HOME » NEWS » National-international » FARMER UNIONS ANNOUNCE PLAN TO MARCH TOWARDS PARLIAMENT ON BUDGET DAY SESR DBDEL

Farmers protest: ಟ್ರ್ಯಾಕ್ಟರ್ ಮೆರವಣಿಗೆಯ ಬಳಿಕ ಪಾರ್ಲಿಮೆಂಟ್ ಚಲೋ ಹಮ್ಮಿಕೊಂಡ ರೈತರು

ಫೆಬ್ರವರಿ 01 ರಂದು ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಆಗುವ ದಿನ ರೈತರ ಪ್ರತಿನಿಧಿಗಳು ಸಂಸತ್ತಿನ ಕಡೆಗೆ ಪಾದಯಾತ್ರೆ ನಡೆಸುವ ಮತ್ತು ಈ ಮೂಲಕ ತಮ್ಮ ಹೋರಾಟ ತೀವ್ರಗೊಳಿಸುವ ನಿರ್ಧಾರಕ್ಕೆ ಬಂದಿದ್ದಾರೆ

news18-kannada
Updated:January 25, 2021, 8:48 PM IST
Farmers protest: ಟ್ರ್ಯಾಕ್ಟರ್ ಮೆರವಣಿಗೆಯ ಬಳಿಕ ಪಾರ್ಲಿಮೆಂಟ್ ಚಲೋ ಹಮ್ಮಿಕೊಂಡ ರೈತರು
ಟ್ರ್ಯಾಕ್ಟರ್​ ಮೆರವಣಿಗೆ
  • Share this:
ನವದೆಹಲಿ ( ಜ. 25): ತಮ್ಮ ಪಾಲಿಗೆ ಮರಣಶಾಸನವಾಗಿ ಪರಿಣಮಿಸುವ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವ ವಿಷಯಕ್ಕೆ ಸಂಬಂಧಿಸಿದಂತೆ ರೈತ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಕೇಂದ್ರ ಸರ್ಕಾರದ ನಡುವೆ ನಡೆದ 11ನೇ ಸುತ್ತಿನ ಸಭೆಯೂ ವಿಫಲ ಆಗಿರುವುದರಿಂದ‌ ಗಣರಾಜ್ಯೋತ್ಸವದ ದಿನ ಟ್ರ್ಯಾಕ್ಟರ್ ಮೆರವಣಿಗೆ ಹಮ್ಮಿಕೊಂಡಿರುವ ರೈತರು ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಕ್ಕೂ ನಿರ್ಧರಿಸಿದ್ದು 'ಪಾರ್ಲಿಮೆಂಟ್ ಚಲೋ' ಪಾದಯಾತ್ರೆಯನ್ನು ಮಾಡಲಿದ್ದಾರೆ. ಟ್ರ್ಯಾಕ್ಟರ್ ಮೆರವಣಿಗೆ ಮಾಡಲು ಅನುಮತಿ ನೀಡಿದ್ದರೂ ರೂಟ್ ಮ್ಯಾಪ್ ವಿಷಯದಲ್ಲಿ ದೆಹಲಿ ಪೊಲೀಸರು ತಗಾದೆ ತೆಗೆದಿದ್ದರು. ಈ ವಿಷಯದ ಬಗ್ಗೆ ಚರ್ಚೆ ನಡೆಸಿದ ರೈತ ಸಂಘಟನೆಗಳ ಮುಖಂಡರು ಟ್ರ್ಯಾಕ್ಟರ್ ಮೆರವಣಿಗೆ ಮಾಡುವ ಜೊತೆಗೆ ಪಾರ್ಲಿಮೆಂಟಿಗೆ ಪಾದಯಾತ್ರೆ ಹಮ್ಮಿಕೊಳ್ಳುವ ನಿರ್ಧಾರವನ್ನೂ ಮಾಡಿದ್ದಾರೆ. ಫೆಬ್ರವರಿ 01 ರಂದು ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಆಗುವ ದಿನ ರೈತರ ಪ್ರತಿನಿಧಿಗಳು ಸಂಸತ್ತಿನ ಕಡೆಗೆ ಪಾದಯಾತ್ರೆ ನಡೆಸುವ ಮತ್ತು ಈ ಮೂಲಕ ತಮ್ಮ ಹೋರಾಟ ತೀವ್ರಗೊಳಿಸುವ ನಿರ್ಧಾರಕ್ಕೆ ಬಂದಿದ್ದಾರೆ.

ಫೆಬ್ರವರಿ 01ರಂದು ದೆಹಲಿಯ ವಿವಿಧ ಭಾಗಗಳಿಂದ ರೈತರು ಸಂಸತ್ತಿನ ಕಡೆಗೆ ಪಾದಯಾತ್ರೆ ನಡೆಸುವುದಾಗಿ ಕ್ರಾಂತಿಕಾರಿ ಕಿಸಾನ್ ಯೂನಿಯನ್‌ ಅಧ್ಯಕ್ಷ ದರ್ಶನ್ ಪಾಲ್ ಪ್ರಕಟಿಸಿದ್ದಾರೆ.

ಪ್ರತಿಭಟನಾ ನಿರತ ರೈತ ಸಂಘಟನೆಗಳ ಪ್ರತಿನಿಧಿಗಳು ಮತ್ತು ಕೇಂದ್ರ ಸರ್ಕಾರದ ನಡುವೆ ಈವರೆಗೆ 11 ಸುತ್ತು ಮಾತುಕತೆ ನಡೆದಿವೆ. ಅಷ್ಟೂ ಸಭೆಗಳು ವಿಫಲವಾಗಿವೆ. ಹಾಗಾಗಿ ಪ್ರತಿಭಟನೆಯನ್ನು ರೈತ ಸಂಘಟನೆಗಳು ಮುಂದುವರೆಸಿಕೊಂಡು ಬರುತ್ತಿದ್ದು ಗಣರಾಜ್ಯೋತ್ಸವದ ದಿನ ಕೇಂದ್ರ ಸರ್ಕಾರದ ಗಣರಾಜ್ಯೋತ್ಸವದ ಅಧಿಕೃತ ಪರೆಡ್ ಗೆ ಪ್ರತಿಯಾಗಿ 'ಕಿಸಾನ್ ಟ್ರ್ಯಾಕ್ಟರ್ ಪರೇಡ್' ಅನ್ನೂ ಹಮ್ಮಿಕೊಳ್ಳಲಾಗಿದೆ. ಟ್ರ್ಯಾಕ್ಟರ್ ಮೆರವಣಿಗೆ ಮಾಡಲು ದೆಹಲಿ ಪೊಲೀಸರು ಇನ್ನಿಲ್ಲದ ಸಬೂಬು ಹೇಳಿದರು. ಆದರೂ ರೈತರು ಪಟ್ಟು ಬಿಡದೆ ಟ್ರ್ಯಾಕ್ಟರ್ ಮೆರವಣಿಗೆ ಮಾಡುತ್ತಿದ್ದಾರೆ. ಈ ಗೆಲುವಿನ‌ ಹುಮ್ಮಸ್ಸಿನೊಂದಿಗೆ ಪಾರ್ಲಿಮೆಂಟ್ ಪಾದಯಾತ್ರೆಯನ್ನೂ ಘೋಷಿಸಿದ್ದಾರೆ.ಟ್ರ್ಯಾಕ್ಟರ್ ಮೆರವಣಿಯಲ್ಲೂ ಸ್ತಬ್ದಚಿತ್ರ!

ಕೇಂದ್ರ ಸರ್ಕಾರದ ಅಧಿಕೃತವಾಗಿ ನಡೆಯುವ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ದೇಶದ ವಿವಿಧ ಭಾಗಗಳ ಕಲೆ, ಸಂಸ್ಕೃತಿ, ಜನ ಜೀವನ ಬಿಂಬಿಸುವ ಸ್ತಬ್ದಚಿತ್ರಗಳ ಪ್ರದರ್ಶನ ಇರಲಿದೆ. ಅದೇ ರೀತಿ ರೈತರು ನಡೆಸುತ್ತಿರುವ ಟ್ರ್ಯಾಕ್ಟರ್ ಮೆರವಣಿಗೆಯಲ್ಲೂ ಸ್ತಬ್ದ ಚಿತ್ರಗಳನ್ನು ಕಾಣಬಹುದಾಗಿದೆ. ರೈತರ ಸ್ತಬ್ದ ಚಿತ್ರಗಳಲ್ಲಿ ಕೃಷಿಕರ ಬದುಕು, ಬವಣೆ, ಕೃಷಿಯ ಜೊತೆಗೆ ಬೆಸೆದುಕೊಂಡಿರುವ ಹೈನುಗಾರಿಕೆ, ದೇಶದ ವಿವಿಧ ಭಾಗಗಳಲ್ಲಿ ಇರುವ ಭಿನ್ನ ಭಿನ್ನ ಕೃಷಿ ಪದ್ಧತಿಗಳ ಪ್ರದರ್ಶನ ಇರಲಿದೆ. ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಹಾಗೂ ಉತ್ತರಾಖಂಡದಂತಹ ಕಣಿವೆ ಪ್ರದೇಶಗಳಲ್ಲಿ ಕಂಡುಬರುವ ಕೃಷಿ ಪದ್ಧತಿಯನ್ನೂ ಬಿಂಬಿಸಲಾಗಿದೆ. ಪಂಜಾಬ್ ಹಾಗೂ ಹರಿಯಾಣದ ರೈತರು ಹಸಿರು ಕ್ರಾಂತಿ ಬಗ್ಗೆ ಸ್ತಬ್ಧ ಚಿತ್ರಗಳ ಪ್ರದರ್ಶನ ಇರಲಿದೆ. ಮಹಾರಾಷ್ಟ್ರದ ವಿದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳು ಕೂಡ ಟ್ರ್ಯಾಕ್ಟರ್ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಲಕ್ಷಗಟ್ಟಲೆ ಟ್ರ್ಯಾಕ್ಟರ್-ಟ್ರಾಲಿಗಳು

ರೈತರ ಪ್ರತಿಭಟನಾತ್ಮಕ ಟ್ರ್ಯಾಕ್ಟರ್ ಪರೆಡ್ ನಲ್ಲಿ ಪಂಜಾಬ್, ಹರಿಯಾಣ, ಉತ್ತರಖಂಡಾ ಮತ್ತು ಉತ್ತರ ಪ್ರದೇಶಗಳಿಂದಲೇ ಸುಮಾರು ಒಂದು ಲಕ್ಷ ಟ್ರ್ಯಾಕ್ಟರ್-ಟ್ರಾಲಿಗಳು ಭಾಗವಹಿಸಲಿವೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಎಲ್ಲಾ ಟ್ರ್ಯಾಕ್ಟರ್ ಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಲಾಗಿದೆ. ಶೇಕಡಾ 30ರಷ್ಟು ಟ್ರ್ಯಾಕ್ಟರ್ ಗಳಲ್ಲಿ ರೈತರ ಚಳವಳಿಯ ಇತಿಹಾಸವನ್ನು ತಿಳಿಸುವ ಸ್ತಬ್ದ ಚಿತ್ರಗಳಿರಲಿವೆ.‌ ಕೃಷಿಯಲ್ಲಿ ಮತ್ತು ರೈತ ಚಳವಳಿಯಲ್ಲಿ ಮಹಿಳಾ ರೈತರ ಪಾತ್ರದ ಬಗ್ಗೆ ಕೂಡ ಸ್ತಬ್ದಚಿತ್ರಗಳು ಬೆಳಕು ಚೆಲ್ಲಲಿವೆ. ಟ್ರ್ಯಾಕ್ಟರ್ ಮೆರವಣಿಗೆಯಲ್ಲಿ ಸುಮಾರು 50ಕ್ಕೂ ಹೆಚ್ಚು ರೈತ ಸಂಘಟನೆಗಳು ಪಾಲ್ಗೊಳ್ಳುತ್ತಿದ್ದು ಎಲ್ಲಾ ಸಂಘಟನೆಗಳಿಗೂ ಭಿನ್ನ ಭಿನ್ನ ವಿಷಯದ ಬಗ್ಗೆ ಸ್ತಬ್ದ ಚಿತ್ರ ರೂಪಿಸಲು ತಿಳಿಸಲಾಗಿದೆ.
Published by: Seema R
First published: January 25, 2021, 8:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories