Uttar Pradesh Viral Fake Video: ಉತ್ತರಪ್ರದೇಶದ ಮುಝಾಫರನಗರದಲ್ಲಿ ಮುಸ್ಲಿಂ ಯುವಕರ ತಂಡ ಹಿಂದೂ ಯುವಕನೊಬ್ಬನನ್ನು ಅಪಹರಿಸಿ, ಹಲ್ಲೆ ಮಾಡಿ ನಂತರ ತಲೆ ಕಡಿದ ದೃಶ್ಯ ಎಂದು ಆರೋಪಿಸಲಾದ ವಿಡಿಯೋ ಒಂದು ವಾಟ್ಸಾಪ್ನಲ್ಲಿ (WhatsApp Viral Video) ಸದ್ದು ಮಾಡಿತ್ತು. ಆದರೆ ಈ ಪ್ರಕರಣದ ಸತ್ಯಾಸತ್ಯತೆ ನೋಡಿದಾಗ, ಇದೊಂದು ಸುಳ್ಳು ಸುದ್ದಿ (Fake News) ಎಂಬುದು ಬೆಳಕಿಗೆ ಬಂದಿದೆ. ಜತೆಗೆ, ಕೋಮು ದ್ವೇಶ ಹರಡುವ ಉದ್ದೇಶದಿಂದ ಈ ಕೆಲಸವನ್ನು ಕೆಲ ಕಿಡಿಗೇಡಿಗಳು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಈ ವಿಡಿಯೋ ಒಟ್ಟೂ ಎರಡು ಭಾಗಗಳಲ್ಲಿ ಹರಿದುಬಿಡಲಾಗಿತ್ತು. ಮೊದಲ ವಿಡಿಯೋದಲ್ಲಿ ಅನುಜ್ ಎಂಬ ಎಲೆಕ್ಟ್ರಿಷಿಯನ್ ಒಬ್ಬನನ್ನು ಥಳಿಸಿ, ಮನೆಯಿಂದ ಬಲವಂತವಾಗಿ ಹೊರಗೆ ಎಳೆದೊಯ್ಯುವ ದೃಶ್ಯ ಸೆರೆಯಾಗಿತ್ತು. ಎರಡನೇ ವಿಡಿಯೋದಲ್ಲಿ ವ್ಯಕ್ತಿಯ ತಲೆಯನ್ನು ಪ್ರತ್ಯೇಕಿಸುವ ದೃಶ್ಯವನ್ನು ಹರಿಬಿಡಲಾಗಿತ್ತು.
ಮೊದಲ ಭಾಗದ ವಿಡಿಯೋ ಸೆರೆಯಾಗಿದ್ದು ಮೇ 3, 2021ರಂದು. ಅಂದು ನಿಜಕ್ಕೂ ಅನುಜ್ ಎಂಬಾತನನ್ನು ಒಂದು ಗುಂಪು ಬೆನ್ನಟ್ಟಿ ಥಳಿಸಿತ್ತು. ಈ ಸಂಬಂಧ ಪೊಲೀಸರು ಎಂಟು ಮಂದಿಯನ್ನು ವಶಕ್ಕೆ ಪಡೆದು ಅವರ ಮೇಲೆ ಪ್ರಕರಣ ದಾಖಲಿಸಿದ್ದರು. ಗುಂಪು ಹಲ್ಲೆ, ಅಪಹರಣ, ಸರ್ಕಾರಿ ನೌಕರನ ಮೇಲೆ ಹಲ್ಲೆ, ಅನಧಿಕೃತವಾಗಿ ಕಟ್ಟಿಹಾಕಿದ ಪ್ರಕರಣ ಸೇರಿದಂತೆ ಹಲವು ಐಪಿಸಿ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಥಮ ವರ್ತಮಾನ ವರದಿಯ (First Information Report - ಎಫ್ಐಆರ್) ಪ್ರಕಾರ ಅನುಜ್ ಮೇಲೆ ಮುಸಲ್ಮಾನ ಯುವಕರ ಗುಂಪೊಂದು ಜಲ್ಲೆ ಮಾಡಿತ್ತು. ಅನುಜ್ ಅಪಹರಿಸಿ, ಒಂದು ಮನೆಯಲ್ಲಿ ಗುಂಪು ಕೂಡಿ ಹಾಕಿತ್ತು. ದೂರಿನ ಪ್ರಕಾರ, ತಲೆಯ ಮೇಲೆ ಹಾದುಹೋಗಿದ್ದ ಎಲೆಕ್ಟ್ರಿಕ್ ತಂತಿಯನ್ನು ತೆಗೆದುಹಾಕಲು ಹೇಳಿದಾಗ, ಅನುಜ್ ಸಾಧ್ಯವಿಲ್ಲ ಎಂದ ಕಾರಣಕ್ಕೆ ಗುಂಪು ಈ ಕೃತ್ಯವನ್ನು ಮಾಡಿತ್ತು. ಮನೆಯಲ್ಲಿ ಕೂಡಿ ಹಾಕಿದ್ದಾಗ, ಒಂದು ಫೋನ್ ಸಿಕ್ಕ ನಂತರ ಆತ ಸಹಾಯವಾಣಿಗೆ ಕರೆಮಾಡಿ, ಪರಿಸ್ಥಿತಿ ಹಂಚಿಕೊಂಡಿದ್ದ. ನಂತರ ಪೊಲೀಸರು ಆತನನ್ನು ರಕ್ಷಿಸಿದ್ದರು. ಅಷ್ಟೇ ಅಲ್ಲದೇ ಆರೋಪಿಗಳನ್ನು ಬಂಧಿಸಿದ್ದರು.
ಆದರೆ ಎರಡನೇ ವಿಡಿಯೋದಲ್ಲಿ ಯುವಕನ ತಲೆ ತುಂಡರಿಸುತ್ತಿರುವ ವೈರಲ್ ದೃಶ್ಯ ಮುಝಾಫರನಗರದ್ದಲ್ಲ. ಅನುಜ್ ಈಗಲೂ ಬದುಕುಳಿದಿದ್ದು, ಮುಸಲ್ಮಾನ ಯುವಕರು ಅನುಜ್ರ ತಲೆ ಕತ್ತರಿಸಿಲ್ಲ. ಕೋಮು ದ್ವೇಷ ಹುಟ್ಟಿಸಲು ಕಿಡಿಗೇಡಿಗಳು ಎರಡು ಬೇರೆ ಬೇರೆ ಪ್ರಕರಣಗಳನ್ನು ಥಳುಕುಹಾಕಿ, ಸುಳ್ಳು ವಿಡಿಯೋ ಒಂದನ್ನು ಸೃಷ್ಟಿಸಿದ್ದಾರೆ. ಸರಿಯಾದ ಮಾಹಿತಿಯ ಪ್ರಕಾರ ಎರಡನೇ ವಿಡಿಯೋ ವೆನಿಜುವೆಲ್ಲಾದಲ್ಲಿ 2018ರಲ್ಲಿ ಚಿತ್ರೀಕರಿಸಿದ್ದು.
ಇದನ್ನೂ ಓದಿ: Crime News: ಹೆಂಡತಿಯ ಮೇಲಿನ ಸಿಟ್ಟಿಗೆ ತನ್ನ ಎರಡು ವರ್ಷದ ಮಗಳ ಮೇಲೆಯೇ ಅತ್ಯಾಚಾರ ಮಾಡಿದ ಕ್ರೂರ ಅಪ್ಪ
ಅಪರಾಧಿಗಳ ಗ್ಯಾಂಗ್ ಒಂದು, 13 ವರ್ಷದ ಬಾಲಕನ್ನು ಕ್ರೂರವಾಗಿ ಸಾಯಿಸಿದ್ದರು. ಮತ್ತದನ್ನು ಚಿತ್ರೀಕರಿಸಿ, ಭಯೋತ್ಪಾದನೆಗೆ ವಿಡಿಯೋ ಹರಿಬಿಟ್ಟಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಗುಂಪೊಂದು ಸುಳ್ಳು ಮಾಹಿತಿ ಪ್ರಸರಿಸಿದೆ.
ಇದನ್ನೂ ಓದಿ: Online Dating App: ಏಕ ಕಾಲಕ್ಕೆ ಇಬ್ಬರ ಜತೆ ಡೇಟಿಂಗ್, ವಿಷಯ ತಿಳಿದ ಬಾಯ್ಫ್ರೆಂಡ್ಗಳು ಏನು ಮಾಡಿದ್ರು ಗೊತ್ತಾ?
ಸಾಮಾಜಿಕ ಜಾಲತಾಣಗಳಲ್ಲಿ, ವಾಟ್ಸ್ಆ್ಯಪ್ನಲ್ಲಿ ಈ ರೀತಿಯ ಸುಳ್ಳು ಸುದ್ದಿಗಳು ಪ್ರತಿ ಕ್ಷಣ ಹರಡುತ್ತಲೇ ಇರುತ್ತದೆ. ಆದರೆ ಅಂತ ಸುದ್ದಿಗಳನ್ನು ಫಾರ್ವರ್ಡ್ ಮಾಡುವುದು ಕಾನೂನಿನಡಿ ಅಕ್ಷಮ್ಯ ಅಪರಾಧ. ಈ ರೀತಿಯ ತಲೆಬುಡವಿಲ್ಲದ ವಿಡಿಯೋಗಳು, ಮಾಹಿತಿಗಳು ಬಂದಾಗ, ಅದರ ಸತ್ಯಾಸತ್ಯತೆ ತಿಳಿದುಕೊಳ್ಳದೆ ಇತರರಿಗೆ ಕಳಿಸಬೇಡಿ. ಇದರಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗಬಹುದು. ಕೋಮು ದ್ವೇಷ ಹರಡುವಂತ ವಿಡಿಯೋಗಳು, ಸಂದೇಶಗಳು, ಅಥವಾ ಇನ್ನಿತರ ಸುಳ್ಳು ಸುದ್ದಿಗಳು ಜನರನ್ನು ಬಹುಬೇಗ ತಲುಪುತ್ತಿದೆ. ಆದರೆ ಇದನ್ನು ನಂಬಬೇಕಾ ಅಥವಾ ಸತ್ಯಾಸತ್ಯತೆಯ ಪರಾಮರ್ಶೆ ಮಾಡಬೇಕಾ ಎಂಬ ಅಂಶ ಪ್ರತಿಯೊಬ್ಬರಲ್ಲೂ ಮೊಳೆಯಬೇಕು. ಆಗಲೇ ಸಮೂಹ ಹಲ್ಲೆಗಳು, ಗಲಭೆಗಳು, ಕೋಮು ಕೋಮುಗಳ ದ್ವೇಷ ಹರಡದಂತೆ ತಡೆಯಲು ಸಾಧ್ಯ.
ಸಾಧ್ಯವಾದಷ್ಟು ಇಂತ ಸುಳ್ಳು ಸುದ್ದಿಗಳಿಂದ ದೂರವಿರಿ ಮತ್ತು ಸತ್ಯದ ಅನ್ವೇಷಣೆ ಮುಂದುವರೆಸಿ ಎಂಬುದು ನ್ಯೂಸ್18 ಕನ್ನಡದ ಕಳಕಳಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ