HOME » NEWS » National-international » FARMERS PROTEST DELHI BORDERS CLOSED SESR DBDEL

Farmers Protest: ಕಗ್ಗಂಟಾಗಿರುವ ಕೃಷಿ ಕಾನೂನುಗಳನ್ನು ಹಿಂಪಡೆಯುವ ವಿಚಾರ, ದೆಹಲಿ ಗಡಿಗಳು ಬಂದ್

ಕಳೆದ 68 ದಿನಗಳಿಂದ ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ದೆಹಲಿ ಒಳಗಡೆಗೂ ಬರಬಹುದು ಎಂದು ಕೇಂದ್ರ ಸರ್ಕಾರಕ್ಕೆ ಆತಂಕ ಶುರುವಾಗಿರುವ ಲಕ್ಷಣಗಳು ಕಾಣುತ್ತಿವೆ

news18-kannada
Updated:February 4, 2021, 9:52 AM IST
Farmers Protest: ಕಗ್ಗಂಟಾಗಿರುವ ಕೃಷಿ ಕಾನೂನುಗಳನ್ನು ಹಿಂಪಡೆಯುವ ವಿಚಾರ, ದೆಹಲಿ ಗಡಿಗಳು ಬಂದ್
ರೈತರ ಪ್ರತಿಭಟನೆ
  • Share this:
ನವದೆಹಲಿ (ಫೆ. 3): ರೈತರಿಗೆ ಮಾರಕವಾಗಲಿರುವ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವ ವಿಚಾರ ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿದೆ. ಹೋರಾಟವನ್ನು ಮುಂದುವರೆಸಲು ನಿರ್ಧರಿಸಿರುವ ರೈತರು ದೆಹಲಿಗೆ ಬರಬಹುದೆಂದು ದೆಹಲಿ ಗಡಿಗಳನ್ನು ಮುಚ್ಚಲಾಗಿದೆ. ಮತ್ತೊಂದೆಡೆ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸುವ ವಾತಾವರಣ ನಿರ್ಮಾಣ ಆಗುತ್ತಿಲ್ಲ.  ಕೃಷಿ ಕಾನೂನುಗಳನ್ನು ಹಿಂಪಡೆಯುವ ವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಕೇಂದ್ರ ಸರ್ಕಾರ ಯಾವ ಕಾರಣಕ್ಕೂ ಕಾನೂನುಗಳನ್ನು ಹಿಂಪಡೆಯುವುದಿಲ್ಲ ಎಂದು ಹಠ ಹಿಡಿದಿದೆ. ಪರಿಣಾಮವಾಗಿ ರೈತರ ಹೋರಾಟದ ವಿಷಯ ಈಗ ಬಿಕ್ಕಟ್ಟಾಗಿ ಪರಿಣಮಿಸಿದೆ.  ಕಳೆದ 68 ದಿನಗಳಿಂದ ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ದೆಹಲಿ ಒಳಗಡೆಗೂ ಬರಬಹುದು ಎಂದು ಕೇಂದ್ರ ಸರ್ಕಾರಕ್ಕೆ ಆತಂಕ ಶುರುವಾಗಿರುವ ಲಕ್ಷಣಗಳು ಕಾಣುತ್ತಿವೆ. ಇದೇ ಹಿನ್ನೆಲೆಯಲ್ಲಿ ದೆಹಲಿಗೆ ಬರುವ ಸಿಂಘು, ಟಿಕ್ರಿ ಮತ್ತು ಗಾಜೀಪುರ್ ಗಡಿಗಳನ್ನು ಕೇಂದ್ರ ಸರ್ಕಾರ ಬಂದ್ ಮಾಡಿದೆ.

ಬ್ಯಾರಿಕೇಡ್ ಗೋಡೆ ನಿರ್ಮಾಣ, ರಸ್ತೆಗಳಿಗೆ ಮೊಳೆ: ದೆಹಲಿ ಗಡಿಗಳಲ್ಲಿ ಟ್ರ್ಯಾಕ್ಟರ್‌ ಸಮೇತ ಠಿಕಾಣಿ ಹೂಡಿರುವ ರೈತರು ದೆಹಲಿಗೆ ಬರಬಾರದು ಎಂದು ಹಲವು ಸುತ್ತುಗಳ ಬ್ಯಾರಿಕೇಡ್ ಗೋಡೆ ನಿರ್ಮಿಸಲಾಗಿದೆ. ಸಿಮೆಂಟ್ ಬ್ರಿಕ್ಸ್ ಗಳನ್ನು ಇಟ್ಟು ನಡುವೆ ಕಾಂಕ್ರಿಟ್ ತುಂಬಿ ಯಾವ ಕಾರಣಕ್ಕೂ ಟ್ರ್ಯಾಕ್ಟರ್ ಗಳು ಗಡಿ ದಾಟದಂತೆ ಮಾಡಲಾಗಿದೆ. ಜೊತೆಗೆ ಬ್ಯಾರಿಕೇಡ್ ಮೇಲೆ ಮುಳ್ಳು ತಂತಿಯ ಬೇಲಿ ಹಾಕಲಾಗಿದೆ. ರಸ್ತೆಗಳಲ್ಲಿ ಮೊಳೆಗಳನ್ನು ನಡೆಲಾಗಿದೆ.

ರೈತರೊಂದಿಗೆ ಕೈ ಜೋಡಿಸಿದ ದೆಹಲಿ ಜನ: ರೈತರು ಚಳಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಮೌನವಾಗಿದೆ. ಕೂಡಲೇ ರೈತರೊಂದಿಗೆ ಮಾತನಾಡಬೇಕು, ಸಮಸ್ಯೆ ಬಗೆಹರಿಸಬೇಕು ಎಂದು ದೆಹಲಿ ನಾಗರಿಕರು ಇಂದು ಮಂಡಿ ಹೌಸ್ ಬಳಿ ಪ್ರತಿಭಟನೆ ನಡೆಸಿದರು

ಯಾವತ್ತಿದ್ದರೂ ರೈತರೇ ಗೆಲ್ಲುತ್ತಾರೆ: ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಕಡೆಗೂ ರೈತರೇ ಗೆಲ್ಲಲಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರ ಈಗಲೇ ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವುದು ಒಳ್ಳೆಯದು ಎಂದು ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ಅವರು ಸಲಹೆ ನೀಡಿದ್ದಾರೆ.

ಅಕ್ಟೋಬರ್ ನಂತರ 40 ಲಕ್ಷ ಟ್ರ್ಯಾಕ್ಟರ್ ಮೆರವಣಿಗೆ: ಹರಿಯಾಣದ ಜಿಂದ್ ನಲ್ಲಿ ಮಹಾ ಪಂಚಾಯತ್ ನಡೆಸಿದ ರೈತ ನಾಯಕ ರಾಕೇಶ್ ಟಿಕಾಯತ, ಅಕ್ಟೋಬರ್ ವರೆಗೂ ಕಾಯುತ್ತೇವೆ. ಅಷ್ಟೊತ್ತಿಗೆ ಕೇಂದ್ರ ಸರ್ಕಾರ ಕೃಷಿ ಕಾನೂನುಗಳನ್ನು ಹಿಂಪಡೆಯದಿದ್ದರೆ ನಂತರ‌ ದೇಶಾದ್ಯಂತ 40 ಲಕ್ಷ ಟ್ರ್ಯಾಕ್ಟರ್ ಗಳ ಮೆರವಣಿಗೆ ನಡೆಸುತ್ತೇವೆ ಎಂದಿದ್ದಾರೆ.

ಮುರಿದುಬಿದ್ದಿರುವ ಮಾತುಕತೆಗಳು : ಕೇಂದ್ರ ಸರ್ಕಾರ ಮತ್ತು ರೈತ ಸಂಘಟನೆಗಳ ಪ್ರತಿನಿಧಿಗಳ ನಡುವೆ ಈಗಾಗಲೇ 11 ಸುತ್ತು ಮಾತುಕತೆ ನಡೆದು ಎಲ್ಲವೂ ವಿಫಲವಾಗಿವೆ. ಈಗ ಮತ್ತೊಮ್ಮೆ ಮಾತುಕತೆ ನಡೆಯಬೇಕಿದೆ. ಆದರೆ ಅದಕ್ಕೆ ವೇದಿಕೆ ಸಿದ್ಧಗೊಳ್ಳುತ್ತಿರುವ ಲಕ್ಷಣಗಳು ಕಾಣಿಸುತ್ತಿಲ್ಲ. ಆದುದರಿಂದ ಮುಂದೇನು ಎಂಬುದು ಗೊತ್ತಾಗದ ಸ್ಥಿತಿ ನಿರ್ಮಾಣವಾಗಿದೆ.
Published by: Seema R
First published: February 3, 2021, 8:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories