news18-kannada Updated:January 4, 2021, 8:37 AM IST
ರೈತರ ಹೋರಾಟ.
ರೇವಾರಿ (ಹರಿಯಾಣ): ಕೇಂದ್ರ ಸರ್ಕಾರದ ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧದ ರೈತರ ಆಂದೋಲನದ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಜನವರಿ 26 ರ ಗಣರಾಜ್ಯೋತ್ಸವ ದಿನದಂದ ರೈತರು ದೆಹಲಿಯಲ್ಲಿ ಮತ್ತೊಂದು ರೈತ ಮೆರವಣಿಗೆ ನಡೆಸಲು ಉದ್ದೇಶಿಸಿದ್ದಾರೆ. ಹೀಗಾಗಿ ರೈತರು ದೆಹಲಿ ಹೊರ ವಲಯ ಮತ್ತು ಪಂಜಾಬ್ ಹರಿಯಾಣ ಗಡಿಯಿಂದ ನಗರದ ಒಳಗೆ ಪ್ರವೇಶಿಸಲು ಯತ್ನಿಸುತ್ತಿದ್ದಾರೆ. ಈ ಆಂದೋಲನಕ್ಕೆ ಮತ್ತಷ್ಟು ಜನ ಕೈಜೋಡಿಸುತ್ತಿದ್ದಾರೆ. ಹೀಗಾಗಿ ಭಾನುವಾರ ರೇವಾರಿ-ಅಲ್ವಾರ್ ಗಡಿಯಲ್ಲಿ ರೈತ ಹೋರಾಟಗಾರರು ಮತ್ತು ಪೊಲೀಸರ ನಡುವೆ ಘರ್ಷಣೆ ಉಂಟಾಗಿದೆ ಎನ್ನಲಾಗುತ್ತಿದೆ. ಅಲ್ಲದೆ, ವರದಿಗಳ ಪ್ರಕಾರ, ಮೆರವಣಿಗೆಯನ್ನು ತಡೆಯಲು ಪೊಲೀಸರು ಹಲವಾರು ಸುತ್ತಿನ ಅಶ್ರುವಾಯು ಪ್ರಯೋಗ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಆಂದೋಲನದ ಭಾಗವಾಗಿರುವ ರೈತರು ಪೊಲೀಸ್ ಬ್ಯಾರಿಕೇಡ್ಗಳನ್ನು ಕಿತ್ತೆಸೆದು ಮುಂದೆ ಮುಂದೆ ನುಗ್ಗಲು ಯತ್ನಿಸಿದ್ದಾರೆ. ಇದೇ ಕಾರಣಕ್ಕೆ ಘರ್ಷಣೆ ಸಂಭವಿಸಿದ್ದು, ಕೊನೆಗೂ ಪೊಲೀಸರು ರೈತರನ್ನು ಮಸಾನಿ ಎಂಬ ಸ್ಥಳದಲ್ಲಿ ತಡೆದು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. "ರೈತ ಹೋರಾಟಗಾರರನ್ನು ನಾವು ಮಸಾನಿಯಲ್ಲಿ ನಿಲ್ಲಿಸಿದ್ದೇವೆ" ಎಂದು ರೇವಾರಿ ಪೊಲೀಸ್ ಮುಖ್ಯಸ್ಥ ಅಭಿಷೇಕ್ ಜೋರ್ವಾಲ್ ಸುದ್ದಿ ಸಂಸ್ಥೆ ಪಿಟಿಐ ಗೆ ಮಾಹಿತಿ ನೀಡಿದ್ದಾರೆ.
ನವೆಂಬರ್ 26ರಿಂದಲೂ ಶಾಂತಯುತವಾಗಿ ಪ್ರತಿಭಟನೆ ನಡೆಸುತ್ತಿರುವ ರೈತರು ಡಿಸೆಂಬರ್ 8ರಂದು 'ಭಾರತ್ ಬಂದ್'ಗೆ ಕರೆ ಕೊಟ್ಟಿದ್ದರು. ಡಿಸೆಂಬರ್ 12ರಂದು ರೈತರು ಪಂಜಾಬ್, ಹರಿಯಾಣ ಮತ್ತಿತರ ಕಡೆ ಟೋಲ್ ಪ್ಲಾಜಾಗಳನ್ನು ಬಂದ್ ಮಾಡಿ ಮುಷ್ಕರ ನಡೆಸಿದ್ದರು. ಮೊದಲಿಗೆ ಪಂಜಾಬ್, ಹರಿಯಾಣಗಳಿಂದ ದೆಹಲಿಗೆ ಬರುವ ರಸ್ತೆಗಳನ್ನು ತಡೆದಿದ್ದ ರೈತರು ಬಳಿಕ ಉತ್ತರ ಪ್ರದೇಶ ಹಾಗೂ ರಾಜಸ್ಥಾನಗಳಿಂದ ದೆಹಲಿಗೆ ಬರುವ ದೆಹಲಿ-ಜೈಪುರ್ ರಸ್ತೆಯನ್ನೂ ಬಂದ್ ಮಾಡಿದ್ದರು.
ಡಿಸೆಂಬರ್ 14ರಂದು ಒಂದು ದಿನದ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಡಿಸೆಂಬರ್ 21ರಿಂದ ರಿಲೇ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಅಂದರೆ 11 ಜನ ರೈತರ ತಂಡ 24 ಗಂಟೆ ಉಪವಾಸ ಇರುವುದು ಇದಾದ ಮೇಲೆ ಮತ್ತೆ 11 ಜನ ರೈತರ ತಂಡ 24 ಗಂಟೆ ಉಪವಾಸ ಇರುವುದಾಗಿದೆ. ಡಿಸೆಂಬರ್ 25ರಿಂದ ಹರಿಯಾಣದ ಎಲ್ಲಾ ಟೋಲ್ ಗಳಲ್ಲಿ ಶುಲ್ಕ ಸಂಗ್ರಹಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಸಾರ್ವಜನಿಕರ ಸಂಚಾರಕ್ಕೆ ತೊಂದರೆಯೂ ಆಗದಂತೆ, ಸರ್ಕಾರಕ್ಕೆ ಶುಲ್ಕ ಸಿಗಬಾರದಂತೆ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತಿದ್ದಾರೆ.
ಕೇಂದ್ರ ಸರ್ಕಾರ ಕೃಷಿ ಕಾನೂನುಗಳಲ್ಲಿನ ಭಿನ್ನಾಭಿಪ್ರಾಯಗಳನ್ನು ವಿಂಗಡಿಸಿ ಚರ್ಚಿಸಲು ಸಮಿತಿಯೊಂದನ್ನು ರಚಿಸುವ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ. ಜೊತೆಗೆ ಕನಿಷ್ಠ ಬೆಂಬಲ ಬೆಲೆ ಪದ್ದತಿ ಮುಂದುವರೆಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಆದರೆ ಈ ಪ್ರಸ್ತಾಪಗಳಿಗೆ ಒಪ್ಪದ ರೈತ ಮುಖಂಡರು ಕೇಂದ್ರ ಸರ್ಕಾರ ಇತ್ತೀಚೆಗೆ ತಂದಿರುವ ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂಪಡೆಯಲೇಬೇಕು. ರೈತರ ಎಲ್ಲಾ ಉತ್ಪನ್ನಗಳಿಗೂ ಕನಿಷ್ಠ ಬೆಂಬಲ ಬೆಲೆ ಕೊಡಬೇಕು. ಜೊತೆಗೆ ರೈತರಿಗೆ ಮಾರಕವಾಗಿರುವ ವಿದ್ಯುತ್ ಕಾನೂನನ್ನು ವಾಪಸ್ ಪಡೆಯಲೇಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Covishield ದರ: ಸರ್ಕಾರಕ್ಕೆ 200, ಸಾರ್ವಜನಿಕರಿಗೆ 1000 ರೂ – ಸೆರಮ್ ಇನ್ಸ್ಟಿಟ್ಯೂಟ್ ಸ್ಪಷ್ಟನೆ
ಹೀಗೆ ಪರಸ್ಪರ ಒಮ್ಮತ ಮೂಡದೇ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ. ಅಧಿಕೃತವಾಗಿ ಹಾಗೂ ಅನೌಪಚಾರಿಕವಾಗಿ ನಡೆಸಿದ ಮಾತುಕತೆಗಳು ವಿಫಲವಾಗಿವೆ. ರೈತರು ದೆಹಲಿ ಚಲೊ, ಹೆದ್ದಾರಿ ತಡೆ, ಟೋಲ್ ಫ್ಲಾಜಾಗಳ ಬಂದ್, ಬಿಜೆಪಿ ನಾಯಕರ ಮನೆ ಮುಂದೆ ಮುಷ್ಕರ, ಭಾರತ್ ಬಂದ್, ಉಪವಾಸ ಸತ್ಯಾಗ್ರಹಗಳೆಲ್ಲವನ್ನೂ ಶಾಂತವಾಗಿ ನಡೆಸಿದ್ದರೂ ಕೇಂದ್ರ ಸರ್ಕಾರ ತನ್ನ ಹಠಮಾರಿತನದಿಂದ ಹಿಂದೆ ಸರಿದಿಲ್ಲ. ಹಾಗಾಗಿ ಮುಂದೇನಾಗುತ್ತದೆ ಎನ್ನುವುದನ್ನು ಈಗಲೇ ಹೇಳಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ದೇಶದ ವಿವಿಧ ಮೂಲೆಗಳಿಂದ ದೆಹಲಿಯತ್ತ ಧಾವಿಸಿದ್ದ ರೈತರು ನವೆಂಬರ್ 26ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ಪ್ರತಿಭಟನೆಗೆ ಮೊದಲು ಒಪ್ಪಿಗೆ ನೀಡಿದ್ದ ಕೇಂದ್ರ ಸರ್ಕಾರ ನಂತರ ಪ್ರತಿಭಟನೆ ಹತ್ತಿಕ್ಕಲೆಂದೇ ಕೊರೋನಾ ಕಾರಣವೊಡ್ಡಿ ಒಪ್ಪಿಗೆಯನ್ನು ಹಿಂಪಡೆದಿತ್ತು. ರೈತರು ದೆಹಲಿಯನ್ನು ಪ್ರವೇಶಿಸದಂತೆ ಗಡಿಯಲ್ಲೇ ತಡೆದಿತ್ತು. ಆದುದರಿಂದ ಸದ್ಯ ದೆಹಲಿಯ ಗಡಿಗಳಲ್ಲೇ ಇರುವ ರೈತರು ಅಲ್ಲೇ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.
Published by:
MAshok Kumar
First published:
January 4, 2021, 8:37 AM IST