Farmers Protest: 28ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ; ಇಂದು ಟೋಲ್ ಶುಲ್ಕ ಸಂಗ್ರಹಕ್ಕೆ ತಡೆ

ಸಾರ್ವಜನಿಕರ ಸಂಚಾರಕ್ಕೆ ತೊಂದರೆಯೂ ಆಗಬಾರದು, ಸರ್ಕಾರಕ್ಕೆ ಶುಲ್ಕವೂ ಸಿಗಬಾರದು ಎಂಬ ರೀತಿಯಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ನಿರ್ಧರಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ(ಡಿ. 23): ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಇದುವರೆಗೆ ನಡೆದ 5 ಸುತ್ತಿನ ಸಭೆಗಳು ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ನಡೆಸಿದ ಅನೌಪಚಾರಿಕ ಮಾತುಕತೆಗಳೆಲ್ಲವೂ ವಿಫಲವಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿ ಗಡಿಯಲ್ಲಿ ರೈತರ ಅನಿರ್ದಿಷ್ಟಾವಧಿ ಪ್ರತಿಭಟನೆ ಮುಂದುವರೆದಿದ್ದು 28ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆಯನ್ನು ತೀವ್ರಗೊಳಿಸಿರುವ ರೈತರು ಇಂದು ಹರಿಯಾಣದ ಎಲ್ಲಾ ಟೋಲ್ ಗಳಲ್ಲಿ ಶುಲ್ಕ ಸಂಗ್ರಹಕ್ಕೆ ಅಡ್ಡಿಪಡಿಸಲಿದ್ದಾರೆ. ಸಾರ್ವಜನಿಕರ ಸಂಚಾರಕ್ಕೆ ತೊಂದರೆಯೂ ಆಗಬಾರದು, ಸರ್ಕಾರಕ್ಕೆ ಶುಲ್ಕವೂ ಸಿಗಬಾರದು ಎಂಬ ರೀತಿಯಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ನಿರ್ಧರಿಸಿದ್ದಾರೆ.

ಕೇಂದ್ರ ಕೃಷಿ ಸಚಿವ ನರೇಂದ್ರ ಥೋಮರ್, ವಾಣಿಜ್ಯ ವ್ಯವಹಾರಗಳ ಸಂಪುಟ ದರ್ಜೆಯ ಸಚಿವ ಪಿಯೂಷ್ ಗೋಯಲ್, ರಾಜ್ಯ ಖಾತೆಯ ಸಚಿವ ಸೋಮ್ ಪ್ರಕಾಶ್ ಹಾಗೂ ರೈತ ಸಂಘಟನೆಗಳ 35 ಪ್ರತಿನಿಧಿಗಳ‌ ನಡುವೆ ಈವರೆಗೆ 5 ಸಭೆಗಳು ನಡೆದಿವೆ. ಅಮಿತ್ ಶಾ ರೈತ ಸಂಘಟನೆಗಳ 13  ಪ್ರತಿನಿಧಿಗಳೊಂದಿಗೆ ಅನೌಪಚಾರಿಕ ಮಾತುಕತೆ ನಡೆಸಿದ್ದಾರೆ. ಆದರೆ ಪ್ರಭಾವಿ ಅಮಿತ್ ಶಾ ಆಗಲಿ, ಇತರೆ ಕೇಂದ್ರ ಸಚಿವರಾಗಲಿ ರೈತರನ್ನು ಮನವೊಲಿಸಲು ಸಫಲರಾಗಿಲ್ಲ. ಇದರಿಂದ ಮಾತುಕತೆಯಿಂದ ಸಮಸ್ಯೆ ಬಗೆಹರಿಯುವ ಸಾಧ್ಯತೆ ಕ್ಷೀಣಿಸಿದ್ದು ರೈತರು ಪ್ರತಿಭಟನೆ ಮುಂದುವರೆಸುತ್ತಿದ್ದಾರೆ. ದೆಹಲಿ ಚಲೊ, ಹೆದ್ದಾರಿ ತಡೆ, ಟೋಲ್ ಫ್ಲಾಜಾಗಳ ಬಂದ್, ಬಿಜೆಪಿ ನಾಯಕರ ಮನೆ ಮುಂದೆ ಮುಷ್ಕರ, ಭಾರತ್ ಬಂದ್, ಉಪವಾಸ ಸತ್ಯಾಗ್ರಹಗಳೆಲ್ಲವನ್ನೂ ಮಾಡಿರುವ ರೈತರು ಮುಂದೆ ಯಾವ ರೀತಿಯ ಪ್ರತಿಭಟನೆ ನಡೆಸುತ್ತಾರೆ ಎನ್ನುವುದನ್ನು ಕಾದುನೋಡಬೇಕಾಗಿದೆ.

ಕೇಂದ್ರ ಸಚಿವರು ಕೃಷಿ ಕಾನೂನುಗಳಲ್ಲಿನ ಭಿನ್ನಾಭಿಪ್ರಾಯಗಳನ್ನು ವಿಂಗಡಿಸಿ ಚರ್ಚಿಸಲು ಸಮಿತಿಯೊಂದನ್ನು ರಚಿಸುವ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ. ಜೊತೆಗೆ ಕನಿಷ್ಠ ಬೆಂಬಲ ಬೆಲೆ ಪದ್ದತಿ ಮುಂದುವರೆಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಆದರೆ ಈ ಪ್ರಸ್ತಾಪಗಳಿಗೆ ಒಪ್ಪದ ರೈತ ಮುಖಂಡರು ಕೇಂದ್ರ ಸರ್ಕಾರ ಇತ್ತೀಚೆಗೆ ತಂದಿರುವ ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂಪಡೆಯಲೇಬೇಕು. ರೈತರ ಎಲ್ಲಾ ಉತ್ಪನ್ನಗಳಿಗೂ ಕನಿಷ್ಠ ಬೆಂಬಲ ಬೆಲೆ ಕೊಡಬೇಕು. ಜೊತೆಗೆ ರೈತರಿಗೆ ಮಾರಕವಾಗಿರುವ ವಿದ್ಯುತ್ ಕಾನೂನನ್ನು ವಾಪಸ್ ಪಡೆಯಲೇಬೇಕು ಎಂದು ಒತ್ತಾಯಿಸಿದ್ದಾರೆ.

ಹೊಸ ವಿನ್ಯಾಸದ ಎಲೆಕ್ಟ್ರಿಕ್​​ ಸ್ಕೂಟರ್​ ಅಭಿವೃದ್ಧಿಪಡಿಸುತ್ತಿರುವ BMW ಸಂಸ್ಥೆ; ಮಾರುಕಟ್ಟೆಗೆ ಯಾವಾಗ?

ಹೀಗೆ ಪರಸ್ಪರ ಒಮ್ಮತ ಮೂಡದೇ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ. ಅಧಿಕೃತವಾಗಿ ಹಾಗೂ ಅನೌಪಚಾರಿಕವಾಗಿ ನಡೆಸಿದ ಮಾತುಕತೆಗಳು ವಿಫಲವಾಗಿವೆ. ರೈತರು ದೆಹಲಿ ಚಲೊ, ಹೆದ್ದಾರಿ ತಡೆ, ಟೋಲ್ ಫ್ಲಾಜಾಗಳ ಬಂದ್, ಬಿಜೆಪಿ ನಾಯಕರ ಮನೆ ಮುಂದೆ ಮುಷ್ಕರ, ಭಾರತ್ ಬಂದ್, ಉಪವಾಸ ಸತ್ಯಾಗ್ರಹಗಳೆಲ್ಲವನ್ನೂ ಶಾಂತವಾಗಿ ನಡೆಸಿದ್ದರೂ ಕೇಂದ್ರ ಸರ್ಕಾರ ತನ್ನ ಹಠಮಾರಿತನದಿಂದ ಹಿಂದೆ ಸರಿದಿಲ್ಲ. ಹಾಗಾಗಿ ಮುಂದೇನಾಗುತ್ತದೆ ಎನ್ನುವುದನ್ನು ಈಗಲೇ ಹೇಳಲು‌ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ದೇಶದ ವಿವಿಧ ಮೂಲೆಗಳಿಂದ ದೆಹಲಿಯತ್ತ ಧಾವಿಸಿದ್ದ ರೈತರು ನವೆಂಬರ್ 26ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ಪ್ರತಿಭಟನೆಗೆ ಮೊದಲು ಒಪ್ಪಿಗೆ ನೀಡಿದ್ದ ಪೊಲೀಸರು ನಂತರ ಪ್ರತಿಭಟನೆ ಹತ್ತಿಕ್ಕಲೆಂದೇ ಕೊರೋನಾ ಕಾರಣವೊಡ್ಡಿ ಒಪ್ಪಿಗೆಯನ್ನು ಹಿಂಪಡೆದರು. ಇದಲ್ಲದೆ ರೈತರು ದೆಹಲಿಯನ್ನು ಪ್ರವೇಶಿಸದಂತೆ ಗಡಿಯಲ್ಲೇ ತಡೆದರು. ಸದ್ಯ ದೆಹಲಿಯ ಗಡಿಯಲ್ಲಿರುವ ರೈತರು ತಾವಿದ್ದ ಸ್ಥಳದಲ್ಲೇ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.

ಡಿಸೆಂಬರ್ 12ರಂದು ರೈತರು ಪಂಜಾಬ್, ಹರಿಯಾಣ ಮತ್ತಿತರ ಕಡೆ ಟೋಲ್ ಪ್ಲಾಜಾಗಳನ್ನು ಬಂದ್ ಮಾಡಿ ಮುಷ್ಕರ ನಡೆಸಿದ್ದಾರೆ. ಮೊದಲಿಗೆ ಪಂಜಾಬ್, ಹರಿಯಾಣಗಳಿಂದ ದೆಹಲಿಗೆ ಬರುವ ರಸ್ತೆಗಳನ್ನು ತಡೆದಿದ್ದ ರೈತರು ಈಗ ಉತ್ತರ ಪ್ರದೇಶ ಹಾಗೂ ರಾಜಸ್ಥಾನಗಳಿಂದ ದೆಹಲಿಗೆ ಬರುವ ದೆಹಲಿ-ಜೈಪುರ್ ರಸ್ತೆಯನ್ನೂ ಬಂದ್ ಮಾಡಿದ್ದಾರೆ. ಡಿಸೆಂಬರ್ 14ರಂದು ರೈತರು ಉಪವಾಸ ಸತ್ಯಾಗ್ರಹವನ್ನೂ ನಡೆಸಿದ್ದಾರೆ. ಡಿಸೆಂಬರ್ 21ರಿಂದ ರಿಲೇ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
Published by:Latha CG
First published: