Afghan Crisis- ಆಫ್ಘಾನಿಸ್ತಾನ-ಭಾರತ ಮಧ್ಯೆ ಆಮದು ರಫ್ತು ಸ್ಥಗಿತ

ಪಾಕಿಸ್ತಾನದ ಟ್ರಾನ್ಸಿಟ್ ರೂಟ್ ಮೂಲಕ ಆಫ್ಘಾನಿಸ್ತಾನಕ್ಕೆ ಹೋಗುವ ಮಾರ್ಗವನ್ನು ತಾಲಿಬಾನ್ ಸ್ಥಗಿತಗೊಳಿಸಿದೆ. ಹೀಗಾಗಿ, ಆಫ್ಘಾನಿಸ್ತಾನದೊಂದಿಗೆ ಇದ್ದ ಭಾರತದ ಬಹುತೇಕ ಆಮದು ರಫ್ತು ವ್ಯವಹಾರ ಸದ್ಯ ನಿಂತಂತಾಗಿದೆ.

ತಾಲಿಬಾನ್

ತಾಲಿಬಾನ್

 • Share this:
  ನವದೆಹಲಿ: ಆಫ್ಘಾನಿಸ್ತಾನ ಇದೀಗ ತಾಲಿಬಾನ್ ವಶವಾದ ಬೆನ್ನಲ್ಲೇ ಆ ದೇಶದೊಂದಿಗೆ ಭಾರತಕ್ಕಿದ್ದ ಎಲ್ಲಾ ಆಮದು, ರಫ್ತು ವ್ಯವಹಾರ ಸ್ಥಗಿತಗೊಂಡಿದೆ. ಭಾರತ ಮತ್ತು ಆಫ್ಘಾನಿಸ್ತಾನ ನಡುವೆ ಇದ್ದ ಸರಕು ಸಾಗಣೆಯ ಮಾರ್ಗವನ್ನು ತಾಲಿಬಾನ್ ನಿಲ್ಲಿಸಿದೆ. ಭಾರತೀಯ ರಫ್ತು ಸಂಸ್ಥೆ ಒಕ್ಕೂಟ (FIEO) ಮಹಾನಿರ್ದೇಶಕ ಡಾ. ಅಜಯ್ ಸಹಾಯ್ ಅವರು ಈ ವಿಚಾರವನ್ನು ದೃಢಪಡಿಸಿದ್ದಾರೆ. “ಆಫ್ಘಾನಿಸ್ತಾನದಲ್ಲಿ ಆಗುತ್ತಿರುವ ಬೆಳವಣಿಗೆಯನ್ನ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಅಲ್ಲಿಂದ ಆಮದು ಮಾಡಿಕೊಳ್ಳುವ ಸರಕುಗಳು ಪಾಕಿಸ್ತಾನದ ಮಾರ್ಗದ ಮೂಲಕ ಭಾರತಕ್ಕೆ ಬರುತ್ತಿದ್ದವು. ಇದೀಗ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ ಮಧ್ಯೆ ಸರಕು ಸಾಗಣೆಯನ್ನು ತಾಲಿಬಾನ್ ನಿಲ್ಲಿಸಿದೆ. ಪರಿಣಾಮವಾಗಿ ಭಾರತಕ್ಕೂ ಆಮದಾಗುವುದು ನಿಂತಿದೆ” ಎಂದು ಅಜಯ್ ಸಹಾಯ್ ತಿಳಿಸಿದ್ದಾರೆ. ಪರಿಣಾಮವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಕೆಲ ವಸ್ತುಗಳ ಬೆಲೆಯಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಭಾರತದ ಹೆಚ್ಚಿನ ಡ್ರೈಫ್ರೂಟ್​​ಗಳು ಆಫ್ಘಾನಿಸ್ತಾನದಿಂದ ಆಮದಾಗಿರುವುದರಿಂದ ಇವುಗಳ ಬೆಲೆ ಭಾರತದಲ್ಲಿ ಏರಿಕೆಯಾಗುವ ನಿರೀಕ್ಷೆ ಇದೆ.

  ಆಫ್ಘಾನಿಸ್ತಾನದೊಂದಿಗೆ ಭಾರತ ದೀರ್ಘ ಕಾಲದಿಂದ ವ್ಯಾವಹಾರಿಕ ಸಂಬಂಧ ಹೊಂದಿದೆ. ಆಫ್ಘಾನಿಸ್ತಾನದೊಂದಿಗೆ ಅತಿ ಹೆಚ್ಚು ವ್ಯವಹಾರ ಹೊಂದಿರುವ ದೇಶಗಳಲ್ಲಿ ಭಾರತವೂ ಇದೆ. 2021ರಲ್ಲಿ ಆಫ್ಘಾನಿಸ್ತಾನಕ್ಕೆ ಭಾರತದಿಂದ ರಫ್ತಾದ ಸರಕುಗಳ ಮೌಲ್ಯ 835 ಮಿಲಿಯನ್ ಡಾಲರ್ (ಸುಮಾರು 6,200 ಕೋಟಿ ರೂಪಾಯಿ) ಇದೆ. ಇದೇ ಅವಧಿಯಲ್ಲಿ 510 ಮಿಲಿಯನ್ ಡಾಲರ್ ಮೌಲ್ಯದ ಸರಕುಗಳನ್ನ ನಾವು ಆಮದು ಮಾಡಿಕೊಂಡಿದ್ದೇವೆ. ಈ ಆಮದು ರಫ್ತು ವ್ಯವಹಾರದ ಜೊತೆಗೆ ನಾವು ಆಫ್ಘಾನಿಸ್ತಾನದಲ್ಲಿ ಬಹಳಷ್ಟು ಹೂಡಿಕೆ ಮಾಡಿದ್ದೇವೆ. 400ಕ್ಕೂ ಹೆಚ್ಚು ಯೋಜನೆಗಳಲ್ಲಿ ಭಾರತ 3 ಬಿಲಿಯನ್ ಡಾಲರ್ (ಸುಮಾರು 22 ಸಾವಿರ ಕೋಟಿ ರೂಪಾಯಿ) ಹಣವನ್ನು ಹೂಡಿಕೆ ಮಾಡಿದೆ ಎಂದು ಎಫ್​ಐಇಒ ಡಿಜಿ ಡಾ. ಅಜಯ್ ಸಹಾಯ್ ಮಾಹಿತಿ ನೀಡಿದ್ಧಾರೆ.

  ಇದನ್ನೂ ಓದಿ: ಜಲಾಲಬಾದ್​ನಲ್ಲಿ ಪ್ರತಿಭಟನಾಕಾರರ ಮೇಲೆ ತಾಲಿಬಾನಿಗಳ ಗುಂಡಿನ ದಾಳಿ; ಮೂವರು ಬಲಿ

  ಆಫ್ಘಾನಿಸ್ತಾನ ಮತ್ತು ಭಾರತದ ಮಧ್ಯೆ ಸರಕು ಸಾಗಣೆಗೆ ವಿವಿಧ ಮಾರ್ಗಗಳಿವೆ. ಪಾಕಿಸ್ತಾನದ ಟ್ರಾನ್ಸಿಟ್ ರೂಟ್ ಮೂಲಕ ಸಾಗುವ ಮಾರ್ಗ ಪ್ರಮುಖವಾದುದು. ಹಾಗೆಯೇ, ಇಂಟರ್​ನ್ಯಾಷನಲ್ ನಾರ್ಥ್-ಸೌಥ್ ಟ್ರಾನ್ಸ್​ಪೋರ್ಟ್ ಕಾರಿಡಾರ್ ಮಾರ್ಗ ಹಾಗೂ ದುಬೈ ಮೂಲಕ ಹೋಗುವ ಮಾರ್ಗಗಳೂ ಇವೆ. ಈ ಎರಡು ಮಾರ್ಗಗಳಲ್ಲಿ ಸದ್ಯಕ್ಕೆ ಭಾರತದ ಸರಕುಗಳು ಆಫ್ಘಾನಿಸ್ತಾನಕ್ಕೆ ಸಾಗಣೆ ಆಗುತ್ತಿವೆ. ಆದರೆ, ಪಾಕಿಸ್ತಾನದ ಮೂಲಕ ಹೋಗುವ ಟ್ರಾನ್ಸಿಟ್ ರೂಟ್ ಅನ್ನು ತಾಲಿಬಾನ್ ಸ್ಥಗಿತಗೊಳಿಸಿದೆ. ಆಫ್ಘಾನಿಸ್ತಾನಕ್ಕೆ ಭಾರತದಿಂದ ರಫ್ತಾಗುವ ಬಹುತೇಕ ಸರಕುಗಳು ಇದೇ ಮಾರ್ಗದಲ್ಲಿ ಸಾಗಣೆಯಾಗುತ್ತವೆ. ಹೀಗಾಗಿ, ಭಾರತದ ರಫ್ತು ಸದ್ಯದ ಮಟ್ಟಿಗೆ ಸ್ಥಗಿತಗೊಂಡಿದೆ.

  ಭಾರತ ಮತ್ತು ಆಫ್ಘಾನಿಸ್ತಾನದ ಮಧ್ಯೆ ಉತ್ತಮ ವ್ಯಾಪಾರ ಸಂಬಂಧ ಇದೆ. ಆಫ್ಘಾನಿಸ್ತಾನಕ್ಕೆ ಭಾರತದಿಂದ ಸಕ್ಕರೆ, ಔಷಧ, ಬಟ್ಟೆ, ಚಹಾ, ಕಾಫಿ, ಮಸಾಲೆ ಪದಾರ್ಥ ಮತ್ತು ಟ್ರಾನ್ಸ್​ಮಿಷನ್ ಟವರ್​ಗಳು ರಫ್ತಾಗುತ್ತವೆ. ಆಫ್ಘಾನಿಸ್ತಾನದಿಂದ ಭಾರತ ರಫ್ತು ಮಾಡಿಕೊಳ್ಳುವ ಪದಾರ್ಥಗಳಲ್ಲಿ ಪ್ರಮುಖವಾದುದು ಡ್ರೈ ಫ್ರೂಟ್​​ಗಳು. ಇದರ ಜೊತೆಗೆ ಗಮ್, ಈರುಳ್ಳಿ ಮೊದಲಾದವನ್ನೂ ಆಮದು ಮಾಡಿಕೊಳ್ಳುತ್ತೇವೆ ಎಂದು ಡಾ. ಅಜಯ್ ಸಹಾಯ್ ಹೇಳಿದ್ದಾರೆ.

  ಇದನ್ನೂ ಓದಿ: Explained: ಷರಿಯಾ ಕಾನೂನು ಎಂದರೇನು? ಅಫ್ಘಾನಿಸ್ತಾನದ ಮಹಿಳೆಯರಿಗೆ ವಿಧಿಸಿರುವ ಹೊಸಾ ನಿಯಮಗಳೇನು?

  ಆಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ತಿಳಿಗೊಂಡು ಎರಡೂ ದೇಶಗಳ ಮಧ್ಯೆ ವ್ಯಾಪಾರ ಸಂಬಂಧಕ್ಕೆ ತಡೆಯಿಲ್ಲದಂತೆ ಮುಂದುವರಿಯಲಿ ಎಂದು ಅವರು ಆಶಿಸುತ್ತಾರೆ. “ಆರ್ಥಿಕ ಅಭಿವೃದ್ಧಿ ಬಹಳ ಮುಖ್ಯ ಎಂಬುದನ್ನು ಆಫ್ಘಾನಿಸ್ತಾನ ಅರಿತುಕೊಂಡು ವ್ಯಾಪಾರ ಸಂಬಂಧ ಮುಂದುವರಿಸುತ್ತದೆ ಎಂದನಿಸುತ್ತದೆ. ಹೊಸದಾಗಿ ಅಧಿಕಾರಕ್ಕೆ ಬಂದಿರುವ ಆಡಳಿತಕ್ಕೆ ರಾಜಕೀಯ ಮಾನ್ಯತೆ ಅಗತ್ಯ ಇರುವುದರಿಂದ ಭಾರತದ ಪಾತ್ರವೂ ಅವರಿಗೆ ಮುಖ್ಯವಾಗುತ್ತದೆ”

  ಭಾರತ ಅಮದು ಮಾಡಿಕೊಳ್ಳುವ ಡ್ರೈಫ್ರೂಟ್​ಗಳಲ್ಲಿ ಶೇ. 85ರಷ್ಟು ಡ್ರೈಫ್ರೂಟ್​ಗಳು ಆಫ್ಘಾನಿಸ್ತಾನದಿಂದಲೇ ಬರುತ್ತವೆ. ಈಗ ಎರಡು ದೇಶಗಳ ಮಧ್ಯೆ ಸರಕು ಸಾಗಣೆ ಮಾರ್ಗ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಡ್ರೈ ಫ್ರೂಟ್​ಗಳ ಆಮದು ಕೂಡ ನಿಂತಿದೆ. ಈ ಪರಿಸ್ಥಿತಿ ಹೀಗೇ ಮುಂದುವರಿದರೆ ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ದಿನಗಳಲ್ಲಿ ಡ್ರೈ ಫ್ರೂಟ್ ಕೊರತೆ ಎದುರಾಗಬಹುದು. ಪರಿಣಾಮವಾಗಿ ಬೆಲೆ ಏರಿಕೆ ಆಗುವ ಸಾಧ್ಯತೆ ಇದೆ ಎಂದು ಸಹಾಯ್ ಅವರು ವಿಶ್ಲೇಷಿಸುತ್ತಾರೆ.
  Published by:Vijayasarthy SN
  First published: