Facebook: ತಾಲಿಬಾನ್ ನಡೆಸ್ತಿದ್ದ ಫೇಸ್​ಬುಕ್ ಪೇಜ್​ಗಳೆಲ್ಲಾ ಈಗ ಬ್ಯಾನ್!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಹಿಂದೆ ಅಫ್ಘಾನಿಸ್ತಾನ ಸರ್ಕಾರವಿದ್ದ ಸಂದರ್ಭದಲ್ಲಿ ರಾಜ್ಯದ ಆಡಳಿತದಡಿಯಿದ್ದ ಕೆಲವು ಅಧಿಕೃತ ಮಾಧ್ಯಮ ವೇದಿಕೆಗಳು ಈಗ ಅಕ್ಷರಶಃ ತಾಲಿಬಾನ್ ಕಪಿಮುಷ್ಟಿಯಲ್ಲಿ ಸಿಲುಕಿದ್ದು ಅವುಗಳ ಪೈಕಿ ಕನಿಷ್ಠ ಎರಡು ಅಂತಹ ತಾಲಿಬಾನ್ ಸುಪರ್ದಿಯಲ್ಲಿರುವ ಮಾಧ್ಯಮಗಳ ಸಾಮಾಜಿಕ ಮಾಧ್ಯಮ ಖಾತೆಗಳನ್ನು ತೆಗೆದುಹಾಕಲಾಗಿದೆ ಎಂದು ಫೇಸ್‍ಬುಕ್ ಸಂಸ್ಥೆಯು ಹೇಳಿದೆ.

ಮುಂದೆ ಓದಿ ...
  • Share this:

ಪ್ರಸ್ತುತ ಅಫ್ಘಾನಿಸ್ತಾನದಲ್ಲಿ (Afghanistan) ತಾಲಿಬಾನ್ ಆಡಳಿತವಿರುವ ವಿಷಯ ಎಲ್ಲರಿಗೂ ಗೊತ್ತೆ ಇದೆ. ತಾಲಿಬಾನ್ (Taliban) ಪಡೆಯು ಅಫ್ಘಾನಿಸ್ತಾನದ ನಿಯಂತ್ರಣವನ್ನು ಸ್ವಾಧೀನಪಡಿಸಿಕೊಂಡಾಗಿನಿಂದ ತಮ್ಮದೆ ಆದ ಆಡಳಿತವನ್ನು ನಡೆಸುತ್ತಿದ್ದು ಅಲ್ಲಿನ ಕೆಲವು ಮಾಧ್ಯಮ ವೇದಿಕೆಗಳ ಮೇಲೆ ತಮ್ಮ ನಿಯಂತ್ರಣವನ್ನು ಸಾಧಿಸಿವೆ. ಹಿಂದೆ ಅಫ್ಘಾನಿಸ್ತಾನ ಸರ್ಕಾರವಿದ್ದ ಸಂದರ್ಭದಲ್ಲಿ ರಾಜ್ಯದ ಆಡಳಿತದಡಿಯಿದ್ದ ಕೆಲವು ಅಧಿಕೃತ ಮಾಧ್ಯಮ ವೇದಿಕೆಗಳು ಈಗ ಅಕ್ಷರಶಃ ತಾಲಿಬಾನ್ ಕಪಿಮುಷ್ಟಿಯಲ್ಲಿ ಸಿಲುಕಿದ್ದು ಅವುಗಳ ಪೈಕಿ ಕನಿಷ್ಠ ಎರಡು ಅಂತಹ ತಾಲಿಬಾನ್ ಸುಪರ್ದಿಯಲ್ಲಿರುವ ಮಾಧ್ಯಮಗಳ ಸಾಮಾಜಿಕ ಮಾಧ್ಯಮ ಖಾತೆಗಳನ್ನು (Social Media Account) ತೆಗೆದುಹಾಕಲಾಗಿದೆ ಎಂದು ಫೇಸ್‍ಬುಕ್ (Facebook) ಸಂಸ್ಥೆಯು ಹೇಳಿದೆ.


ಈ ಬಗ್ಗೆ ನೀಡಿರುವ ಹೇಳಿಕೆಯಲ್ಲಿ ಫೇಸ್‍ಬುಕ್ ಸಂಸ್ಥೆಯು, "ಅಮೆರಿಕದ ನಿಯಮಗಳಿಗನುಸಾರವಾಗಿ ಈ ಕ್ರಮ ಕೈಗೊಳ್ಳಲಾಗಿದ್ದು ತಾಲಿಬಾನ್ ಅನ್ನು ಅಮೆರಿಕದಲ್ಲಿ ಆತಂಕವಾದಿ ಸಂಘಟನೆಗಳ ಪಟ್ಟಿಯಲ್ಲಿ ಸೇರಿಸಿರುವುದೇ ಇದಕ್ಕೆ ಕಾರಣವಾಗಿದೆ" ಎಂದು ತಿಳಿಸಿರುವುದಾಗಿ ವರದಿಯಾಗಿದೆ.


ಮಾಧ್ಯಮ ಪುಟಗಳನ್ನು ಬ್ಯಾನ್ ಮಾಡಲು ಕಾರಣವೇನು?
ಕಳೆದ ವರ್ಷ ಆಗಸ್ಟ್ ನಲ್ಲಿ ತಾಲಿಬಾನ್ ಅಧಿಕೃತವಾಗಿ ಅಫ್ಘಾನಿಸ್ತಾನವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಅಧಿಕಾರ ನಡೆಸಲು ಪ್ರಾರಂಭಿಸಿತು. ಈ ಅವಧಿಯಲ್ಲಿ ಅದು ದೇಶದ ಅಧಿಕೃತ ಮಾಧ್ಯಮ ವೇದಿಕೆಗಳಾದ ರೇಡಿಯೋ, ದೂರದರ್ಶನ, ದಿನಪತ್ರಿಕೆ ಇತ್ಯಾದಿಗಳ ಮೇಲೆ ತನ್ನ ಪ್ರಬುತ್ವ ಸಾಧಿಸಿ ಅವುಗಳ ಸಾಮಾಜಿಕ ಮಾಧ್ಯಮಗಳಾದ ಫೇಸ್‍ಬುಕ್ ಹಾಗೂ ಟ್ವಿಟ್ಟರ್ ಖಾತೆಗಳನ್ನು ನಿರಂಕುಶವಾಗಿ ತನಗೆ ಬೇಕಾದ ರೀತಿಯಲ್ಲಿ ಬಳಸಿಕೊಂಡಿದೆ ಎನ್ನಲಾಗಿದೆ.


ಫೇಸ್‍ಬುಕ್ ಸಂಸ್ಥೆಯ ಮಾತೃ ಸಂಸ್ಥೆಯಾದ ಮೆಟಾ ಈ ಬಗ್ಗೆ ತಾನು ಯಾವ ಮಾಧ್ಯಮ ವೇದಿಕೆಗಳನ್ನು ಬ್ಯಾನ್ ಮಾಡಿರುವುದಾಗಿ ಸ್ಪಷ್ಟನೆ ನೀಡದೆ ಹೋದರೂ ಸದ್ಯ ಅಫ್ಘಾನಿಸ್ತಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯದ ನ್ಯಾಷನಲ್ ರೇಡಿಯೋ ಟೆಲಿವಿಜನ್ ಅಪ್ಘಾನಿಸ್ತಾನ ಹಾಗೂ ಸರ್ಕಾರಿ ಒಡೆತನದ ಬಖ್ತಾರ್ ನ್ಯೂಸ್ ಏಜನ್ಸಿ ಎರಡೂ ಸಂಸ್ಥೆಗಳು ತಮ್ಮನ್ನು ಬ್ಲಾಕ್ ಮಾಡಲಾಗಿದೆ ಎಂದು ಹೇಳಿಕೊಂಡಿವೆ ಎನ್ನಲಾಗಿದೆ. ಖಾಸಗಿಯಾಗಿ ನಿರ್ವಹಿಸಲ್ಪಡುತ್ತಿರುವ ಮಾಧ್ಯಮ ವಾಹಿನಿಗಳ ಸಾಮಾಜಿಕ ಪುಟಗಳು ಯಾವುದೇ ಅಡೆತಡೆಯಿಲ್ಲದೆ ಕಾರ್ಯನಿರ್ವಹಿಸುತ್ತಿವೆ ಎಂತಲೂ ಹೇಳಲಾಗಿದೆ.


ತಾಲಿಬಾನ್ ಅನ್ನು ಆತಂಕವಾದಿ ಸಂಘಟನೆ ಎಂದು ಘೋಷಿಸಿದ ಅಮೆರಿಕ
ಈ ಬಗ್ಗೆ ಎ‍ಎಫ್‍ಪಿ ಮಾಧ್ಯಮವೊಂದಕ್ಕೆ ಮಾತನಾಡಿರುವ ಮೆಟಾದ ವಕ್ತಾರರೊಬ್ಬರು, "ಅಮೆರಿಕದಲ್ಲಿರುವ ಕಾನೂನಿನ ಪ್ರಕಾರ ತಾಲಿಬಾನ್ ಅನ್ನು ಆತಂಕವಾದಿ ಸಂಘಟನೆ ಎಂದು ಘೋಷಿಸಲಾಗಿದೆ ಹಾಗೂ ಈ ಕಾರಣದಿಂದಾಗಿ ಅದು ನಮ್ಮ ಸೇವೆಯನ್ನು ಪಡೆಯದಂತೆ ನಿಷೇಧಿಸಲಾಗಿದೆ" ಎಂದು ತಿಳಿಸಿದ್ದಾರೆ. ಮುಂದುವರೆಯುತ್ತ ಅವರು, "ನಾವು ತಾಲಿಬಾನ್ ಪರವಾಗಿ ಅಥವಾ ಸ್ವತಃ ತಾಲಿಬಾನ್ ನಿರ್ವಹಿಸುತ್ತಿರುವ ಖಾತೆಗಳನ್ನು ತೆಗೆಯುತ್ತೇವೆ ಹಾಗೂ ಅವರ ಪ್ರಶಂಸೆ, ಪ್ರತಿನಿಧಿತ್ವ ಹಾಗೂ ನೀಡಲಾಗುವ ಬೆಂಬಲವನ್ನು ನಿಷೇಧಿಸಿದ್ದೇವೆ" ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: Real Hero: 5ನೇ ಮಹಡಿಯಿಂದ ಬೀಳುತ್ತಿದ್ದ ಮಗುವನ್ನು ಕ್ಯಾಚ್​ ಹಿಡಿದ ರಿಯಲ್​ ಹೀರೋ!


ಇನ್ನು ಈ ಕ್ರಮ ಸಹಜವಾಗಿ ತಾಲಿಬಾನ್ ಅನ್ನು ಕೆರಳಿಸಿದೆ ಎಂದು ಹೇಳಬಹುದಾಗಿದೆ. ಏಕೆಂದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಖಾರವಾದ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು ಇದು "ಅಮೆರಿಕದ ಅಸಹನೆ ಹಾಗೂ ಅಸಹಿಷ್ಣುತೆಯನ್ನು ತೋರಿಸುತ್ತದೆ" ಎಂದು ಹೇಳಿದ್ದಾನೆ ಎನ್ನಲಾಗಿದೆ. ಈ ಕುರಿತಂತೆ ಟ್ವಿಟ್ ಮಾಡಿರುವ ಜಬಿಹುಲ್ಲಾ "ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದನ್ನು ಇತರೆ ದೇಶಗಳಿಗೆ ಮೋಸ ಮಾಡಲು ಬಳಸಲಾಗುತ್ತದೆ" ಬರೆದುಕೊಂಡಿದ್ದಾನೆ.


ಇನ್ನು ರೇಡಿಯೋ ಟೆಲಿವಿಜನ್ ಅಫ್ಘಾನಿಸ್ತಾನದ ನಿರ್ದೇಶಕನಾಗಿರುವ ಅಹ್ಮದುಲ್ಲಾ ವಾಸಿಕ್ ತನ್ನ ವಿಡಿಯೋ ಹೇಳಿಕೆಯಲ್ಲಿ, ಸಂಘಟನೆಯ ಪಶ್ತೊ ಹಾಗೂ ದಾರಿ ಭಾಷೆಗಳ ಫೇಸ್‍ಬುಕ್ ಮತ್ತು ಇನ್ಸ್ಟಾಗ್ರಾಮ್ ಪುಟಗಳನ್ನು "ತಿಳಿಯದ ಕಾರಣಗಳಿಂದ" ಸ್ಥಗಿತಗೊಳಿಸಲಾಗಿದೆ ಎಂದು ಹೇಳಿರುವುದಾಗಿ ತಿಳಿದುಬಂದಿದೆ.


ಈ ಬಗ್ಗೆ ಬಖ್ತಾರ್ ಏಜನ್ಸಿಯು ಟ್ವಿಟ್ಟರ್ ನಲ್ಲಿ ಏನು ಹೇಳಿದೆ 
ಈ ಮಧ್ಯೆ ಬಖ್ತಾರ್ ಏಜನ್ಸಿಯು ಟ್ವಿಟ್ ಮೂಲಕ ಫೇಸ್‍ಬುಕ್ ಸಂಸ್ಥೆಗೆ ಮತ್ತೊಮ್ಮೆ ಸ್ಥಾಪಿಸುವ ಕುರಿತು ಮರುಪರಿಶೀಲಿಸುವಂತೆ ಟ್ವಿಟ್ ಮಾಡಿದೆ. ಅದು ತನ್ನ ಟ್ವಿಟ್ ನಲ್ಲಿ "ಈ ಸುದ್ದಿ ಮಾಧ್ಯಮದ ಏಕೈಕ ಗುರಿ ಎಂದರೆ ನೈಜವಾದ, ನಿಖರವಾದ ಹಾಗೂ ವಿವರವಾದ ಸುದ್ದಿಗಳನ್ನು ಸಮಯದಲ್ಲೇ ತನ್ನ ಬಳಕೆದಾರರಿಗೆ ಒದಗಿಸುವುದಾಗಿದೆ" ಎಂದು ಬರೆದುಕೊಂಡಿದೆ.


ಇದನ್ನೂ ಓದಿ:  Transgenders: ಲಿಂಗ ಪರಿವರ್ತಿತ ಮಹಿಳೆಯರನ್ನು ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕೆ ನೇಮಿಸಿಕೊಂಡ ಪಾಲಿಕೆ


ಇದಕ್ಕೂ ಮುಂಚೆ ಗುರುವಾರದಂದು ಟ್ವಿಟ್ಟರ್ ನಲ್ಲಿ #BanTaliban ಎಂಬ ಹ್ಯಾಶ್ ಟ್ಯಾಗ್ ಸಾಕಷ್ಟು ಟ್ರೆಂಡ್ ಆಗುತ್ತಿತ್ತು. ಸಾವಿರಾರು ಟ್ವಿಟ್ಟರ್ ಬಳಕೆದಾರರು ತಾಲಿಬಾನ್ ಸಂಬಂಧಿತ ಅಥವಾ ಅವರ ನಿಯಂತ್ರಣದಲ್ಲಿರುವ ಪುಟಗಳನ್ನು ಬ್ಲಾಕ್ ಮಾಡುವಂತೆ ಪೋಸ್ಟ್ ಮಾಡಿದ್ದರು ಎಂಬುದನ್ನು ಇಲ್ಲಿ ಗಮನಿಸಬಹುದಾಗಿದೆ.

Published by:Ashwini Prabhu
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು