ಹಲವಾರು ವರ್ಷಗಳಿಂದ ಸಾವು ನೋವುಗಳಿಗೆ ಕಾರಣವಾದ ಶಾಖದ ಅಲೆಗಳು (Heat Wave) ದೇಶದಲ್ಲಿ ಹೆಚ್ಚುತ್ತಿದ್ದು ಮಾನವನ ಉಳಿವಿಗೆ ಸಂಕಷ್ಟಕಾರಿಯಾಗಿ ಮಾರ್ಪಡುವ ತೀವ್ರ ಶಾಖದ ಅಲೆಗಳನ್ನು ಅನುಭವಿಸುವ ವಿಶ್ವದ ಮೊದಲ ಸ್ಥಳವಾಗಿ ಭಾರತವು ಗುರುತಿಸಿಕೊಳ್ಳಲಿದೆ ಎಂದು ವರದಿಯಾಗಿದೆ (Report). ಕ್ಲೈಮೇಟ್ ಇನ್ವೆಸ್ಟ್ಮೆಂಟ್ ಅಪಾರ್ಚುನಿಟೀಸ್ ಇನ್ ಇಂಡಿಯಾಸ್ ಕೂಲಿಂಗ್ ಸೆಕ್ಟರ್ (Climate Investment Opportunities in India's Cooling Sector) ಎಂಬ ಶೀರ್ಷಿಕೆಯಲ್ಲಿ ವಿಶ್ವಬ್ಯಾಂಕ್ (World Bank) ಶಾಖದ ಅಲೆಗಳ ಬಗ್ಗೆ ವರದಿಯನ್ನು ನೀಡಿದ್ದು ದೇಶವು ಹೆಚ್ಚಿನ ತಾಪಮಾನವನ್ನು ಅನುಭವಿಸುತ್ತಿದೆ ಹಾಗೂ ಈಗಾಗಲೇ ದೇಶದ ಹಲವೆಡೆಗಳಲ್ಲಿ ತೀವ್ರ ತಾಪದ ಪರಿಣಾಮ ವರದಿಯಾಗಿದ್ದು ಈ ಪರಿಸ್ಥಿತಿ ಹೆಚ್ಚುಕಾಲ ಹಾಗೆಯೇ ಉಳಿಯಲಿದೆ ಎಂದು ತಿಳಿಸಿದೆ.
ಮಾರ್ಚ್ನಲ್ಲೇ ವರದಿಯಾದ ತೀವ್ರ ಉಷ್ಣತೆ
ಏಪ್ರಿಲ್ 2022 ರಲ್ಲಿ ದೇಶವು ಹೆಚ್ಚಿನ ಶಾಖದ ಅಲೆಯ ಪರಿಸ್ಥಿತಿಗೆ ಒಳಗಾಗಿದ್ದು, ಇದು ದೇಶವನ್ನು ಬೆಚ್ಚಿಬೀಳಿಸಿದ್ದು ಮಾತ್ರವಲ್ಲದೆ ದೆಹಲಿಯಲ್ಲಿ ತಾಪಮಾನವು 46 ಡಿಗ್ರಿ ಸೆಲ್ಸಿಯಸ್ಗೆ ಏರಿಕೆಗೊಂಡಿತು. ಮಾರ್ಚ್ ತಿಂಗಳಲ್ಲೇ ಅಸಾಧಾರಣ ತಾಪಮಾನ ಏರಿಕೆ ಉಂಟಾಗಿದ್ದು ಇದುವರೆಗೆ ದಾಖಲಾದ ಅತ್ಯಂತ ಹೆಚ್ಚಿನ ಉಷ್ಣತೆ ಇದಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಹವಾಮಾನ ತಜ್ಞರ ಎಚ್ಚರಿಕೆ
ಈ ವರದಿಯನ್ನು ಕೇರಳ ಸರ್ಕಾರದ ಸಹಭಾಗಿತ್ವದಲ್ಲಿ ವಿಶ್ವಬ್ಯಾಂಕ್ ಆಯೋಜಿಸಿರುವ ಎರಡು ದಿನಗಳ "ಭಾರತದ ಹವಾಮಾನ ಮತ್ತು ಅಭಿವೃದ್ಧಿ ಪಾಲುದಾರರ ಸಭೆ" ಯಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ. ಭಾರತದಲ್ಲಿ ಉಂಟಾಗಲಿರುವ ಶಾಖದ ಅಲೆಯು ಮಾನವನ ಬದುಕಿಗೆ ಮುಳುವಾಗಬಹುದು ಎಂದು ಈ ವರದಿಯು ಊಹಿಸಿದ್ದು, ದಕ್ಷಿಣ ಏಷ್ಯಾದ್ಯಾಂತ ಹೆಚ್ಚುತ್ತಿರುವ ತಾಪಮಾನದ ಮಾಹಿತಿಯ ಕುರಿತು ಅನೇಕ ಹವಾಮಾನ ತಜ್ಞರು ಎಚ್ಚರಿಕೆಯನ್ನು ನೀಡಿದ್ದು ಇದಕ್ಕೆ ಸಮನಾಗಿ ಶಾಖದ ಅಲೆಯು ದೇಶಕ್ಕೆ ಅಪ್ಪಳಿಸಲಿದೆ ಎಂದು ತಿಳಿಸಲಾಗಿದೆ.
ತೀವ್ರ ಶಾಖದ ಅಲೆಗಳಿಗೆ ಒಳಗಾಗಲಿರುವ ಭರತ ಖಂಡ
ಆಗಸ್ಟ್ 2021 ರಲ್ಲಿ ಹವಾಮಾನ ಬದಲಾವಣೆಯ ಸರಕಾರಿ ಸಮಿತಿ (IPCC) ಯ ಆರನೇ ಮೌಲ್ಯಮಾಪನ ವರದಿಯ ಅನ್ವಯ ಮುಂಬರುವ ದಶಕಗಳಲ್ಲಿ ಭಾರತೀಯ ಉಪಖಂಡವು ಹೆಚ್ಚಾದ ಮತ್ತು ತೀವ್ರ ಶಾಖದ ಅಲೆಗಳನ್ನು ಆಗಾಗ್ಗೆ ಅನುಭವಿಸುತ್ತದೆ ಎಂದು ಎಚ್ಚರಿಸಿದೆ. ಸಮಿತಿಯು ಇಂಗಾಲದ ಹೊರಸೂಸುವಿಕೆ ಅಧಿಕವಾಗಿದೆ ಎಂಬ ಮಾಹಿತಿಯನ್ನು ನೀಡಿದ್ದು 2036-65ರ ವೇಳೆಗೆ ಭಾರತದಾದ್ಯಂತ ಶಾಖದ ಅಲೆಗಳು 25 ಪಟ್ಟು ಹೆಚ್ಚುಕಾಲ ಉಳಿಯುವ ಸಾಧ್ಯತೆ ಇದೆ ಎಂದು ತಿಳಿಸಿದೆ. G20 ಹವಾಮಾನ ಅಪಾಯದ ಅಟ್ಲಾಸ್ 2021 ರಲ್ಲೇ ಈ ಕುರಿತು ಎಚ್ಚರಿಕೆ ನೀಡಿತ್ತು ಎಂದು ವರದಿಯಾಗಿದೆ.
ಆರ್ಥಿಕತೆಗೆ ಅಪಾಯ ಕಟ್ಟಿಟ್ಟ ಬುತ್ತಿ
ಭಾರತದಲ್ಲಿ ಹೆಚ್ಚುತ್ತಿರುವ ಶಾಖವು ಆರ್ಥಿಕ ಉತ್ಪಾದಕತೆಗೆ ಅಪಾಯವನ್ನುಂಟು ಮಾಡುತ್ತದೆ ಎಂದು ವರದಿ ತಿಳಿಸಿದೆ. ಭಾರತದ 75% ದಷ್ಟು ಉದ್ಯೋಗಿಗಳು ಬಿಸಿಲಿನಲ್ಲೇ ಕೆಲಸ ಮಾಡುವವರಾಗಿದ್ದು ಕೆಲವೊಮ್ಮೆ ಜೀವಕ್ಕೆ ಅಪಾಯಕಾರಿಯಾದ ಉಷ್ಣತೆಯಲ್ಲೂ ಕೆಲಸ ಮಾಡುತ್ತಾರೆ ಹೀಗಾಗಿ 2030 ರ ವೇಳೆಗೆ, ಯೋಜಿತ 80 ಮಿಲಿಯನ್ ಜಾಗತಿಕ ಉದ್ಯೋಗದಲ್ಲಿ 34 ಮಿಲಿಯನ್ನಷ್ಟು ಉದ್ಯೋಗ ನಷ್ಟವು ಅತಿಯಾದ ಶಾಖದ ಕಾರಣದಿಂದ ಸಂಭವಿಸಲಿದೆ ಎಂದು ವರದಿ ಎಚ್ಚರಿಸಿದೆ. ದಕ್ಷಿಣ ಏಷ್ಯಾದ ದೇಶಗಳಲ್ಲಿ ಈ ಅತಿಯಾದ ಶಾಖವು ಕಾರ್ಮಿಕರ ಮೇಲೆ ಪರಿಣಾಮ ಬೀರಿದ್ದು ಭಾರತದಲ್ಲಿ ಅತಿಯಾದ ಹೆಚ್ಚಿನ ಶಾಖದ ಪ್ರಭಾವ ಉಂಟಾಗಿದೆ ಹೀಗಾಗಿ ವರ್ಷಕ್ಕೆ 101 ಬಿಲಿಯನ್ ಗಂಟೆಗಳ ನಷ್ಟಕ್ಕೆ ದೇಶ ತುತ್ತಾಗುತ್ತಿದೆ ಎಂದು ತಿಳಿದುಬಂದಿದೆ.
ಶೈತ್ಯೀಕರಣದ ವ್ಯವಸ್ಥೆ
ಜಾಗತಿಕ ನಿರ್ವಹಣಾ ಸಲಹಾ ಸಂಸ್ಥೆ ಮೆಕೆನ್ಸಿ ಹಾಗೂ ಕಂಪನಿ ತಿಳಿಸಿರುವಂತೆ ಹೆಚ್ಚುತ್ತಿರುವ ಶಾಖ ಮತ್ತು ಆರ್ದ್ರತೆಯಿಂದ ಕಾರ್ಮಿಕರ ನಷ್ಟವು ಭಾರತದ GDP ಯ 4.5%ವರೆಗೆ ದಾಖಲಾಗುವ ಸಾಧ್ಯತೆ ಇದ್ದು ಇದು ಸುಮಾರು 150-250 ಶತಕೋಟಿ ನಷ್ಟಕ್ಕೆ ಕಾರಣವಾಗಲಿದೆ ಹಾಗೂ ಈ ದಶಕದ ಅಂತ್ಯದ ವೇಳೆಗೆ ಅಪಾಯಕಾರಿಯಾಗಲಿದೆ ಎಂದು ತಿಳಿಸಿದೆ. ಭಾರತದ ದೀರ್ಘಾವಧಿಯ ಆಹಾರ ಭದ್ರತೆ ಮತ್ತು ಸಾರ್ವಜನಿಕ ಆರೋಗ್ಯ ಭದ್ರತೆಯು ತಾಪಮಾನ ನಿಯಂತ್ರಿತ ಸರಪಣಿಯನ್ನು ಆಧರಿಸಿದೆ ಎಂದು ತಿಳಿಸಿದೆ. ಭಾರತದಾದ್ಯಂತ ಆಹಾರ ಮತ್ತು ಔಷಧೀಯ ಸರಕುಗಳನ್ನು ಸಾಗಿಸಲು ಶೈತ್ಯೀಕರಣದ ವ್ಯವಸ್ಥೆಯು ಪ್ರತಿ ಹಂತದಲ್ಲೂ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಸಂಸ್ಥೆ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ