ಇತ್ತೀಚಿನ ದಿನಗಳಲ್ಲಿ ಘಟನೆಗಳಿಗೂ, ಫೋಟೋಗಳಿಗೂ ಸಂಬಂಧವೇ ಇರುವುದಿಲ್ಲ. ಯಾವುದೋ ಘಟನೆಗೆ ಯಾವುದೋ ಫೋಟೋ ವೈರಲ್ ಆಗುತ್ತಿರುತ್ತದೆ. ಇದು ಸೋಶಿಯಲ್ ಮೀಡಿಯಾ (Social Media) ಯುಗವಾಗಿರುವುದರಿಂದ ಜನರು ಸತ್ಯವೆಂದು ನಂಬಿ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಈ ರೀತಿ ಮಾಡುವುದು ಖಂಡಿತವಾಗಿಯೂ ಅಪರಾಧವಾಗುತ್ತದೆ. ಕೇಂದ್ರ ಸರ್ಕಾರದ ಮೂರು ವಿವಾದಾತ್ಮಕ ಕೃಷಿ ಕಾಯ್ದೆಯ ವಿರುದ್ಧ ದೇಶದ ರೈತರು ಕಳೆದ 10 ತಿಂಗಳಿನಿಂದ ಸತತ ಹೋರಾಟದಲ್ಲಿ ತೊಡಗಿದ್ದಾರೆ. ಪಂಜಾಬ್ ಮತ್ತು ಹರಿಯಾಣದಲ್ಲಿ ರೈತರ ಹೋರಾಟ ಉಗ್ರವಾಗಿ ಮುಂದುವರಿದಿದೆ. ಈ ನಡುವೆ ಶನಿವಾರ ಬಿಜೆಪಿಯು ನಡೆಸುವ ಸಭೆಯಲ್ಲಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಜೊತೆಗೆ, ರಾಜ್ಯ ಬಿಜೆಪಿ ಅಧ್ಯಕ್ಷ ಓಂ ಪ್ರಕಾಶ್ ಧಂಕರ್ ಮತ್ತು ಪಕ್ಷದ ಇತರ ಹಿರಿಯ ನಾಯಕರು ಹಾಜರಿರುವರು ಎಂಬ ವಿಚಾರ ರೈತರಿಗೆ ತಿಳಿದಿತ್ತು.
ಆದ ಕಾರಣ ಬಿಜೆಪಿ ನಡೆಸುತ್ತಿರುವ ಸಭೆಯ ವಿರುದ್ಧ ಪ್ರತಿಭಟಿಸಲು ಕರ್ನಾಲ್ ಕಡೆಗೆ ತೆರಳುತ್ತಿದ್ದ ರೈತರ ಗುಂಪಿನ ಮೇಲೆ, ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಈ ವೇಳೆ ಸುಮಾರು 10 ಮಂದಿ ರೈತರು ಗಾಯಗೊಂಡಿದ್ದರು. ಅವರ ತಲೆಯಿಂದ ರಕ್ತ ಸೋರುತ್ತಿರುವುದು ಮತ್ತು ಬಟ್ಟೆಗಳು ರಕ್ತಮಯವಾಗಿರುವ ವಿವಾದಾತ್ಮಕ, ಫೋಟೋ ಮತ್ತು ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಯಿತು.
ಈ ಹಿನ್ನೆಲೆಯಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಕೆಲವು ಪೊಲೀಸರು ರಸ್ತೆಯ ಮೇಲೆ ಬಿದ್ದಿರುವ ರಕ್ತದ ಕಲೆಗಳನ್ನು ತೊಳೆಯುತ್ತಿರುವ ಚಿತ್ರ ವೈರಲ್ ಆಗುತ್ತಿದ್ದು, ನೆಟ್ಟಿಗರು ಇದನ್ನು ರೈತರ ಮೇಲೆ ಶನಿವಾರ ಪೊಲೀಸರು ಹಲ್ಲೆ ನಡೆಸಿದ ಘಟನೆಗೆ ಸಂಬಂಧ ಕಲ್ಪಿಸುತ್ತಿದ್ದಾರೆ.
ರೈತ ಅಮನ್ಜೀತ್ ಸಿಂಗ್ ಎಂಬಾತ ತನ್ನ ಫೇಸ್ಬುಕ್ ಖಾತೆಯಲ್ಲಿ ಪೊಲೀಸರು ರಸ್ತೆಯ ಮೇಲೆ ಬಿದ್ದಿರುವ ರಕ್ತದ ಕಲೆಗಳನ್ನು ತೊಳೆಯುತ್ತಿರುವ ಚಿತ್ರ ಅಪ್ಲೋಡ್ ಮಾಡಿ, ದೇಶದಲ್ಲಿ ಗೋಮೂತ್ರವನ್ನು ಬಾಟಲಿಗಳಲ್ಲಿ ಮಾರಾಟ ಮಾಡಲಾಗುತ್ತದೆ ಮತ್ತು ರಕ್ತವು ಬೀದಿಗಳಲ್ಲಿ ಹರಿಯುತ್ತದೆ. ಇನ್ನೂ ನ್ಯಾಯಕ್ಕಾಗಿ ಹೋರಾಡುವವರಿದ್ದರೆ ಈ ಸ್ವಾತಂತ್ರ್ಯವು ಅವರಿಗೆ ಆಶೀರ್ವಾದವಾಗಿದೆ. ನಾವು ನಮ್ಮ ಸ್ವಾತಂತ್ರ್ಯಕ್ಕಾಗಿ, ನಮ್ಮ ಬೆಳೆಗಳಿಗಾಗಿ ನಮ್ಮ ರಕ್ತದ ನದಿಗಳು ಹರಿಯುತ್ತಿದ್ದರೂ ಹೋರಾಡುತ್ತೇವೆ. ಜೈ ಕಿಸಾನ್ ಎಂಬ ಬರಹದಡಿ ಆಗಸ್ಟ್ 29ರಂದು ಸುಮಾರು 7.30 ರ ಸಮಯದಲ್ಲಿ ಶೇರ್ ಮಾಡಿದ್ದರು.
ಆದರೆ ಇವರು ಶೇರ್ ಮಾಡಿದ ಫೋಟೋ ರೈತರ ಹೋರಾಟದ ಫೋಟೋ ಅಲ್ಲ. ಇದು 2013ರಲ್ಲಿ ಶ್ರೀನಗರದಲ್ಲಿ ನಡೆದ ಭಯೋತ್ಪಾದಕ ದಾಳಿಯ ಸಂದರ್ಭದ ಚಿತ್ರ ಎಂದು ಇಂಡಿಯಾ ಟುಡೇ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್ಡಬ್ಲ್ಯೂಎ) ಚಿತ್ರದ ನಿಜಾಂಶ ಬಯಲು ಮಾಡಿದೆ.
ಎಎಫ್ಡಬ್ಲ್ಯೂಎ ತನಿಖೆ ಹೇಳುವುದೇನು?
ರಿವರ್ಸ್ ಇಮೇಜ್ ಸರ್ಚ್ ಬಳಸಿ "ದಿ ಇಂಡಿಯನ್ ಎಕ್ಸ್ಪ್ರೆಸ್" ಆರ್ಕೈವ್ ವಿಭಾಗದಲ್ಲಿ ನಾವು ಈ ಚಿತ್ರ ಕಂಡುಕೊಂಡೆವು. ಇದರ ಕ್ರೆಡಿಟ್ ಪಿಟಿಐಗೆ ಸಲ್ಲುತ್ತದೆ. ವಿವರಣೆಯ ಪ್ರಕಾರ, ಚಿತ್ರವು ಶ್ರೀನಗರದ ಇಕ್ಬಾಲ್ ಪಾರ್ಕ್ ಬಳಿ ಭಯೋತ್ಪಾದಕ ದಾಳಿಗೆ ಸಂಬಂಧಿಸಿದೆ. ಇದು 2013ರಂದು ತೆಗೆದ ಚಿತ್ರವಾಗಿದೆ ಎಂದು ತನಿಖೆಯಿಂದ ಗೊತ್ತಾಗಿದೆ.
ಸೆಪ್ಟೆಂಬರ್ 23, 2013ರ ಬೆಳಗ್ಗೆ, ಇಬ್ಬರು ಸಿಐಎಸ್ಎಫ್ ಯೋಧರು ಶಾಪಿಂಗ್ ಮಾಡಲು ಹೋದಾಗ ಶ್ರೀನಗರದ ಇಕ್ಬಾಲ್ ಪಾರ್ಕ್ ಬಳಿಯ ಮಾರುಕಟ್ಟೆಯಲ್ಲಿ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ. ಈ ವೇಳೆ ಓರ್ವ ಜವಾನ ಮೃತಪಟ್ಟಿದ್ದಾರೆಂದು ಮಾಧ್ಯಮಗಳು ವರದಿ ಮಾಡಿದ್ದವು.
ಇದೇ ಚಿತ್ರವನ್ನು ಸ್ಟಾಕ್ ಇಮೇಜ್ ಸೈಟ್ ಅಲಾಮಿ ಕೂಡ ತೆಗೆದುಕೊಂಡಿದ್ದರು. ಒಟ್ಟಿನಲ್ಲಿ ಕರ್ನಾಲ್ನಲ್ಲಿ ಪೊಲೀಸರು ನಡೆಸಿದ ಲಾಠಿ ಚಾರ್ಜ್ನಲ್ಲಿ ರೈತರು ಗಾಯಗೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಫೋಟೋ 2013ರಲ್ಲಿ ಶ್ರೀನಗರದಲ್ಲಿ ಇಬ್ಬರು ಸಿಐಎಸ್ಎಫ್ ಯೋಧರನ್ನು ಭಯೋತ್ಪಾದಕರು ಗುಂಡು ಹಾರಿಸಿ ಕೊಂದ ಸಂದರ್ಭದ ಫೋಟೋ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ