ನವದೆಹಲಿ(ಡಿ. 8): ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಂದಿರುವ ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಕೋರಿ ಇಂದು 'ಭಾರತ್ ಬಂದ್' ಕರೆ ನೀಡಲಾಗಿದೆ. ಸಂಯುಕ್ತ ಕಿಸಾನ್ ಮೋರ್ಚಾ ‘ಭಾರತ ಬಂದ್’ಗೆ ಕರೆ ಕೊಟ್ಟಿದ್ದು ದೇಶದ 500ಕ್ಕೂ ಹೆಚ್ಚು ರೈತ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಅಲ್ಲದೆ ರಾಜಕೀಯ ಪಕ್ಷಗಳು ಹಾಗೂ ಸಂಘ-ಸಂಸ್ಥೆಗಳು ಕೂಡ ಬೆಂಬಲ ವ್ಯಕ್ತಪಡಿಸಿವೆ. ಈ ರಾಷ್ಟ್ರವ್ಯಾಪ್ತಿ ಮುಷ್ಕರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಶಾಂತಿಯುತವಾಗಿ ನಡೆಯಲಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ ತಿಳಿಸಿದೆ.
ಮೂರು ನೂತನ ಕೃಷಿ ಕಾಯ್ದೆ ಹಿಂಪಡೆಯುವಂತೆ ಕಳೆದ 13 ದಿನಗಳಿಂದ 'ದೆಹಲಿ ಚಲೋ' ಹೆಸರಿನಲ್ಲಿ ಲಕ್ಷಾಂತರ ರೈತರು ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರೈತ ಸಂಘಟನೆಗಳ 35 ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದೆ. ಒಂದಲ್ಲ, ಎರಡಲ್ಲ ಐದು ಸಭೆ ನಡೆದಿದ್ದರೂ ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಒಮ್ಮತ ಮೂಡಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಸಂಯುಕ್ತ ಕಿಸಾನ್ ಮೋರ್ಚಾ ‘ಭಾರತ ಬಂದ್’ಗೆ ಕರೆ ಕೊಟ್ಟಿದೆ.
ಇದನ್ನೂ ಓದಿ: Bharat Bandh - ರಾಜ್ಯದಲ್ಲಿ ಬೆಳಗ್ಗೆ 6ರಿಂದಲೇ ಭಾರತ್ ಬಂದ್; ಜಿಟಿ ಮಳೆಯ ನಡುವೆಯೂ ರೈತರ ಪ್ರತಿಭಟನೆ
ಭಾರತ್ ಬಂದ್ ಕುರಿತು ಮಾತನಾಡಿರುವ ರೈತ ಮುಖಂಡ ರಾಕೇಶ್ ಟಿಕಾಯತ್, ಸಾಮಾನ್ಯ ಜನರಿಗೆ ತೊಂದರೆಯಾಗದಂತೆ ಬೆಳಗ್ಗೆ 11 ಗಂಟೆಗೆ ಬಂದ್ ಆರಂಭವಾಗಲಿದೆ. ಅಷ್ಟೊತ್ತಿಗೆ ಉದ್ಯೋಗಿಗಳು ಕಚೇರಿ ತಲುಪಿರುತ್ತಾರೆ. ಮಧ್ಯಾಹ್ನ 3 ಗಂಟೆಗೆ ಮುಷ್ಕರ ಮುಗಿಯುತ್ತದೆ. ಹಾಗಾಗಿ ಬಂದ್ನಿಂದ ಯಾರಿಗೂ ತೊಂದರೆಯಾಗುವುದಿಲ್ಲ. ಮುಷ್ಕರದ ವೇಳೆ ರಸ್ತೆಗಳನ್ನು ಬಂದ್ ಮಾಡುವುದರಿಂದ ಸಾರಿಗೆ ಮತ್ತು ಬ್ಯಾಂಕಿಂಗ್ ಸೇವೆ ಮತ್ತು ಅಂಬುಲೆನ್ಸ್ ನಂತಹ ಸೇವೆಗಳಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಬಂದ್ ಬೆಂಬಲಿಸಿರುವ ಪಕ್ಷಗಳು:
ರೈತರ ಹೋರಾಟಕ್ಕೆ ಕಾಂಗ್ರೆಸ್, ಜೆಡಿಎಸ್, ಎನ್ಸಿಪಿ, ಶಿವಸೇನೆ, ಆಮ್ ಆದ್ಮಿ ಪಕ್ಷ, ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್), ರಾಷ್ಟ್ರೀಯ ಜನತಾ ದಳ, ತೃಣಮೂಲ ಕಾಂಗ್ರೆಸ್, ಡಿಎಂಕೆ, ಸಮಾಜವಾದಿ ಪಕ್ಷ, ಜಾರ್ಖಂಡ್ ಮುಕ್ತಿ ಮೋರ್ಚಾ , ಭಾರತೀಯ ರಾಷ್ಟ್ರೀಯ ಲೋಕ ದಳ, ಬಿಎಸ್ ಪಿ ಹಾಗೂ ಎಡ ಪಕ್ಷಗಳು ಬೆಂಬಲ ಸೂಚಿಸಿವೆ.
ಇದನ್ನೂ ಓದಿ: ದೆಹಲಿ ಚಲೋ; ರೈತ ಹೋರಾಟವನ್ನು ಬೆಂಬಲಿಸಿ ಪ್ರಶಸ್ತಿ ಹಿಂತಿರುಗಿಸಲು ಕ್ರೀಡಾಪಟುಗಳ ರ‍್ಯಾಲಿ, ಪೊಲೀಸರಿಂದ ತಡೆ!
ಕಾರ್ಮಿಕ ಸಂಘಗಳ ಬೆಂಬಲ:
ಭಾರತೀಯ ರಾಷ್ಟ್ರೀಯ ಟ್ರೇಡ್ ಯೂನಿಯನ್ ಕಾಂಗ್ರೆಸ್, ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್, ಹಿಂದ್ ಮಜ್ದೂರ್ ಸಭಾ, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್, ಅಖಿಲ ಭಾರತ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್, ಟ್ರೇಡ್ ಯೂನಿಯನ್ ಕೋ ಆರ್ಡಿನೇಷನ್ ಸೆಂಟರ್, ಸ್ವಯಂ ಮಹಿಳಾ ಉದ್ಯೋಗ ಸಂಘ, ಅಖಿಲ ಭಾರತ ಕೇಂದ್ರ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್, ಕಾರ್ಮಿಕ ಪ್ರಗತಿಪರ ಒಕ್ಕೂಟ, ಮತ್ತು ಯುನೈಟೆಡ್ ಟ್ರೇಡ್ ಯೂನಿಯನ್ ಕಾಂಗ್ರೆಸ್ ಸೇರಿದಂತೆ ಹಲವಾರು ಬ್ಯಾಂಕ್ ಒಕ್ಕೂಟಗಳು ರೈತರ ಹೋರಾಟಕ್ಕೆ ಪುಷ್ಠಿ ನೀಡಲು ಇಂದಿನ ಭಾರತ್ ಬಂದ್ ಗೆ ಬೆಂಬಲ ಸೂಚಿಸಿವೆ.
ವರದಿ: ಧರಣೀಶ್ ಬೂಕನಕೆರೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ