Maharashtra Politics: ಬಿಜೆಪಿ-ಶಿವಸೇನೆ ‘ಮಹಾ’ ಜಟಾಪಟಿ, “ಉದ್ಧವ್ ಹಿಂದುತ್ವ ಪೇಪರ್’ನಲ್ಲಿ ಮಾತ್ರ” ಎಂದ ಫಡ್ನವೀಸ್

Maharashtra Politics: “ಬಿಜೆಪಿ ಅಧಿಕಾರಕ್ಕೆ ಬರುವುದಕ್ಕಾಗಿ ಮಾತ್ರ ಹಿಂದುತ್ವವನ್ನು ಬಳಸಿಕೊಳ್ಳುತ್ತದೆ” ಅಂತ ಉದ್ಧವ್ ಠಾಕ್ರೆ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ದೇವೇಂದ್ರ ಫಡ್ನವೀಸ್, “ಉದ್ಧವ್ ಠಾಕ್ರೆಯವರ ಹಿಂದುತ್ವ ಬರೀ ಅವರ ಪೇಪರ್ ಗಷ್ಟೇ ಸೀಮಿತ” ಎಂದಿದ್ದಾರೆ.

ದೇವೇಂದ್ರ ಫಡ್ನವೀಸ್

ದೇವೇಂದ್ರ ಫಡ್ನವೀಸ್

 • Share this:
  ಮಹಾರಾಷ್ಟ್ರ ರಾಜ್ಯ ರಾಜಕೀಯದಲ್ಲಿ (Maharashtra Politics) ಕೆಸರೆರೆಚಾಟ ಮುಂದುವರೆದಿದೆ. ಆಡಳಿತಾರೂಢ ಶಿವಸೇನೆ (Shivasena) ಹಾಗೂ ಬಿಜೆಪಿ (BJP) ನಡುವೆ ವಾರ್ ಕಂಟಿನ್ಯೂ ಆಗಿದೆ. ಶಿವಸೇನೆ ಸಂಸ್ಥಾಪಕ ಬಾಳಾ ಠಾಕ್ರೆ (Bala Saheb Thackeray) ಜನ್ಮದಿನೋತ್ಸವದ ವೇದಿಕೆಯಲ್ಲಿ ಶಿವಸೇನೆ ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. “ಬಿಜೆಪಿಯೊಂದಿಗೆ ಸೇರಿ ಶಿವಸೇನೆಯ 25 ವರ್ಷಗಳು ವ್ಯರ್ಥವಾಯ್ತು” ಅಂತ ಸಿಎಂ ಉದ್ಧವ್ ಠಾಕ್ರೆ (Uddhav Thackeray) ಆರೋಪಿಸಿದ್ದರು. ಇದರ ಬೆನ್ನಲ್ಲೇ ಸಂಸದ ಸಂಜಯ್ ರಾವತ್ ಬಿಜೆಪಿ ವಿರುದ್ಧ ಗುಡುಗಿದ್ದರು. “ಬಾಬರಿ ಮಸೀದಿ ಧ್ವಂಸದ ನಂತರ ಉತ್ತರ ಭಾರತದಲ್ಲಿ ಶಿವಸೇನೆಯ ಅಲೆ ಇತ್ತು. ಆ ಸಮಯದಲ್ಲಿ ನಾವು ಚುನಾವಣೆಯಲ್ಲಿ ಸ್ಪರ್ಧಿಸಿದ್ದಿದ್ದರೆ, ದೇಶದಲ್ಲಿ ಶಿವಸೇನೆಯ ಪ್ರಧಾನಿ ಇರುತ್ತಿದ್ದರು. ಆದರೆ ನಾವು ಪ್ರಧಾನಿ ಸ್ಥಾನವನ್ನು ಬಿಜೆಪಿಗಾಗಿ ಬಿಟ್ಟಿದ್ದೇವೆ” ಅಂತ ಹೇಳಿದ್ದರು. ಶಿವಸೇನೆ ನಾಯಕರ ಹೇಳಿಕೆಗೆ ಇದೀಗ ಮಹಾರಾಷ್ಟ್ರ ಮಾಜಿ ಸಿಎಂ ಹಾಗೂ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ (devendra fadnavis ) ತಿರುಗೇಟು ನೀಡಿದ್ದಾರೆ.

  ಉದ್ಧವ್ ವಿರುದ್ದ ತಿರುಗಿ ಬಿದ್ದ ಫಡ್ನವೀಸ್

  ಸಿಎಂ ಉದ್ಧವ್ ಠಾಕ್ರೆ ಹಾಗೂ ಶಿವಸೇನೆ ಸಂಸದ ಸಂಜಯ್ ರಾವತ್ ಹೇಳಿಕೆ ಬಗ್ಗೆ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕಿಡಿಕಾರಿದ್ದಾರೆ. “ಉದ್ಧವ್ ಠಾಕ್ರೆ ಇತಿಹಾಸವನ್ನು ಮರೆತಿದ್ದಾರೆ. ಶಿವಸೇನೆಯು 25 ವರ್ಷಗಳನ್ನು ವ್ಯರ್ಥ ಮಾಡಿದೆ ಎಂದು ಅವರು ಹೇಳಿದ್ದಾರೆ. ಆದರೆ 2012ರವರೆಗೆ ಬಾಳಾ ಸಾಹೇಬ್ ಠಾಕ್ರೆ ಇದೇ ಶಿವಸೇನೆ ಹಾಗೂ ಬಿಜೆಪಿ ಮೈತ್ರಿಕೂಟದ ನಾಯಕರಾಗಿದ್ದರು ಎಂಬುದನ್ನು ಅವರು ಮರೆತಿದ್ದಾರೆ. ಉದ್ಧವ್ ಹೇಳಿಕೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಬಾಳಾಸಾಹೇಬ್ ಠಾಕ್ರೆ ಅವರ ನಿರ್ಧಾರವನ್ನೇ ಅನುಮಾನಿಸಿದಂತಾಗುತ್ತದೆ” ಅಂತ ಕುಟುಕಿದ್ದಾರೆ.

  ಇದನ್ನೂ ಓದಿ: ಶೀಘ್ರದಲ್ಲೇ ಕೋವಿಡ್​​ ಅಂತ್ಯ ಎಂದ WHO

  “ಉದ್ಧವ್ ಹಿಂದುತ್ವ ಕೇವಲ್ ಪೇಪರ್’ಗಷ್ಟೇ ಸೀಮಿತ”

  “ಬಿಜೆಪಿ ಅಧಿಕಾರಕ್ಕೆ ಬರುವುದಕ್ಕಾಗಿ ಮಾತ್ರ ಹಿಂದುತ್ವವನ್ನು ಬಳಸಿಕೊಳ್ಳುತ್ತದೆ” ಅಂತ ಉದ್ಧವ್ ಠಾಕ್ರೆ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ದೇವೇಂದ್ರ ಫಡ್ನವೀಸ್, “ಉದ್ಧವ್ ಠಾಕ್ರೆಯವರ ಹಿಂದುತ್ವ ಬರೀ ಅವರ ಪೇಪರ್ ಗಷ್ಟೇ ಸೀಮಿತ” ಎಂದಿದ್ದಾರೆ.

  “ಬಿಜೆಪಿ ಚಿಹ್ನೆಯಿಂದಲೇ ಗೆದ್ದಿತ್ತು ಶಿವಸೇನೆ”

  ಮುಂದುವರೆದು ಆರೋಪ ಮಾಡಿರುವ ಫಡ್ನವೀಸ್, “ಹಿಂದೆ ಶಿವಸೇನೆ ಬಿಜೆಪಿ ಚಿಹ್ನೆಯ ಅಡಿಯಲ್ಲೇ ಚುನಾವಣೆ ಗೆದ್ದಿತ್ತು” ಎಂದಿದ್ದಾರೆ. “ಶಿವಸೇನೆ ಅಸ್ತಿತ್ವಕ್ಕೆ ಬರುವ ಮೊದಲು ಬಿಜೆಪಿ ಕಾರ್ಪೊರೇಟರ್‌ಗಳು ಮತ್ತು ಶಾಸಕರನ್ನು ಹೊಂದಿತ್ತು ಎಂಬುದನ್ನು ನಾನು ಅವರಿಗೆ ನೆನಪಿಸುತ್ತೇನೆ. ಶಿವಸೇನೆ ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಚಿಹ್ನೆಯ ಮೇಲೆ ಸ್ಪರ್ಧಿಸಿತ್ತು. ಶಿವಸೇನೆಯ ಮೊದಲ ಮುಖ್ಯಮಂತ್ರಿ ಮನೋಹರ್ ಜೋಷಿ ಅವರು ಲೋಕಸಭೆ ಚುನಾವಣೆಯಲ್ಲಿ ನಮ್ಮ ಚಿಹ್ನೆಯ ಮೇಲೆ ಸ್ಪರ್ಧಿಸಿದ್ದರು” ಅಂತ ಫಡ್ನವೀಸ್ ಇತಿಹಾಸ ನೆನಪಿಸಿದ್ದಾರೆ.

  “ಮೊಘಲ್ ಅರಸರು ಇಟ್ಟ ಹೆಸರನ್ನು ಬದಲಾಯಿಸುವಿರಾ?”

  “ಕಲ್ಯಾಣ ದುರ್ಗದ ಕೋಟೆ, ಹಾಜಿ ಮಲಂಗ್ ದರ್ಗಾಕ್ಕಾಗಿ ಉದ್ಧವ್ ಜೀ ಏನು ಮಾಡಿದ್ದಾರೆ ಎಂಬುದ ಉತ್ತರಿಸುವಂತೆ ಫಡ್ನವೀಸ್ ಸವಾಲು ಹಾಕಿದ್ದಾರೆ. “ಉದ್ಧವ್ ಅವರು ಉಸ್ಮಾನಾಬಾದ್ ಅನ್ನು ಧಾರಾಶಿವ್ ಹಾಗೂ ಔರಂಗಾಬಾದ್ ಅನ್ನು ಸಂಭಾಜೀ ನಗರ ಎಂದು ಮರುನಾಮಕರಣ ಮಾಡುತ್ತಾರೆಯೇ” ಅಂತ ಖಾರವಾಗಿ ಪ್ರಶ್ನಿಸಿದ್ದಾರೆ. “ಈ ಕೆಲಸ ಮಾಡುವುದಕ್ಕೆ ಉದ್ಧವ್ ಠಾಕ್ರೆ ಅವರ ಬಳಿ ಸಾಧ್ಯವಿಲ್ಲ” ಎಂದಿರುವ ಅವರು, “ಶಿವಸೇನೆ ಹಿಂದುತ್ವ ಕೇವಲ ಕಾಗದದ ಮೇಲಿದೆ ಎಂಬುದನ್ನು ತೋರಿಸುತ್ತದೆ” ಅಂತ ಟೀಕಿಸಿದ್ದಾರೆ.

  ಇದನ್ನೂ ಓದಿ: ಶಿವಸೇನಾ ಪ್ರಧಾನಿ ದೇಶ ಆಳುತ್ತಿದ್ದರು. ಆದರೆ, ಬಿಜೆಪಿಗಾಗಿ ನಾವು ಬಿಟ್ಟುಕೊಟ್ಟೆವು; Sanjay Raut​

  ಇನ್ನು ಹಿಂದುತ್ವ ಹಾಗೂ ಬಿಜೆಪಿ ಕುರಿತಂತೆ ಶಿವಸೇನೆ ಹೇಳಿಕೆಗೆ ಮಹಾರಾಷ್ಟ್ರದ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ರಾಮ್ ಯಾದವ್ ಸೇರಿದಂತೆ ಪ್ರಮುಖರು ಶಿವಸೇನೆ ನಾಯಕರ ಮೇಲೆ ಮುಗಿ ಬಿದ್ದಿದ್ದಾರೆ.

  ವರದಿ: ಅಣ್ಣಪ್ಪ ಆಚಾರ್ 
  Published by:Sandhya M
  First published: