ಮಹಾರಾಷ್ಟ್ರದ (Maharashtra) ಅಮರಾವತಿ ನಗರದಲ್ಲಿ ಕೋಮು ಉದ್ವಿಗ್ನತೆ ಭುಗಿಲೆದ್ದಿದ್ದು ನಗರದಲ್ಲಿ ಪ್ರಸ್ತುತ ಕರ್ಪ್ಯೂ ಜಾರಿಯಲ್ಲಿದೆ. ಈ ಸಂಬಂಧಿತವಾಗಿ ಸುಮಾರು 200 ಜನರನ್ನು ಬಂಧಿಸಲಾಗಿದೆ. ನವೆಂಬರ್ 12 ರಂದು ತ್ರಿಪುರಾ (Tripura) ಹಿಂಸಾಚಾರದ ವಿರುದ್ಧ ಕೆಲವು ಮುಸ್ಲಿಂ ಸಂಘಟನೆಗಳು ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದಾಗ ಹಿಂಸಾಚಾರ ಪ್ರಾರಂಭವಾಯಿತು. ಇದಾದ ಒಂದು ದಿನದ ನಂತರ ಬಿಜೆಪಿ ಬಂದ್ಗೆ ಕರೆ ನೀಡಿದ್ದು ವಿಧ್ವಂಸಕ ಕೃತ್ಯಕ್ಕೂ ಕಾರಣವಾಯಿತು.
ವಾದ-ಪ್ರತಿವಾದಗಳ ನಡುವೆಯೇ ಇಸ್ಲಾಮಿಕ್ ಕಟ್ಟಡಗಳ ಎದುರೇ ಕೇಸರಿ ಧ್ವಜಗಳನ್ನು ಬೀಸುತ್ತಿರುವ ನೃತ್ಯಮಾಡುತ್ತಿರುವ ಜನರ ಸಮೂಹದ ವಿಡಿಯೋವು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಹಿಂಸಾಚಾರದ ನಂತರ ಹಿಂದೂಗಳು ಎಚ್ಚರಗೊಳ್ಳುತ್ತಿದ್ದಾರೆ ಎಂಬ ಹೇಳಿಕೆ ಇದೀಗ ಪ್ರತಿಧ್ವನಿಸುತ್ತಿದೆ. ಈ ಪೋಸ್ಟ್ಗಳನ್ನು ದಾಖಲೆ ಮಾಡಿದ ಆವೃತ್ತಿಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಕೂಡ ಕಾಣಬಹುದಾಗಿದೆ.
ವಿಡಿಯೋದ ಅಸಲಿಯತ್ತೇನು?
ಇಂಡಿಯಾ ಟುಡೇ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್ಡಬ್ಲ್ಯೂಎ) ವೀಡಿಯೊದೊಂದಿಗಿರುವ ಹೇಳಿಕೆಯು ಜನರನ್ನು ತಪ್ಪುದಾರಿಗೆಳೆಯುತ್ತಿದೆ ಎಂಬುದನ್ನು ಇದೀಗ ಪತ್ತೆಹಚ್ಚಿದೆ. ಏಕೆಂದರೆ ಈ ವಿಡಿಯೋದ ಅಸಲಿಯತ್ತನ್ನು ಪರೀಕ್ಷಿಸಿದಾಗ ಇದು 2019 ರಲ್ಲಿ ಕರ್ನಾಟಕದ ಕಲಬುರ್ಗಿಯಲ್ಲಿ ರಾಮನವಮಿಯ ದಿನ ಸೆರೆಹಿಡಿದ ವಿಡಿಯೋ ಎಂಬ ಅಂಶ ಬೆಳಕಿಗೆ ಬಂದಿದೆ.
ಆ್ಯಂಟಿ ಫೇಕ್ ವಾರ್ ರೂಮ್ ತನಿಖೆ:
ವಿಡಿಯೋವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದ ನಂತರ, ಧಾರ್ಮಿಕ ರಚನೆಯ ಮೇಲೆ ಉರ್ದುವಿನಲ್ಲಿ ಬರೆಯಲಾದ "ಅಸ್ಥಾನ ಹಜರತ್ ಸಯ್ಯದ್ ಶಾ ಹಸನ್ ಖಾದ್ರಿ" ಅನ್ನು ನಾವು ಕಂಡುಕೊಂಡಿದ್ದೇವೆ. ಇದರಿಂದ ಸುಳಿವು ಪಡೆದು ನಾವು ಗೂಗಲ್ ಮ್ಯಾಪ್ನಲ್ಲಿ ಹುಡುಕಿದಾಗ ವೀಡಿಯೊದಲ್ಲಿ ಕಂಡುಬರುವ ಕಟ್ಟಡವು ಕರ್ನಾಟಕದ ಕಲಬುರಗಿಯಲ್ಲಿರುವ ದರ್ಗಾ ಎಂದು ಕಂಡುಬಂದಿದೆ. ವೈರಲ್ ವೀಡಿಯೊ ಮತ್ತು ಗೂಗಲ್ ಮ್ಯಾಪ್ನಲ್ಲಿ ಅಪ್ಲೋಡ್ ಮಾಡಲಾದ ದರ್ಗಾದ ಚಿತ್ರದ ನಡುವಿನ ಹೋಲಿಕೆಯನ್ನು ಗಮನಿಸಬಹುದಾಗಿದೆ.
ಮೇಲಿನ ಮಾಹಿತಿಯನ್ನು ಬಳಸಿಕೊಂಡು ಮತ್ತಷ್ಟು ಹುಡುಕಾಟ ನಡೆಸಿದಾಗ ಅದೇ ದರ್ಗಾದ ಮುಂಭಾಗದಲ್ಲಿ ರಾಮನವಮಿ ಆಚರಣೆಯ ಚಿತ್ರಗಳನ್ನು ಏಪ್ರಿಲ್ 13, 2019 ರಂದು ANI ಟ್ವೀಟ್ ಮಾಡಿರುವುದು ಇಂಟರ್ನೆಟ್ನ ದಾಖಲೆಗಳಿಂದ ತಿಳಿದು ಬಂದಿದೆ.
ವಿಡಿಯೋ ಶೀರ್ಷಿಕೆ ಹೀಗಿದೆ: ಕರ್ನಾಟಕ: ಇಂದು ಮುಂಜಾನೆ ಕಲಬುರಗಿಯಲ್ಲಿ ನಡೆದ #ರಾಮನವಮಿ ಮೆರವಣಿಗೆಯ ದೃಶ್ಯಗಳು. ಮೆರವಣಿಗೆಯ ಸಮಯದಲ್ಲಿ ಮುಸ್ಲಿಮರು ಭಗವಾನ್ ರಾಮನ ಭಕ್ತರಿಗೆ ಪಾನಕವನ್ನು ಹಂಚುತ್ತಿರುವುದು ಕಂಡುಬಂದಿದೆ. ವೈರಲ್ ವೀಡಿಯೊದಲ್ಲಿ ಕಂಡುಬರುವ ಹಸಿರು ಶರ್ಟ್ನ ವ್ಯಕ್ತಿಯನ್ನು ಎಎನ್ಐ ಹಂಚಿಕೊಂಡ ಚಿತ್ರಗಳಲ್ಲಿ ಕೂಡ ಗುರುತಿಸಬಹುದು. ವೈರಲ್ ಆಗಿರುವ ವಿಡಿಯೋವನ್ನು ಕಪ್ಪು ಅಂಗಿ ತೊಟ್ಟ ವ್ಯಕ್ತಿಯೇ ಹಿಂದೆ ಕುಳಿತು ಚಿತ್ರೀಕರಿಸಿರಬೇಕು ಎಂದು ಆ್ಯಂಟಿ ಫೇಕ್ ವಾರ್ ರೂಮ್ ಉಲ್ಲೇಖಿಸಿದೆ.
Karnataka: Visuals from #RamNavami procession carried out earlier today in Kalaburagi. Muslims were seen distributing juice to the devotees of Lord Ram during the procession. pic.twitter.com/m8bnw8DRrX
— ANI (@ANI) April 13, 2019
ಇದೇ ಮೆರವಣಿಗೆಯ ಬೇರೆ ಬೇರೆ ಕೋನಗಳಲ್ಲಿ ಚಿತ್ರೀಕರಿಸಿರುವ ಇತರ ವಿಡಿಯೋಗಳನ್ನು ಕೂಡ ನಾವು ಕಂಡುಕೊಂಡಿದ್ದೇವೆ ಎಂದು ವಾರ್ ರೂಮ್ ತಿಳಿಸಿದೆ. ಹಾಗಾಗಿ ವೈರಲ್ ಆಗಿರುವ ವಿಡಿಯೋ ಕರ್ನಾಟಕದ ಕಲಬುರ್ಗಿಯ ರಾಮನವಮಿಗೆ ಸಂಬಂಧಿಸಿದ ವಿಡಿಯೋ ಆಗಿದ್ದು ಇದು ಮಹಾರಾಷ್ಟ್ರದ ಅಮರಾವತಿಯ ಕೋಮು ಘರ್ಷಣೆಗೆ ಸಂಬಂಧಿಸಿದ್ದಲ್ಲ ಎಂಬುದನ್ನು ವಾರ್ ರೂಮ್ ಈ ಮೂಲಕ ಸ್ಪಷ್ಟಪಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ