ನವದೆಹಲಿ(ಸೆ. 03): ಭಾರತದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದ ಪರವಾಗಿ ಫೇಸ್ಬುಕ್ ನೀತಿ ಅನುಸರಿಸುತ್ತಿದೆ ಎಂಬ ಆರೋಪಗಳು ದಟ್ಟವಾಗಿ ಕೇಳಿಬರುತ್ತಿವೆ. ಇದರ ಬೆನ್ನಲ್ಲೇ ಫೇಸ್ಬುಕ್ ತೆಲಂಗಾಣದ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಅವರನ್ನು ನಿಷೇಧಿಸಿದೆ. ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ರಾಜಾ ಸಿಂಗ್ ಅವರ ಖಾತೆಗಳನ್ನ ತೆಗೆದುಹಾಕಲಾಗಿದೆ. ಹಿಂಸಾಚಾರ ಮತ್ತು ದ್ವೇಷಕ್ಕೆ ಪ್ರಚೋದನೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಫೇಸ್ಬುಕ್ ಈ ಕ್ರಮ ಕೈಗೊಂಡಿದೆ.
“ಹಿಂಸಾಚಾರ ಮತ್ತು ದ್ವೇಷದಲ್ಲಿ ನಿರತರಾದವರು ಮತ್ತು ಅವುಗಳನ್ನ ಪ್ರಚೋದನೆ ಮಾಡಬಾರದು ಎಂಬ ನಮ್ಮ ನೀತಿಯನ್ನು ಉಲ್ಲಂಘಿಸಿದ ಕಾರಣಕ್ಕೆ ರಾಜಾ ಸಿಂಗ್ ಅವರನ್ನು ಫೇಸ್ಬುಕ್ನಿಂದ ನಿಷೇಧಿಸಿದ್ಧೇವೆ. ನಮ್ಮ ನೀತಿಯ ಉಲ್ಲಂಘನೆ ಮಾಡುವವರ ಮೇಲೆ ನಾವು ತೀವ್ರವಾಗಿ ನಿಗಾ ಇಡುವ ವ್ಯವಸ್ಥೆ ಹೊಂದಿದ್ದು, ಇದರ ಪರಿಣಾಮವಾಗಿ ಅವರ ಫೇಸ್ಬುಕ್ ಖಾತೆಯನ್ನು ತೆಗೆದುಹಾಕಿದ್ದೇವೆ” ಎಂದು ಫೇಸ್ಬುಕ್ನ ವಕ್ತಾರರೊಬ್ಬರು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ನರೇಂದ್ರ ಮೋದಿ ಗುಜರಾತ್ ಸಿಎಂ ಆದಾಗಿನಿಂದ ಈವರೆಗೆ ಮಾಡಿರುವ ದಾನ ಎಷ್ಟು ಕೋಟಿ ಗೊತ್ತಾ?
ಫೇಸ್ಬುಕ್ನ ಕಂಟೆಂಟ್ ಪಾಲಿಸಿ ಬಿಜೆಪಿಯ ಪರವಾಗಿ ಇದೆ ಎಂದು ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆ ಇತ್ತೀಚೆಗೆ ವರದಿಯೊಂದನ್ನು ಪ್ರಕಟಿಸಿತ್ತು. ಅದರಲ್ಲಿ ತೆಲಂಗಾಣದ ಬಿಜೆಪಿ ಶಾಸಕ ರಾಜಾ ಸಿಂಗ್ ಅವರ ದ್ವೇಷಪೂರಿತ ಭಾಷಣವಿರುವ ಪೋಸ್ಟ್ ಅನ್ನ ಡಿಲೀಟ್ ಮಾಡಿಲ್ಲ ಎಂದು ಉದಾಹರಣೆಯಾಗಿ ಉಲ್ಲೇಖಿಸಿತ್ತು. ಆ ಬಳಿಕ ಈ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ವಾಗ್ದುದ್ಧವೇ ನಡೆಯುತ್ತಿದೆ.
ಫೇಸ್ಬುಕ್ನ ಭಾರತ ವಿಭಾಗದಲ್ಲಿ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುವ ವ್ಯಕ್ತಿಯೊಬ್ಬರು ಬಹಿರಂಗವಾಗಿ ಬಿಜೆಪಗೆ ಬೆಂಬಲ ನೀಡುತ್ತಾರೆ ಎಂದೂ ವಿಪಕ್ಷಗಳು ಬೊಟ್ಟು ಮಾಡಿ ತೋರಿಸಿವೆ. ಆದರೆ, ವಿಪಕ್ಷಗಳ ಕೆಲ ನಾಯಕರ ಪ್ರಚೋದನಕಾರಿ ಹೇಳಿಕೆಗಳನ್ನ ಉಲ್ಲೇಖಿಸಿ ಬಿಜೆಪಿ ನಾಯಕರೂ ಕೂಡ ಫೇಸ್ಬುಕ್ ಬಿಜೆಪಿ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಪ್ರತ್ಯಾರೋಪ ಮಾಡುತ್ತಿವೆ.
ಕೇಂದ್ರದ ಮಾಹಿತಿ-ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಕೂಡ ಫೇಸ್ಬುಕ್ ಮುಖ್ಯಸ್ಥ ಮಾರ್ಕ್ ಝುಕರ್ಬರ್ಗ್ ಅವರಿಗೆ ಇತ್ತೀಚೆಗೆ ಪತ್ರ ಬರೆದು, ಫೇಸ್ಬುಕ್ನ ಉದ್ಯೋಗಿಗಳು ನಿರ್ದಿಷ್ಟ ರಾಜಕೀಯ ಪಕ್ಷಗಳ ವ್ಯಕ್ತಿಗಳಿಗೆ ಹೆಚ್ಚು ಮಣೆ ಹಾಕಲಾಗುತ್ತಿದೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ: ಜಿಎಸ್‌ಟಿ ಪಾಲಿಗೆ ಒತ್ತಾಯಿಸಿ ಮೋದಿಗೆ ಪತ್ರ ಬರೆದ ಮಮತಾ ಬ್ಯಾನರ್ಜಿ, ಸಾಲ ಪಡೆಯಲು ಸಿದ್ದರಾದ ಯಡಿಯೂರಪ್ಪ
ಇದರ ಮಧ್ಯೆ, ಇತ್ತೀಚೆಗೆ ಸಂಸದೀಯ ಸಮಿತಿಯೊಂದು ಈ ವಿಚಾರವಾಗಿ ಫೇಸ್ಬುಕ್ನ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿತ್ತು. ನಿನ್ನೆ ನಡೆದ ಸಭೆಯಲ್ಲಿ ಫೇಸ್ಬುಕ್ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಬಿಸಿ ಬಿಸಿ ಚರ್ಚೆಗಳಾದವು. ಸಮಿತಿಯಲ್ಲಿದ್ದ ಬಿಜೆಪಿ ಮತ್ತು ಬಿಜೆಪಿಯೇತರ ಸದಸ್ಯರು ಪರಸ್ಪರ ಆರೋಪ ಪ್ರತ್ಯಾರೋಪಗಳನ್ನ ಮಾಡಿದವು. ವಿಪಕ್ಷಗಳು ಶಾಸಕ ರಾಜಾ ಸಿಂಗ್, ಗೃಹ ಸಚಿವ ಅಮಿತ್ ಶಾ ಅವರ ಭಾಷಣಗಳನ್ನ ಉಲ್ಲೇಖಿಸಿದವು. ಬಿಜೆಪಿಯು ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಮತ್ತು ಕನ್ನಯ್ಯ ಕುಮಾರ್ ಅವರ ಹೇಳಿಕೆಗಳನ್ನ ಪ್ರಸ್ತಾಪಿಸಿ ಟೀಕಿಸಿತು.
ಪ್ರಚೋದನಾತ್ಮಕ ಪೋಸ್ಟ್ ಬಗ್ಗೆ ದೂರು ನೀಡಿದಾಗ ಕ್ರಮ ತೆಗೆದುಕೊಳ್ಳುತ್ತೀರಿ. ನೀವೇ ಸ್ವಯಂಪ್ರೇರಿತವಾಗಿ ಎಷ್ಟು ಪ್ರಕರಣಗಳಲ್ಲಿ ಕ್ರಮ ತೆಗೆದುಕೊಂಡಿದ್ದೀರಿ ಎಂದು ಸಂಸದೀಯ ಸಮಿತಿಯಲ್ಲಿರುವ ಸಂಸದರು ಫೇಸ್ಬುಕ್ನ ಪ್ರತಿನಿಧಿಗಳನ್ನ ಕೇಳಿದರು. ಇದಕ್ಕೆ ಅವರು, ಸುಮೋಟೋ ಆಗಿ ಕ್ರಮ ತೆಗೆದುಕೊಂಡ ಪ್ರಕರಣಗಳ ಸಂಖ್ಯೆ ಇಟ್ಟುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ಫೇಸ್ಬುಕ್ ಸಾಮಾನ್ಯವಾಗಿ ಬಹುತೇಕ ಪ್ರಕರಣಗಳಲ್ಲಿ ದೂರು ಬಂದಾ ಮಾತ್ರ ಕ್ರಮ ತೆಗೆದುಕೊಳ್ಳುತ್ತದೆ. ಪೋಸ್ಟ್ಗಳನ್ನ ಫ್ಲ್ಯಾಗ್ ಮಾಡುವ ಅವಕಾಶ ಎಲ್ಲರಿಗೂ ಇರುತ್ತದೆ. ಅದರ ಆಧಾರದ ಮೇಲೆ ಆ ಪೋಸ್ಟ್ಗಳನ್ನ ಸ್ವಯಂ ಆಗಿ ಡಿಲೀಟ್ ಮಾಡಲಾಗುತ್ತದೆ. ಇನ್ನುಳಿದಂತೆ, ಒಂದು ಖಾತೆಯಿಂದ ಸತತವಾಗಿ ಫೇಸ್ಬುಕ್ ನಿಯಮ ಉಲ್ಲಂಘನೆ ಆಗುತ್ತಿದ್ದ ಬಗ್ಗೆ ದೂರು ಬಂದರೆ ಅವರ ಖಾತೆಯನ್ನ ಸಂಸ್ಥೆ ಹಿಂಪಡೆಯುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ