ನವದೆಹಲಿ: ವಾಸ್ತುಶಿಲ್ಪ ಕ್ಷೇತ್ರದಲ್ಲಿ (Architect ) ಭಾರೀ ಪ್ರಖ್ಯಾತಿಯನ್ನು ಗಳಿಸಿದ್ದ ಭಾರತದ ಪ್ರಸಿದ್ಧ ವಾಸ್ತುಶಿಲ್ಪಿ ಶ್ರೀ ಬಾಲಕೃಷ್ಣ ವಿಠ್ಠಲ್ದಾಸ್ ದೋಶಿ (Balkrishna Doshi ) ಅವರು ನಿಧನರಾಗಿದ್ದಾರೆ. 2020 ರಲ್ಲಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದ ಬಾಲಕೃಷ್ಣ ವಿಠ್ಠಲ್ದಾಸ್ ದೋಶಿ ಅವರು ತಮ್ಮ 95ನೇ ವಯಸ್ಸಿನಲ್ಲಿ (Gujarat) ಕೊನೆಯುಸಿರೆಳೆದಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇನ್ನಿತರ ಗಣ್ಯರು ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ವಿಶ್ವ ಪ್ರಸಿದ್ಧ ವಾಸ್ತುಶಿಲ್ಪಿ ಬಿವಿ ದೋಶಿ
ವಾಸ್ತುಶಿಲ್ಪ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದ ಬಾಲಕೃಷ್ಣ ವಿಠ್ಠಲ್ದಾಸ್ ದೋಶಿ ಅವರು ಐಐಎಂ ಬೆಂಗಳೂರು, ಎನ್ಐಎಫ್ಟಿ ದೆಹಲಿ ಮತ್ತು ಅಹಮದಾಬಾದ್ನ ಸಿಇಪಿಟಿ ವಿಶ್ವವಿದ್ಯಾಲಯದಂತಹ ದೇಶದ ಕೆಲವು ಅಪ್ರತಿಮ ರಚನೆಗಳನ್ನು ವಿನ್ಯಾಸಗೊಳಿಸಿದ ಕೀರ್ತಿಗೆ ಪಾತ್ರರಾಗಿದ್ದರು. ವಿಶೇಷ ಅಂದರೆ ಬಾಲಕೃಷ್ಣ ವಿಠ್ಠಲ್ದಾಸ್ ದೋಶಿ ಅವರು ರಾಯಲ್ ಗೋಲ್ಡ್ ಮೆಡಲ್ ಮತ್ತು ಪ್ರಿಟ್ಜ್ಕರ್ ಆರ್ಕಿಟೆಕ್ಚರ್ ಪ್ರಶಸ್ತಿ ಈ ಎರಡನ್ನೂ ಪಡೆದ ಏಕೈಕ ಭಾರತೀಯರಾಗಿದ್ದರು.
ಇದನ್ನೂ ಓದಿ: Narendra Modi: ನರೇಂದ್ರ ಮೋದಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿ; ಭಾರತದ ಪ್ರಧಾನಿಯನ್ನು ಹಾಡಿ ಹೊಗಳಿದ ಬ್ರಿಟನ್ ಸಂಸದ!
ಸಂತಾಪ ಸೂಚಿಸಿದ ಪ್ರಧಾನಿ ಮೋದಿ
ಬಾಲಕೃಷ್ಣ ವಿಠ್ಠಲ್ದಾಸ್ ದೋಶಿ ಅವರು ತಮ್ಮ 95ನೇ ವಯಸ್ಸಿನಲ್ಲಿ ಗುಜರಾತ್ನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದು, ಅಹಮದಾಬಾದ್ನ ಥಾಲ್ತೇಜ್ ಸ್ಮಶಾನದಲ್ಲಿ ಮಂಗಳವಾರ ಮಧ್ಯಾಹ್ನ 2.30ಕ್ಕೆ ಅಂತ್ಯಕ್ರಿಯೆ ನೆರವೇರಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬಾಲಕೃಷ್ಣ ವಿಠ್ಠಲ್ದಾಸ್ ದೋಶಿ ಅವರೊಂದಿಗಿನ ಫೋಟೋ ಜೊತೆ ಸಂತಾಪ ಸೂಚಿಸಿದ್ದು, ಡಾ.ಬಿವಿ ದೋಶಿ ಅವರು ಅದ್ಭುತ ವಾಸ್ತುಶಿಲ್ಪಿ ಮತ್ತು ಪ್ರಸಿದ್ಧ ಸಂಸ್ಥೆಯ ನಿರ್ಮಾತೃ ಆಗಿದ್ದರು. ಮುಂದಿನ ಪೀಳಿಗೆಯವರು ಭಾರತದಾದ್ಯಂತ ಅವರ ಕೆಲಸ ಕಾರ್ಯಗಳನ್ನು ಮೆಚ್ಚುವ ಮೂಲಕ ಅವರ ಶ್ರೇಷ್ಠ ಕೆಲಸಗಳನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಅವರ ಅಗಲಿಕೆ ನೋವು ತಂದಿದೆ. ಅವರ ಕುಟುಂಬ ಮತ್ತು ಅಭಿಮಾನಿ ವರ್ಗಕ್ಕೆ ಸಂತಾಪಗಳು ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Aihole: ವಾಸ್ತುಶಿಲ್ಪದ ತೊಟ್ಟಿಲು ಈ ಐಹೊಳೆಗೆ ಪ್ರವಾಸ ಹೋಗೋದು ಹೇಗೆ? ಇಲ್ಲಿದೆ ಫುಲ್ ಮಾಹಿತಿ
ಬಾಲಕೃಷ್ಣ ವಿಠ್ಠಲ್ದಾಸ್ ದೋಶಿ ಸಾಧನೆ
1954ರಲ್ಲಿ ಗಿರಣಿ ಮಾಲೀಕರ ಸಂಘದ ಕಟ್ಟಡ ಮತ್ತು 1955ರಲ್ಲಿ ಅಹಮದಾಬಾದ್ನಲ್ಲಿ ವಿಲ್ಲಾ ಸಾರಾಭಾಯಿ ಸೇರಿದಂತೆ ಲೆ ಕಾರ್ಬ್ಯೂಸಿಯರ್ನ ಯೋಜನೆಗಳ ನಿರ್ಮಾಣದ ಮೇಲ್ವಿಚಾರಕರಾಗಿ ಭಾರತದಲ್ಲಿ ಕೆಲಸ ಆರಂಭಿಸಿದ ಅವರು, 1956ರಲ್ಲಿ ತಮ್ಮದೇ ಆದ ವಾಸ್ತುಶಿಲ್ಪ ಅಧ್ಯಯನ ಕೇಂದ್ರವನ್ನು ಸ್ಥಾಪಿಸಿದರು. ಈ ಸಂಸ್ಥೆಯು 1962ರ ನಂತರ ಐಐಎಂ ಅಹಮದಾಬಾದ್ ಸೇರಿದಂತೆ ಭಾರತದ ವಿವಿಧೆಡೆ ನೂರಕ್ಕೂ ಹೆಚ್ಚು ಯೋಜನೆಗಳಲ್ಲಿ ಕೆಲಸ ಮಾಡಿದೆ. ಬಳಿಕ 1963ರಲ್ಲಿ ತಮ್ಮ ಸ್ವಂತ ನಿವಾಸವನ್ನು ತಮ್ಮದೇ ಯೋಚನೆಗಳ ಮೂಲಕ ವಿನ್ಯಾಸಗೊಳಿಸಿ ಕಮಲಾ ಹೌಸ್ ಎಂದು ನಾಮಕರಣ ಮಾಡಿದರು. ಜೊತೆಗೆ 1978ರಲ್ಲಿ ವಾಸ್ತು ಶಿಲ್ಪ ಫೌಂಡೇಶನ್ ಅನ್ನು ಸ್ಥಾಪಿಸಿ ಶೈಕ್ಷಣಿಕ ಮತ್ತು ವೃತ್ತಿಪರ ಸಲಹೆಗಾರರ ನಡುವೆ ಕೊಂಡಿಯಾಗಿ ಕಾರ್ಯ ನಿರ್ವಹಿಸುವಂತೆ ಯೋಜನೆ ರೂಪಿಸಿದರು.
2020ರಲ್ಲಿ ಪದ್ಮಭೂಷಣ ಗೌರವ
ಬಾಲಕೃಷ್ಣ ವಿಠ್ಠಲ್ದಾಸ್ ದೋಶಿ ಅವರು ವಾಸ್ತುಶಿಲ್ಪ ಕ್ಷೇತ್ರದಲ್ಲಿ ಸಲ್ಲಿಸಿದ ಸಾಧನೆಯನ್ನು ಗೌರವಿಸಿ ಕೇಂದ್ರ ಸರ್ಕಾರವು 2020ರಲ್ಲಿ ಅವರಿಗೆ ಭಾರತದ ಮೂರನೇ ಅತ್ಯುನ್ನತ ನಾಗರಿಕ ಗೌರವ ಪದ್ಮಭೂಷಣವನ್ನು ಪ್ರದಾನ ಮಾಡಿ ಗೌರವಿಸಿದೆ. ವಿಶೇಷ ಅಂದ್ರೆ ವಾಸ್ತುಶಿಲ್ಪಕ್ಕಾಗಿ ನೀಡಲಾಗುವ ವಿಶ್ವದ ಅತ್ಯುನ್ನತ ಗೌರವಗಳಲ್ಲಿ ಒಂದಾಗಿರುವ ರಾಯಲ್ ಗೋಲ್ಡ್ ಮೆಡಲ್ ಅನ್ನು 2022ರಲ್ಲಿ ನೀಡಿ ಗೌರವಿಸಲಾಗಿದೆ. ಇವರ ಜೀವಮಾನದ ಸಾಧನೆಗಾಗಿ ರಾಯಲ್ ಗೋಲ್ಡ್ ಮೆಡಲ್ ಅನ್ನು ರಾಣಿ ಎಲಿಜಬೆತ್ || ಅವರು ವೈಯಕ್ತಿವಾಗಿ ಅನುಮೋದಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ