ್ ಸಾಧ್ಯತೆ:
ಇಂದು ದೇಶದ ಎಲ್ಲಾ ಟೋಲ್ ಪ್ಲಾಜಾಗಳನ್ನು ಬಂದ್ ಮಾಡಿ ಮುಷ್ಕರ ನಡೆಸಲಾಗುತ್ತದೆ. ಈವರೆಗೆ ಪಂಜಾಬ್, ಹರಿಯಾಣಗಳಿಂದ ದೆಹಲಿಗೆ ಬರುವ ರಸ್ತೆಗಳನ್ನು ಬಂದ್ ಮಾಡಲಾಗಿದ್ದು, ಇಂದಿನಿಂದ ಉತ್ತರ ಪ್ರದೇಶ ಹಾಗೂ ರಾಜಸ್ಥಾನಗಳಿಂದ ದೆಹಲಿಗೆ ಬರುವ ರಸ್ತೆಗಳನ್ನೂ ಬಂದ್ ಮಾಡಲಾಗುತ್ತದೆ. ಇದಲ್ಲದೆ ದೇಶದೆಲ್ಲೆಡೆ ಬಿಜೆಪಿ ನಾಯಕರ ಮನೆ ಮತ್ತು ಕಚೇರಿ ಎದುರು ಪ್ರತಿಭಟನೆ ನಡೆಸಲಾಗುತ್ತದೆ. ಒಗ್ಗಟ್ಟು ಕಾಯ್ದುಕೊಂಡು ಒತ್ತಡ ಹೇರುವ ದೃಷ್ಟಿಯಿಂದ ಈ ಎಲ್ಲಾ ಪ್ರತಿಭಟನೆಗಳನ್ನೂ ದೆಹಲಿ ಚಲೋ ಹೆಸರಿನಲ್ಲೇ ನಡೆಸಲು ರೈತ ಸಂಘಟನೆಗಳು ಒಮ್ಮತದ ನಿರ್ಧಾರ ಮಾಡಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ