ಪೆರುವಿನ ಮಾಜಿ ಅಧ್ಯಕ್ಷ ಪೆಡ್ರೊ ಕ್ಯಾಸ್ಟಿಲ್ಲೊ ಪದಚ್ಯುತಿ. ಮೊದಲ ಮಹಿಳಾ ಅಧ್ಯಕ್ಷೆಯಾಗಿ ದಿನಾ ಬೊಲುವಾರ್ಟೆ ನೇಮಕ, ರಾಷ್ಟ್ರವ್ಯಾಪಿ ತುರ್ತು ಪರಿಸ್ಥಿತಿ (Emergency Situation) ಪ್ರತಿಭಟನೆ ಹಿಂಸಾಚಾರ. ಹೀಗೆ 10 ಹಲವು ರಾಜಕೀಯ ವಿಷಯಗಳಿಂದ ಪೆರು ಹೊತ್ತಿ ಉರಿಯುತ್ತಿದೆ. ರಾಜಕೀಯ ಬಿಕ್ಕಟ್ಟು (Political Crisis) ದೇಶದಲ್ಲಿ ಭುಗಿಲೆದಿದ್ದೆ.
ಪೆರುವಿನಲ್ಲಿ ರಾಜಕೀಯ ಬಿಕ್ಕಟ್ಟು
ಶ್ರೀಲಂಕಾದ ನಂತರ ಪ್ರಸ್ತುತ ಪೆರುವಿನಲ್ಲಿ ರಾಜಕೀಯ ಬಿಕ್ಕಟ್ಟು ಶುರುವಾಗಿದೆ. ಮಾಜಿ ಮುಖ್ಯಸ್ಥ ಪೆಡ್ರೊ ಕ್ಯಾಸ್ಟಿಲ್ಲೊ ಅವರ ಪದಚ್ಯುತಿಯನ್ನು ವಿರೋಧಿಸಿ ಅವರ ಬೆಂಬಲಿಗರಿಂದ ದೇಶದಲ್ಲಿ ಎಲ್ಲೆಡೆ ಪ್ರತಿಭಟನೆಗಳು ನಡೆಯುತ್ತಿವೆ.
ಬೊಲುವಾರ್ಟೆ ಅವರ ರಾಜೀನಾಮೆ, ಹೊಸ ಅಧ್ಯಕ್ಷರ ಮತ್ತು ಕಾಂಗ್ರೆಸ್‌ನ ಎಲ್ಲಾ ಸದಸ್ಯರನ್ನು ಬದಲಿಸಲು ತಕ್ಷಣವೇ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಬೇಕೆಂದು ಎಲ್ಲೆಡೆ ಕೂಗು ಕೇಳಿಬರುತ್ತಿದೆ.ಪದಚ್ಯುತ ಅಧ್ಯಕ್ಷರ ಬೆಂಬಲಿಗರಿಂದ ಹಿಂಸಾತ್ಮಕ ಪ್ರತಿಭಟನೆಗಳನ್ನು ನಿಯಂತ್ರಿಸಲು ಸೈನ್ಯ ಪಡೆಯನ್ನು ಸಹ ದೇಶದಲ್ಲಿ ನಿಯೋಜಿಸಲಾಗಿದೆ.
ರಾಜಕೀಯ ಬಿಕ್ಕಟ್ಟಿನ ನಡುವೆ ಪೆರುವಿನ ಮೊದಲ ಮಹಿಳಾ ಅಧ್ಯಕ್ಷೆಯಾಗಿ ದಿನಾ ಬೊಲುವಾರ್ಟೆ ನೇಮಕಗೊಂಡರು, ಅವರ ಹಿಂದಿನ ಮತ್ತು ಮಾಜಿ ಮುಖ್ಯಸ್ಥ ಪೆಡ್ರೊ ಕ್ಯಾಸ್ಟಿಲ್ಲೊ ಅವರನ್ನು ದೋಷಾರೋಪಣೆಯ ವಿಚಾರಣೆಯಲ್ಲಿ ಹೊರಹಾಕಲಾಯಿತು.
ಪೆರುವಿನ ಎಡಪಂಥೀಯ ಅಧ್ಯಕ್ಷ ಪೆಡ್ರೊ ಕ್ಯಾಸ್ಟಿಲ್ಲೊ ಅವರನ್ನು ಶಾಸಕರು ಪದಚ್ಯುತಗೊಳಿಸಿದರು ಮತ್ತು ಅವರು ಕಾನೂನುಬಾಹಿರವಾಗಿ ಕಾಂಗ್ರೆಸ್ ಅನ್ನು ವಿಸರ್ಜಿಸಲು ಪ್ರಯತ್ನಿಸಿದ್ದಕ್ಕಾಗಿ ಪೋಲೀಸರು ಅವರನ್ನು ಬಂಧಿಸಿದ್ದಾರೆ.
ಪೆರುವಿನ ಮಾಜಿ ಅಧ್ಯಕ್ಷ ಪೆಡ್ರೊ ಕ್ಯಾಸ್ಟಿಲ್ಲೊ (2021 ರಲ್ಲಿ ಚುನಾಯಿತರಾದ ಎಡಪಂಥೀಯರು) ಅವರನ್ನು ಡಿಸೆಂಬರ್ 7 ರಂದು ದೋಷಾರೋಪಣೆಯ ಮತದಾನದಲ್ಲಿ ಪದಚ್ಯುತಗೊಳಿಸಿಲಾಗಿದೆ.
ಪೆಡ್ರೊ ಕ್ಯಾಸ್ಟಿಲ್ಲೊ ಅವರನ್ನು ಶಾಸಕರು ಪದಚ್ಯುತಗೊಳಿಸಿದ ಬೆನ್ನಲ್ಲೇ ಈ ಎಲ್ಲಾ ರಾಜಕೀಯ ಬಿಕ್ಕಟ್ಟಿನ ನಡುವೆ ಪೆರುವಿನ ಮೊದಲ ಮಹಿಳಾ ಅಧ್ಯಕ್ಷೆಯಾಗಿ ದಿನಾ ಬೊಲುವಾರ್ಟೆ ನೇಮಕಗೊಂಡರು.
ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ
ಅಧ್ಯಕ್ಷ ಪೆಡ್ರೊ ಕ್ಯಾಸ್ಟಿಲ್ಲೊ ಅವರ ಉಚ್ಚಾಟನೆಯ ಮೇಲೆ ಹಿಂಸಾತ್ಮಕ ಪ್ರತಿಭಟನೆಗಳನ್ನು ಹತ್ತಿಕ್ಕಲು ಪೆರುವಿನ ಹೊಸ ಸರ್ಕಾರವು ಬುಧವಾರ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ರಾಷ್ಟ್ರದಾದ್ಯಂತ "ವೈಯಕ್ತಿಕ ಭದ್ರತೆ ಮತ್ತು ಸ್ವಾತಂತ್ರ್ಯ"ದ ಹಕ್ಕುಗಳನ್ನು 30 ದಿನಗಳವರೆಗೆ ಅಮಾನತುಗೊಳಿಸಿದೆ.
ಪೆರುವಿನ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಬೊಲುವಾರ್ಟೆ ಸುದ್ದಿಗಾರರೊಂದಿಗೆ ಮಾತನಾಡಿ, ಶಾಂತಿಗಾಗಿ ಕರೆ ನೀಡಿದರು ಮತ್ತು "ನಮ್ಮ ನಡುವೆ ಹಿಂಸಾಚಾರವಿದ್ದರೆ ನಾವು ಮಾತುಕತೆ ನಡೆಸಲು ಸಾಧ್ಯವಿಲ್ಲ" ಎಂದು ಹೇಳಿದರು.
ಬೊಲುವಾರ್ಟೆಯ ರಕ್ಷಣಾ ಸಚಿವ ಆಲ್ಬರ್ಟೊ ಒಟಾರೊಲಾ ಸುದ್ದಿಗಾರರ ಜೊತೆ ಮಾತನಾಡಿ, "ನಾವು ವಿಧ್ವಂಸಕ ಮತ್ತು ಹಿಂಸಾಚಾರದ ಕೃತ್ಯಗಳಿಂದಾಗಿ ದೇಶದಾದ್ಯಂತ ತುರ್ತು ಪರಿಸ್ಥಿತಿಯನ್ನು ಘೋಷಿಸಲು ಒಪ್ಪಿಕೊಂಡಿದ್ದೇವೆ" ಎಂದು ತಿಳಿಸಿದ್ದಾರೆ.
ಪೆರುವಿನಲ್ಲಿ ರಾಜಕೀಯ ಬಿಕ್ಕಟ್ಟು ಹೇಗೆ ಪ್ರಾರಂಭವಾಯಿತು?
ಆಂಡಿಯನ್ ರಾಷ್ಟ್ರದ ಕಾಂಗ್ರೆಸ್ ಅನ್ನು ಕಾನೂನುಬಾಹಿರವಾಗಿ ವಿಸರ್ಜಿಸಲು ಪ್ರಯತ್ನಿಸಿದ ಆರೋಪದ ಮೇಲೆ ಕ್ಯಾಸ್ಟಿಲ್ಲೊ ಅವರನ್ನು ಪದಚ್ಯುತಗೊಳಿಸಿದಾಗಿನಿಂದ ಪೆರುವಿನಲ್ಲಿ ರಾಜಕೀಯ ಕ್ರಾಂತಿಯು ಪ್ರಾರಂಭವಾಯಿತು.
ನಡೆದಿದ್ದೇನು?
ಪೆರು ಸಂಸತ್ತನ್ನು ವಿಸರ್ಜಿಸಿ ಪೆಡ್ರೊ ಕ್ಯಾಸ್ಟಿಲೊ ರಾಷ್ಟ್ರೀಯ ದೂರದರ್ಶನದಲ್ಲಿ ಭಾಷಣ ಮಾಡಿದ್ದು, ವಿರೋಧ ಪಕ್ಷ ನಿಯಂತ್ರಿತ ಕಾಂಗ್ರೆಸ್ (ಸಂಸತ್ತು) ಅನ್ನು ವಿಸರ್ಜಿಸುವುದಾಗಿ ಅವರು ಘೋಷಿಸಿದ್ದರು.
ನಂತರ ಪೆಡ್ರೋ ಕ್ರಮ ಹಲವು ಅಂಶಗಳಿಗೆ ಕಾರಣವಾಯಿತು. ಪೆಡ್ರೋ ನಿರ್ಧಾರಕ್ಕೆ ವಿರೋಧ ವ್ಯಕ್ತವಾಯಿತು. ಪೆರುವಿನ ಹಲವು ಸಚಿವರು ಇದಕ್ಕೆ ವಿರೋಧ ವ್ಯಕ್ತಪಡಿಸಿ, ರಾಜೀನಾಮೆ ನೀಡಿದ್ದರು.
ಪೆಡ್ರೊ ಅವರ ಈ ಹೇಳಿಕೆಯನ್ನು ಅಲ್ಲಿನ ಸಂಸದರು ತಿರಸ್ಕರಿಸಿದರು. ಅಲ್ಲದೆ ಕೂಡಲೇ ತುರ್ತು ಸಭೆ ನಡೆಸಿ, ಮಹಾಭಿಯೋಗದ ಮೂಲಕ ಪೆಡ್ರೊ ಅವರನ್ನು ಪದಚ್ಯುತಗೊಳಿಸಿದರು.
ದೋಷಾರೋಪಣೆ ಮಾಡುವ ನಿರ್ಧಾರದ ಬಗ್ಗೆ 101 ಶಾಸಕರು ಪರವಾಗಿ ಮತ ಹಾಕಿದರು, ಆರು ವಿರುದ್ಧ ಮತ್ತು 10 ಮಂದಿ ಗೈರುಹಾಜರಾಗಿದ್ದರು. ಕ್ಯಾಸ್ಟಿಲ್ಲೊ ಅವರನ್ನು ಶಾಸಕರು ಡಿಸೆಂಬರ್ 7 ರಂದು ಪದಚ್ಯುತಗೊಳಿಸಿದರು.
ಬಳಿಕ ಪೆಡ್ರೊ ಅವರ ಮೇಲೆ ಬಂಡಾಯ ನಡೆಸಿದ ಆರೋಪ ಹೊರಿಸಿ ಬಂಧಿಸಲಾಗಿದೆ. ನಂತರ ಉಪಾಧ್ಯಕ್ಷೆಯಾಗಿ ಬೊಲುವಾರ್ಟೆ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಯಿತು.
ಈ ವೇಳೆ ಮಾತನಾಡಿದ ಅವರು ದೇಶವನ್ನು ಹಿಡಿದಿಟ್ಟುಕೊಂಡಿರುವ ಬಿಕ್ಕಟ್ಟನ್ನು ನಿವಾರಿಸಲು ನಾನು ಪ್ರಯತ್ನಿಸುತ್ತೇನೆ. ದೇಶವನ್ನು ರಕ್ಷಿಸಲು ನನಗೆ ಸಮಯ ನೀಡಿ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಪ್ರತಿಭಟನೆ ಬಿಸಿ
ಸದ್ಯ ಪೆರುವಿನ ಜನತೆ ಈ ಎಲ್ಲಾ ರಾಜಕೀಯ ನಡೆಗಳ ವಿರುದ್ಧ ಸಿಡಿದೆದ್ದು ಹೊಸ ಚುನಾವಣೆಗೆ ಆಗ್ರಹ ವ್ಯಕ್ತಪಡಿಸಿದ್ದಾರೆ. ಪೆಡ್ರೊ ಬೆಂಬಲಿಗರು ರಸ್ತೆಗಳನ್ನು ತಡೆಯುವುದು, ವಿಮಾನ ನಿಲ್ದಾಣಗಳಿಗೆ ಮುತ್ತಿಗೆ, ಎಲ್ಲೆಂದರಲ್ಲಿ ಬೆಂಕಿ ಹಚ್ಚುವುದು ಹೀಗೆ ಹಿಂಸಾರೂಪದಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.
ಕಳೆದ ವಾರ, ಪ್ರತಿಭಟನಾಕಾರರು ಪೊಲೀಸ್ ಠಾಣೆಗಳನ್ನು ಸುಟ್ಟುಹಾಕಿದ್ದಲ್ಲದೇ, ಸಶಸ್ತ್ರ ಪಡೆಗಳು ಬಳಸುತ್ತಿದ್ದ ಏರ್‌ಸ್ಟ್ರಿಪ್ ಅನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಮತ್ತು ಪೆರುವಿನ ಕೆಲವು ಪ್ರವಾಸಿ ಆಕರ್ಷಣೆಗಳ ಗೇಟ್‌ವೇಯಾದ ಅರೆಕ್ವಿಪಾದಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇಗೆ ಮುತ್ತಿಗೆ ಹಾಕಿದ್ದಾರೆ.
ಜೊತೆಗೆ ಮಚು ಪಿಚುಗೆ ಸಂದರ್ಶಕರನ್ನು ಕೊಂಡೊಯ್ಯುವ ಪ್ರಯಾಣಿಕ ರೈಲು ಸೇವೆಯನ್ನು ಸ್ಥಗಿತಗೊಳಿಸಿದ್ದಾರೆ. ಪ್ಯಾನ್-ಅಮೆರಿಕನ್ ಹೆದ್ದಾರಿಯಲ್ಲಿನ ರಸ್ತೆ ತಡೆದು ಆಹಾರ ಪೂರೈಕೆಗೂ ಅಡ್ಡಿಪಡಿಸಿದ್ದಾರೆ.
ಎಂಟು ಮಂದಿ ಸಾವು
ಸುಮಾರು ಎಂಟು ಮಂದಿ ಹದಿಹರೆಯದವರು, ಪೊಲೀಸರೊಂದಿಗಿನ ಘರ್ಷಣೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇವರಲ್ಲಿ ಕನಿಷ್ಠ ಆರು ಮಂದಿ ಗುಂಡೇಟಿಗೆ ಬಲಿಯಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ಉಲ್ಲೇಖಿಸಿದಂತೆ ಕೆಲವು ಮೂಲಗಳು ಹೇಳಿವೆ.
ಪ್ರತಿಭಟನೆಯಲ್ಲಿ 200 ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಬೊಲುವಾರ್ಟೆ ಬುಧವಾರ ಹೇಳಿದ್ದಾರೆ ಮತ್ತು ಯಾವುದೋ ಒಂದು ಗುಂಪು ಪ್ರತಿಭಟನೆಗೆ ಕುಮ್ಮುಕ್ಕು ನೀಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಪ್ರತಿಭಟನಾಕಾರರ ಬೇಡಿಕೆ ಏನು?
ಪ್ರತಿಭಟನಾಕಾರರು ಕ್ಯಾಸ್ಟಿಲ್ಲೊ ಅವರ ಸ್ವಾತಂತ್ರ್ಯ, ಬೊಲುವಾರ್ಟೆ ಅವರ ರಾಜೀನಾಮೆ ಮತ್ತು ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲು ಮತ್ತು ಕಾಂಗ್ರೆಸ್‌ನ ಎಲ್ಲಾ ಸದಸ್ಯರನ್ನು ಬದಲಿಸಲು ತಕ್ಷಣವೇ ಸಾರ್ವತ್ರಿಕ ಚುನಾವಣೆಗಳನ್ನು ನಿಗದಿಪಡಿಸಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂದು ಎಪಿ ವರದಿ ಮಾಡಿದೆ.
ಒಟ್ಟಾರೆ ಕಾಂಗ್ರೆಸ್‌ನೊಂದಿಗಿನ ಅಸಮಾಧಾನವು ಹಿಂಸಾತ್ಮಕ ಪ್ರತಿಭಟನೆಗಳಿಗೆ ಮತ್ತು ಹೊಸ ಸಾರ್ವತ್ರಿಕ ಚುನಾವಣೆಗಳಿಗೆ ಕರೆ ನೀಡಿದೆ.
ಪೆಡ್ರೊ ಕ್ಯಾಸ್ಟಿಲ್ಲೊ ಮೇಲಿರುವ ಆರೋಪಗಳು
ಮೆಕ್ಸಿಕನ್ ರಾಯಭಾರ ಕಚೇರಿಯಲ್ಲಿ ರಾಜಕೀಯ ಆಶ್ರಯ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರ ವಿರುದ್ಧ ಆರೋಪ ಮಾಡಲಾಗಿದೆ..ದಂಗೆ ಮತ್ತು ಪಿತೂರಿಯ ಆರೋಪ ಹೊತ್ತಿರುವ ಕ್ಯಾಸ್ಟಿಲ್ಲೊಗೆ 18 ತಿಂಗಳ ಪೂರ್ವಭಾವಿ ಬಂಧನವನ್ನು ಕೋರುತ್ತಿದ್ದೇವೆ ಎಂದು ವಕೀಲರು ಮನವಿ ಮಾಡಿದ್ದರು.
ಕ್ಯಾಸ್ಟಿಲ್ಲೊ ಅವರನ್ನು ಲಿಮಾದಲ್ಲಿನ DIROES ಪೊಲೀಸ್ ಸೌಲಭ್ಯದಲ್ಲಿ ಬಂಧಿಸಲಾಗಿದೆ. ದಂಗೆ ಮತ್ತು ಪಿತೂರಿ ಆರೋಪಗಳನ್ನು ಪೆಡ್ರೋ ನಿರಾಕರಿಸಿದ್ದಾರೆ.
ಕಳೆದ ವರ್ಷ ಅಧಿಕಾರಕ್ಕೆ ಬಂದಿದ್ದ ಪೆಡ್ರೊ
ಹಲವು ದಶಕಗಳ ಬಳಿಕ ಪೆರುವಿನಲ್ಲಿ ಮೊದಲ ಬಾರಿಗೆ ಶಿಕ್ಷಕ, ಎಡಪಂಥಿ, ರಾಜಕೀಯ ಅನುಭವಿ ಎಂದು ಗುರುತಿಸಿಕೊಂಡಿದ್ದ ಪೆಡ್ರೊ ಕ್ಯಾಸ್ಟಿಲ್ಲೊ ಆಯ್ಕೆಯಾಗಿದ್ದರು.
ಪೆರುವಿನ ಬಡ ಮತ್ತು ಗ್ರಾಮೀಣ ಜನರ ಬೆಂಬಲ ಪಡೆದಿದ್ದ ಕ್ಯಾಸ್ಟಿಲ್ಲೊ, ಬಲಪಂಥೀಯ ರಾಜಕಾರಣಿ ಕೀಕೊ ಫುಜಿಮೊರಿಯನ್ನು ಕೇವಲ 44,000 ಮತಗಳಿಂದ ಸೋಲಿಸಿ ಅಧ್ಯಕ್ಷೀಯ ಗದ್ದುಗೆ ಏರಿದ್ದರು.
ಎಲ್ಲಾ ಸ್ಥಿತಿಗಳನ್ನು ಪರಿಶೀಲಿಸಿ ಏಪ್ರಿಲ್ 2024 ಕ್ಕೆ ಚುನಾವಣೆಗಳನ್ನು ನಡೆಸಲು ಬೊಲುವಾರ್ಟೆ ಪ್ರಸ್ತಾಪಿಸಿದ್ದಾರೆ, ಆದಾಗ್ಯೂ ಈ ಬಗ್ಗೆ ಇನ್ನೂ ಖಚಿತವಾಗಿ ಹೇಳಿಲ್ಲ.
ಒಟ್ಟಾರೆ ಹೊಸ ಅಧ್ಯಕ್ಷೆ ದಿನಾ ಬೊಲುವಾರ್ಟೆಗೆ ಇದೊಂದು ಅಗ್ನಿ ಪರೀಕ್ಷೆಯಾಗಲಿದೆ. ಸದ್ಯ ಭುಗಿಲೆದ್ದ ಪ್ರತಿಭಟನೆಗಳನ್ನು ಹತ್ತಿಕ್ಕುವುದು ಮತ್ತು ದೇಶವನ್ನು ಸುಸ್ಥಿಗೆ ಮರಳಿಸುವ ದೊಡ್ಡ ಜವಬ್ದಾರಿ ಅವರ ಮೇಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ