ಇನ್ನೇನು ಕೋವಿಡ್ (Covid 19) ಆರ್ಭಟ ಕಡಿಮೆಯಾಯ್ತು, ಬದುಕು ಕೂಡಾ ಮತ್ತೆ ಮೊದಲಿನಂತೆ ಆಗ್ತಿದೆ. ಒಂಚೂರು ಗುಂಪಿನಿಂದ ದೂರ ಇದ್ದು ನಮ್ಮ ಪಾಡಿಗೆ ನಾವು ಜೋಪಾನ ಇದ್ರೆ ಸಾಕು ಎನ್ನುತ್ತಾ ಎಲ್ರೂ ಅಬ್ಬಾ…! ಅಂತ ನಿಟ್ಟುಸಿರು ಬಿಡುವಷ್ಟರಲ್ಲೇ ಓಮೈಕ್ರಾನ್ (Omicron) ಬಂದು ಒಕ್ಕರಿಸಿದೆ. ದಿನೇ ದಿನೇ ಪ್ರಕರಣಗಳ ಸಂಖ್ಯೆ (Number of Cases) ಹೆಚ್ಚಾಗಿ ಜನರಲ್ಲಿ ಆತಂಕ ಕೂಡಾ ಜಾಸ್ತಿಯಾಗಿದೆ. ಆದ್ರೆ ಬಹುತೇಕ ಮರೆತೇ ಹೋದಂತಾಗಿದ್ದ ಮೂರನೇ ಅಲೆಯ (Third Wave) ಭೀತಿಗೆ ಈಗ ಮತ್ತೆ ರೆಕ್ಕೆ ಪುಕ್ಕ ಬಂದಂತಾಗಿದೆ. ಐಐಟಿ ಕಾನ್ಪುರದಲ್ಲಿ (IIT Kanpur) ಓಮೈಕ್ರಾನ್ ಮತ್ತು ಮೂರನೇ ಅಲೆಯ ಕುರಿತು ಸುದೀರ್ಘವಾಗಿ ಸಂಶೋಧನೆ ಮಾಡಿದ್ದಾರೆ. ಈ ಸಂಶೋಧನೆಯ (Research) ಫಲಿತಾಂಶದ ಪ್ರಕಾರ ನಿರ್ದಿಷ್ಟ ದಿನಾಂಕದಂದು ಮೂರನೇ ಅಲೆಯಲ್ಲಿ ಅತೀ ಹೆಚ್ಚು ಪ್ರಕರಣಗಳು ಈ ದಿನಾಂಕದಂದು ಕಂಡುಬರಲಿವೆ ಎನ್ನಲಾಗಿದೆ.
ಕೋವಿಡ್ ಮೊದಲನೇ ಮತ್ತು ಎರಡನೇ ಅಲೆಯ ವೇಳೆಯಲ್ಲಿ ಏನೆಲ್ಲಾ ಸಮಸ್ಯೆಗಳು ಉಂಟಾದವು ಎನ್ನುವುದನ್ನು ಇಡೀ ಜಗತ್ತೇ ನೋಡಿದೆ. ಅನೇಕ ಕುಟುಂಬಗಳೇ ಸರ್ವನಾಶವಾಗಿಬಿಟ್ಟವು. ಇದುವರಗೆ ಕೋವಿಡ್ ಲಕ್ಷಣಗಳು ಮತ್ತು ಅದರ ತೀವ್ರತೆಯನ್ನು ಗಮನಿಸಿದರೆ ವೈರಸ್ ತನ್ನ ಪ್ರಭಾವ ಬೀರಲು ಆರಂಭಿಸಿದ 735ನೇ ದಿನ ಅತ್ಯಂತ ಶಕ್ತಿಯುತವಾಗಿ ವಿಜೃಂಭಿಸುತ್ತದೆ. ಅಂದರೆ ಕೋವಿಡ್ 19 ಜನವರಿ 30, 2020 ರಂದು ಭಾರತದಲ್ಲಿ ಮೊದಲು ಕಂಡುಬಂದಿತ್ತು. ಡಿಸೆಂಬರ್ 15 2021ರ ವೇಳೆಗೆ ಓಮೈಕ್ರಾನ್ ಭಾರತದಲ್ಲಿ ಕಂಡುಬರಲು ಆರಂಭವಾಯ್ತು.
ಮುಹೂರ್ತ ಫೆಬ್ರವರಿಗೆ ಫಿಕ್ಸ್!
ಅಲ್ಲಿಗೆ ಫೆಬ್ರವರಿ 3, 2022 ಗುರುವಾರದಂದು ಮೂರನೇ ಅಲೆ ಅಪ್ಪಳಿಸಲಿದೆ ಎಂದು IIT ಕಾನ್ಪುರದ ತಜ್ಞರ ತಂಡ ತಿಳಿಸಿದೆ. ಗಣಿತ ಶಾಸ್ತ್ರಜ್ಞರು ಮತ್ತಿತರ ತಜ್ಞರ ತಂಡ ಈ ಲೆಕ್ಕಾಚಾರ ಮಾಡಿದೆ. ವಿಶ್ವದಲ್ಲಿ ಅತೀ ಹೆಚ್ಚು ಕೋವಿಡ್ ಪ್ರಕರಣಗಳು ಕಂಡುಬಂದ 10 ದೇಶಗಳನ್ನು ಆಯ್ಕೆ ಮಾಡಿ ಆ ದೇಶಗಳಲ್ಲಿ ಪ್ರತಿದಿನ ಎಷ್ಟು ಪ್ರಕರಣಗಳು ವರದಿಯಾಗಿದ್ದವು. ಒಂದು ಮಿಲಿಯನ್ನಲ್ಲಿ ಎಷ್ಟು ಪ್ರಕರಣ ಎನ್ನುವ ಅಂಕಿ ಅಂಶಗಳನ್ನೆಲ್ಲಾ ಗುಡ್ಡೆ ಹಾಕಿಕೊಂಡು ಈ ತಂಡ ಫೆಬ್ರವರಿ 3 ರ ದಿನಾಂಕವನ್ನು ನಿರ್ಧರಿಸಿದೆ.
ಇದನ್ನೂ ಓದಿ: India Corona Bulletin: 17 ರಾಜ್ಯಗಳಿಗೆ ವ್ಯಾಪಿಸಿದ Omicron, ದೇಶದಲ್ಲಿ ಪತ್ತೆಯಾದ ಹೊಸ ಕೋವಿಡ್ ಪ್ರಕರಣಗಳೆಷ್ಟು?
ಸದ್ಯ ಕರ್ನಾಟಕವೂ ಸೇರಿದಂತೆ ನಾನಾ ರಾಜ್ಯಗಳಲ್ಲಿ ಓಮೈಕ್ರಾನ್ ಪ್ರಕರಣಗಳು ಪತ್ತೆಯಾಗುತ್ತಿವೆ. ಅದೃಷ್ಟವಶಾತ್ ಓಮೈಕ್ರಾನ್ ಸೋಂಕು ಡೆಲ್ಟಾದಷ್ಟು ಜೀವಹಾನಿ ಮಾಡುವ ರೂಪಾಂತರ ಅಲ್ಲ ಎನ್ನುವ ವಿಚಾರ ತಿಳಿದುಬಂದಿದೆ. ಇದು ಜೀವ ತೆಗೆಯುವಷ್ಟು ತೀವ್ರವಲ್ಲ ನಿಜ, ಆದರೆ ಖಂಡಿತವಾಗಿಯೂ ಈ ಹಿಂದಿನ ಎಲ್ಲಾ ರೂಪಾಂತರಿಗಳಿಗಿಂತ ಬಹಳ ವೇಗವಾಗಿ ಹರಡುತ್ತದೆ ಎನ್ನುವ ಎಚ್ಚರಿಕೆಯನ್ನು ಖುದ್ದು ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ.
ಲಸಿಕೆಯ ವಿಚಾರ ಏನು ?
ಆದ್ದರಿಂದ ಇಲ್ಲಿ ಲಸಿಕೆ, ಅದರ ಶಕ್ತಿ ಮುಂತಾದ ವಿಚಾರಗಳ ಬಗ್ಗೆ ಆಲೋಚಿಸುವ ಬದಲು ಸೋಂಕು ಬೇಗ ಹರಡದಂತೆ ತಡೆಯಲು ಕೈಗೊಳ್ಳಬೇಕಾದ ಕ್ರಮವೇ ಮುಖ್ಯ. ಫೆಬ್ರವರಿಯಲ್ಲಿ ಬರುತ್ತದೆ ಎನ್ನಲಾದ ಮೂರನೇ ಅಲೆ ಅತೀ ಹೆಚ್ಚು ಜನರನ್ನು ಬಾಧಿಸುವ ಸಾಧ್ಯತೆ ಇದೆ. ಆದರೆ ಅದೃಷ್ಟವಶಾತ್ ಸಾವಿನ ಸಂಖ್ಯೆ ಜಾಸ್ತಿ ಇರುವುದಿಲ್ಲ ಎನ್ನುವುದೇ ಸಮಾಧಾನಕರ ಸಂಗತಿಯಾಗಿದೆ.
ಇದನ್ನೂ ಓದಿ: Precaution Dose: ಬೂಸ್ಟರ್ ಡೋಸ್ಗಿಂತ ಭಿನ್ನ ಈ ಮುನ್ನೆಚ್ಚರಿಕಾ ಡೋಸ್; ಹೇಗೆ ಅಂತೀರಾ!
ಓಮೈಕ್ರಾನ್ ಕೂಡಾ ಬೇರೆ ಕೋವಿಡ್ ನಂತೆ ರೂಪಾಂತರಗೊಳ್ಳಲು ಸಾಧ್ಯವಿದೆ. ಹಾಗಾಗಿ ಒಂದು ವೇಳೆ ಎಲ್ಲಾ ಲೆಕ್ಕಾಚಾರ ತಲೆಕೆಳಗಾಗುವಂತೆ ಅದು ಕೂಡಾ ಬಗೆಬಗೆಯ ರೂಪ ತಾಳಿ ಮತ್ತಷ್ಟು ಹೊಸಾ ಸಮಸ್ಯೆಗಳನ್ನು ತಂದೊಡ್ಡುವ ಅಪಾಯವನ್ನು ಸಂಪೂರ್ಣವಾಗಿ ತಳ್ಳಿಹಾಕುವಂತಿಲ್ಲ. ಅಲ್ಲಿಗೆ ಈಗ ಸದ್ಯ ಚುರುಕುಗೊಂಡಿರುವ ಓಮೈಕ್ರಾನ್ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚುವುದು ಶತಸಿದ್ಧ ಎಂದು ಅಂದಾಜಿಸಲಾಗಿದೆ. ಆದ್ದರಿಂದಲೇ ಬೂಸ್ಟರ್ ಡೋಸ್ ಮತ್ತು ಮಕ್ಕಳಿಗೆ ಲಸಿಕೆ ನೀಡುವ ಕುರಿತಾಗಿಯೂ ಸರ್ಕಾರಗಳು ಬಹಳ ವೇಗವಾಗಿ ಕೆಲಸ ಆರಂಭಿಸಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ