ವರ್ಷದ ಪ್ರತಿಭಟನೆ ಅಂತ್ಯಗೊಳಿಸಲು ನಿರ್ಧಾರ; ನಾಳೆ ಸಿಂಘು ಗಡಿ ತೊರೆಯಲಿರುವ ರೈತರು

ಸರ್ಕಾರವು ರೈತರ ಎಲ್ಲಾ ಬೇಡಿಕೆಗಳನ್ನು ಅಂಗೀಕರಿಸಿದ ಹಿನ್ನಲೆ ಅವರು ಈ ತೀರ್ಮಾನ ನಡೆಸಿದ್ದು, ಈ ಬಗ್ಗೆ ಇಂದು ರೈತ ಸಂಘಟನೆ ನಿರ್ಧಾರ ಪ್ರಕಟಿಸಲಿದ್ದು, ನಾಳೆ ಪ್ರತಿಭಟನಾ ಸ್ಥಳಗಳನ್ನು ಬಿಟ್ಟು ಹೊರಡಲಿದ್ದಾರೆ.

ರೈತರ ಪ್ರತಿಭಟನೆ ಚಿತ್ರ

ರೈತರ ಪ್ರತಿಭಟನೆ ಚಿತ್ರ

 • Share this:
  ಕಳೆದೊಂದು ವರ್ಷದಿಂದ ದೆಹಲಿಯ ಸಿಂಘು ಗಡಿಯಲ್ಲಿ ರೈತರು (Farmer Protest in Singhu Border) ನಡೆಸುತ್ತಿರುವ ಪ್ರತಿಭಟನೆ ಇಂದು ಕೊನೆಗೊಳ್ಳುವ ಸಾಧ್ಯತೆ ಇದೆ. ವಿವಾದಿತ ಮೂರು ಕೃಷಿ ಮಸೂದೆ ರದ್ಧಾದ ( Farm law) ಬಳಿಕವೂ ತಮ್ಮ ಪ್ರತಿಭಟನೆ ಮುಂದುವರೆಸಿದ್ದ ರೈತ ಸಂಘಟನೆಗಳು  ಕನಿಷ್ಠ ಬೆಂಬಲ ಬೆಲೆ (MSP), ಪ್ರತಿಭಟನೆ ವೇಳೆ ಸಾವನ್ನಪ್ಪಿದ ರೈತರ ಕುಟುಂಬಕ್ಕೆ ಪರಿಹಾರ (Composition ) ಸೇರಿದಂತೆ ಹಲವು ಬೇಡಿಕೆಗಳನ್ನು ಕೇಂದ್ರ ಸರ್ಕಾರ ಮುಂದೆ ಇರಿಸಿದ್ದರು. ಈ ಕುರಿತು ನಿನ್ನೆ ದೆಹಲಿಯಲ್ಲಿ ಸರ್ಕಾರದ ಜೊತೆ ಮಾತುಕತೆ ನಡೆಸಿದ ಬಳಿಕ ಅವರು ತಮ್ಮ ಈ ವರ್ಷದ ಹೋರಾಟಕ್ಕೆ ಇಂದು ಅಂತಿಮ ಹಾಡಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸರ್ಕಾರವು ರೈತರ ಎಲ್ಲಾ ಬೇಡಿಕೆಗಳನ್ನು ಅಂಗೀಕರಿಸಿದ ಹಿನ್ನಲೆ ಅವರು ಈ ತೀರ್ಮಾನ ನಡೆಸಿದ್ದು, ಈ ಬಗ್ಗೆ ಇಂದು ರೈತ ಸಂಘಟನೆ ನಿರ್ಧಾರ ಪ್ರಕಟಿಸಲಿದ್ದು, ನಾಳೆ ಪ್ರತಿಭಟನಾ ಸ್ಥಳಗಳನ್ನು ಬಿಟ್ಟು ಹೊರಡಲಿದ್ದಾರೆ.

  ಪ್ರತಿಭಟನೆಯ ನೇತೃತ್ವ ವಹಿಸಿರುವ ರೈತ ಸಂಘಗಳ ಮುಖ್ಯ ಸಂಸ್ಥೆಯಾದ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ನಿನ್ನೆ ಸಂಜೆ ತಮ್ಮ 14 ತಿಂಗಳ ತಮ್ಮ ಹೋರಾಟವನ್ನು ಗುರುವಾರ ಮಧ್ಯಾಹ್ನ 12 ಗಂಟೆಗೆ ಹಿಂತೆಗೆದುಕೊಳ್ಳುವುದಾಗಿ ತಿಳಿಸಿತ್ತು, ಇದೇ ವೇಳೆ ಸರ್ಕಾರ ಬೇಡಿಕೆಗಳನ್ನು ಸ್ವೀಕರಿಸುವ ಪ್ರಸ್ತಾವನೆಯ ಪರಿಷ್ಕೃತ ಪ್ರತಿಯನ್ನು ಪಡೆದ ನಂತರವೇ ಈ ಬಗ್ಗೆ ಅಂತಿಮ ತೀರ್ಮಾನ ನಡೆಸಲಾಗುವುದು ಎಂದು ತಿಳಿಸಿತು.

  ಕೃಷಿ ಕಾನೂನು ಹಿಂಪಡೆಯಬೇಕು ಎಂದು ರೈತರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ರೈತರ ಮೇಲೆ ದಾಖಲಾದ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ ನಂತರ ರೈತರ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವುದಾಗಿ ತಿಳಿಸಿತು. ಜೊತೆಗೆ ಕೇಂದ್ರ ಸರ್ಕಾರ ಎಸ್‌ಕೆಎಂ ಅಥವಾ ಇತರೆ ಸಂಬಂಧಿತ ರೈತ ಸಂಘಗಳೊಂದಿಗೆ ಸಮಾಲೋಚಿಸಿದ ನಂತರವೇ ವಿದ್ಯುತ್ ತಿದ್ದುಪಡಿ ಮಸೂದೆಯನ್ನು ಮಂಡಿಸುವುದಾಗಿ ಭರವಸೆ ನೀಡಿದೆ.

  ಇದಲ್ಲದೆ, ಹರಿಯಾಣ ಮತ್ತು ಉತ್ತರ ಪ್ರದೇಶ ರಾಜ್ಯ ಸರ್ಕಾರ ಹಾಗೂ ಪಂಜಾಬ್ ಮಾದರಿಯಲ್ಲಿ ಮೃತ ರೈತ ಕುಟುಂಬಗಳಿಗೆ 5 ಲಕ್ಷ ರೂ ಪರಿಹಾರ ಮತ್ತು ಮೃತ ರೈತರ ಕುಟುಂಬಕ್ಕೆ ಉದ್ಯೋಗ ನೀಡಲು ಕೇಂದ್ರ ಒಪ್ಪಿಗೆ ನೀಡಿದೆ. ಇನ್ನು ರೈತರ ಪ್ರಮುಖ ಬೇಡಿಕೆಯಾದ ಕನಿಷ್ಠ ಬೆಂಬಲ ಬೆಲೆ ಸಮಿತಿಯಲ್ಲಿ ರಾಜ್ಯಗಳು, ಕೇಂದ್ರದ ಅಧಿಕಾರಿಗಳು ಮತ್ತು ಕೃಷಿ ತಜ್ಞರನ್ನು ಹೊರತುಪಡಿಸಿ ಕೇವಲ ಎಸ್‌ಕೆಎಂ ನಾಯಕರನ್ನು ಮಾತ್ರ ಸೇರಿಸಿಕೊಳ್ಳಬೇಕು ಎಂಬ ಷರತ್ತಿಗೂ ಸರ್ಕಾರ ಒಪ್ಪಿಗೆ ನೀಡಿದೆ.

  ಇದನ್ನು ಓದಿ:  ಹೆಲಿಕಾಪ್ಟರ್​ ಪತನದಲ್ಲಿ ಬದುಕುಳಿದಿದ್ದು ಕೇವಲ ಪೈಲಟ್​; ಹೇಗೆ ಸಾಧ್ಯ ಆಯಿತು ಗೊತ್ತಾ?

  ಈ ಹಿಂದೆ, ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗ ಆಶಿಶ್ ಅವರನ್ನು ವಜಾಗೊಳಿಸಬೇಕು ಎಂದು ರೈತರು ಒತ್ತಾಯಿಸಿದರು. ಆದರೆ, ಕೇಂದ್ರಕ್ಕೆ ಕೊನೆಯದಾಗಿ ರೈತ ಸಂಘಟನೆಗಳು ಚರ್ಚಿಸಿ ಕೇಂದ್ರಕ್ಕೆ ಕಳುಹಿಸಿದ ಪ್ರಸ್ತಾಪದಲ್ಲಿ ಆ ಅಂಶವನ್ನು ತೆಗೆದುಹಾಕಲಾಯಿತು.

  ಇದನ್ನು ಓದಿ: ಉ.ಪ್ರ. ಚುನಾವಣೆಗೆ ಮಹಿಳೆಯರಿಗೆ ಪ್ರತ್ಯೇಕ ಪ್ರಣಾಳಿಕೆ: ಕಾಂಗ್ರೆಸ್ ವಿನೂತನ ಕಾರ್ಯತಂತ್ರ

  ರೈತರ ವಿರೋಧದ ನಡುವೆಯೂ ಕಳೆದ ಚಳಿಗಾಲ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ವಿವಾದಿತ ಕೃಷಿ ಕಾನೂನು ಮಸೂದೆ ಮಂಡಿಸಿತ್ತು. ಇದನ್ನು ಪ್ರತಿಭಟಿಸಿ ದೇಶದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಅಲ್ಲದೇ ವಿಪಕ್ಷಗಳು ಇವು ರೈತ ವಿರೋಧಿ ಮಸೂದೆಯಾಗಿವೆ ಎಂದು ಟೀಕಿಸಿದವು. ಈ ಮಸೂದೆಯನ್ನು ರದ್ದುಗೊಳಿಸುವವರೆಗೂ ತಾವು ಪ್ರತಿಭಟನೆ ನಡೆಸುವುದಾಗಿ ವಿವಿಧ ರಾಜ್ಯಗಳ ರೈತರು ದೆಹಲಿಯ ಗಡಿಯಲ್ಲಿ ಬೀಡು ಬಿಟ್ಟರು. ಹರಿಯಾಣ, ಚಂಢೀಗಡ, ಪಂಜಾಬ್​ನಲ್ಲಿ ರೈತರು ಈ ಮಸೂದೆಗೆ ಸಾಕಷ್ಟು ವಿರೋಧಿಸಿ ಕಳೆದೊಂದು ವರ್ಷದಿಂದ ಪ್ರತಿಭಟನೆ ನಡೆಸಿದರು.

  ರೈತರ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಕೇಂದ್ರ ಸರ್ಕಾರ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅಗತ್ಯ ಮಸೂದೆಗಳನ್ನು ತರಲಿದೆ ಎಂದು ನವೆಂಬರ್ 19 ರಂದು ಘೋಷಿಸಿತು. ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಕನಿಷ್ಠ ಬೆಂಬಲ ಬೆಲೆ ಗಾಗಿ ಹೊಸ ಚೌಕಟ್ಟಿನ ಮೇಲೆ ಕೆಲಸ ಮಾಡಲು ಸರ್ಕಾರವು ಸಮಿತಿಯನ್ನು ರಚಿಸಲಿದೆ ಎಂದು ಅವರು ಭರವಸೆ ನೀಡಿದ್ದರು.
  Published by:Seema R
  First published: